ಶುಭಾರಂಭದ ನಿರೀಕ್ಷೆಯಲ್ಲಿ ಭಾರತ

ಮಂಗಳವಾರ, ಮಾರ್ಚ್ 26, 2019
22 °C

ಶುಭಾರಂಭದ ನಿರೀಕ್ಷೆಯಲ್ಲಿ ಭಾರತ

Published:
Updated:
ಶುಭಾರಂಭದ ನಿರೀಕ್ಷೆಯಲ್ಲಿ ಭಾರತ

ವಡೋದರ: ದಕ್ಷಿಣ ಆಫ್ರಿಕಾದಲ್ಲಿ ಏಕದಿನ ಮತ್ತು ಟ್ವೆಂಟಿ–20 ಸರಣಿ ಗೆದ್ದು ದಾಖಲೆ ಬರೆದಿರುವ ಭಾರತ ಮಹಿಳಾ ತಂಡದವರು ಈಗ ಮತ್ತೊಂದು ಸವಾಲಿಗೆ ಸನ್ನದ್ಧರಾಗಿದ್ದಾರೆ.

ಸೋಮವಾರದಿಂದ ನಡೆಯುವ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಹಣಾಹಣಿಯಲ್ಲಿ ಮಿಥಾಲಿ ರಾಜ್‌ ಬಳಗ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಈ ಹೋರಾಟಕ್ಕೆ ವಡೋದರದ ರಿಲಯನ್ಸ್‌ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ಧಗೊಂಡಿದೆ.

ಹೋದ ವರ್ಷದ ಜುಲೈನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತದ ವನಿತೆಯರು 36 ರನ್‌ಗಳಿಂದ ಆಸ್ಟ್ರೇಲಿಯಾ ತಂಡವನ್ನು ಮಣಿಸಿದ್ದರು. ಹಿಂದಿನ ಈ ಗೆಲುವಿನ ಬಲದೊಂದಿಗೆ ಕಣಕ್ಕಿಳಿಯಲಿರುವ ತಂಡ ಆಟದ ಎಲ್ಲಾ ವಿಭಾಗಗಳಲ್ಲೂ ಪರಿಣಾಮಕಾರಿ ಸಾಮರ್ಥ್ಯ ತೋರುವ ವಿಶ್ವಾಸ ಹೊಂದಿದೆ.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಮಿಂಚಿದ್ದ ಸ್ಮೃತಿ ಮಂದಾನ, ಮಿಥಾಲಿ ರಾಜ್‌, ಹರ್ಮನ್‌ಪ್ರೀತ್‌ ಕೌರ್‌ ಮತ್ತು ಪೂನಮ್‌ ರಾವತ್ ಬ್ಯಾಟಿಂಗ್‌ನಲ್ಲಿ ಶಕ್ತಿ ಎನಿಸಿದ್ದಾರೆ. ಕರ್ನಾಟಕದ ವೇದಾ ಕೃಷ್ಣಮೂರ್ತಿ, ಶಿಖಾ ಪಾಂಡೆ, ಜೆಮಿಮಾ ರಾಡ್ರಿಗಸ್‌, ದೀಪ್ತಿ ಶರ್ಮಾ ಮತ್ತು ಸುಕನ್ಯಾ ಫರೀದಾ ಅವರೂ ಆಸ್ಟ್ರೇಲಿಯಾದ ಬೌಲರ್‌ಗಳನ್ನು ಎದುರಿಸಲು ಸಿದ್ಧರಾಗಿದ್ದಾರೆ.

ಅನುಭವಿ ಬೌಲರ್‌ ಜೂಲನ್‌ ಗೋಸ್ವಾಮಿ ಈ ಸರಣಿಗೆ ಅಲಭ್ಯರಾಗಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಪೂನಮ್‌ ಯಾದವ್‌, ಪೂಜಾ ವಸ್ತ್ರಕರ್‌ ಅವರು ಮೋಡಿ ಮಾಡಲು ಕಾಯುತ್ತಿದ್ದಾರೆ. ಏಕ್ತಾ ಬಿಷ್ಠ್‌ ಮತ್ತು ಕರ್ನಾಟಕದ ರಾಜೇಶ್ವರಿ ಗಾಯಕವಾಡ್‌ ಅವರ ಸ್ಪಿನ್‌ ಬಲವೂ ಭಾರತಕ್ಕಿದೆ.

ಜಯದ ಕನಸು: ಆಸ್ಟ್ರೇಲಿಯಾ ತಂಡ ಕೂಡ ಜಯದ ಕನವರಿಕೆಯಲ್ಲಿದೆ. ಮೆಗ್‌ ಲ್ಯಾನಿಂಗ್‌ ಸಾರಥ್ಯದ ಈ ತಂಡ ಆಡಿದ ಎರಡೂ ಅಭ್ಯಾಸ ಪಂದ್ಯಗಳಲ್ಲಿ ಭಾರತ ‘ಎ’ ತಂಡವನ್ನು ಸೋಲಿಸಿತ್ತು. ಇದು ಆಟಗಾರ್ತಿಯರ ಮನೋಬಲ ಹೆಚ್ಚುವಂತೆ ಮಾಡಿದೆ.

ನಾಯಕಿ ಲ್ಯಾನಿಂಗ್‌, ನಿಕೊಲ್ ಬೋಲ್ಟನ್‌, ಎಲಿಸ್ ಪೆರಿ ಅವರು ಭಾರತದ ಬೌಲರ್‌ಗಳನ್ನು ಕಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಬೆಥ್‌ ಮೂನಿ, ವಿಲಾನಿ ಮತ್ತು ಹೇನಸ್‌ ಅವರೂ ಅಬ್ಬರಿಸುವ ಹುಮ್ಮಸ್ಸಿನಲ್ಲಿದ್ದಾರೆ. ಬೌಲಿಂಗ್‌ನಲ್ಲೂ ಆಸ್ಟ್ರೇಲಿಯಾ ತಂಡ ಬಲಿಷ್ಠವಾಗಿದೆ.

ತಂಡಗಳು ಇಂತಿವೆ

ಭಾರತ: ಮಿಥಾಲಿ ರಾಜ್‌ (ನಾಯಕಿ), ಏಕ್ತಾ ಬಿಷ್ಠ್‌, ರಾಜೇಶ್ವರಿ ಗಾಯಕವಾಡ್‌, ಹರ್ಮನ್‌ಪ್ರೀತ್‌ ಕೌರ್‌, ವೇದಾ ಕೃಷ್ಣಮೂರ್ತಿ, ಸ್ಮೃತಿ ಮಂದಾನ, ಮೋನಾ ಮೆಷ್ರಮ್‌, ಶಿಖಾ ಪಾಂಡೆ, ಸುಕನ್ಯ ಫರೀದಾ, ಪೂನಮ್‌ ಯಾದವ್‌, ಪೂನಮ್‌ ರಾವತ್, ಜೆಮಿಮಾ ರಾಡ್ರಿಗಸ್‌, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್‌ ಮತ್ತು ಸುಷ್ಮಾ ವರ್ಮಾ (ವಿಕೆಟ್‌ ಕೀಪರ್‌).

ಆಸ್ಟ್ರೇಲಿಯಾ: ಮೆಗ್‌ ಲ್ಯಾನಿಂಗ್‌ (ನಾಯಕಿ), ನಿಕೊಲೆ ಬೋಲ್ಟನ್‌, ನಿಕೊಲಾ ಕೇರಿ, ಆ್ಯಷ್ಲೆಗ್‌ ಗಾರ್ಡನರ್‌, ರಚೆಲ್‌ ಹೇನಸ್‌, ಅಲಿಸಾ ಹೀಲಿ (ವಿಕೆಟ್‌ ಕೀಪರ್‌), ಜೆಸ್‌ ಜೊನಾಸೆನ್‌, ಸೋಫಿ ಮೊಲಿನೆಯುಕ್ಸ್‌, ಬೆಥ್‌ ಮೂನಿ, ಎಲಿಸೆ ಪೆರಿ, ಮೆಗನ್‌ ಶುಟ್‌, ಬೆಲಿಂಡಾ ವಕಾರೆವಾ, ಎಲಿಸೆ ವಿಲಾನಿ, ಅಮಂಡಾ ಜೇಡ್‌ ವೆಲ್ಲಿಂಗ್ಟನ್‌.

ಆರಂಭ: ಬೆಳಿಗ್ಗೆ 9

**

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry