ನಾಲೆ ಗೇಟ್ ಮುಚ್ಚಲು ರೈತರ ವಿರೋಧ: ವಾಗ್ವಾದ

7

ನಾಲೆ ಗೇಟ್ ಮುಚ್ಚಲು ರೈತರ ವಿರೋಧ: ವಾಗ್ವಾದ

Published:
Updated:
ನಾಲೆ ಗೇಟ್ ಮುಚ್ಚಲು ರೈತರ ವಿರೋಧ: ವಾಗ್ವಾದ

ಮಲೇಬೆನ್ನೂರು: ಪ್ರಸಕ್ತ ಬೇಸಿಗೆ ಹಂಗಾಮಿಗೆ ಭದ್ರಾ ನಾಲೆಯ 13ನೇ ಉಪನಾಲೆಯಲ್ಲಿ ಆಂತರಿಕ ಸರದಿಯಂತೆ ನೀರು ಹರಿಸಲು ಗೇಟ್ ಮುಚ್ಚಲು ಭಾನುವಾರ ಬಂದ ನೀರಾವರಿ ನಿಗಮದ ಪ್ರಭಾರ ಕಾರ್ಯಪಾಲಕ ಎಂಜಿನಿಯರ್ ಮಲ್ಲಿಕಾರ್ಜುನ್ ಅವರೊಂದಿಗೆ ರೈತರು ವಾಗ್ವಾದ ನಡೆಸಿದರು. ಬಳಿಕ ಪೊಲೀಸ್‌ ಭದ್ರತೆಯಲ್ಲಿ ಗೇಟ್‌ ಹಾಕಲಾಯಿತು.

‘ಕೊನೆಭಾಗದ ರೈತರು ನಾಲೆ ನೀರಿನಿಂದ ವಂಚಿತರಾಗಿದ್ದಾರೆ. 10ನೇ ಉಪನಾಲೆಗೆ ಒಂದು ಕಾನೂನು ಬೇರೆ ಉಪನಾಲೆಗೆ ಮತ್ತೊಂದು ಕಾನೂನು ತರಬೇಡಿ. ಏಕರೂಪದ ಆಂತರಿಕ ಸರದಿ ಪಾಲಿಸಿ ಉಪನಾಲೆಗಳಲ್ಲಿ ನೀರು ಹರಿಸಿ’ ಎಂದು ರೈತರು ಪಟ್ಟುಹಿಡಿದರು.

ಭತ್ತದ ಬೆಳೆ, ತೋಟಗಳು ಒಣಗಿವೆ. ಇಲ್ಲಿನ ರೈತರು ಹೊಲದಲ್ಲಿ ವಿಷ ಸೇವಿಸಿದ ನಂತರ ನೀರು ಹರಿಸುವಿರಾ’ ಎಂದು ಪ್ರಶ್ನಿಸಿದರು.

10ನೇ ಉಪನಾಲೆಯಂತೆ 10 ದಿನ ಪೂರ್ತಿ ನಾಲೆ, 5 ದಿನ ಸಂಪೂರ್ಣ ಬಂದ್, 5 ದಿನ ಅರ್ಧ ನಾಲೆ ನೀರು ಹರಿಸಿ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೊಲೀಸರು, ‘ಭದ್ರಾ ನಾಲೆಯುದ್ದಕ್ಕೂ ನಿಷೇಧಾಜ್ಞೆ ಇದೆ. ನೀರಿನ ಹರಿವಿಗೆ ಅಡ್ಡಿ ಪಡಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ನಮ್ಮ ಪಾಲಿನ ನೀರು ನಿಗದಿತ ಪ್ರಮಾಣದಲ್ಲಿ ಹರಿದಿಲ್ಲ. ಏನು ಬೇಕಾದರೂ ಮಾಡಿಕೊಳ್ಳಿ. ನೀರು ಬೇಕೇ ಬೇಕು’ ಎಂದು ರೈತರಾದ ಅಭಿ, ಹನುಮಗೌಡ ಅವರು ಅಧಿಕಾರಿಗಳ ಮೇಲೆ ಹರಿಹಾಯ್ದರು.

‘ಅಕ್ರಮ ಪಂಪ್‌ಸೆಟ್‌ ಬಳಸುವವರ ವಿರುದ್ಧ ದೂರು ನೀಡಿದರೂ ಪ್ರಕರಣ ದಾಖಲಿಸಿಲ್ಲ. ಜಿಲ್ಲಾಧಿಕಾರಿ,ಎಸ್ಪಿ ಸಮ್ಮುಖದಲ್ಲಿ ಅಕ್ರಮ ಪಂಪ್‌ಸೆಟ್‌ ವಶಪಡಿಸಿಕೊಂಡರೂ ಪ್ರಕರಣ ದಾಖಲಾಗಿಲ್ಲ. ಭದ್ರಾ ಮುಖ್ಯನಾಲೆಗೆ ಚನ್ನಗಿರಿ, ಭದ್ರಾವತಿ ಭಾಗದಲ್ಲಿ ಅಳವಡಿಸಿರುವ ಅಕ್ರಮ ಪಂಪ್‌ಸೆಟ್ ತೆರವು ಮಾಡಿ. ಕೊನೆ ಭಾಗದ ಜಮೀನಿಗೆ ನೀರು ಹರಿಸಿ’ ಎಂದು ರೈತರು ಪೊಲೀಸರಿಗೆ ಸವಾಲು ಹಾಕಿದರು.

‘ಈವರೆಗೂ ವಶಪಡಿಸಿಕೊಂಡಿರುವ ಪಂಪ್‌ಸೆಟ್‌, ಕೇಬಲ್ ನಮ್ಮ ಬಳಿಯೇ ಇವೆ. ಅದೇ ಜಾಗದಲ್ಲಿ ಹೊಸದಾಗಿ ಪಂಪ್‌ಸೆಟ್‌ ಹಾಕಿದ್ದಾರೆ. ತೆರವು ಮಾಡಲು ಹೋದರೆ ಕಲ್ಲು ತೂರುತ್ತಾರೆ. ನಾವು ಕೆಲಸ ಮಾಡುವುದು ಕಷ್ಟವಾಗಿದೆ’ ಎಂದು ಪ್ರಭಾರ ಕಾರ್ಯಪಾಲಕ ಎಂಜಿನಿಯರ್ ಮಲ್ಲಿಕಾರ್ಜುನ್ ಅಸಹಾಯಕತೆ ವ್ಯಕ್ತಪಡಿಸಿದರು.

‘ನೀರಾವರಿ ನಿಗಮದಲ್ಲಿ ಎಂಜಿನಿಯರ್, ಸಿಬ್ಬಂದಿ ಇಲ್ಲ. ಇದ್ದವರೂ ರಜೆ ಮೇಲೆ ತೆರಳಿದ್ದಾರೆ’ ಎಂದರು.

‘ದಿನದಿನಕ್ಕೂ ಹರಿವಿನ ಪ್ರಮಾಣ ಕಡಿಮೆಯಾಗುತ್ತಿದೆ. ನಾಲೆ ನೀರಿನ ಸಮಸ್ಯೆ ಉಲ್ಬಣಿಸುತ್ತಿದೆ ಕಾಡಾ ಅಧ್ಯಕ್ಷರು 125 ದಿನ ಹರಿಸುವ ಭರವಸೆ ನೀಡಿದ್ದಾರೆ. ಒಮ್ಮೆ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು, ಎಂಜಿನಿಯರ್ ತಂಡ ಇಲ್ಲಿಗೆ ಬಂದು ವೀಕ್ಷಿಸಲಿ. ಇಲ್ಲವಾದರೆ ಎಕರೆಗೆ ಬೆಳೆ ಹಾನಿ ಪರಿಹಾರ ನೀಡಲಿ’ ಎಂದು ರೈತರು ಆಗ್ರಹಿಸಿದರು.

ಬಳಿಕ ಪೊಲೀಸ್‌ ಭದ್ರತೆಯಲ್ಲಿ ನಾಲೆಯ ಗೇಟ್‌ ಬಂದ್‌ ಮಾಡಲಾಯಿತು. ರೈತರಾದ ಬಸವರಾಜಪ್ಪ, ಫಾಲಾಕ್ಷಪ್ಪ, ಶಿವರಾಜ್, ಚಂದ್ರಪ್ಪ, ಹನಮಗೌಡ, ತಿಪ್ಪೇಸ್ವಾಮಿ, ರಾಮಪ್ಪ, ರೇವಣಸಿದ್ದಪ್ಪ ಮತ್ತು ಕೊಕ್ಕನೂರು, ಕಡಾರನಾಯ್ಕನಹಳ್ಳಿ, ಹಳ್ಳಿಹಾಳ್, ಹಿಂಡಸಗಟ್ಟೆ ಗ್ರಾಮಗಳ ರೈತರು ಈ ಸಂದರ್ಭದಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry