ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಘನತೆಯಿಂದ ಸಾಯುವ ಹಕ್ಕು ಸುಪ್ರೀಂಕೋರ್ಟ್ ಮಹತ್ವದ ತೀರ್ಪು

Last Updated 11 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ವಾಸಿಯಾಗದಂಥ ಕಾಯಿಲೆಯಿಂದ ಬಳಲುತ್ತಿರುವವರಿಗೆ ದಯಾಮರಣಕ್ಕೆ ಅನುಮತಿ ನೀಡಿ ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದೆ. ಈ ತೀರ್ಪಿನಿಂದಾಗಿ, ಘನತೆಯಿಂದ ಬದುಕುವ ಹಕ್ಕು, ಘನತೆಯಿಂದ ಸಾಯುವ ಹಕ್ಕಿಗೂ ವಿಸ್ತೃತಗೊಂಡಂತಾಗಿದೆ. ‘ಜೀವನಕ್ಕೆ ಮರಳುವುದು ಸಾಧ್ಯವೇ ಇಲ್ಲ ಎಂಬಂತಹ ರೋಗಿಗಳಿಗೆ ದಯಾಮರಣದ ಅವಕಾಶ ನೀಡಬೇಕು’ ಎಂದು ಏಳು ವರ್ಷಗಳ ಹಿಂದೆಯೇ ಅರುಣಾ ಶಾನಭಾಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಹೇಳಿತ್ತು ಎಂಬುದನ್ನು ಸ್ಮರಿಸಬಹುದು.

ಅತ್ಯಾಚಾರ ಸಂತ್ರಸ್ತೆಯಾಗಿ ಕೋಮಾಗೆ ಜಾರಿದ್ದ ಅರುಣಾ ಶಾನಭಾಗ್ ಆ ನಂತರ 42 ವರ್ಷ ಬದುಕಿದ್ದರು. ಕೋಮಾದಲ್ಲೇ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಬದುಕು ಸವೆಸುವುದೆಂದರೆ ದಾರುಣವಾದದ್ದು. ಈಗ ಕೋರ್ಟ್‌ ನೀಡಿರುವ ತೀರ್ಪು ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದು ಇನ್ನೂ ಹೆಚ್ಚು ಮುಖ್ಯವಾಗುತ್ತದೆ. ಈ ಪ್ರಕಾರ, ಮಾರಣಾಂತಿಕ ರೋಗಗಳಿಂದ ಬಳಲುವ ವ್ಯಕ್ತಿಯು ‘ಮರಣ ಇಚ್ಛೆಯ ಉಯಿಲು’ (ಲಿವಿಂಗ್ ವಿಲ್) ಬರೆಯಲು ಅವಕಾಶವಿದೆ.

ಚಿಕಿತ್ಸೆಯ ಸಂದರ್ಭದಲ್ಲಿ ಚೇತರಿಕೆ ಸಾಧ್ಯವಿಲ್ಲದ ರೀತಿಯ ಕೋಮಾ ಸ್ಥಿತಿಗೆ ತಲುಪಿದರೆ ಆ ಸ್ಥಿತಿಯಲ್ಲಿ ಬದುಕಲು ಇಷ್ಟ ಇಲ್ಲದವರು ತಾವು ಚಿಕಿತ್ಸೆಗೆ ಒಳಪಡುವ ಮೊದಲೇ ಈ ರೀತಿಯ ಉಯಿಲು ಬರೆಯಬಹುದು. ಇಂತಹ ಉಯಿಲು ಇದ್ದರೆ ಅದನ್ನು ಜಾರಿಮಾಡುವುದು ವೈದ್ಯರು ಹಾಗೂ ಬಂಧುಗಳ ಕರ್ತವ್ಯವಾಗುತ್ತದೆ. ರೋಗಿಯ ಕೃತಕ ಉಸಿರಾಟ ಅಥವಾ ಜೀವರಕ್ಷಕ ವೈದ್ಯಕೀಯ ಚಿಕಿತ್ಸೆಗೆ ತಡೆ ನೀಡಲು ಇದರಿಂದ ವೈದ್ಯರಿಗೆ ಅವಕಾಶ ಇರುತ್ತದೆ. ಬದುಕುವುದಿಲ್ಲ ಎಂದು ಗೊತ್ತಿದ್ದೂ ಅನಗತ್ಯವಾದ ದುಬಾರಿ ವೆಚ್ಚದ ಚಿಕಿತ್ಸೆ ನೀಡುವುದನ್ನು ತಪ್ಪಿಸಲು ಇದರಿಂದ ಸಾಧ್ಯವಾಗುತ್ತದೆ. ಬಂಧುಗಳಿಗೂ ನೈತಿಕ ಸಂಕಟ ತಪ್ಪುತ್ತದೆ. ಸಹಜ ರೀತಿಯಲ್ಲಿ ಸಾಯಲು ರೋಗಿಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಈ ಉಯಿಲನ್ನು ಯಾರು ಜಾರಿಗೆ ತರಬಹುದು, ಯಾವ ರೀತಿ ಜಾರಿಗೆ ತರಬೇಕು ಮತ್ತು ವೈದ್ಯಕೀಯ ಮಂಡಳಿಯ ಅನುಮತಿ ಪಡೆದುಕೊಳ್ಳುವ ಪ್ರಕ್ರಿಯೆ ಏನು ಎಂಬ ಮಾರ್ಗದರ್ಶಿ ಸೂತ್ರಗಳನ್ನೂ ಕೋರ್ಟ್‌ನ ಸಂವಿಧಾನ ಪೀಠ ನೀಡಿದೆ. ಸಾವಿನ ಪ್ರಕ್ರಿಯೆಯನ್ನು ತ್ವರಿತಗೊಳಿಸಿ ನೋವು ಅನುಭವಿಸುವ ಅವಧಿಯನ್ನು ಕಡಿಮೆಗೊಳಿಸುವುದು ಘನತೆಯಿಂದ ಬದುಕುವ ಹಕ್ಕಿನ ಭಾಗವಾಗಿದೆ ಎಂದು ಕೋರ್ಟ್ ಹೇಳಿರುವುದು ಸರಿಯಾದುದು. ಇದು ಪ್ರಗತಿಪರ ಹಾಗೂ ಮಾನವೀಯವಾದ ದಿಟ್ಟ ತೀರ್ಪು ಎಂಬುದರಲ್ಲಿ ಎರಡು ಮಾತಿಲ್ಲ. ಮುಖ್ಯ ಸಂದೇಶ ಏನೆಂದರೆ, ಒಪ್ಪಿಗೆ ಕೊಡುವ ಸಾಮರ್ಥ್ಯವಿರುವ ಎಲ್ಲಾ ವಯಸ್ಕರೂ ಸ್ವಯಂ ನಿರ್ಧಾರ ಹಾಗೂ ಸ್ವಾಯತ್ತತೆಯ ಹಕ್ಕು ಹೊಂದಿರುತ್ತಾರೆ. ಹಾಗೆಯೇ ವೈದ್ಯಕೀಯ ಚಿಕಿತ್ಸೆ ನಿರಾಕರಿಸುವ ಹಕ್ಕನ್ನೂ ಹೊಂದಿರುತ್ತಾರೆ. ‘ಅರ್ಥಪೂರ್ಣ ಅಸ್ತಿತ್ವ’ದ ಮೂಲಭೂತ ಹಕ್ಕು, ಘನತೆಯಿಂದ ಸಾಯುವುದನ್ನೂ ಒಳಗೊಂಡಿದೆ ಎಂದು ಸುಪ್ರೀಂ ಕೋರ್ಟ್ ವ್ಯಾಖ್ಯಾನಿಸಿದೆ. ನೋವಿನ ಅವಧಿ ಕಡಿಮೆ ಮಾಡಿ ಸಾವಿನ ಪ್ರಕ್ರಿಯೆ ತ್ವರಿತಗೊಳಿಸುವುದೂ ಘನತೆಯಿಂದ  ಬದುಕುವ ಹಕ್ಕಿನಲ್ಲಿ ಒಳಗೊಂಡಿರುತ್ತದೆ.

ಈ  ತೀರ್ಪು ಬೀರಬಹುದಾದ ಸಾಮಾಜಿಕ ಹಾಗೂ ಆರ್ಥಿಕ ಪರಿಣಾಮಗಳೂ ಮುಖ್ಯವಾದವು. ವಾಸಿಯಾಗದ ಕಾಯಿಲೆಗಳಿಂದ ನರಳುವ ಬಂಧುಗಳಿಗೆ ನೈತಿಕ ಒತ್ತಡಗಳಿಂದಾಗಿ ಹಣ ಹಾಗೂ ಸಮಯ ವ್ಯಯಿಸುತ್ತಿರುವ ಅನೇಕ ಕುಟುಂಬಗಳಿಗೆ ಇದು ಸಂಜೀವಿನಿ. ಆದರೆ  ಮರಣ ಇಚ್ಛೆಯ ಉಯಿಲಿನ ಅವಕಾಶ ದುರ್ಬಳಕೆಯಾಗದು ಎಂದೇನೂ ಹೇಳಲಾಗದು. ಹೀಗಾಗಿ ಜೀವರಕ್ಷಕ ವ್ಯವಸ್ಥೆ ಹಿಂತೆಗೆದುಕೊಳ್ಳುವಾಗ ನಿರ್ದಿಷ್ಟ ಮಾರ್ಗದರ್ಶಿ ಸೂತ್ರಗಳು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ಎಚ್ಚರ ವಹಿಸಬೇಕು. ಇದೇ ಸಂದರ್ಭದಲ್ಲಿ, ವೃದ್ಧಾಪ್ಯದಲ್ಲಿರುವವರು ವೈದ್ಯಕೀಯ ನೆರವಿನೊಂದಿಗೆ ವಿಷ ಅಥವಾ ವಿಷದ ಇಂಜೆಕ್ಷನ್ ಮೂಲಕ ತನ್ನ ನೋವಿನ ಬದುಕನ್ನು ಅಂತ್ಯಗೊಳಿಸಿಕೊಳ್ಳುವ ದಯಾಮರಣಕ್ಕೆ (ಆ್ಯಕ್ಟಿವ್ ಯುಥನೇಸಿಯಾ) ಕೋರ್ಟ್ ಅವಕಾಶ ನೀಡಿಲ್ಲ. ವೃದ್ಧಾಪ್ಯದಲ್ಲಿದ್ದು ಬಾಳಲು ಇಚ್ಛೆ ಇಲ್ಲದವರಿಗೆ ಈ ಅವಕಾಶ ಇರಬೇಕು ಎಂಬಂತಹ  ಒತ್ತಾಯವನ್ನು ಮುಂಬೈನಲ್ಲಿರುವ ದಂಪತಿ ಇತ್ತೀಚೆಗೆ ಮುಂದಿಟ್ಟಿದ್ದಾರೆ ಎಂಬುದು ಗಮನಾರ್ಹ. ಬದಲಾಗುತ್ತಿರುವ ಸಾಮಾಜಿಕ ಮೌಲ್ಯಗಳಿಗೆ ಇದು ಸಂಕೇತ ಎನ್ನಬಹುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT