ರಾಜತಾಂತ್ರಿಕರಿಗೆ ಕಿರುಕುಳ: ಭಾರತ ಆರೋಪ

ಗುರುವಾರ , ಮಾರ್ಚ್ 21, 2019
25 °C

ರಾಜತಾಂತ್ರಿಕರಿಗೆ ಕಿರುಕುಳ: ಭಾರತ ಆರೋಪ

Published:
Updated:
ರಾಜತಾಂತ್ರಿಕರಿಗೆ ಕಿರುಕುಳ: ಭಾರತ ಆರೋಪ

ನವದೆಹಲಿ: ಇಸ್ಲಾಮಾಬಾದ್‌ನಲ್ಲಿ ಭಾರತದ ರಾಜತಾಂತ್ರಿಕರಿಗೆ ನಿರಂತರ ಕಿರುಕುಳ ನೀಡಲಾಗುತ್ತಿದೆ ಎಂದು ಭಾರತ ಆರೋಪಿಸಿದೆ.

ಇಸ್ಲಾಮಾಬಾದ್‌ನಲ್ಲಿ ಭಾರತದ ರಾಜತಾಂತ್ರಿಕ ಅಧಿಕಾರಿಗಳು ಮತ್ತು ಸಿಬ್ಬಂದಿ ವಾಸಿಸುವ ವಸತಿ ಸಮುಚ್ಛಯದ ಮೇಲೆ ಪಾಕಿಸ್ತಾನದ ವಿವಿಧ ಇಲಾಖೆಗಳ ಅಧಿಕಾರಿಗಳು ದಾಳಿ ನಡೆಸಿ ಹಲವು ಸೇವೆಗಳನ್ನು ಸ್ಥಗಿತಗೊಳಿಸಿದ್ದಾರೆ. ವಿದ್ಯುತ್‌ ಮತ್ತು ನೀರು ಪೂರೈಕೆಯನ್ನು ಸಹ ಕಡಿತಗೊಳಿಸಿದ್ದಾರೆ. ಪಾಕಿಸ್ತಾನದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಭರವಸೆ ನೀಡಿದ್ದರೂ ಎರಡು ವಾರಗಳಾದರೂ ಇನ್ನೂ ವಿದ್ಯುತ್‌ ಸಂಪರ್ಕ ಕಲ್ಪಿಸಿಲ್ಲ ಎಂದು ಹಿರಿಯ ಅಧಿಕಾರಿಗಳು ದೂರಿದ್ದಾರೆ.

ಕೆಲವು ತಿಂಗಳಗಳಿಂದ ಹೈಕಮಿಷನ್‌ ಕಚೇರಿಯ ಸಿಬ್ಬಂದಿಗೆ ಕಿರುಕುಳ ನೀಡಿ ಬೆದರಿಕೆ ಹಾಕಲಾಗಿದೆ. ಅಧಿಕಾರಿಯೊಬ್ಬರ ಮನೆಗೆ ನುಗ್ಗಿ ಲ್ಯಾಪ್‌ಟಾಪ್‌ ಕಳ್ಳತನ ಮಾಡಲಾಗಿದೆ. ಪಾಕಿಸ್ತಾನದ ಗುಪ್ತಚರ ಇಲಾಖೆಯ ಅಧಿಕಾರಿಗಳು ಸಂಚಾರ ದಟ್ಟಣೆ ಇರುವ ರಸ್ತೆಯಲ್ಲೇ ಹೈಕಮಿಷನ್‌ ಕಾರು ತಡೆದು ಕಾರ್ಯಕ್ರಮವೊಂದಕ್ಕೆ ತೆರಳದಂತೆ ಅಡ್ಡಿಪಡಿಸಿದ ಪ್ರಕರಣ ನಡೆದಿದೆ ಎಂದು ತಿಳಿಸಿದ್ದಾರೆ.

ಪದೇ ಪದೇ ಕಿರುಕುಳ ಪ್ರಕರಣಗಳು ನಡೆಯುತ್ತಿರುವುದರಿಂದ ಭಾರತದ ಹೈಕಮಿಷನ್‌ ಅಜಯ್‌ ಬಿಸಾರಿಯಾ ಅವರು ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ತೆಹ್ಮಿನಾ ಜಂಜುವಾ ಅವರನ್ನು ಕಳೆದ ತಿಂಗಳು ಭೇಟಿಯಾಗಿ ಪ್ರತಿಭಟನೆ ವ್ಯಕ್ತಪಡಿಸಿದ್ದರು.

ಭಾರತದ ರಾಜತಾಂತ್ರಿಕರ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಅವರ ಚಲನವಲನದ ಮೇಲೆಯೂ ಕಟ್ಟೆಚ್ಚರವಹಿಸಲಾಗಿದೆ. ಅಶ್ಲೀಲ ದೂರವಾಣಿ ಕರೆಗಳು ಮತ್ತು ಸಂದೇಶಗಳನ್ನು ಸಹ ಅಧಿಕಾರಿಗಳಿಗೆ ಕಳುಹಿಸಲಾಗುತ್ತಿದೆ. ಈ ರೀತಿಯ ಆತಂಕದ ವಾತಾವರಣ ಮತ್ತು ಬೆದರಿಕೆ ಕಾರಣಕ್ಕೆ ಭಾರತದ ರಾಜತಾಂತ್ರಿಕರ ಕುಟುಂಬಗಳು ಭಾರತಕ್ಕೆ ಹಿಂತಿರುಗಿವೆ. ಪಾಕಿಸ್ತಾನದ ಶಾಲೆಗಳಲ್ಲಿ ಓದುತ್ತಿದ್ದ ಮಕ್ಕಳನ್ನು ಸಹ ಭಾರತಕ್ಕೆ ವಾಪಸ್‌ ಕರೆಯಿಸಿಕೊಂಡಿದ್ದಾರೆ.

ಪಾಕಿಸ್ತಾನದ ಹೈಕಮಿನಷನ್‌ ಸಹ ತಮ್ಮ ರಾಜತಾಂತ್ರಿಕರಿಗೆ ಭಾರತದ ವಿವಿಧ ಇಲಾಖೆಗಳಿಂದ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದೆ. ಪಾಕಿಸ್ತಾನದ ಆರೋಪಗಳ ಬಗ್ಗೆ ಭಾರತ ಪರಿಶೀಲಿಸುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry