ವಕೀಲರ ಕೊಲೆಗೆ ಸುಪಾರಿ

7
ತನಿಖೆೆಗೆ ನ್ಯಾಯಾಲಯದ ಆದೇಶ

ವಕೀಲರ ಕೊಲೆಗೆ ಸುಪಾರಿ

Published:
Updated:

ಬೆಂಗಳೂರು: ಹೈಕೋರ್ಟ್‌ನ ಹಿರಿಯ ವಕೀಲ ಮೊಹಮ್ಮದ್ ಅತೇರ್‌ (65) ಕೊಲೆಗೆ ಸುಪಾರಿ ನೀಡಿರುವ ಸಂಗತಿ ಬಯಲಾಗಿದ್ದು, ಈ ಸಂಬಂಧ ಅಶೋಕನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ರಿಚ್ಮಂಡ್ ಟೌನ್‌ನಲ್ಲಿ ವಾಸವಿರುವ ಅತೇರ್‌ ಅವರ ಮೊಬೈಲ್‌ಗೆ ಮಾ. 4ರಂದು ರಾತ್ರಿ 8.50 ಗಂಟೆ ಸುಮಾರಿಗೆ 802*****79 ಸಂಖ್ಯೆಯಿಂದ ಕರೆ ಮಾಡಿದ್ದ ಅಪರಿಚಿತನೊಬ್ಬ, ‘ನಿನ್ನನ್ನು ಕೊಲೆ ಮಾಡಲು ಸುಪಾರಿ ಪಡೆದಿದ್ದೇನೆ. ಕೋಲಾರ ಅಥವಾ ಬೆಂಗಳೂರಿನ ರಸ್ತೆಯಲ್ಲೇ ಕೊಲೆ ಮಾಡುತ್ತೇನೆ’ ಎಂದು ಬೆದರಿಕೆ ಹಾಕಿದ್ದಾನೆ.

ಈ ಸಂಬಂಧ ಅಶೋಕನಗರ ಠಾಣೆಗೆ ಮಾ. 5ರಂದು ಅತೇರ್‌ ದೂರು ನೀಡಿದ್ದರು. ಇದೊಂದು ಸಾಮಾನ್ಯ ಪ್ರಕರಣವೆಂದು ತಿಳಿದಿದ್ದ ಪೊಲೀಸರು, ಎನ್‌ಸಿಆರ್‌ (ಗಂಭೀರವಲ್ಲದ ಪ್ರಕರಣ) ಮಾತ್ರ ದಾಖಲಿಸಿಕೊಂಡಿದ್ದರು. ಅದನ್ನೇ ನ್ಯಾಯಾಲಯಕ್ಕೆ ನೀಡಿದ್ದರು. ‘ಪ್ರಕರಣವು ಗಂಭೀರವಾಗಿದ್ದು, ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಿ’ ಎಂದು ಪೊಲೀಸರಿಗೆ ನ್ಯಾಯಾಲಯ ಸೂಚನೆ ನೀಡಿತ್ತು. ಅದರನ್ವಯ ಪೊಲೀಸರು, ಜೀವ ಬೆದರಿಕೆ (ಐಪಿಸಿ 507) ಆರೋಪದಡಿ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

‘ಸುಮಾರು 40 ವರ್ಷಗಳಿಂದ ಅತೇರ್‌‌ ವಕೀಲಿ ವೃತ್ತಿ ಮಾಡುತ್ತಿದ್ದಾರೆ. ಹೈಕೋರ್ಟ್‌ನಲ್ಲಿ ಸರ್ಕಾರದ ವಕೀಲರಾಗಿಯೂ ಕೆಲಸ ಮಾಡಿದ್ದಾರೆ. ಈಗ ಕೆಲ ಖಾಸಗಿ ವ್ಯಕ್ತಿಗಳ ಪ್ರಕರಣಗಳಲ್ಲಷ್ಟೇ ವಾದ ಮಂಡಿಸುತ್ತಿದ್ದಾರೆ. ಆ ಪ್ರಕರಣಗಳಲ್ಲಿ ಅವರು ವಾದ ಮಂಡಿಸಬಾರದು ಎಂಬ ಕಾರಣಕ್ಕೆ ಯಾರೋ ಈ ರೀತಿ ಬೆದರಿಕೆ ಹಾಕಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘ಆಗಾಗ ಅತೇರ್‌ ಕೋಲಾರಕ್ಕೆ ಹೋಗಿ ಬರುತ್ತಾರೆ. ಅದನ್ನು ತಿಳಿದುಕೊಂಡ ವ್ಯಕ್ತಿಗಳೇ, ಕೋಲಾರ ರಸ್ತೆಯಲ್ಲೇ ಕೊಲೆ ಮಾಡುವುದಾಗಿ ಹೇಳಿದ್ದಾರೆ. ಮೊಬೈಲ್‌ ಸಂಖ್ಯೆ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದೇವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry