ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನದ ಆಸೆಗೆ ಮಾಡೆಲಿಂಗ್‌ ಸಖ್ಯ!

Last Updated 11 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಮಾಡೆಲಿಂಗ್‌ ಅನ್ನು ಮೆಟ್ಟಿಲಾಗಿಸಿಕೊಂಡು ಅದರ ಮೂಲಕ ಸಿನಿಮಾ ಅಥವಾ ಕಿರುತೆರೆಗೆ ಪ್ರವೇಶಿಸಬೇಕು ಎಂಬ ಸಿದ್ಧತೆಯಲ್ಲಿದ್ದಾರೆ ರೂಪದರ್ಶಿ ಭರತ್‌. ‘ಉತ್ತಮ ನಟ ಎನಿಸಿಕೊಳ್ಳಬೇಕು. ಅದಕ್ಕಾಗಿ ಕಷ್ಟಪಡಲು ಸಿದ್ಧ’ ಎನ್ನುವ ಸೂತ್ರ ಭರತ್‌ ಅವರದು. ಮಾಡೆಲಿಂಗ್‌ ಕ್ಷೇತ್ರದಲ್ಲಿ ಇವರು ಚಿರಪರಿಚಿತರು.

ಚಿಕ್ಕಮಗಳೂರಿನವರಾದ ಭರತ್‌ ಬೆಳೆದಿದ್ದು ಬೆಂಗಳೂರಿನಲ್ಲಿಯೇ. ಕ್ಯಾಮೆರಾ ಫ್ರೇಮ್‌, ರ‍್ಯಾಂಪ್‌ ಶೋಗಳಿಗೆ ಹೇಳಿಮಾಡಿಸಿದಂತೆ ಮೈಕಟ್ಟು, ಮುಖಭಾವ ಹೊಂದಿರುವ ಭರತ್‌ಗೆ ಮಾಡೆಲಿಂಗ್‌ ಅಥವಾ ನಟನಾ ಕ್ಷೇತ್ರದಲ್ಲಿ ಯಾರೂ ಗಾಡ್‌ಫಾದರ್‌ಗಳಿಲ್ಲ. ಆದರೆ ಶಾಲಾ– ಕಾಲೇಜು ದಿನಗಳಲ್ಲಿಯೇ ಇವರಿಗೆ ನಾಟಕ, ನೃತ್ಯಗಳಲ್ಲಿ ಭಾರಿ ಆಸಕ್ತಿ. ಕಾಲೇಜಿನಲ್ಲಿ ಇದ್ದಾಗ ಅಂತರ ಕಾಲೇಜು ನೃತ್ಯ ಸ್ಪರ್ಧೆಗಳಲ್ಲಿ ಅನೇಕ ಬಹುಮಾನಗಳನ್ನು ಪಡೆದರು. ಆಗ ಮನದ ಆಸೆ ಇನ್ನಷ್ಟು ಚಿಗುರೊಡೆಯಿತು.

ಫ್ಯಾಷನ್‌ ಲೋಕದ ತಲೆಬುಡ ತಿಳಿದಿಲ್ಲದ ಪರಿಸರದಲ್ಲಿಯೇ ಬೆಳೆದ ಇವರಿಗೆ ಚಿಕ್ಕಂದಿನಿಂದಲೂ ನಟನಾಗಲೇಬೇಕು ಎಂಬ ಆಸೆ. ಕಾಲೇಜು ದಿನಗಳಲ್ಲಿ ಅನೇಕ ಫ್ಯಾಷನ್‌ ಷೋಗಳಲ್ಲಿ ಭಾಗವಹಿಸಿದ್ದರು. ಬಿ.ಕಾಂ ಮುಗಿಸಿದ ಬಳಿಕ ಮಾರತ್ತಹಳ್ಳಿಯ ‘ಟು ಫೋರ್‌ ಸೆವೆನ್‌’ ಕಂಪೆನಿಯಲ್ಲಿ ಕಸ್ಟಂ ಸರ್ವೀಸ್‌ ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಂಡ ಮೇಲೆ ಬಿಡುವಿನ ಸಮಯದಲ್ಲಿ ಮಾಡೆಲಿಂಗ್‌ ಚಟುವಟಿಕೆಗಳಲ್ಲಿ ವೃತ್ತಿಪರವಾಗಿ ತೊಡಗಿಕೊಳ್ಳಲು ಆರಂಭಿಸಿದರು. ಇದಕ್ಕಾಗಿ ಮಾಡೆಲಿಂಗ್‌ ಗ್ರೂಮಿಂಗ್‌ ತರಗತಿಯಲ್ಲಿ ತರಬೇತಿ ಪಡೆದುಕೊಂಡರು.

2017ರಲ್ಲಿ ನಗರದಲ್ಲಿ ನಡೆದ ‘ಮಿಸ್ಟರ್‌ ಸೂಪರ್‌ ಮಾಡೆಲ್‌’ ಸ್ಪರ್ಧೆಯಲ್ಲಿ ರನ್ನರ್‌ ಅಪ್‌ ಆಗಿದ್ದು ಅವರ ಜೀವನದ ಅವಿಸ್ಮರಣೀಯ ಕ್ಷಣ. ‘ಮೊದಲ ಬಾರಿ ಸ್ಪರ್ಧೆಯಲ್ಲಿಯೇ ಮಿಸ್ಟರ್‌ ಬೆಸ್ಟ್‌ ವಾಕ್‌ ಹಾಗೂ ರನ್ನರ್‌ ಅಪ್‌ ಪ್ರಶಸ್ತಿ ಪಡೆದ ಖುಷಿ ನನ್ನದು’ ಎನ್ನುತ್ತಾರೆ ಭರತ್‌. ನಟನಾ ತರಗತಿಗಳಿಗೂ ಹೋಗಿ ನಟನೆ ಬಗ್ಗೆ ಕಲಿತುಕೊಂಡಿರುವ ಇವರು ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಮಿಂಚಲು ಉತ್ತಮ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ‘ನನಗೆ ಸ್ಟಾರ್‌ ನಟ ಎಂದು ಕರೆಸಿಕೊಳ್ಳಬೇಕು ಎಂಬ ಆಸೆಯಿಲ್ಲ, ಉತ್ತಮ ನಟ ಎಂದು ಕರೆಸಿಕೊಳ್ಳಬೇಕು. ನಾಯಕ, ವಿಲನ್‌ ಹೀಗೆ ಎಲ್ಲಾ ಪಾತ್ರಗಳಲ್ಲೂ ನಟಿಸಬೇಕು’ ಎಂದು ಅವರು ಹೇಳುತ್ತಾರೆ.

ಸದ್ಯ ಮಾಡೆಲಿಂಗ್‌ ಗ್ರೂಮಿಂಗ್‌ಗಾಗಿ ಫಿಟ್‌ನೆಸ್‌ ಹಾಗೂ ಡಯೆಟ್‌ ಬಗ್ಗೆ ಕಾಳಜಿ ವಹಿಸುತ್ತಾರೆ. ಮಾಡೆಲಿಂಗ್‌ನಲ್ಲಿ ದೇಹದ ಮೈಕಟ್ಟು ಬಲು ಮುಖ್ಯ. ಹಾಗೇ ಮುಖದ ಸೌಂದರ್ಯಕ್ಕೂ ನಾವು ಕಾಳಜಿ ಮಾಡಬೇಕು. ಮುಖ ಪ್ರಶಾಂತವಾಗಿ ಹೊಳೆಯುವಂತಿರಬೇಕು. ಇದಕ್ಕಾಗಿ ನಾವು ನಿರ್ದಿಷ್ಟವಾಗಿ ಅಂತಹದ್ದೇ ಆಹಾರವನ್ನು ಆರಿಸಿ ಸೇವಿಸಬೇಕು. ನೀರು ಹೆಚ್ಚು ಕುಡಿಯಬೇಕು. ಮುಖದ ಹೊಳಪನ್ನು ಹೆಚ್ಚಿಸಲು ಹಣ್ಣುಗಳನ್ನು ಸೇವಿಸಬೇಕು’ ಎಂದು ಭರತ್‌  ಹೇಳುತ್ತಾರೆ.

ಮಾಡೆಲಿಂಗ್‌ಗೆ ಬರುವ ಮುನ್ನ ಭರತ್‌ ದಪ್ಪಗಿದ್ದರಂತೆ. ಈ ಕ್ಷೇತ್ರದಲ್ಲಿ ದೇಹಾಕಾರ ಕಾಪಾಡಿಕೊಳ್ಳುವುದರ ಮಹತ್ವ ಅರಿತ ಅವರು ಹಟ ಹಿಡಿದು ಆರೇ ತಿಂಗಳಲ್ಲಿ 10 ಕೆ.ಜಿ ತೂಕ ಕಡಿಮೆ ಮಾಡಿಕೊಂಡಿದ್ದಾರೆ. ಈಗ ಅವರದು ಕಟ್ಟುನಿಟ್ಟಿನ ಆಹಾರ ಪಥ್ಯ. ‘ನಾನು ಒಂದೊಂದು ದಿನ ಒಂದೊಂದು ಬಗೆಯ ಆಹಾರ ಸೇವಿಸುತ್ತೇನೆ. ಒಂದು ದಿನ ತರಕಾರಿ, ಮರುದಿನ ಮಾಂಸ ಹೀಗೆ ದಿನಾ ಬೇರೆ ಬೇರೆ ಆಹಾರ ಸೇವಿಸುತ್ತೇನೆ. ಅನ್ನ ಸೇವನೆ ಕಡಿಮೆ. ದಿನದಲ್ಲಿ ಹೆಚ್ಚೆಂದರೆ 3–4 ತುತ್ತು ಅಷ್ಟೇ. ಚಪಾತಿ, ಓಟ್ಸ್‌, ಪ್ರೊಟೀನ್‌ಯುಕ್ತ ಆಹಾರಗಳನ್ನು ಸೇವಿಸುತ್ತೇನೆ. ದಿನದಲ್ಲಿ  4 ಗಂಟೆ ಜಿಮ್‌ನಲ್ಲಿ ಕಾಲ ಕಳೆಯುತ್ತೇನೆ. ಜಿಮ್‌ ತರಬೇತುದಾರರಿಂದ ಸಲಹೆ ಪಡೆದು ಎಲ್ಲಾ ರೀತಿಯ ವರ್ಕೌಟ್‌ ಮಾಡುತ್ತೇನೆ’ ಎಂದು ಫಿಟ್‌ನೆಸ್‌ ಪಟ್ಟಿಯನ್ನು ಬಿಚ್ಚಿಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT