ಕಣ್ಣುಗಳಲ್ಲಿ ನಕ್ಷತ್ರಪಟ, ಮಾತುಗಳಲ್ಲಿ ಹೊಸಪಥ

7

ಕಣ್ಣುಗಳಲ್ಲಿ ನಕ್ಷತ್ರಪಟ, ಮಾತುಗಳಲ್ಲಿ ಹೊಸಪಥ

Published:
Updated:
ಕಣ್ಣುಗಳಲ್ಲಿ ನಕ್ಷತ್ರಪಟ, ಮಾತುಗಳಲ್ಲಿ ಹೊಸಪಥ

ಬೆಂಗಳೂರು: ಉಭಯಕುಶಲೋಪರಿ, ಮಾತಿನ ಲಹರಿ, ಅಪ್ಪುಗೆ, ನೆನಪುಗಳ ಮರುಕಳಿಕೆ, ವರ್ತಮಾನದ ಬಗ್ಗೆ ಹಳಹಳಿಕೆ, ಹೊಸಪೀಳಿಗೆಯ ಬಗ್ಗೆ ಆಶಾಭಾವ - ನಾಲ್ಕು ದಶಕಗಳ ಕಾಲ ‘ಬಂಡಾಯ ಸಾಹಿತ್ಯ ಸಂಘಟನೆ’ಯ ಜೊತೆ ಗುರ್ತಿಸಿಕೊಂಡ ಗೆಳೆಯರು ಮತ್ತೆ ಸೇರಿದಾಗ ಕಾಣಿಸಿದ ಚಿತ್ರಗಳಿವು.

‘ಬಂಡಾಯ ಸಾಹಿತ್ಯ ಸಂಘಟನೆ’ ನಲವತ್ತನೇ ವರ್ಷಕ್ಕೆ ಅಡಿಯಿಟ್ಟ ಸಂದರ್ಭದಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಹಳೆಯ ಗೆಳೆಯರು ಒಟ್ಟುಗೂಡಿ ಸಂಭ್ರಮಿಸಿದರು. ‘ನಮ್ಮ ಕಾಲ ಮುಗೀತು, ನಾವೆಲ್ಲ ದಣಿದಿದ್ದೇವೆ’ ಎನ್ನುತ್ತಲೇ ಮತ್ತೆ ಸಂಘಟನೆ ಕಟ್ಟುವ ಹಂಬಲ ವ್ಯಕ್ತಪಡಿಸಿದರು.

‘ಕಟ್ಟತ್ತೇವ ನಾವು ಕಟ್ಟತೇವ ನಾವು...’ ಎಂದು ಕವಿ ಸತೀಶ ಕುಲಕರ್ಣಿ ಭಾವಪೂರ್ಣವಾಗಿ ಹಾಡಿದಾಗ ಸೆನೆಟ್‍ ಹಾಲ್‍ನಲ್ಲಿ ಬಂಡಾಯದ ಹುಮ್ಮಸ್ಸಿನ ದಿನಗಳೆಲ್ಲ ಒಮ್ಮೆಗೇ ಹಾದುಹೋದಂತಾದವು. ಅನಾರೋಗ್ಯದ ನಡುವೆಯೂ ಹಾವೇರಿಯಿಂದ ಬಂದಿದ್ದ ಅವರು, ‘ಒಡೆದ ಮನಸುಗಳ ಕಂಡ ಕನಸುಗಳ ನಾವು ಕಟ್ಟೇ ಕಟ್ಟತೇವ...’ ಎಂದು ಉತ್ಸಾಹದಿಂದ ಹಾಡಿದರು.

‘1979ರಲ್ಲಿ ಪ್ಯಾಸೆಂಜರ್ ಟ್ರೈನಿನಲ್ಲಿ ಸರಜೂ ಕಾಟ್ಕರ್ ಜೊತೆ‌ ಬಂಡಾಯದ ಸಮಾವೇಶಕ್ಕೆ ಬೆಂಗಳೂರಿಗೆ ಬಂದಿದ್ದೆ. ಅಂದಿನ ಹುಮ್ಮಸ್ಸು, ಬದ್ಧತೆಯನ್ನು ಈಗಲೂ ಕಳೆದುಕೊಂಡಿಲ್ಲ. ನಮ್ಮ ಜೀವನದ, ಅದರಲ್ಲೂ ನಮ್ಮ ಯೌವನದ ಮುಖ್ಯವಾದ ಭಾಗವನ್ನು ಸಂಘಟನೆಗೆ ಕೊಟ್ಟಿದ್ದೇವೆ. ಈಗಲೂ ಕನ್ನಡ ಸಾಂಸ್ಕೃತಿಕ ಲೋಕದ ಅಂಕುಶಗಳು ಬಂಡಾಯದ ಗೆಳೆಯರೇ ಆಗಿದ್ದಾರೆ’ ಎಂದು ಹೇಳಿದಾಗ ಸಭಾಂಗಣದಲ್ಲಿ ಚಪ್ಪಾಳೆಯ ಸುರಿಮಳೆ.

ಬಂಡಾಯದ ಹೊಸ ಕಹಳೆ: ದ್ವೇಷವನ್ನು ಬಿತ್ತುವುದೇ ದೇಶ ಕಟ್ಟುವ ಕೆಲಸ ಎನ್ನುವ ನಂಬಿಕೆಯನ್ನು ಜನಪ್ರಿಯಗೊಳಿಸುತ್ತಿರುವ ಸಂದರ್ಭದಲ್ಲಿ, ಧಾರ್ಮಿಕ ಮೂಲಭೂತವಾದವನ್ನು ಸಾಂಸ್ಕೃತಿಕವಾಗಿ ಎದುರಿಸುವುದು ಹೇಗೆ ಎನ್ನುವ ಸವಾಲು ಬಂಡಾಯ ಸಾಹಿತ್ಯ ಸಂಘಟನೆಯ ಮುಂದಿದೆ ಎಂದು ಲೇಖಕ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಒಂದು ಧರ್ಮದ ಸಮಗ್ರತೆಯನ್ನು ರಾಷ್ಟ್ರೀಯ ಸಮಗ್ರತೆ ಹಾಗೂ ಭಾವೈಕ್ಯದ ರೂಪದಲ್ಲಿ ಬಿಂಬಿಸಲಾಗುತ್ತಿದೆ. ಬಂಡವಾಳಶಾಹಿ ಪರಿಭಾಷೆ ಚಾಲ್ತಿಯಲ್ಲಿರುವ ದಿನಗಳಲ್ಲಿ ರಾಜಕಾರಣಿಗಳು ಚರಿತ್ರೆಯ ಚಾರಿತ್ರ್ಯ ಹನನ ಮಾಡುತ್ತಿದ್ದಾರೆ’ ಎಂದರು.

ಅಂತರರಾಷ್ಟ್ರೀಯ ಅಗ್ರಹಾರಗಳು ಅಧಿಪತ್ಯ ಸಾಧಿಸಿರುವ ಸಂದರ್ಭದಲ್ಲಿ ಬದುಕುತ್ತಿದ್ದೇವೆ. ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಧಾರ್ಮಿಕವಾಗಿ ಪ್ರಬಲಗೊಳ್ಳುತ್ತಿರುವ ಇವುಗಳನ್ನು ಎದುರಿಸುವ ಸವಾಲು ನಮ್ಮ ಮುಂದಿದೆ ಎಂದ ಅವರು, ವರ್ಣವ್ಯವಸ್ಥೆ ಹಾಗೂ ಜಾತಿವ್ಯವಸ್ಥೆಗೆ ಪೂರಕವಾದ ಎಲ್ಲವೂ ಅಗ್ರಹಾರವೇ ಎಂದು ವಿಶ್ಲೇಷಿಸಿದರು.

ಹೊಸ ಕನಸು: 1979ರ ಮಾರ್ಚ್ 11ರಂದು ಬೆಂಗಳೂರಿನ ದೇವಾಂಗ ಹಾಸ್ಟೆಲ್‍ನಲ್ಲಿ ನಡೆದ ಸಮಾವೇಶದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಜನ್ಮತಳೆದ ಸಂದರ್ಭವನ್ನು ನೆನಪಿಸಿಕೊಂಡ ಅವರು, ನಂತರದ 40 ವರ್ಷಗಳಲ್ಲಿ ಸಂಘಟನೆಯ ಏಳುಬೀಳುಗಳನ್ನು ಪ್ರಸ್ತಾಪಿಸಿದರು. ‘ಕೃಷಿ ಚಳವಳಿ, ಮಹಿಳಾ ಚಳವಳಿ, ದಲಿತ ಸಂಘರ್ಷ ಸಮಿತಿ, ಸಮುದಾಯ ಸಂಘಟನೆ - ಇವೆಲ್ಲದರ ಮುಂದುವರಿಕೆ ಹಾಗೂ ಒಳಗೊಳ್ಳುವಿಕೆಯ ಭಾಗವಾಗಿ ಬಂಡಾಯ ರೂಪುಗೊಂಡಿತು’ ಎಂದ ಅವರು, ಹಿನ್ನೋಟ ಮುನ್ನೋಟಗಳನ್ನು ಒಗ್ಗೂಡಿಸುವ ತಿಳಿವಳಿಕೆ ಈ ಹೊತ್ತಿನ ಸಂಘಟನೆಯದ್ದಾಗಬೇಕು ಎಂದರು.

ಇನ್ನೊಂದು ತಿಂಗಳಲ್ಲಿ ಬಂಡಾಯದ ಗೆಳೆಯರ ಆಂತರಿಕ ಸಭೆ ನಡೆಯಲಿದೆ. ಅದಾದ ನಂತರ ಎಲ್ಲ ಜಿಲ್ಲೆಗಳಲ್ಲಿ ಬಂಡಾಯ ಸಂಘಟನೆಯ ಪ್ರಯತ್ನ ನಡೆಸಲಾಗುವುದು ಎಂದು ಹೇಳಿದರು.

ಸಂವಿಧಾನದ ಉಳಿವಿನ ಪ್ರಶ್ನೆ: ‘ರಾಜಕಾರಣವನ್ನು ಧರ್ಮ ಕೈಗೆತ್ತಿಕೊಂಡಿರುವ ಸಂದರ್ಭದಲ್ಲಿ, ಸಂವಿಧಾನದ ಬಗ್ಗೆ ನಂಬಿಕೆ ಇಲ್ಲದವರು ಅದು ಕಲ್ಪಿಸಿದ ಸ್ಥಾನಗಳನ್ನು ಅನುಭವಿಸುತ್ತಿದ್ದಾರೆ. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದ್ದು, ಸಂವಿಧಾನ ಅಳಿವು ಉಳಿವಿನ ಪ್ರಶ್ನೆ ಎದುರಿಸುತ್ತಿದೆ’ ಎಂದು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನದಾಸ್‌ ಅಭಿಪ್ರಾಯಪಟ್ಟರು

‘ಜನತಂತ್ರ ಸೃಜನಶೀಲತೆ' ಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ 178 ಸಂಸದರ ಮೇಲೆ ಕ್ರಿಮಿನಲ್‌ ಮೊಕದ್ದಮೆಗಳಿವೆ. ಸಂಪತ್ತು ಹಾಗೂ ಅಪರಾಧದ ಹಿನ್ನೆಲೆ ಹೆಚ್ಚಾದಷ್ಟೂ ಅವರ ಗೆಲುವಿನ ಮತಗಳ ಅಂತರವೂ ಹೆಚ್ಚಾಗುತ್ತಿದೆ. ಆರ್ಥಿಕ ಮತ್ತು ಸಾಮಾಜಿಕ ಭಯೋತ್ಪಾದಕತೆ ದೇಶದಲ್ಲಿ ತಾಂಡವವಾಡುತ್ತಿದೆ. ಇದಕ್ಕೆಲ್ಲ ಯಾವುದು ಪರ್ಯಾಯ ಎನ್ನುವುದನ್ನು ಬಂಡಾಯದ ಗೆಳೆಯರು ಯೋಚಿಸಬೇಕು ಎಂದರು.

ಎಲ್ಲ ಧರ್ಮಗಳನ್ನು ಸಮಾನಭಾವದಿಂದ ನೋಡುವುದು ಜಾತ್ಯತೀತತೆ ಎನ್ನುವ ಪರಿಕಲ್ಪನೆ ಮರು ವ್ಯಾಖ್ಯಾನಕ್ಕೆ ಒಳಪಡಬೇಕಿದೆ. ಸರ್ಕಾರದ ನೀತಿ-ನಿಲುವುಗಳು ಯಾವುದೇ ಧರ್ಮದ ಪ್ರಭಾವಕ್ಕೆ ಒಳಗಾಗದಿರುವುದೇ ನಿಜವಾದ ಜಾತ್ಯತೀತತೆ ಎಂದು ಹೇಳಿದರು.

ಮೈಸೂರಿನಲ್ಲಿ ಸಮ್ಮೇಳನ: ಇನ್ನೊಂದು ತಿಂಗಳಲ್ಲಿ ಮೈಸೂರಿನಲ್ಲಿ ಬೃಹತ್‍ ಸಮ್ಮೇಳನ ನಡೆಯಲಿದೆ. ಅದಾದ ನಂತರ ಬಂಡಾಯದ ಶಿಬಿರಗಳು ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯಲಿವೆ ಎಂದು ಕವಿ ಆರ್.ಜಿ. ಹಳ್ಳಿ ನಾಗರಾಜ ಹೇಳಿದರು. ಇದೇ ಸಂದರ್ಭದಲ್ಲಿ ಅವರು ಸಂಪಾದಿಸಿದ ‘ಬಂಡಾಯ ಸಾಹಿತ್ಯ: ಅರಿವು ಅಂತರಂಗ' ಹಾಗೂ ಬರಗೂರರ ‘ಬಂಡಾಯ ಸಾಹಿತ್ಯ ಚಳವಳಿ: ತಾತ್ವಿಕ ನೆಲೆ’ ಕೃತಿಗಳು ಬಿಡುಗಡೆಯಾದವು.

ಕುಂ. ವೀರಭದ್ರಪ್ಪ, ಅಲ್ಲಮಪ್ರಭು ಬೆಟ್ಟದೂರು, ಬೊಳುವಾರು, ಲೋಹಿಯಾ ಪ್ರಕಾಶನದ ಚನ್ನಬಸವಣ್ಣ, ಚಂಪಾ, ಬಿ.ಟಿ. ಲಲಿತಾ ನಾಯಕ್, ಲಕ್ಷ್ಮಣದಾಸ್, ಸುಕನ್ಯಾ ಮಾರುತಿ, ಕೆ. ಕೇಶವ ಶರ್ಮ, ಸಿದ್ದನಗೌಡ ಪಾಟೀಲ, ರಾಜಪ್ಪ ದಳವಾಯಿ ಸೇರಿದಂತೆ ಹಲವು ಬರಹಗಾರರು ಬಂಡಾಯ ಸಂಘಟನೆಯ 40ರ ನೆನಪಿಗೆ

ಸಾಕ್ಷಿಯಾಗಿದ್ದರು.

ವಿಧಾನಸೌಧದ 3ನೇ ಮಹಡಿಯಲ್ಲಿ ಸಾಹಿತಿಗಳು!

ಬಂಡಾಯ ಸಂಘಟನೆಯ ಪುನಶ್ಚೇತನದ ಸಂದರ್ಭ ಪುನರ್ ವಿಮರ್ಶೆಗೂ ಅವಕಾಶ ಕಲ್ಪಿಸಬೇಕು ಎಂದು ಅಭಿಪ್ರಾಯಪಟ್ಟ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಮೋಹನ್‍ರಾಜ್‍, ‘ಹಿಂದಿನ ಎಲ್ಲ ಚಳವಳಿಗಳಿಗೆ ಸಾಹಿತಿಗಳು ಮಾದರಿಗಳಾಗಿದ್ದರು. ಈಗ ಅವರೆಲ್ಲ ಏನಾಗಿದ್ದಾರೆ? ವಿಧಾನಸೌಧದ ಮೂರನೇ ಮಹಡಿ ಸೇರಿಕೊಂಡಿದ್ದಾರೆ’ ಎಂದು ಕಟುವಾಗಿ ಹೇಳಿದರು.

ನಾವು ಆದರ್ಶವೆಂದು ನಂಬಿದ್ದ ಲೇಖಕರು ನಮ್ಮ ನೆಲದ ತಲ್ಲಣಗಳಿಗೆ ಸ್ಪಂದಿಸುತ್ತಿಲ್ಲ. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಂವಿಧಾನ ಬದಲಿಸುವ ಮಾತನಾಡುತ್ತಾರೆ. ಅವರ ಮಾತಿಗೆ ಎಷ್ಟು ಜನ ಪ್ರತಿಕ್ರಿಯಿಸಿದ್ದಾರೆ ಎಂದು ಪ್ರಶ್ನಿಸಿದರು.

ನಾವು ಹಿಟ್ಲರ್ ನೋಡಿಲ್ಲ. ಮುಸ್ಸೊಲಿನಿ ನೋಡಿಲ್ಲ. ಅವರ ಪ್ರತಿರೂಪವಾದ ಮೋದಿಯನ್ನು ನೋಡುತ್ತಿದ್ದೇವೆ. ಇನ್ನೊಂದು ಕಡೆ - ಬಡವರ ಪರ, ದಲಿತರ ಪರ ಎಂದು ಹೇಳಿಕೊಳ್ಳುವ ಸರ್ಕಾರ ಭೂಮಿಯನ್ನು ಕೇಳಿದ ದಲಿತರನ್ನು ಜೈಲಿಗೆ ಹಾಕುತ್ತದೆ. ಅಕ್ಕಿ ಕೊಟ್ಟರೆ, ಹಾಲು ಕೊಟ್ಟರೆ ಒಳ್ಳೆಯ ದಿನ ಬರುತ್ತದಾ ಎಂದು ನಾವು ಯೋಚಿಸಬೇಕು ಎಂದ ಅವರು, ಸಂವಿಧಾನವನ್ನು ಉಳಿಸಿಕೊಳ್ಳುವುದು ನಮ್ಮ ಪ್ರಮುಖ ಆದ್ಯತೆಯಾಗಬೇಕು ಎಂದರು.

ಸೈದ್ಧಾಂತಿಕ ಸೌಹಾರ್ದದ ಈ ಹೊತ್ತಿನ ಅಗತ್ಯ ಎಂದು ಹೇಳಿದ ದಲಿತ ಸಂಘರ್ಷ ಸಮಿತಿಯ ಲಕ್ಷ್ಮೀನಾರಾಯಣ ನಾಗವಾರ, ಬಂಡಾಯ ಸಂಘಟನೆ ಪ್ರಬಲವಾಗಿದ್ದಲ್ಲಿ ಉಡುಪಿಯ ಧರ್ಮಸಂಸತ್‍ಗೆ ಪರ್ಯಾಯ ರೂಪಿಸುವುದು ಸಾಧ್ಯವಿತ್ತು ಎಂದು ಹೇಳಿದರು.

ಹೆಗಡೆಗೆ ಬಂದ ಅನುಮಾನ ಯಾರಿಗೂ ಬಂದಿಲ್ಲ

ಬೆಂಗಳೂರು: ಕವಿ ಸಿದ್ದಯ್ಯ ಪುರಾಣಿಕರು ‘ಏನಾದರೂ ಆಗು ಮೊದಲು ಮಾನವನಾಗು’ ಎಂದು ಕವಿತೆ ಬರೆದರು. ಅದನ್ನೇ ಬಂಡಾಯ ಸಂಘಟನೆ ಸಭೆಯಲ್ಲಿ ‘ಮಾನವರಾಗೋಣ ನಾವು ಮಾನವರಾಗೋಣ’ ಎಂದು ಹಾಡುತ್ತಿದ್ದೇವೆ. ಆದರೆ, ಕೇಂದ್ರ ಸಚಿವ ಅನಂತಕುಮಾರ ಹೆಗಡೆಗೆ ತಮ್ಮ ಬಗ್ಗೆ ಏಕೆ ಅನುಮಾನ ಬಂತೋ ಗೊತ್ತಿಲ್ಲ. ‘ಮತ್ತೆ ನಾವೇನು ದನ ಆಗಿದ್ದೇವಾ’ ಎಂದು ಪ್ರಶ್ನಿಸುತ್ತಿದ್ದಾರೆ. ಬೇರೆ ಯಾವ ಮಾನವರಿಗೂ ಆ ಅನುಮಾನ ಬಂದಿಲ್ಲ’ ಎಂದು ಸಾಹಿತಿ ಚಂದ್ರಶೇಖರ ಪಾಟೀಲ ವ್ಯಂಗ್ಯವಾಡಿದರು.

ಸಮಾವೇಶದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಬಂಡಾಯ ಸಾಹಿತ್ಯ ಸಂಘಟನೆಗೆ ಈಗ 40 ವಯಸ್ಸು ಆಗಿದೆ. ಆದರೂ ನಮ್ಮ ಗೆಟಪ್ ಆಗಲೀ, ಕನಸುಗಳಾಗಲೀ ಬದಲಾಗಿಲ್ಲ. ಈ ಸಾಹಿತ್ಯದ ಬಗೆಗಿನ ಕಾಳಜಿಯೂ ಹಾಗೆಯೇ ಇದೆ. ಆದರೆ, ಸಮಾಜದ ಸಮಸ್ಯೆಗಳು ಬದಲಾಗಿಲ್ಲ ಎನ್ನುವುದೇ ವಿಷಾದದ ಸಂಗತಿ’ ಎಂದರು.

ಜಾಗತೀಕರಣ, ಜಾತೀಕರಣ ಮತ್ತು ಕೇಸರೀಕರಣದ ಅನಿಷ್ಟಗಳ ವಿರುದ್ಧ ನಮ್ಮ ಸಾಹಿತಿಗಳು ಇನ್ನಷು ಗಟ್ಟಿ ಧ್ವನಿಯಲ್ಲಿ ಬರೆಯಬೇಕಿದೆ. ಭಾಷೆಯ ಲಯ ಮತ್ತು ಅರ್ಥಗಳನ್ನು ಇನ್ನಷ್ಟು ಸಮರ್ಥವಾಗಿ ಬಳಸಿಕೊಳ್ಳಲು ಬಂಡಾಯ ಸಾಹಿತಿಗಳು ಯತ್ನಿಸಬೇಕು ಎಂದು ಕರೆ ನೀಡಿದರು.

**

ಜಾತಿಯೊಳಗಿದ್ದೂ ಜಾತಿಯನ್ನು ಮೀರುವುದು, ಧರ್ಮದೊಳಗಿದ್ದೂ ಧರ್ಮವನ್ನು ಮೀರುವುದು ಬಂಡಾಯದ ಪ್ರಮುಖ ಲಕ್ಷಣ

 – ಬರಗೂರು ರಾಮಚಂದ್ರಪ್ಪ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry