ಅಂತ್ಯಕ್ರಿಯೆಗೆ ₹2 ಸಾವಿರ ಶುಲ್ಕ

7

ಅಂತ್ಯಕ್ರಿಯೆಗೆ ₹2 ಸಾವಿರ ಶುಲ್ಕ

Published:
Updated:
ಅಂತ್ಯಕ್ರಿಯೆಗೆ ₹2 ಸಾವಿರ ಶುಲ್ಕ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಬನಶಂಕರಿ ಹಾಗೂ ವಿಲ್ಸನ್‌ ಗಾರ್ಡನ್‌ ವಿದ್ಯುತ್‌ ಚಿತಾಗಾರಗಳಲ್ಲಿ ಅಂತ್ಯಸಂಸ್ಕಾರ ಶುಲ್ಕವನ್ನು ಹತ್ತು ಪಟ್ಟು ಹೆಚ್ಚಿಗೆ ವಸೂಲಿ ಮಾಡಲಾಗುತ್ತಿದೆ.

ಪ್ರತಿ ಚಿತಾದಹನಕ್ಕೆ ₹250 ಶುಲ್ಕವಿದೆ. ಆದರೆ, ಚಟ್ಟ ಕಟ್ಟುವುದು, ಸ್ವಚ್ಛತೆ ಮತ್ತು ಸರದಿಗೂ ಮುನ್ನವೇ ಚಿತಾದಹನ ಮಾಡುವ ನೆಪದಲ್ಲಿ ₹2,000 ಶುಲ್ಕ ಪಡೆಯಲಾಗುತ್ತಿದೆ ಎಂಬ ಆರೋಪ ಇದೆ.

‘ಕೋಣನಕುಂಟೆ ನಿವಾಸಿ ಜಿ.ಕೆ.ಚಂದ್ರಶೇಖರಯ್ಯ (74) ಮಾರ್ಚ್‌ 7ರಂದು ಬೆಳಿಗ್ಗೆ ನಿಧನರಾಗಿದ್ದರು. ಅವರ ಅಂತ್ಯಕ್ರಿಯೆಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಪ್ರಯತ್ನಿಸಿದೆವು. ಆದರೆ, ಅಂದು ಅಂತ್ಯಸಂಸ್ಕಾರಕ್ಕೆ ಅವಕಾಶ ಸಿಕ್ಕಿರಲಿಲ್ಲ. ಮಾರನೆಯ ದಿನ ಮಧ್ಯಾಹ್ನ 12ರಿಂದ 1ರವರೆಗೆ ಬನಶಂಕರಿಯ ವಿದ್ಯುತ್‌ ಚಿತಾಗಾರದಲ್ಲಿ ಅಂತ್ಯಕ್ರಿಯೆಗೆ ಅವಕಾಶ ದೊರೆಯಿತು’ ಎಂದು ಮೃತರ ಸಂಬಂಧಿ ಪವನ್‌ ವಸಿಷ್ಠ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಳಿಗ್ಗೆ 11.30ಕ್ಕೆ ಕಳೇಬರವನ್ನು ತೆಗೆದುಕೊಂಡು ಹೋದೆವು. ಅಲ್ಲಿದ್ದ ಎರಡು ಯಂತ್ರಗಳ ಪೈಕಿ ಒಂದು ಕೆಟ್ಟಿತ್ತು. ಹೀಗಾಗಿ, ಮೂರು ಗಂಟೆ ಕಾಯಬೇಕಾಯಿತು. ನಮಗಿಂತ ತಡವಾಗಿ ಬಂದವರು ಅಂತ್ಯಕ್ರಿಯೆ ಮುಗಿಸಿಕೊಂಡು ಹೋಗುತ್ತಿದ್ದರು. ಅಂತ್ಯಕ್ರಿಯೆ ನೆರವೇರಿಸಲು ₹2,000 ಪಡೆದ ಚಿತಾಗಾರದ ಆಪರೇಟರ್‌, ₹250 ಮೊತ್ತಕ್ಕೆ ರಸೀದಿ ನೀಡಿದರು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ, ಚಟ್ಟ ಕಟ್ಟಲು ಹಾಗೂ ಸ್ವಚ್ಛತೆಗಾಗಿ ಹೆಚ್ಚಿನ ಶುಲ್ಕ ಕೊಡಬೇಕು ಎಂದು ತಾಕೀತು ಮಾಡಿದರು’ ಎಂದರು.

‘ಅಂತ್ಯಕ್ರಿಯೆಗೆ ಬೇಕಾದ ಸಾಮಗ್ರಿ ಗಳನ್ನು ನಮ್ಮ ಪುರೋಹಿತರು ತಂದಿದ್ದರು. ಚಟ್ಟಕ್ಕೆ ಬೇಕಾದ ಬಿದಿರನ್ನೂ ನಾವೇ ಕೊಂಡೊಯ್ದಿದ್ದೆವು. ಆದರೆ, ಅದನ್ನು ಕಟ್ಟಲು ಸಾವಿರಾರು ರೂಪಾಯಿ ಪಡೆಯುವುದು ಸರಿಯೇ? ಸಂಬಂಧಿಕರ ಅಗಲಿಕೆಯ ನೋವಿನಲ್ಲಿ ಇರುವವರು ಚೌಕಾಸಿ ಮಾಡುವ ಸ್ಥಿತಿಯಲ್ಲಿ ಇರುವುದಿಲ್ಲ. ಇದನ್ನೇ ಅವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

ಆನ್‌ಲೈನ್‌ನಲ್ಲಿ ನೋಂದಣಿಯಾದ ಸಮಯಕ್ಕೆ ಅಂತ್ಯಕ್ರಿಯೆ ನೆರವೇರಿಸುತ್ತಿಲ್ಲ. ಕೆಲವರು ಬೇಗ ಅಂತ್ಯಕ್ರಿಯೆ ಮಾಡಿಸಲು ಪಾಲಿಕೆ ಸದಸ್ಯರಿಂದ ಶಿಫಾರಸು ತರುತ್ತಾರೆ. ಅವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ ಎಂದರು.

‘ಮತ್ತೊಬ್ಬ ಸಂಬಂಧಿಕರಾದ ತ್ಯಾಗರಾಜನಗರದ ನಿವಾಸಿ ಎಚ್‌.ಕೆ. ಶೇಷಗಿರಿ (86) ಮಾರ್ಚ್‌ 10ರಂದು ನಿಧನರಾಗಿದ್ದು, ವಿಲ್ಸನ್‌ ಗಾರ್ಡನ್‌ನಲ್ಲಿರುವ ವಿದ್ಯುತ್‌ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು. ಇಲ್ಲೂ ₹2,000 ಶುಲ್ಕ ವಸೂಲಿ ಮಾಡಿದ್ದಾರೆ’ ಎಂದು ಹೇಳಿದರು.

‘ಆನ್‌ಲೈನ್‌ ವ್ಯವಸ್ಥೆ ಸರಳಗೊಳಿಸಿ’

‘ಅಂತ್ಯಕ್ರಿಯೆ ನಡೆಸಲು ಆನ್‌ಲೈನ್‌ ಮೂಲಕ ನೋಂದಾಯಿಸುವ ಪದ್ಧತಿ ಒಳ್ಳೆಯದು. ಆದರೆ, ಅರ್ಜಿ ಸಲ್ಲಿಸುವಾಗ ಮೃತರ ಹೆಸರು, ಕಾಯಿಲೆ, ಪೊಲೀಸ್‌ ದೂರು ದಾಖಲಾಗಿದ್ದರ ಮಾಹಿತಿ... ಹೀಗೆ ಅನೇಕ ವಿಷಯಗಳನ್ನು ಭರ್ತಿ ಮಾಡಬೇಕು. ಈ ಪ್ರಕ್ರಿಯೆ ಸ್ವಲ್ಪ ತಡವಾದರೆ ಅರ್ಜಿ ಸಲ್ಲಿಸಲು ಆಗುವುದಿಲ್ಲ. ಮತ್ತೆ ಅರ್ಜಿ ಭರ್ತಿ ಮಾಡಬೇಕು. ಹೀಗಾಗಿ, ಆನ್‌ಲೈನ್‌ ವ್ಯವಸ್ಥೆಯನ್ನು ಮತ್ತಷ್ಟು ಸರಳಗೊಳಿಸಬೇಕು’ ಎಂದು ಪವನ್‌ ವಸಿಷ್ಠ ಒತ್ತಾಯಿಸಿದರು.

**

ಸ್ಮಶಾನಕ್ಕೆ ಹೋದ ಹೆಣ ವಾಪಸ್‌ ಬರುವುದಿಲ್ಲ. ಹಾಗೆಯೇ, ಸ್ಮಶಾನಕ್ಕೆ ತೆಗೆದುಕೊಂಡು ಹೋದ ಹಣ ವಾಪಸ್‌ ಬರುವುದಿಲ್ಲ

– ಪವನ್‌ ವಸಿಷ್ಠ

**

ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿರುವುದು ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ

– ಶೋಭಾ, ವಿಲ್ಸನ್‌ ಗಾರ್ಡನ್‌ ಚಿತಾಗಾರದ ಆಪರೇಟರ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry