4

ಶ್ರದ್ಧೆಯೇ ನನಗೆ ಗೆಲುವಿನ ಮೆಟ್ಟಿಲು

Published:
Updated:
ಶ್ರದ್ಧೆಯೇ ನನಗೆ ಗೆಲುವಿನ ಮೆಟ್ಟಿಲು

ನನ್ನ ಹೆಸರು ಮಲ್ಲ. ಸ್ವಂತ ಊರು ಕಲಬುರಗಿ ಸಮೀಪದ ಹಳ್ಳಿ. ಮನೆಯಲ್ಲಿ ವಿಪರೀತ ಬಡತನ. ತುತ್ತು ಅನ್ನಕ್ಕೂ ಕಷ್ಟ. ಹೀಗಾಗಿ ಅಪ್ಪ, ಅಮ್ಮ ಕೂಲಿ ಕೆಲಸ ಅರಸುತ್ತ ಬೆಂಗಳೂರಿಗೆ ಬಂದರು. ನಾನೂ ಅವರ ಜೊತೆಗೆ ಬೆಂಗಳೂರಿಗೆ ಬಂದೆ.

ಆಟವಾಡಿಕೊಂಡಿರಬೇಕಾದ ವಯಸ್ಸಿನಲ್ಲಿ ಮನೆಯ ಜವಾಬ್ದಾರಿ ಹೆಗಲೇರಿತು. ಓದಿಸಲು ಮನೆಯವರ ಬಳಿ ಹಣವಿರಲಿಲ್ಲ. ಹೀಗಾಗಿ ಹನ್ನೊಂದು ವರ್ಷಕ್ಕೆ ಗಾರೆ ಕೆಲಸ ಮಾಡಲು ಶುರು ಮಾಡಿದೆ. ಮರಳು, ಸಿಮೆಂಟ್‌, ಕಲ್ಲು... ಇವುಗಳ ಜೊತೆಗೆ ನನ್ನ ಬಾಲ್ಯ ಕಳೆಯಿತು.

ಹೆಗಡೆನಗರದಲ್ಲಿ ಕೂಲಿ ಮಾಡುತ್ತಿದ್ದೆವು. ಸ್ವಲ್ಪ ದಿನಗಳ ನಂತರ ಅಪ್ಪ, ಅಮ್ಮ ಊರಿಗೆ ಹೋದರು. ನಾನು ಇಲ್ಲಿಯೇ ಉಳಿದುಕೊಂಡೆ. ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಕಂಠೀರವ ಸ್ಟುಡಿಯೊ ಸಮೀಪವೇ ನನ್ನ ಅತ್ತೆಯ ಗುಡಿಸಲು ಇತ್ತು. ಅಲ್ಲಿಯೇ ಇದ್ದ ನನಗೆ ಸಿನಿಮಾ ಮಂದಿಯನ್ನು ನೋಡುತ್ತಾ ನಾನು ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಮೂಡಿತು.

ಹೀಗೆಯೇ ಒಮ್ಮೆ ಸ್ಟುಡಿಯೊ ಗೇಟ್‌ ಬಳಿ ನಿಂತಿದ್ದೆ. ಆಗ ಒಬ್ಬರು ಬಂದು ‘ಕೆಲಸ ಇದೆ ಬಾ’ ಎಂದು ಕರೆದುಕೊಂಡು ಹೋದರು. ಆಗ ನನಗೆ ಹದಿನೈದು ವರ್ಷ. ಹೀಗೆ ಕಂಠೀರವ ಸ್ಟುಡಿಯೊ ಒಳಗೆ ಹೋದ ನಾನು ಸಿನಿಮಾ ತಯಾರಿಗೆ ಅಗತ್ಯವಾದ ಹಲವು ವಿಭಾಗಗಳಲ್ಲಿ ಕೆಲಸ ಮಾಡಿದೆ. ನನಗೆ ಹೆಚ್ಚು ಇಷ್ಟವಾದುದು ಸಿನಿಮಾಗಳಿಗೆ ಸೆಟ್‌ ತಯಾರಿಸುವುದು. ಕಲಾ ನಿರ್ದೇಶಕ ಅಡಪ ಅವರ ಜೊತೆಗೆ ಕೆಲಸ ಮಾಡಲು ಆರಂಭಿಸಿದೆ.

ನಿರ್ದೇಶಕರ ಅಣತಿಯಂತೆ ಸಿನಿಮಾ ದೃಶ್ಯಕ್ಕೆ ಅಗತ್ಯವಾದ ವಾತಾವರಣ ಸೃಷ್ಟಿಸುವುದು ನಮ್ಮ ಕೆಲಸ. ಆಗೆಲ್ಲ ತೀರಾ ಕಡಿಮೆ ಸಂಬಳವಿತ್ತು. ದಿನಕ್ಕೆ 70 ರೂಪಾಯಿ ಸಂಬಳ ಕೊಡುತ್ತಿದ್ದರು. ಕೆಲಸ ಕಲಿಯಬೇಕೆಂಬ ಹುಮ್ಮಸ್ಸಿನಿಂದ ಮೂರು, ನಾಲ್ಕು ವರ್ಷ ಊರಿಗೂ ಹೋಗಿರಲಿಲ್ಲ. ಉಳಿಯಲು ಮನೆಯೂ ಇರಲಿಲ್ಲ. ಸಿಕ್ಕ ಸ್ಥಳದಲ್ಲಿಯೇ ಮಲಗುತ್ತಿದ್ದೆ. ಎರಡು, ಮೂರು ವರ್ಷ ಕಷ್ಟಪಟ್ಟು ಈ ಕೆಲಸವನ್ನು ಕಲಿತುಕೊಂಡೆ. ಚೆನ್ನಾಗಿ ಮಾಡಲು ಕೆಲಸವನ್ನು ಕಲಿತ ಮೇಲೆ ಅವಕಾಶಗಳು ಸಿಗತೊಡಗಿದವು. ಕನ್ನಡ, ತೆಲುಗು ಭಾಷೆಯ ಸಿನಿಮಾಗಳಿಗೂ ಸೆಟ್ ಹಾಕಿದ್ದೇನೆ. ಯೋಗರಾಜ್‌ ಭಟ್‌, ಸೂರಿ ಅವರ ಎಲ್ಲಾ ಸಿನಿಮಾಗಳಿಗೂ ನಾನೇ ಸೆಟ್‌ ಹಾಕಿರುವುದು. ಸೂರಿ ಅವರು ನಟಿಸುವಂತೆ ಹೇಳಿದ್ದರು. ಒಮ್ಮೆ ಸೆಟ್‌ನಲ್ಲಿಯೇ, ‘ಈ ಪಾತ್ರವನ್ನು ನೀನೇ ಮಾಡು’ ಎಂದುಬಿಟ್ಟರು. ಆದರೆ ನಾನು ತಪ್ಪಿಸಿಕೊಂಡು ಓಡಿದ್ದೆ. ನನಗೆ ನಟನೆಯ ಆಸಕ್ತಿ ಇಲ್ಲ. ಪುನೀತ್‌ ಅವರ ಸಿನಿಮಾಗಳಲ್ಲಿಯೂ ಕೆಲಸ ಮಾಡಿದ್ದೇನೆ. ಅವರಂತೂ ತುಂಬಾ ಒಳ್ಳೆಯವರು. ಆಪ್ತವಾಗಿ ಮಾತನಾಡುತ್ತಾರೆ. ನಾನು ಮೂವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ.

ಊರೂರು ಅಲೆಯುವ ಮಗ ಹಾಳಾಗಬಾರದೆಂದು 20ನೇ ವರ್ಷಕ್ಕೆ ಮನೆಯವರು ಮದುವೆ ಮಾಡಿಬಿಟ್ಟರು. ಈಗ ನನಗೆ 34 ವರ್ಷ. ಮೂವರು ಮಕ್ಕಳಿದ್ದಾರೆ. ದಿನಕ್ಕೆ 1,800 ರೂಪಾಯಿ ಕೊಡುತ್ತಾರೆ. ನಾನು ಶಾಲೆಯ ಮೆಟ್ಟಿಲನ್ನೇ ಹತ್ತದವನು. ಆ ಕೊರಗು ಇಂದಿಗೂ ಕಾಡುತ್ತಿದೆ. ಇದೇ ನೋವು ನನ್ನ ಮಕ್ಕಳಿಗೆ ಕಾಡದಿರಲೆಂದು ಅವರನ್ನೂ ಚೆನ್ನಾಗಿ ಓದಿಸುತ್ತಿದ್ದೇನೆ. ಕೆಲಸದಲ್ಲಿ ಶ್ರದ್ಧೆ ಇದ್ದರೆ ಯಶಸ್ಸು ಸಿಗುತ್ತದೆ ಎಂಬುದು ನನ್ನ ನಂಬಿಕೆ ಮತ್ತು ಅನುಭವ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry