ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಈ ಬಾರಿ ದಕ್ಷಿಣ ಕ್ಷೇತ್ರದಲ್ಲಿ ಅರಳಲಿದೆ ಕಮಲ

ಬಿಜೆಪಿಯ ನವಶಕ್ತಿ ಸಮಾವೇಶದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ವಿಶ್ವಾಸ
Last Updated 12 ಮಾರ್ಚ್ 2018, 6:16 IST
ಅಕ್ಷರ ಗಾತ್ರ

ದಾವಣಗೆರೆ: ಕ್ಷೇತ್ರ ಪುನರ್‌ವಿಂಗಡಣೆ ಬಳಿಕ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ದಕ್ಕಿಲ್ಲ. ಆದರೆ, ಈ ಬಾರಿ ದಕ್ಷಿಣದಲ್ಲಿ ಕಮಲ ಅರಳುವುದು ಖಚಿತ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಅಂಬಾಭವಾನಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಬಿಜೆಪಿ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಹಮ್ಮಿಕೊಂಡಿದ್ದ ನವಶಕ್ತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಉತ್ತರ ಪ್ರದೇಶ, ಗುಜರಾತ್, ಈಶಾನ್ಯ ರಾಜ್ಯಗಳಲ್ಲಿ ಪಕ್ಷ ಸಂಘಟಿಸಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅದೇ ರೀತಿ ಕರ್ನಾಟಕದಲ್ಲೂ ಅಧಿಕಾರಕ್ಕೆ ಬರಲು ಎಲ್ಲೆಡೆ ನವಶಕ್ತಿ ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ. ಎಸ್‌.ಸಿ, ಎಸ್‌.ಟಿ, ಒಬಿಸಿ ಕಾರ್ಯಕರ್ತರನ್ನು ಒಳಗೊಂಡಂತೆ ತಂಡವನ್ನು ರಚಿಸಲಾಗಿದೆ. ಬೂತ್‌ನಲ್ಲಿ ಕನಿಷ್ಠ 60ರಿಂದ 70 ನವಶಕ್ತಿ ಕಾರ್ಯಕರ್ತರು ಪಕ್ಷದ ಸಿಪಾಯಿಗಳಂತೆ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

ಹಿಂದೆ, ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಕಡಿಮೆ ಮತಗಳ ಅಂತರದಲ್ಲಿ ಸೋಲು ಕಂಡಿತ್ತು. ಈ ಬಾರಿ ಬಿಜೆಪಿ ಧ್ವಜ ಹಾರಿಸಲೇಬೇಕು, ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳನ್ನೂ ಗೆಲ್ಲಲೇಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನವಶಕ್ತಿ ಕಾರ್ಯಕರ್ತರು ಗೆಲುವಿಗೆ ಶ್ರಮಿಸುತ್ತಿದ್ದಾರೆ ಎಂದರು.

ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ದಕ್ಷಿಣ ಕ್ಷೇತ್ರ ಅಭಿವೃದ್ಧಿ ಕಂಡಿಲ್ಲ. ಇಡೀ ಕ್ಷೇತ್ರ ಹಂದಿಮಯವಾಗಿದೆ. ಮಕ್ಕಳು ಶಾಲೆಗೆ ಹೋಗಲು ಹೆದರುವಂತಹ ಪರಿಸ್ಥಿತಿ ಇದೆ ಎಂದು ಟೀಕಿಸಿದರು.

ಸ್ಮಾರ್ಟ್‌ಸಿಟಿ ಸೇರಿದಂತೆ ಹಲವು ಯೋಜನೆಗಳಡಿ ಕೇಂದ್ರ ಸರ್ಕಾರದಿಂದ ಸಾವಿರಾರು ಕೋಟಿ ಅನುದಾನ ಬಂದಿದೆ. ಈ ಹಣದಲ್ಲಿ ಅಭಿವೃದ್ಧಿ ಮಾಡಿದರೆ ಕೇಂದ್ರ ಸರ್ಕಾರಕ್ಕೆ ಹೆಸರು ಹೋಗುತ್ತದೆ ಎಂಬ ಕಾರಣಕ್ಕೆ ಅನುದಾನವನ್ನೇ ಬಳಸುತ್ತಿಲ್ಲ ಎಂದು ಸಿದ್ದೇಶ್ವರ ಆರೋಪಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಮಾತನಾಡಿ, ‘ಕಾಂಗ್ರೆಸ್‌ ನಾಯಕರು ₹ 2,000 ಕೋಟಿ ಅನುದಾನ ಬಳಸಿ ನಗರದಲ್ಲಿ ಅಭಿವೃದ್ಧಿ ಮಾಡಿದ್ದೇವೆ ಎನ್ನುತ್ತಿದ್ದಾರೆ. ಯಾವ ಯೋಜನೆಯಡಿ, ಎಲ್ಲೆಲ್ಲಿ ಅಭಿವೃದ್ಧಿ ಮಾಡಲಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು. ಕೇವಲ ಸಿಮೆಂಟ್ ರಸ್ತೆಗಳನ್ನು ನಿರ್ಮಿಸಿದರೆ ಅದು ಅಭಿವೃದ್ಧಿಯೇ’ ಎಂದರು.

ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಸತತವಾಗಿ ಗೆಲ್ಲುತ್ತಿದೆ. ಆದರೂ, ಇಲ್ಲಿರುವ 38 ಸ್ಲಂಗಳು ಅಭಿವೃದ್ಧಿಯಾಗಿಲ್ಲ. ಉತ್ತಮ ಶಾಲಾ–ಕಾಲೇಜು, ಆಸ್ಪತ್ರೆ, ಕ್ರೀಡಾಂಗಣವಿಲ್ಲ. 25 ವರ್ಷಗಳಲ್ಲಿ ಕಾಂಗ್ರೆಸ್‌ ಅಭಿವೃದ್ಧಿ ಮಾಡಿದ್ದೇನು ಎಂದು ಪ್ರಶ್ನಿಸಿದರು.

ಸಮಾವೇಶದಲ್ಲಿ ಮುಖಂಡರಾದ ರುದ್ರೇಗೌಡ, ಶ್ರೀಪಾದ್ ಹೆಗಡೆ, ಬಿ.ಎಂ.ಸತೀಶ್‌, ಗೋಣೆಪ್ಪ, ಧನಂಜಯ ಕಡ್ಲೆಬಾಳು, ಶಿವನಗೌಡ ಪಾಟೀಲ್‌, ದೇವಿರಮ್ಮ, ಚೇತೂಬಾಯಿ ಅವರೂ ಇದ್ದರು.

‘ಒಂದೇ ದೋಣಿಯ ಪಯಣಿಗರು’
ಭಾಷಣದ ವೇಳೆ ಪಕ್ಷದೊಳಗಿನ ಭಿನ್ನಾಭಿಪ್ರಾಯಗಳ ಬಗ್ಗೆ ಪ್ರಸ್ತಾಪಿಸಿದ ಯಶವಂತರಾವ್‌ ಜಾಧವ್‌, ‘ಕಾಂಗ್ರೆಸ್‌ ಕಿತ್ತೊಗೆಯಬೇಕಾದರೆ ಎಲ್ಲರೂ ಒಗ್ಗಟ್ಟಾಗಿರಬೇಕು. ನಾವೆಲ್ಲ ಒಂದೇ ದೋಣಿಯ ಪಯಣಿಗರಿದ್ದಂತೆ. ದೋಣಿಯನ್ನು ದಡ ಸೇರಿಸಬೇಕೇ ಹೊರತು, ದೋಣಿಗೆ ತೂತು ಹಾಕಬಾರದು. ಸಣ್ಣಪುಟ್ಟ ವ್ಯತ್ಯಾಸಗಳನ್ನು ಪಕ್ಷದೊಳಗೆ ಬಗೆಹರಿಸಿಕೊಳ್ಳೋಣ. ಮಾಧ್ಯಮಗಳ ಮುಂದೆ ಹೋಗುವುದು ಸರಿಯಲ್ಲ’ ಎಂದರು.

‘2008ರ ಚುನಾವಣೆಯಲ್ಲಿ ಪಕ್ಷದಿಂದ ಮೂವರು ಟಿಕೆಟ್‌ ಆಕಾಂಕ್ಷಿ ಗಳಿದ್ದರು. ನಾನೂ ಆಕಾಂಕ್ಷಿಯಾಗಿದ್ದೆ. ಆದರೆ, ವರಿಷ್ಠರು ಲೋಕೇಶ್‌ ಅವರಿಗೆ ಟಿಕೆಟ್‌ ನೀಡಿದರು. ಪಕ್ಷದ ತೀರ್ಮಾನಕ್ಕೆ ಬದ್ಧವಾಗಿ ಅವರ ಪರ ಪ್ರಚಾರ ಮಾಡಿದೆ. ಈ ಬಾರಿ ಯಾರಿಗೇ ಟಿಕೆಟ್‌ ಕೊಟ್ಟರೂ ನಾನೇ ಅಭ್ಯರ್ಥಿ ಎಂಬಂತೆ ಪಕ್ಷಕ್ಕೆ ದುಡಿಯುತ್ತೇನೆ’ ಎಂದು ಜಾಧವ್ ಹೇಳಿದರು.

ನವಶಕ್ತಿ ಟೀಂ ಹೀಗಿರಲಿದೆ...
‘ಪಕ್ಷವನ್ನು ತಳಮಟ್ಟದಲ್ಲಿ ಸದೃಢಗೊಳಿಸುವುದು ಹಾಗೂ ಹೊಸ ಕಾರ್ಯಕರ್ತರನ್ನು ಸೆಳೆಯುವುದು ಮುಖ್ಯ ಉದ್ದೇಶ. ಅದರಂತೆ, ಪ್ರತಿ 5 ಬೂತ್‌ಗೆ ಒಬ್ಬರು ಶಕ್ತಿಕೇಂದ್ರದ ಪ್ರಮುಖರನ್ನು ನೇಮಿಸಲಾಗುವುದು. ಹಿಂದಿನ ಮೂರು ಚುನಾವಣೆಗಳ ಮತಗಳನ್ನು ವರ್ಗೀಕರಣಗೊಳಿಸಿ, ಯಾವ ಬೂತ್‌ಗಳಿಗೆ ಶೇ 60ರಿಂದ 70ರಷ್ಟು ಮತ ಬಿಜೆಪಿಗೆ ಬಂದಿದೆಯೋ ಅದನ್ನು ‘ಎ’ ಎಂದು, ಶೇ 50ರಷ್ಟು ಮತ ಪಡೆದ ಬೂತ್‌ಗಳನ್ನು ‘ಬಿ’ ಎಂತಲೂ, ಶೇ 50ಕ್ಕಿಂತ ಕಡಿಮೆ ಮತ ಪಡೆದ ಬೂತ್‌ಗಳನ್ನು ‘ಸಿ’ ಎಂದೂ ವಿಂಗಡಿಸಲಾಗುವುದು. ಬಳಿಕ ‘ಸಿ’ ಕೇಂದ್ರಗಳನ್ನು ‘ಬಿ’ ದರ್ಜೆಗೆ, ‘ಬಿ’ ಕೇಂದ್ರಗಳನ್ನು ‘ಎ’ ದರ್ಜೆಗೆ ಏರಿಸಲು ತಂತ್ರ ರೂಪಿಸಲಾಗುವುದು’ ಎಂದು ಮುಖಂಡ ರಾಜಶೇಖರ್ ಹೇಳಿದರು.

ಎಸ್‌.ಸಿ, ಎಸ್‌.ಟಿ, ಒಬಿಸಿ ಹಾಗೂ ಹಿಂದೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪರಾಭವಗೊಂಡ ಅಭ್ಯರ್ಥಿಗಳನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವುದು. ಸಹಕಾರಿ ಸಂಘಗಳ ನಿರ್ದೇಶಕರು, ಮಹಿಳಾ ಸಂಘದ ಕಾರ್ಯಕರ್ತರನ್ನು ಸೆಳೆಯಲಾಗುವುದು. ಪ್ರತಿ ಮತಗಟ್ಟೆಯಲ್ಲಿ ‘ಈ ಬಾರಿ ಬಿಜೆಪಿ’ ಎಂಬ ಫಲಕ ಹಾಕುವುದು ಸೇರಿದಂತೆ 19 ಕೆಲಸಗಳನ್ನು ನವಶಕ್ತಿ ಕಾರ್ಯಕರ್ತರು ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT