ವಿದೇಶ ವಹಿವಾಟಿನ ಲೆಕ್ಕಪತ್ರ ತಪಾಸಣೆಗೆ ಆರ್‌ಬಿಐ ಕ್ರಮ

ಬುಧವಾರ, ಮಾರ್ಚ್ 27, 2019
22 °C

ವಿದೇಶ ವಹಿವಾಟಿನ ಲೆಕ್ಕಪತ್ರ ತಪಾಸಣೆಗೆ ಆರ್‌ಬಿಐ ಕ್ರಮ

Published:
Updated:
ವಿದೇಶ ವಹಿವಾಟಿನ ಲೆಕ್ಕಪತ್ರ ತಪಾಸಣೆಗೆ ಆರ್‌ಬಿಐ ಕ್ರಮ

ನವದೆಹಲಿ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ದೇಶಿ ಮತ್ತು ವಿದೇಶಿ ವ್ಯಾಪಾರಕ್ಕೆ ಸಂಬಂಧಿಸಿದಂತೆ ನೀಡಿದ ಸಾಲಗಳ ವಿಶೇಷ ಲೆಕ್ಕಪತ್ರ ತಪಾಸಣೆ ನಡೆಸಲು ಭಾರತೀಯ ರಿಸರ್ವ್‌ ಬ್ಯಾಂಕ್ ನಿರ್ಧರಿಸಿದೆ.

ಬ್ಯಾಂಕ್‌ಗಳಲ್ಲಿ ನಡೆದ ವಂಚನೆ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರುತ್ತಿರುವ ಕಾರಣಕ್ಕೆ ಈ ಕ್ರಮ ಕೈಗೊಳ್ಳಲು ಆರ್‌ಬಿಐ ಮುಂದಾಗಿದೆ. ಇಂತಹ ವ್ಯಾಪಾರ ಉದ್ದೇಶದ ಸಾಲಗಳಿಗೆ ಸಂಬಂಧಿಸಿದಂತೆ ಬ್ಯಾಂಕ್‌ಗಳು ನೀಡಿದ ಸಾಲ ಮರುಪಾವತಿ ಖಾತರಿ ಪತ್ರಗಳ (ಎಲ್‌ಒಯು) ಬಗ್ಗೆ ಹೆಚ್ಚು ಗಮನ ಹರಿಸಲಾಗುವುದು. ಬ್ಯಾಂಕ್‌ಗಳು ನೀಡಿರುವ ‘ಎಲ್‌ಒಯು’ಗಳು, ಸಾಲದ ಪ್ರಮಾಣ, ಇಂತಹ ಖಾತರಿ ನೀಡುವ ಮುನ್ನ ಆ ಉದ್ದೇಶಕ್ಕೆ ಅಗತ್ಯ ಇರುವಷ್ಟು ಮೊತ್ತವನ್ನು ತೆಗೆದು ಇರಿಸಿರುವ ಕುರಿತ ಮಾಹಿತಿ ನೀಡಲು ಬ್ಯಾಂಕ್‌ಗಳಿಗೆ ಸೂಚಿಸಲಾಗಿದೆ.

ನೀರವ್‌ ಮೋದಿ ಪ್ರಕರಣವೂ ಸೇರಿದಂತೆ ಇತ್ತೀಚೆಗೆ ಬೆಳಕಿಗೆ ಬಂದಿರುವ ಬ್ಯಾಂಕಿಂಗ್‌ ವಂಚನೆ ಪ್ರಕರಣಗಳು, ಮುಖ್ಯವಾಗಿ ವ್ಯಾಪಾರ ಉದ್ದೇಶಕ್ಕೆ ನೀಡಿದ ಸಾಲಕ್ಕೆ ಸಂಬಂಧಿಸಿವೆ. ಈ ಪ್ರಕರಣಗಳಲ್ಲಿ ನಕಲಿ ‘ಎಲ್‌ಒಯು’ಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ. ಅನೇಕ ಉದ್ದೇಶಪೂರ್ವಕ ಸುಸ್ತಿದಾರರ ವಹಿವಾಟು ಕೂಡ ಇಂತಹ ‘ವ್ಯಾಪಾರ ಹಣಕಾಸಿ’ಗೆ ಸಂಬಂಧಿಸಿವೆ.

ವಂಚನೆ ಪ್ರಕರಣಗಳನ್ನು ತಡೆಗಟ್ಟಲು ಕೈಗೊಳ್ಳುವ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಹದಿನೈದು ದಿನಗಳಲ್ಲಿ ವರದಿ ಸಲ್ಲಿಸಲು ಹಣಕಾಸು ಸಚಿವಾಲಯವು ಬ್ಯಾಂಕ್‌ಗಳಿಗೆ ಸೂಚಿಸಿದೆ.

ಭಯ ಬಿತ್ತದಿರಲಿ; ಫಿಕ್ಕಿ: ಬ್ಯಾಂಕ್‌ಗಳಿಗೆ ವಂಚಿಸಿದ ಪ್ರಕರಣಗಳು ಹಣಕಾಸು ವ್ಯವಸ್ಥೆಯಲ್ಲಿ ಭಯದ ಭಾವನೆ ಬಿತ್ತದಂತೆ ಮತ್ತು ಆರ್ಥಿಕ ಚಟುವಟಿಕೆಗಳ ಮೇಲೆ ತಣ್ಣೀರೆರಚದಂತೆ ಸರ್ಕಾರ ಮತ್ತು ಆರ್‌ಬಿಐ ಗಮನ ಹರಿಸಬೇಕು ಎಂದು ಭಾರತೀಯ ವಾಣಿಜ್ಯೋದ್ಯಮ ಸಂಘಗಳ ಒಕ್ಕೂಟವು (ಫಿಕ್ಕಿ) ಸಲಹೆ ನೀಡಿದೆ.

ಅಸೋಚಾಂ ಸಲಹೆ

ಬ್ಯಾಂಕ್‌ಗಳ ವಂಚನೆ ಪ್ರಕರಣಗಳಿಂದ ಆಗಲಿರುವ ಹಾನಿಯ ತೀವ್ರತೆ ತಗ್ಗಿಸಲು ಬ್ಯಾಂಕ್‌ಗಳು, ಭಾರತೀಯ ರಿಸರ್ವ್ ಬ್ಯಾಂಕ್‌, ಷೇರು ನಿಯಂತ್ರಣ ಮಂಡಳಿ (ಸೆಬಿ) ಮತ್ತು ಸರ್ಕಾರ ಜಂಟಿಯಾಗಿ ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಸಲಹೆ ನೀಡಿದೆ.

‘ವಂಚನೆ ತಡೆಗಟ್ಟಲು ಮತ್ತು ವಂಚಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಬ್ಯಾಂಕ್‌ಗಳ ವಹಿವಾಟನ್ನು ನಿಯಂತ್ರಿಸುವ ಸಂಸ್ಥೆಗಳ ಮೇಲೆ ಸಾರ್ವಜನಿಕರಿಂದ ಹೆಚ್ಚಿನ ಒತ್ತಡ ಕಂಡು ಬರುತ್ತಿದೆ. ಹೀಗಾಗಿ ಬ್ಯಾಂಕ್‌ಗಳು ಅತಿಯಾದ ಎಚ್ಚರಿಕೆಯ ಧೋರಣೆ ಅನುಸರಿಸುತ್ತಿವೆ. ವಂಚನೆಗಳಿಗೆ ವ್ಯಕ್ತವಾಗಿರುವ ಸಾರ್ವಜನಿಕರ ಆಕ್ರೋಶವು ಸಮರ್ಥನೀಯವಾಗಿದೆ. ಆದರೆ, ಇದರಿಂದ ಒಟ್ಟಾರೆ  ಬ್ಯಾಂಕಿಂಗ್‌ ಮತ್ತು ಕೈಗಾರಿಕಾ ವಲಯದ ಆತ್ಮವಿಶ್ವಾಸಕ್ಕೂ ಧಕ್ಕೆ ಒದಗಲಿದೆ. ಈಗ ಉದ್ಭವಿಸಿರುವ ಪರಿಸ್ಥಿತಿಯನ್ನು ಬಳಸಿಕೊಂಡು ವ್ಯವಸ್ಥೆಯಲ್ಲಿನ ದೋಷಗಳನ್ನು ಸರಿಪಡಿಸಬೇಕಾಗಿದೆ’ ಎಂದು ‘ಅಸೋಚಾಂ’ನ ಪ್ರಧಾನ ಕಾರ್ಯದರ್ಶಿ ಡಿ. ಎಸ್‌. ರಾವತ್‌ ಪ್ರತಿಕ್ರಿಯಿಸಿದ್ದಾರೆ.

2008ರಲ್ಲಿ ಸಂಭವಿಸಿದ್ದ ಜಾಗತಿಕ ಹಣಕಾಸು ಬಿಕ್ಕಟ್ಟನ್ನು ಅಮೆರಿಕವು ನಿರ್ವಹಿಸಿದ ವಿಧಾನದಿಂದ ಪಾಠ ಕಲಿಯಬೇಕಾಗಿದೆ. ಬ್ಯಾಂಕಿಂಗ್‌ ವ್ಯವಸ್ಥೆಯ ಬೇರು ಮಟ್ಟದಲ್ಲಿನ ದೋಷಗಳನ್ನು ಸರಿಪಡಿಸಿ ಹಾನಿಯ ತೀವ್ರತೆ ತಗ್ಗಿಸುವ ಮತ್ತು ವಿವೇಕಯುತ ವ್ಯವಸ್ಥೆ ರೂಪಿಸುವಲ್ಲಿ ಅಮೆರಿಕವು ಯಶಸ್ವಿಯಾಗಿತ್ತು.

ಭಾರತದಲ್ಲಿ ಸದ್ಯಕ್ಕೆ ಎದುರಾಗಿರುವ ಬಿಕ್ಕಟ್ಟು ಮರುಕಳಿಸದಂತೆ ಮಾಡಲು, ಬ್ಯಾಂಕ್‌ಗಳಲ್ಲಿನ ಸರ್ಕಾರದ ಪಾಲು ಬಂಡವಾಳವನ್ನು ಶೇ 50ಕ್ಕಿಂತ ಕಡಿಮೆ ಮಾಡಬೇಕೆಂಬ ಸಲಹೆಗೆ  ಬೆಂಬಲ ನೀಡಬೇಕಾಗಿದೆ. ವಂಚನೆಗಳನ್ನು ಆರಂಭದಲ್ಲಿಯೇ ಗುರುತಿಸಿ ನಿರ್ಬಂಧಿಸಲು ಮತ್ತು ವಂಚಕರ ವಿರುದ್ಧ ತ್ವರಿತವಾಗಿ ಕಾರ್ಯಪ್ರವೃತ್ತರಾಗಲು ತಕ್ಷಣ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದೂ ‘ಅಸೋಚಾಂ’ ಹೇಳಿದೆ.

**

‘ವಂಚನೆ ಪ್ರಕರಣಗಳ ವಿರುದ್ಧದ ತನಿಖೆಗಳು ವ್ಯವಸ್ಥೆಯನ್ನು ಬಲಪಡಿಸುವಂತೆ ಇರಬೇಕೆ ಹೊರತು ಆರ್ಥಿಕತೆಯಲ್ಲಿ ಭಯ ಮೂಡಿಸುವಂತಿರಬಾರದು

– ರಶೇಷ್‌ ಶಾ, ‘ಫಿಕ್ಕಿ’ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry