ವೀಲಿಂಗ್, ಅತಿವೇಗ ಚಾಲನೆಗೆ ವ್ಯಕ್ತಿ ಬಲಿ: ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

7

ವೀಲಿಂಗ್, ಅತಿವೇಗ ಚಾಲನೆಗೆ ವ್ಯಕ್ತಿ ಬಲಿ: ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

Published:
Updated:
ವೀಲಿಂಗ್, ಅತಿವೇಗ ಚಾಲನೆಗೆ ವ್ಯಕ್ತಿ ಬಲಿ: ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

ಕೋಲಾರ: ಖಾಸಗಿ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗೋಪಾಲಕೃಷ್ಣಾರೆಡ್ಡಿ ಅವರ ಸಾವಿಗೆ ಕಾರಣವಾದ ಬಾಲಕರ ಬೈಕ್ ಚಾಲನೆ, ವೀಲಿಂಗ್ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ವಿವಿಧ ಸಂಘಟನೆಗಳ ಕಾರ್ಯರ್ತರು ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆ ವೃತ್ತದಲ್ಲಿ ಶವವಿಟ್ಟು ಭಾನುವಾರ ಧರಣಿ ನಡೆಸಿದರು.

ಭಾನುವಾರ ಬೆಳಗ್ಗೆ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ಮೃತದೇಹ ಬರುವ ಸುದ್ದಿ ತಿಳಿದ ವಿವಿಧ ಸಂಘಟನೆಗಳ ಸದಸ್ಯರು ಜಮಾಯಿಸಿ, ಶವವಿದ್ದ ಅಂಬ್ಯುಲೆನ್ಸ್‌ನ್ನು ಆಸ್ಪತ್ರೆ ವೃತ್ತದಲ್ಲಿ ನಿಲ್ಲಿಸಿ ಧರಣಿ ನಡೆಸಿ ಪೊಲೀಸ್‌ ವರಿಷ್ಠಾಧಿಕಾಆರಿ ಬರಬೇಕು ಎಂದು ಪಟ್ಟು ಹಿಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಗಾನಂದ ಕೆಂಪರಾಜ ಮಾತನಾಡಿ, ‘ನಗರದಲ್ಲಿ ಅತಿವೇಗದ ಬೈಕ್‌ ಚಾಲನೆ ಹಾಗೂ ವೀಲಿಂಗ್ ನಿಯಂತ್ರಿಸುವಲ್ಲಿ ಪೊಲೀಸರು ವಿಫಲರಾಗಿರುವುದರಿಂದ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿವೆ’ ಎಂದು ಆರೋಪಿಸಿದರು.

‘ಶುಕ್ರವಾರ ರಾತ್ರಿ 8 ಗಂಟೆ ಸುಮಾರಿನಲ್ಲಿ ಮೂವರು ಸಾಗುತ್ತಿದ್ದ ದ್ವಿಚಕ್ರವಾಹನ ವೀಲಿಂಗ್ ಮಾಡುತ್ತಾ ಅತಿ ವೇಗದಿಂದ ಬಂದು, ಗೋಪಾಲಕೃಷ್ಣಾರೆಡ್ಡಿ ಅವರಿಗೆ ಡಿಕ್ಕಿ ಹೊಡೆಸಿದ್ದರಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಶನಿವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ. ಕೂಡಲೇ ಆ ವ್ಯಕ್ತಿಯನ್ನು ಬಂಧಿಸಬೇಕು’ ಎಂದು ಒತ್ತಾಯಿಸಿದರು.

ನಗರದಲ್ಲಿ ಪರವಾನಗಿ ಇಲ್ಲದೇ ವಾಹನಗಳ ಓಡಾಟ, ಅತಿವೇಗ, ವೀಲಿಂಗ್ ನಡೆಯುತ್ತಿದ್ದರೂ, ಯಾವುದೇ ಪ್ರಕರಣ ದಾಖಲಾಗಿಲ್ಲ. ಪೊಲೀಸರು ಇದನ್ನು ನಿಯಂತ್ರಿಸುವುದು ಬಿಟ್ಟು, ರಾಜೀ ಸಂದಾನ ಮಾಡಿ ತಪ್ಪು ಮಾಡಿದವರಿಗೆ ರಕ್ಷಣೆ ನೀಡುತ್ತಿದ್ದಾರೆ. ವೀಲಿಂಗ್ ಮಾಡಲು ಪೊಲೀಸರೇ ಪ್ರೋತ್ಸಾಹ ನೀಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಗರದಲ್ಲಿ ಸಂಚಾರಿ ವ್ಯವಸ್ಥೆ ವಿಫಲವಾಗಿದೆ. ದಿನನಿತ್ಯ ಇಂತಹ ಅಪಘಾತಗಳು ನಡೆಯುತ್ತಿದ್ದರೂ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿಲ್ಲ’ ಎಂದು ಕನ್ನಡ ಉಪನ್ಯಾಸಕರ ಸಂಘದ ಅಧ್ಯಕ್ಷ ಜೆ.ಜಿ.ನಾಗರಾಜ್ ದೂರಿದರು.

‘ಗೋಪಾಲರೆಡ್ಡಿ ಅವರ ಸಾವಿಗೆ ಕಾರಣವಾಗಿರವ ವ್ಯಕ್ತಿಗಳನ್ನು ಕೂಡಲೇ ಬಂಧಿಸಬೇಕು. ನಗರದಲ್ಲಿ ವೀಲಿಂಗ್ ಮಾಡುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹಿಣಿ ಕಟೋಚ್‌ ಸೆಪಟ್ ಮಾತನಾಡಿ, ಈ ಸಂಬಂಧ 24 ಪ್ರಕರಣ ದಾಖಲಿಸಿದ್ದೇವೆ. ನೀವು ಸಹಕಾರ ನೀಡಿ, ಪರವಾನಗಿ ರಹಿತ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಕೆ.ನಟರಾಜ್, ಜನವಾದಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ವಿ.ಗೀತಾ, ಬಿಜೆಪಿ ನಗರ ಘಟಕದ ಅಧ್ಯಕ್ಷ ನಾರಾಯಣಸ್ವಾಮಿ, ಸಹ್ಯಾದ್ರಿ ವಿದ್ಯಾ ಸಂಸ್ಥೆಯ ಅಧ್ಯಕ್ಷ ಉದಯ್ ಕುಮಾರ್, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಕೆ.ಗೋಪಾಲರೆಡ್ಡಿ, ವಕೀಲ ಲೋಕೇಶ್, ಖಾಸಗಿ ಶಿಕ್ಷಣ ಸಂಸ್ಥೆಗಳ ಜಿಲ್ಲಾ ಅಧ್ಯಕ್ಷ ಮುನಿಯಪ್ಪ, ಪ್ರಧಾನ ಕಾರ್ಯದರ್ಶಿ ಸದಾನಂದ, ತಾಲ್ಲೂಕು ಅಧ್ಯಕ್ಷ ನಾಗಭೂಷಣ್, ಎಸ್.ವಿ.ಸುಧಾಕರ್ ಪಾಲ್ಗೊಂಡಿದ್ದರು.

ಗೋಪಾಲರೆಡ್ಡಿ ನಿಧನ

ಸುಭಾಷ್ ಶಾಲೆಯ ಸಂಸ್ಥಾಪಕ, ಖಾಸಗಿ ಶಿಕ್ಷಕರ ಸಂಘದ ಅಧ್ಯಕ್ಷ ಗೋಪಾಲ ಕೃಷ್ಣಾರೆಡ್ಡಿ ಶನಿವಾರ ರಾತ್ರಿ ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕಳೆದ ಶುಕ್ರವಾರ ರಾತ್ರಿ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಪತ್ನಿ, ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅವರ ಅಂತ್ಯಸಂಸ್ಕಾರ ನಗರದಲ್ಲಿ ಭಾನುವಾರ ಮಧ್ಯಾಹ್ನ ನಡೆಯಿತು. ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು ಸಂತಾಪ ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry