ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ಜೀವಿತಾವಧಿವರೆಗೂ ಕ್ಸಿ ಅಧ್ಯಕ್ಷ

ಮಹತ್ವದ ಪ್ರಸ್ತಾವಕ್ಕೆ ಸಂಸತ್ ಅಂಗೀಕಾ
Last Updated 11 ಮಾರ್ಚ್ 2018, 20:17 IST
ಅಕ್ಷರ ಗಾತ್ರ

ಬೀಜಿಂಗ್: ಕ್ಸಿ ಜಿನ್‌ಪಿಂಗ್ ಅವರು ತಮ್ಮ ಜೀವಿತಾವಧಿಯವರೆಗೂ ಚೀನಾದ ಅಧ್ಯಕ್ಷರಾಗಿ ಮುಂದುವರಿಯುವ ಮಹತ್ವದ ತಿದ್ದುಪಡಿ ಮಸೂದೆಗೆ ಇಲ್ಲಿನ ಸಂಸತ್ತು ಅಂಗೀಕಾರ ನೀಡಿದೆ. ಈ ಮೂಲಕ ಅಧ್ಯಕ್ಷರಾಗುವವರಿಗೆ ಇದ್ದ ಎರಡು ಅವಧಿಯ ನಿರ್ಬಂಧ ಕೊನೆಗೊಂಡಿದೆ.

ಇತ್ತೀಚಿನ ದಿನಗಳಲ್ಲಿ ಚೀನಾದ ಅತ್ಯಂತ ಪ್ರಭಾವಶಾಲಿ ನಾಯಕ ಎಂದೇ ಗುರುತಿಸಿಕೊಂಡಿರುವ ಕ್ಸಿ (64) ಅವರು ತಮ್ಮ ಎರಡನೇ ಅವಧಿಯನ್ನು ಇದೇ ತಿಂಗಳಲ್ಲಿ ಆರಂಭಿಸಬೇಕಿತ್ತು. ಆಡಳಿ‌ತಾರೂಢ ಕಮ್ಯುನಿಸ್ಟ್ ಪಕ್ಷದ (ಸಿಪಿಸಿ) ಮುಖ್ಯಸ್ಥರೂ ಆಗಿರುವ ಕ್ಸಿ, ಪಕ್ಷದ ಸಂಸ್ಥಾಪಕ ಅಧ್ಯಕ್ಷ ಮಾವೊ ಜೆಡಾಂಗ್ ಬಳಿಕ ಜೀವಿತಾವಧಿ ಅಧಿಕಾರ ಪಡೆಯುತ್ತಿರುವ ಎರಡನೇ ಅಧ್ಯಕ್ಷರಾಗಿದ್ದಾರೆ.

ಸಿಪಿಸಿ ಕಳುಹಿಸುವ ಪ್ರಸ್ತಾವಗಳನ್ನು ಚೀನಾದ ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ (ಸಂಸತ್ತು) ಇದುವರೆಗೂ ಯಥಾವತ್ತಾಗಿ ಅನುಮೋದಿಸುತ್ತಾ ಬಂದಿದ್ದು, ರಬ್ಬರ್‌ಸ್ಟ್ಯಾಂಪ್‌ ರೀತಿ ಕೆಲಸ ಮಾಡುತ್ತಿದೆ.

ಪ್ರಸ್ತಾವದ ಪರ 2958 ಮತಗಳು ಚಲಾವಣೆಯಾದವು. ಎರಡು ಮತ ವಿರುದ್ಧ ಇದ್ದರೆ, ಮೂವರು ಸದಸ್ಯರು ಗೈರುಹಾಜರಾಗಿದ್ದರು. ವಿದ್ಯುನ್ಮಾನ ಮತ
ಯಂತ್ರದ ಬದಲು ಈ ಬಾರಿ ಮತಪತ್ರ ಬಳಸಲಾಗಿತ್ತು.

ಸಂಸತ್ತಿನಲ್ಲಿ ಮತದಾನಕ್ಕೂ ಮುನ್ನ, ಸಿಪಿಸಿಯ ಅತಿಮುಖ್ಯ ನೀತಿ ನಿರ್ಧಾರ ತೆಗೆದುಕೊಳ್ಳುವ ಏಳು ಸದಸ್ಯರ ಸ್ಥಾಯಿ ಸಮಿತಿಯು ಪ್ರಸ್ತಾವವನ್ನು ಸರ್ವಾನುಮತದಿಂದ ಅಂಗೀಕರಿಸಿತು.

ಉಪಾಧ್ಯಕ್ಷರ ಆಯ್ಕೆ ಮೇಲೆಯೂ ಇದ್ದ ನಿರ್ಬಂಧವನ್ನು ಇದೇ ಕಾಯ್ದೆಯು ರದ್ದುಗೊಳಿಸಿದೆ. ಕ್ಸಿ ಅವರ ಆಪ್ತ ವಾಂಗ್ ಕ್ವಿಶಾಂಗ್ (69) ಅವರು ಉಪಾಧ್ಯಕ್ಷರಾಗಿ ತಮ್ಮ ಜೀವಿತಾವಧಿವರೆಗೂ ಇರಲಿದ್ದಾರೆ.

2013ರಲ್ಲಿ ಕ್ಸಿ ಆರಂಭಿಸಿದ್ದ ಭ್ರಷ್ಟಾಚಾರ ವಿರೋಧಿ ಅಭಿಯಾನವನ್ನು ಮುನ್ನಡೆಸಿದವರು ಇವರೇ.

1954ರಲ್ಲಿ ಚೀನಾದಲ್ಲಿ ಮೊದಲ ಬಾರಿಗೆ ಸಂವಿಧಾನ ಜಾರಿಗೆ ಬಂದಿತ್ತು. 1982ರಿಂದ  ಜಾರಿಯಲ್ಲಿರುವ ಪ್ರಸ್ತುತ ಸಂವಿಧಾನಕ್ಕೆ ನಾಲ್ಕು ಬಾರಿ (1988, 1993, 1999 ಮತ್ತು 2004) ತಿದ್ದುಪಡಿ ತರಲಾಗಿದೆ.

ಭಾರತದ ಮೇಲೆ ಏನು ಪರಿಣಾಮ?

ಚೀನಾ ಸಶಸ್ತ್ರಪಡೆಗಳ ಮುಖ್ಯಸ್ಥರೂ ಆಗಿರುವ ಕ್ಸಿ, ಆಧುನಿಕ ಯುದ್ಧಗಳನ್ನು ಗೆಲ್ಲುವ ಸಾಮರ್ಥ್ಯ ಪಡೆಯುವ ನಿಟ್ಟಿನಲ್ಲಿ ಚೀನಾ ಸೇನೆಯ ಆಧುನೀಕರಣಕ್ಕೆ ಮುಂದಾಗಿದ್ದಾರೆ. ಇದು ನೆರೆಯ ದೇಶಗಳಲ್ಲಿ ಕಳವಳಕ್ಕೆ ಕಾರಣವಾಗಿದೆ. ದೋಕಲಾ ವಿಚಾರದ ಹಿನ್ನೆಲೆಯಲ್ಲಿ, ಜಿನ್‌ಪಿಂಗ್‌ಗೆ ಸಿಕ್ಕಿರುವ ಜೀವತಾವಧಿ ಅಧಿಕಾರವು ಭಾರತದ ಮೇಲೆ ಮಹತ್ವದ ಪರಿಣಾಮ ಬೀರಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಹಾದುಹೋಗುವ ಪಾಕಿಸ್ತಾನ–ಚೀನಾ ಆರ್ಥಿಕ ಕಾರಿಡಾರ್ ನಿರ್ಮಾಣ, ಭಾರತದ ನೆರೆ ದೇಶಗಳಾದ ಶ್ರೀಲಂಕಾ, ನೇಪಾಳ, ಮಾಲ್ಡೀವ್ಸ್‌ಗೆ ಸಂಪರ್ಕ ಕಲ್ಪಿಸುವ ಕಾಮಗಾರಿಗಳಿಗೆ ಚೀನಾ ಕೋಟ್ಯಂತರ ರೂಪಾಯಿ ಸುರಿಯುತ್ತಿದೆ. ಇವುಗಳ ಮೂಲಕ ಭಾರತದ ವಿರುದ್ಧ ಚೀನಾ ಕಾರ್ಯತಂತ್ರ ರೂಪಿಸುತ್ತಿದೆ ಎಂಬ ಆರೋಪ ಇದೆ.

**

* ಚೀನಾದಲ್ಲಿ ಕ್ರಾಂತಿಕಾರಕ ಬದಲಾವಣೆಗಳಿಗೆ ನಾಂದಿ

* ಕೆಲ ದಿನಗಳಲ್ಲಿ ಕ್ಸಿ ಸಂಪುಟ ಪುನರ್‌ರಚನೆ

* ಸರ್ಕಾರದ ಪ್ರಮುಖ ಹುದ್ದೆಗಳಿಗೆ ಹೊಸಬರ ನೇಮಕ

* ಉಪಾಧ್ಯಕ್ಷರ ಅಧಿಕಾರ ಅವಧಿಗೂ ಮಿತಿಯಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT