ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಇಲಾಖೆಯಲ್ಲಿ ರಾಜಕೀಯ ಹಸ್ತಕ್ಷೇಪ

ರತ್ನಪ್ರಭಾಗೆ ಐಪಿಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷರ ಪತ್ರ
Last Updated 11 ಮಾರ್ಚ್ 2018, 20:08 IST
ಅಕ್ಷರ ಗಾತ್ರ

ಬೆಂಗಳೂರು: ರಾಜಕೀಯ ಹಸ್ತಕ್ಷೇಪದಿಂದಾಗಿ ಪೊಲೀಸ್‌ ವ್ಯವಸ್ಥೆಯೇ ಸರಿ ಇಲ್ಲ ಎಂಬ ಭಾವನೆ ಮೂಡುವಂತಾಗಿದೆ ಎಂದು ಕರ್ನಾಟಕ ಐಪಿಎಸ್ ಅಧಿಕಾರಿಗಳ ಸಂಘದ ಅಧ್ಯಕ್ಷ ಹಾಗೂ ಎಡಿಜಿಪಿ ಆರ್‌.ಪಿ. ಶರ್ಮಾ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವುದು ತೀವ್ರ ಸಂಚಲನ ಮೂಡಿಸಿದೆ.

ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾಗೆ ಅವರಿಗೆ ಬರೆದಿರುವ ಪತ್ರದಲ್ಲಿ, ರಾಜ್ಯ ಪೊಲೀಸರಿಗೆ ಇದ್ದ ಘನತೆಯನ್ನು ಮರಳಿ ತರಲು ಶೀಘ್ರದಲ್ಲೆ ಐಪಿಎಸ್‌ ಅಧಿಕಾರಿಗಳ ಸಭೆ ಆಯೋಜಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ಬೆಳವಣಿಗೆ ಬೆನ್ನಲ್ಲೆ ಗೃಹ ಸಚಿವ ರಾಮಲಿಂಗಾರೆಡ್ಡಿ ಹಾಗೂ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಜೊತೆ ಚರ್ಚೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶರ್ಮಾ ಪತ್ರ ಕುರಿತಂತೆ ಸೋಮವಾರ ಮಧ್ಯಾಹ್ನದ ಒಳಗೆ ಸಮಗ್ರ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಶರ್ಮಾ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡುವ ಸಾಧ್ಯತೆ ಇದೆ ಎಂದೂ ಮೂಲಗಳು ಹೇಳಿವೆ.

ಲೆಟರ್‌ ಹೆಡ್‌ ದುರ್ಬಳಕೆ: ‘ಐಪಿಎಸ್‌ ಅಧಿಕಾರಿಗಳ ಸಂಘದ ಲೆಟರ್‌ಹೆಡ್‌ ಅನ್ನು ದುರ್ಬಳಕೆ ಮಾಡಿಕೊಂಡಿರುವ ಆರ್‌.ಪಿ. ಶರ್ಮಾ, ಗೊಂದಲ ಮೂಡಿಸುವ ಕೆಲಸ ಮಾಡಿದ್ದಾರೆ’ ಎಂದು ಮುಖ್ಯಮಂತ್ರಿ ಸಚಿವಾಲಯ ಸ್ಪಷ್ಟಪಡಿಸಿದೆ.

ಸಂಘದ ಕಾರ್ಯದರ್ಶಿಯಾಗಿರುವ ಪ್ರಣವ್‌ ಮೊಹಂತಿ ದೆಹಲಿಯಲ್ಲಿದ್ದಾರೆ. ಸಂಘದ ಪದಾಧಿಕಾರಿಗಳ ಜೊತೆ ಚರ್ಚಿಸದೆ ಈ ರೀತಿಯ ಪತ್ರವನ್ನು ಶರ್ಮಾ ಬರೆದಿದ್ದಾರೆ ಎಂದು ಮೊಹಂತಿ ಅವರು ದೂರವಾಣಿ ಮೂಲಕ ಮುಖ್ಯಮಂತ್ರಿ ಕಚೇರಿಗೆ ಸ್ಪಷ್ಟನೆ ನೀಡಿದ್ದಾರೆ ಎಂದೂ ಸಚಿವಾಲಯ ತಿಳಿಸಿದೆ.
***
ಪತ್ರದಲ್ಲಿ ಪ್ರಸ್ತಾಪಿಸಿರುವ ಘಟನೆಗಳು
* ಮೈಸೂರಿನಲ್ಲಿ ಐಎಎಸ್ ಅಧಿಕಾರಿ ರಶ್ಮಿ ಮೇಲೆ ಗೂಂಡಾಗಳು ಹಲ್ಲೆ ನಡೆಸಿದರು.
* ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಶಿಖಾ ಅವರ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುವಂತೆ ಗಂಭೀರ ರೀತಿಯಲ್ಲಿ ದಾಳಿ ನಡೆಯಿತು. ಎಫ್‌ಐಆರ್ ದಾಖಲಿಸಲು ಅವರು ಗಂಟೆಗಟ್ಟಲೆ ಕಾಯಬೇಕಾಯಿತು.
* ಯುಬಿ ಸಿಟಿಯಲ್ಲಿ ಅಮಾಯಕನ ಮೇಲೆ ದಾಳಿಯಾಯಿತು. ಆದರೆ, ಕ್ರಮ ಕೈಗೊಳ್ಳುವಲ್ಲಿ ಉದಾಸೀನ ತೋರಲಾಯಿತು.
* ಒಬ್ಬ ರಾಜಕಾರಣಿ, ಪೆಟ್ರೋಲ್ ಸುರಿದು ಸರ್ಕಾರಿ ಕಚೇರಿಯನ್ನೇ ಸುಟ್ಟುಹಾಕಲು ಮುಂದಾಗಿದ್ದ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT