ತುಂಡಾದ ಕಾಲೇ ತಲೆದಿಂಬು!

7
ಉತ್ತರ ಪ್ರದೇಶದಲ್ಲಿ ಅಮಾನವೀಯ ಘಟನೆ

ತುಂಡಾದ ಕಾಲೇ ತಲೆದಿಂಬು!

Published:
Updated:
ತುಂಡಾದ ಕಾಲೇ ತಲೆದಿಂಬು!

ಝಾನ್ಸಿ (ಉತ್ತರ ಪ್ರದೇಶ) : ಅಪಘಾತದಲ್ಲಿ ಕಾಲು ಕಳೆದಕೊಂಡ ಶಾಲಾ ವಾಹನದ ಕ್ಲೀನರ್‌ನ ತುಂಡಾದ ಕಾಲನ್ನೇ ಆಸ್ಪತ್ರೆಯ ಸಿಬ್ಬಂದಿ ತಲೆದಿಂಬಾಗಿಸಿದ ಹೃದಯವಿದ್ರಾವಕ ಘಟನೆ ಉತ್ತರಪ್ರದೇಶ ಸರ್ಕಾರಿ ಸ್ವಾಮ್ಯದ ಮಹಾರಾಣಿ ಲಕ್ಷ್ಮೀಬಾಯಿ ವೈದ್ಯಕೀಯ ಕಾಲೇಜಿನಲ್ಲಿ ನಡೆದಿದೆ.

ಈ ಘಟನೆಯ ವಿಡಿಯೊ ಸುದ್ದಿ ವಾಹಿನಿಗಳಲ್ಲಿ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಆಸ್ಪತ್ರೆಯ ಇಬ್ಬರು ವೈದ್ಯರು ಸೇರಿ ನಾಲ್ವರು ಸಿಬ್ಬಂದಿಯನ್ನು ಅಮಾನತು ಮಾಡಿದೆ. ಅಲ್ಲದೆ ಇಲಾಖಾ ತನಿಖೆಗೂ ಆದೇಶಿಸಿದೆ.

ಮೌರಾಣಿಪುರದಲ್ಲಿ ಶನಿವಾರ ನಡೆದ ಅಪಘಾತದಲ್ಲಿ ಕಾಲು ಕಳೆದುಕೊಂಡ ಕ್ಲೀನರ್‌ ಘನಶ್ಯಾಮ್‌ (28) ಅವರನ್ನು ಅಸ್ಪತ್ರೆಗೆ ಕರೆತರಲಾಗಿತ್ತು.  ಸ್ಟ್ರೆಚರ್‌ನಲ್ಲಿ ಮಲಗಿದ್ದಾಗ ಆಸ್ಪತ್ರೆಯ ಸಿಬ್ಬಂದಿ ತುಂಡಾಗಿದ್ದ ಕಾಲನ್ನು ತಲೆದಿಂಬಾಗಿ ಇರಿಸಿದರು ಎಂದು ಗಾಯಾಳು ಹೇಳಿದ್ದಾರೆ.

ತುಂಡಾಗಿರುವ ಕಾಲನ್ನು ತಲೆದಿಂಬಾಗಿ ಇಟ್ಟಿದ್ದು ಯಾರು ಎನ್ನುವುದನ್ನು ಪತ್ತೆ ಹಚ್ಚಲು ವೈದ್ಯಕೀಯ ಆಸ್ಪತ್ರೆಯ ಪ್ರಾಂಶುಪಾಲ ಸದನ್‌ ಕೌಶಿಕ್‌ ನಾಲ್ವರು ಸದಸ್ಯರ ಸಮಿತಿ ರಚಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೌಶಿಕ್‌ ತಿಳಿಸಿದ್ದಾರೆ.

ಸಿಸಿಟಿವಿ  ಕ್ಯಾಮೆರಾದ ದೃಶ್ಯಾವಳಿಗಳ ಪರಿಶೀಲನೆ ನಡೆಸಲಾಗುವುದು. ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ದಿನೇಶ್‌ ಶರ್ಮಾ ಹೇಳಿದ್ದಾರೆ.

ಅಪಘಾತ ತಪ್ಪಿಸಲು ಹೋಗಿ ಅವಘಡ!

ಝಾನ್ಸಿಯಿಂದ 65 ಕಿಲೋ ಮೀಟರ್‌ ದೂರದಲ್ಲಿರುವ ಮೌರಾಣಿಪುರದ ಶಾಲೆಯಿಂದ ಶನಿವಾರ ವಿದ್ಯಾರ್ಥಿಗಳನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾಗ ಅ‍‍ಪಘಾತಆಗಿದೆ.

ಟ್ರ್ಯಾಕ್ಟರ್‌ನೊಂದಿಗೆ ಮುಖಾಮುಖಿ ಅಪಘಾತ ಸಂಭವಿಸುವುದನ್ನು ತಪ್ಪಿಸಲು ಯತ್ನಿಸಿದಾಗ ಶಾಲಾ ಬಸ್ಸು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕಕ್ಕೆ ಉರುಳಿದೆ. ಘಟನೆಯಲ್ಲಿ ಘನಶ್ಯಾಮ್‌ ಕಾಲು ಕಳೆದುಕೊಂಡರೆ, 12ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry