ಕೋಮುವಾದಿ ಶಕ್ತಿ, ಪಕ್ಷ ಸೋಲಿಸಲು ಸಂಕಲ್ಪ

7
ಎತ್ತ ಸಾಗುತ್ತಿದೆ ಭಾರತ? ವಿಚಾರ ಸಂಕಿರಣದಲ್ಲಿ ನಿರ್ಣಯಗಳ ಅಂಗೀಕಾರ

ಕೋಮುವಾದಿ ಶಕ್ತಿ, ಪಕ್ಷ ಸೋಲಿಸಲು ಸಂಕಲ್ಪ

Published:
Updated:
ಕೋಮುವಾದಿ ಶಕ್ತಿ, ಪಕ್ಷ ಸೋಲಿಸಲು ಸಂಕಲ್ಪ

ಬೆಂಗಳೂರು: ‘ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕೋಮುವಾದಿ ವ್ಯಕ್ತಿ ಹಾಗೂ ಪಕ್ಷಗಳನ್ನು ಸೋಲಿಸಬೇಕು. ಜಾತ್ಯತೀತ, ಪ್ರಜಾಸತ್ತಾತ್ಮಕ ಹಾಗೂ ಪ್ರಗತಿಪರರೆಲ್ಲ ಒಗ್ಗಟ್ಟಾಗಿ ಬಿಜೆಪಿ ವಿರುದ್ಧ ಜಾಗೃತಿ ಮೂಡಿಸಬೇಕು. ಜಾತ್ಯತೀತ ಹೆಸರು ಹೇಳಿಕೊಂಡು ಬಿಜೆಪಿಗೆ ಬೆಂಬಲ ನೀಡುವವರ ವಿರುದ್ಧ ಜನಜಾಗೃತಿ ಮೂಡಿಸಬೇಕು’

ದಲಿತ ಸಂಘರ್ಷ ಸಮಿತಿ, ಕರ್ನಾಟಕ ಸ್ಟೇಟ್‌ ದಲಿತ ಸಂಘರ್ಷ ಸಮಿತಿ, ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ), ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ‘ಎತ್ತ ಸಾಗುತ್ತಿದೆ ಭಾರತ?’ ರಾಷ್ಟ್ರೀಯ ವಿಚಾರಸಂಕಿರಣದಲ್ಲಿ ಕೈಗೊಂಡ ನಿರ್ಣಯಗಳನ್ನು ದಸಂಸ ಸಂಚಾಲಕ ಗುರುಪ್ರಸಾದ್‌ ಕೆರಗೋಡು ಮಂಡಿಸಿದರು.

ಸಮಾರೋಪ ಭಾಷಣ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಸಂವಿಧಾನದ ಪುನಾರಚನೆಯ ಕೂಗು ಎಬ್ಬಿಸಿದ ಶಕ್ತಿಗಳೇ ಸಂವಿಧಾನದ ಬದಲಾವಣೆ ಆಗಬೇಕು ಎನ್ನುತ್ತಿವೆ. ಸಾಮಾಜಿಕ ಬದಲಾವಣೆಗಾಗಿ ಸಂವಿಧಾನಕ್ಕೆ ತಿದ್ದುಪಡಿ ತರುವುದರಲ್ಲಿ ಅರ್ಥವಿದೆ. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದಿರುವುದೇ ಸಂವಿಧಾನವನ್ನು ಬದಲಾಯಿಸಲು ಎಂದು ಕೇಂದ್ರ ಸಚಿವರೊಬ್ಬರು ಹೇಳಿಕೆ ನೀಡಿದ್ದಾರೆ. ಇದನ್ನು ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ’ ಎಂದು ಹೇಳಿದರು.

‘ಧರ್ಮ ಸಂಸತ್‌ ದೇಶದ್ರೋಹಿ ಸಂಸ್ಥೆ’

‘ಬಿಜೆಪಿಯ ಅಂಗವಾದ ಧರ್ಮಸಂಸತ್‌ ದೇಶದ್ರೋಹಿ ಸಂಸ್ಥೆ’ ಎಂದು ವಿಚಾರವಾದಿ ಪ್ರೊ.ಜಿ.ಕೆ.ಗೋವಿಂದರಾವ್‌ ಕಿಡಿಕಾರಿದರು.

‘ಧರ್ಮ ಸಂಸತ್‌ ಇತ್ತೀಚೆಗೆ ನಡೆಯಿತು. ಅದರಲ್ಲಿ ಭಾಗವಹಿಸಿದ್ದವರು ದಿನಕ್ಕೆ 5 ಬಾರಿ ಊಟ ಮಾಡಿ, ಆಕಳಿಸುತ್ತಾ ನಿದ್ದೆ ಮಾಡುತ್ತಿದ್ದರು. ಕೆಲಸಕ್ಕೆ ಬಾರದ ಭಾಷಣ ಮಾಡಿದ್ದರು. ಮೀಸಲಾತಿ ವ್ಯವಸ್ಥೆ ಇರಬಾರದು ಎಂಬ ನಿರ್ಣಯವನ್ನು ಕೈಗೊಂಡರು. ಇಂತಹ ಧರ್ಮ ಸಂಸತ್‌ ಅನ್ನು ತೊಡೆದು ಹಾಕದಿದ್ದರೆ ಸ್ವಾತಂತ್ರ್ಯ, ಸಮಾನತೆ ಸಾಧ್ಯವಿಲ್ಲ’ ಎಂದರು.

‘ಪೇಜಾವರ ಮಠದ ಸ್ವಾಮೀಜಿ ದಲಿತರ ಕೇರಿಗೆ ಹೋಗಿ ಭಗವದ್ಗೀತೆ ಹೇಳಿಕೊಡುತ್ತೇನೆ ಎನ್ನುತ್ತಾರೆ. ಇದರ ಬದಲಿಗೆ ದಲಿತ ಸಾಹಿತ್ಯವನ್ನು ಅವರ ಮಠದಲ್ಲಿ ಪ್ರವಚನ ಮಾಡಬಹುದಲ್ಲವೇ’ ಎಂದು ಪ್ರಶ್ನಿಸಿದರು.

ತಪಾಸಣೆಗಾಗಿ ಸಭಿಕರು ಹೊರಕ್ಕೆ

‘ಸಂವಿಧಾನದ ಆಶಯಗಳು ಮತ್ತು ಮಾಧ್ಯಮಗಳ ಹೊಣೆಗಾರಿಕೆ’ ವಿಷಯದ ಕುರಿತ ಗೋಷ್ಠಿ ಮಧ್ಯಾಹ್ನ 3ಕ್ಕೆ ಆರಂಭವಾಗಿತ್ತು. ಸ್ವಾಗತ ಭಾಷಣ ನಡೆಯುತ್ತಿದ್ದ ವೇಳೆ, ‘ಭದ್ರತಾ ದೃಷ್ಟಿಯಿಂದ ಇಡೀ ಸಭಾಂಗಣವನ್ನು ತಪಾಸಣೆ ನಡೆಸಬೇಕಿದೆ. ಎಲ್ಲರೂ ಹೊರಗೆ ನಡೆಯಿರಿ’ ಎಂದು ಆಯೋಜಕರಿಗೆ ಪೊಲೀಸರು ಸೂಚಿಸಿದರು. ಈ ವೇಳೆ, ‘ನಾವೇನು ಭಯೋತ್ಪಾದಕರೇ? ಹೊರಗೆ ಹೋಗುವುದಿಲ್ಲ’ ಎಂದು ಸಭಿಕರು ಪ್ರತಿಕ್ರಿಯಿಸಿದರು.

**

ಕೋಮುವಾದಿಗಳು ಸಾಮಾಜಿಕ ನ್ಯಾಯದ ರಥವನ್ನು ಹಿಂದಕ್ಕೆ ಎಳೆಯಲು ಪ್ರಯತ್ನಿಸುತ್ತಿದ್ದಾರೆ. ಅದಕ್ಕೆ ಅವಕಾಶ ನೀಡಬಾರದು.

–ಸಿದ್ದರಾಮಯ್ಯ, ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry