ರಾಜಕೀಯ ನಾಯಕರಿಂದ ತನಿಖೆ ಹೈಜಾಕ್‌: ಆರೋಪ

7
ಮುಖ್ಯ ಕಾರ್ಯದರ್ಶಿಗೆ ಐಪಿಎಸ್ ಅಧಿಕಾರಿಗಳ ಸಂಘದ ಪತ್ರ

ರಾಜಕೀಯ ನಾಯಕರಿಂದ ತನಿಖೆ ಹೈಜಾಕ್‌: ಆರೋಪ

Published:
Updated:

ಬೆಂಗಳೂರು: ‘ಕೆಲವು ಪ್ರಮುಖ ಪ್ರಕರಣಗಳಲ್ಲಿ ರಾಜಕೀಯ ನಾಯಕರು ತನಿಖೆಯನ್ನು ಹೈಜಾಕ್‌ ಮಾಡಿದ್ದಾರೆ’ ಎಂದು ಆರೋಪಿಸಿ ಕರ್ನಾಟಕ ಐಪಿಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷರೂ ಆಗಿರುವ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಆರ್‌.ಪಿ. ಶರ್ಮಾ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರಿಗೆ ಪತ್ರ ಬರೆದಿದ್ದಾರೆ.

‘ರಾಜ್ಯದ ಪೊಲೀಸರ ಹಿಂದಿನ ಘನತೆ ಮರಳಿ ಪಡೆಯಲು ಶೀಘ್ರದಲ್ಲೆ ಸಭೆ ಆಯೋಜಿಸಬೇಕು. ನಿರ್ದಿಷ್ಟ ಪ್ರಕರಣಗಳ ಕುರಿತು ಸಭೆಯಲ್ಲಿ ಚರ್ಚಿಸಬೇಕು. ಈ ಸಭೆಗೆ ನಿವೃತ್ತ ಅಧಿಕಾರಿಗಳನ್ನು ಆಹ್ವಾನಿಸಬೇಕು’ ಎಂದು ಶರ್ಮಾ ಈ ಪತ್ರದಲ್ಲಿ ತಿಳಿಸಿದ್ದಾರೆ.

‘ಪೊಲೀಸರ ಬಗ್ಗೆ ತಪ್ಪು ಭಾವನೆ ಮೂಡಿಸಲಾಗುತ್ತಿದೆ’ ಎಂದು ಮಾ. 8ಕ್ಕೆ ಬರೆದಿರುವ ಪತ್ರದಲ್ಲಿ ಶರ್ಮಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಇತ್ತೀಚೆಗೆ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಮೇಲೆ ನಡೆದ ಹಲ್ಲೆ ಹಾಗೂ ಹಿಂದಿನ ಘಟನೆಗಳು ಒಂದೇ ರೀತಿಯಲ್ಲಿವೆ. ಇದೊಂದು ಪ್ರತ್ಯೇಕ ಘಟನೆ ಎಂದು ಪರಿಗಣಿಸುವಂತಿಲ್ಲ. ಪೊಲೀಸ್ ಕಾರ್ಯವೈಖರಿಯಲ್ಲಿ ಏನೋ ಸಮಸ್ಯೆಯಿದೆ. ವೃತ್ತಿಪರತೆ ಅಳವಡಿಸಿಕೊಂಡಿದ್ದರೆ ಕೆಲವು ಪ್ರಕರಣಗಳಲ್ಲಿ ಹಿನ್ನಡೆ ತಡೆಯಬಹುದಿತ್ತು’ ಎಂದು ಪ್ರಸ್ತಾವಿಸಿರುವ ಅವರು, ಕೆಲವು ನಿರ್ದಿಷ್ಟ ಪ್ರಕರಣಗಳನ್ನು ಈ ಪತ್ರದಲ್ಲಿ ಪಟ್ಟಿ ಮಾಡಿದ್ದಾರೆ.

ಸುಪ್ರೀಂ ಕೋರ್ಟ್‌, ಪ್ರಕಾಶ್ ಸಿಂಗ್ ಪ್ರಕರಣದಲ್ಲಿ ಪೊಲೀಸರ ಸೇವಾ ಅವಧಿಯನ್ನು ನಿಗದಿಪಡಿಸಿದೆ. ಆದರೆ, ಈ ಅವಧಿಯನ್ನು ಕೇವಲ ಒಂದು ವರ್ಷಕ್ಕೆ ಇಳಿಸಿರುವುದರಿಂದ ಯಾವ ಲಾಭವೂ ಆಗುತ್ತಿಲ್ಲ. ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಯಲ್ಲೂ ಈ ವಿಷಯ ಚರ್ಚೆಯಾಗಿದೆ. ಪೊಲೀಸ್ ವ್ಯವಸ್ಥೆ ಸುಧಾರಣೆಯಲ್ಲಿ ಸೇವಾ ಅವಧಿ ಪ್ರಮುಖವಾದದ್ದು ಎಂದು ಅವರು ಪ್ರಸ್ತಾಪಿಸಿದ್ದಾರೆ.

ಕಳೆದ ನಾಲ್ಕೈದು ವರ್ಷಗಳಲ್ಲಿ ಬೆಂಗಳೂರು ಕಮಿಷನರ್ ಸ್ಥಾನಕ್ಕೆ ಆರು ಅಧಿಕಾರಿಗಳು ಬಂದಿದ್ದಾರೆ. ವ್ಯವಸ್ಥೆಯ ನಿರ್ವಹಣೆ, ನಿರಂತರತೆ ಹಾಗೂ ನಂಬಿಕೆಯಲ್ಲಿ ಪೊಲೀಸರನ್ನು ಅತ್ಯಂತ ಕೆಳಗೆ ಇರಿಸಲಾಗಿದೆ. ಇತ್ತೀಚಿನ ಲೋಕಾಯುಕ್ತ ಮೇಲಿನ ದಾಳಿ ಪ್ರಕರಣ ಗಮನಿಸಿದರೆ, ಪೊಲೀಸರು ಕೇವಲ ತಮ್ಮ ಔಪಚಾರಿಕತೆ ಪೂರೈಸುತ್ತಿದ್ದಾರೆಯೇ ವಿನಾ ಸಂವಿಧಾನಾತ್ಮಕವಾಗಿ  ಸಂಪೂರ್ಣ ಕರ್ತವ್ಯ ನಿರ್ವಹಸುತ್ತಿಲ್ಲ ಎಂಬುದು ಕಾಣುತ್ತದೆ ಎಂದಿದ್ದಾರೆ.

ಪತ್ರದಲ್ಲಿ ಪ್ರಸ್ತಾಪಿಸಿರುವ ಘಟನೆಗಳು

* ಮೈಸೂರಿನಲ್ಲಿ ಐಎಎಸ್ ಅಧಿಕಾರಿ ರಶ್ಮಿ ಅವರ ಮೇಲೆ ಅವರ ಕಚೇರಿಯ ಆವರಣದಲ್ಲೇ ಗೂಂಡಾಗಳು ಹಲ್ಲೆ ಮಾಡಿದರು.

* ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಶಿಖಾ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವಂತೆ ಗಂಭೀರ ರೀತಿಯಲ್ಲಿ ದಾಳಿ ನಡೆಯಿತು. ಎಫ್‌ಐಆರ್ ದಾಖಲಿಸಲು ಅವರು ಗಂಟೆಗಟ್ಟಲೆ ಕಾಯಬೇಕಾಯಿತು.

* ಯುಬಿ ಸಿಟಿಯಲ್ಲಿ ಅಮಾಯಕನ ಮೇಲೆ ದಾಳಿಯಾಯಿತು. ಆದರೆ, ಕ್ರಮ ಕೈಗೊಳ್ಳುವಲ್ಲಿ ಉದಾಸೀನತೆ ಕಂಡುಬಂತು.

* ಒಬ್ಬ ರಾಜಕಾರಣಿ, ಪೆಟ್ರೋಲ್ ಸುರಿದು ಸರ್ಕಾರಿ ಕಚೇರಿಯನ್ನೇ ಸುಟ್ಟುಹಾಕಲು ಮುಂದಾಗಿದ್ದ.

* ಲೋಕಾಯುಕ್ತ ಕಚೇರಿಯಲ್ಲೆ ನಡೆದಿರುವ ದಾಳಿ ಮೊದಲಾದ ಘಟನೆಗಳನ್ನು ಶರ್ಮಾ ಪತ್ರದಲ್ಲಿ ಪಟ್ಟಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry