ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವಿಗೆ ಹೆದರುವ ಹರಿಣಿ

Last Updated 11 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಹಾವು ಕಂಡರೆ ನನಗೆ ಭಯ’ –ಹೀಗೆಂದು ಸ್ಪಷ್ಟವಾಗಿ ಹೇಳಿದರು ‘ನಾಗಿಣಿ’ ಧಾರಾವಾಹಿ ಖ್ಯಾತಿಯ ನಟಿ ಹರಿಣಿ. ಮನೆಯಲ್ಲಿ ಎರಡು (ನಾಗಿಣಿ ಮತ್ತು ಶೇಷಾ) ಹಾವು ಇದ್ದರೂ ನಿಮಗೆ ಭಯವಾಗುವುದಿಲ್ಲವೇ ಎನ್ನುವ ಪ್ರಶ್ನೆಗೆ ಅವರು ಉತ್ತರ ನೀಡಿದ್ದು ಹೀಗೆ. ‌

‘ಅರ್ಜುನನ ಅಮ್ಮ (ಹೇಮಾ) ಮುಗ್ಧೆ. ಮನೆಯಲ್ಲಿ ಇಚ್ಛಾಧಾರಿ ನಾಗಿಣಿ ಇರುವುದು ಆಕೆಗೆ ಗೊತ್ತಿಲ್ಲ. ಮಗನ ಮೇಲಿನ ಪ್ರೀತಿಗಾಗಿ ಮನೆ ಪ್ರವೇಶಿಸುವ ಶೇಷಾಳ ಬಗ್ಗೆಯೂ ಅವಳಿಗೆ ಅರಿವಿಲ್ಲ. ಮುಂದೊಂದು ದಿನ ಅಮ್ಮನ ಮುಗ್ಧತೆಯೇ ನಾಗಿಣಿಯ ದ್ವೇಷವನ್ನು ಕಡಿಮೆ ಮಾಡಬಹುದು. ಪ್ರಾಮಾಣಿಕತೆ ಮತ್ತು ಮುಗ್ಧತೆಗೆ ಅಂತಹ ಶಕ್ತಿಯಿದೆ’ ಎಂದು ನಕ್ಕರು.

ಹರಿಣಿ ಕಿರುತೆರೆಗೆ ಕಾಲಿಟ್ಟು ಎರಡು ದಶಕ ಉರುಳಿವೆ. ಬಣ್ಣದ ಲೋಕಕ್ಕೆ ಅವರು ಪ್ರವೇಶಿಸಿದ್ದು ನಿರೂಪಕಿಯಾಗಿ. ಉದಯ ಟಿ.ವಿ.ಯಲ್ಲಿ ನಿರೂಪಕಿಯಾಗಿ ವೃತ್ತಿ ಬದುಕು ಆರಂಭಿಸಿದರು. ಅದೇ ವೇಳೆ ಧಾರಾವಾಹಿಗಳಲ್ಲಿ ನಟಿಸುವಂತೆ ಅವಕಾಶಗಳು ಹುಡುಕಿಕೊಂಡು ಬಂದವು. ಆಗ ನಟನೆ ಬಗ್ಗೆ ಅವರು ಅಷ್ಟಾಗಿ ತಲೆಕೆಡಿಸಿಕೊಳ್ಳಲಿಲ್ಲವಂತೆ. ನಾನೇಕೆ ಅವಕಾಶ ಬಳಸಿಕೊಳ್ಳಬಾರದೆಂದು ಒಮ್ಮೆ ಆಲೋಚಿಸಿದರು. ಮೊದಲಿಗೆ ‘ಪ್ರತಿಭೆ’ ಧಾರಾವಾಹಿಯಲ್ಲಿ ಅಭಿನಯಿಸಿದರು. ಆದರೆ, ಅದು ಟೇಕ್‌ಆಫ್‌ ಆಗಲಿಲ್ಲವಂತೆ. ತೊಂಬತ್ತರ ದಶಕದಲ್ಲಿ ಕಿರುತೆರೆ ಪ್ರವೇಶಿಸಿದ ಅವರು ಅಮ್ಮನಾಗಿ ಮಿಂಚಿದ್ದು ಹೆಚ್ಚು.

ಬಳಿಕ ಅಶೋಕ್‌ ಕಶ್ಯಪ್‌ ನಿರ್ದೇಶನದ ‘ಆತ್ಮ’ ಧಾರಾವಾಹಿ ಅವರಿಗೆ ದೊಡ್ಡ ಬ್ರೇಕ್‌ ನೀಡಿತಂತೆ. ಬಳಿಕ ‘ಕನ್ಯಾದಾನ’, ‘ಮೌನರಾಗ’, ‘ಸಂಬಂಧ’, ‘ಚಿಕ್ಕಪ್ಪ’, ‘ಮತ್ತೆ ಬರುವನು ಚಂದಿರ’, ‘ಪುಟ್ಟಗೌರಿ ಮದುವೆ’, ‘ನಾಗಿಣಿ’ ಹೀಗೆ ಸಾಲು ಸಾಲು ಧಾರಾವಾಹಿಯಲ್ಲಿ ನಟಿಸಲು ಅವರಿಗೆ ಅವಕಾಶ ಸಿಕ್ಕಿತು.

‘ನಿಜಜೀವನದಲ್ಲಿ ಹಾವು ಕಂಡರೆ ನಾನು ಅಸಹ್ಯಪಡುತ್ತೇನೆ. ಅದರ ಚರ್ಮ ನೋಡಿದರೆ ನನಗೆ ಒಂಥರಾ ಅನಿಸುತ್ತದೆ. ನಾಗಿಣಿಯಲ್ಲಿ ಹೇಮಾಳದ್ದು ಮುಗ್ಧತೆ ಮೇಳೈಸಿರುವ ಪಾತ್ರ. ಹಾಗಾಗಿ, ಮನೆಯಲ್ಲಿ ನಾಗಮಣಿ ಇದ್ದರೂ ಅವಳಿಗೆ ಗೊತ್ತಾಗಲಿಲ್ಲ’ ಎಂದು ನಗುತ್ತಾರೆ.

ಈಗ ಮನರಂಜನಾ ವಾಹಿನಿಗಳ ನಡುವೆ ಪೈಪೋಟಿ ಆರಂಭವಾಗಿದೆ. ಧಾರಾವಾಹಿಗಳಲ್ಲಿ ಟ್ವಿಸ್ಟುಗಳು ಸಾಮಾನ್ಯ. ಪ್ರತಿ ಸಂಚಿಕೆಯಲ್ಲೂ ಭಿನ್ನವಾದ ಕಥೆ ಹೇಳುವ ಸಂದಿಗ್ಧತೆ ನಿರ್ದೇಶಕರ ಹೆಗಲಿಗೇರಿದೆ. ‘ಚಾನೆಲ್‌ಗಳ ಮಧ್ಯೆ ಅಕ್ಷರಶಃ ಯುದ್ಧ ನಡೆಯುತ್ತಿದೆ. ಕಥೆಯಲ್ಲೂ ಇದು ಮುಂದುವರಿಯುತ್ತದೆ. ಹಾಗಾಗಿ, ನಾಗಿಣಿಯಲ್ಲಿ ಉಪ ಕಥೆಗಳು ಹೆಚ್ಚಾಗಿವೆ. ಇದು ಕಥೆಗೂ ಪೂರಕವಾಗಿದೆ’ ಎಂದು ವಿವರಿಸುತ್ತಾರೆ.

ನಾಗಿಣಿ ಧಾರಾವಾಹಿ 500 ಸಂಚಿಕೆ ಪೂರೈಸಿದೆ. ಇದರ ಬಗ್ಗೆ ಅವರಿಗೆ ಖುಷಿಯಿದೆ. ‘ಧಾರಾವಾಹಿಯೊಂದು ಇಷ್ಟು ಸಂಚಿಕೆ ಪೂರೈಸಿರುವುದು ಸಂತಸದ ವಿಚಾರ. ನಾನು ಅದರ ಭಾಗವಾಗಿರುವುದು ಹೆಮ್ಮೆ. ಎರಡು ವರ್ಷದಿಂದಲೂ ಚಿತ್ರೀಕರಣದಲ್ಲಿ ಭಾಗವಹಿಸುತ್ತೇನೆ. ಶೂಟಿಂಗ್‌ನಲ್ಲಿ ಕುಟುಂಬದ ವಾತಾವರಣ ಇರುತ್ತದೆ. ಆ್ಯಕ್ಷನ್‌ಗೂ ಮೊದಲು ತರಲೆ, ತಮಾಷೆಯಲ್ಲಿ ಮುಳುಗಿರುತ್ತೇನೆ. ಶೂಟಿಂಗ್‌ ಶುರುವಾದಾಗ ಪಾತ್ರಕ್ಕೆ ಒಗ್ಗಿಕೊಳ್ಳುತ್ತೇನೆ. ಬಳಿಕ ನಾನು ಎಂದಿನ ಹರಿಣಿಯಾಗಿರಲು ಇಷ್ಟಪಡುತ್ತೇನೆ’ ಎನ್ನುತ್ತಾರೆ.

ಹರಿಣಿ ನಟಿಸಿದ ಮೊದಲ ಚಿತ್ರ ‘ಮೀರ ಮಾಧವ ರಾಘವ’. ಇಲ್ಲಿಯವರೆಗೆ ಹತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾಗಳಲ್ಲಿ ಅವಕಾಶ ಸಿಕ್ಕಿದರೆ ನಟಿಸಲು ಅವರಿಗೆ ಮನಸ್ಸಿದೆ. ಇಂತಹದ್ದೇ ಪಾತ್ರ ಬೇಕೆಂದು ಅವರು ಕೇಳುವುದಿಲ್ಲ. ಅವರಿಗೆ ಒಪ್ಪುವ ಪಾತ್ರ ನೀಡಿದರೆ ನಟನೆಗೆ ಸಿದ್ಧವಂತೆ. ನಿರ್ದೇಶಕರು ಅವಕಾಶ ನೀಡಬೇಕಷ್ಟೇ ಎನ್ನುವುದು ಅವರ ಕೋರಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT