ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷಾಂತರ ಪರ್ವ

ಗ್ರಾ.ಪಂ ಸದಸ್ಯರು, ಕಾರ್ಯಕರ್ತರು, ಮುಖಂಡರನ್ನು ಸೆಳೆಯಲು ಕಾಂಗ್ರೆಸ್‌, ಜೆಡಿಎಸ್‌ ಪೈಪೋಟಿ
Last Updated 12 ಮಾರ್ಚ್ 2018, 7:32 IST
ಅಕ್ಷರ ಗಾತ್ರ

ಮೈಸೂರು: ಬಿರುಬಿಸಿಲಿನ ಜೊತೆ ಚುನಾವಣೆ ಕಾವು ಏರುತ್ತಿರುವಂತೆ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷಾಂತರ ಪರ್ವ ಜೋರಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಾಲಿ ಶಾಸಕ ಜಿ.ಟಿ.ದೇವೇಗೌಡರ ಸ್ಪರ್ಧೆಗೆ ವೇದಿಕೆಯಾಗಿ ರುವ ಈ ಕ್ಷೇತ್ರದಲ್ಲಿ ಸಮಾವೇಶಗಳ ಆಯೋಜನೆ ಜೊತೆಗೆ ಕಾರ್ಯಕರ್ತರು, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪ್ರಭಾವಿ ಮುಖಂಡರನ್ನು ಸೆಳೆಯುವ ಪ‍್ರಯತ್ನ ಭರ್ಜರಿಯಾಗಿ ನಡೆಯುತ್ತಿದೆ.

ಕ್ಷೇತ್ರ ವ್ಯಾಪ್ತಿಯಲ್ಲಿ 31 ತಾಲ್ಲೂಕು ಪಂಚಾಯಿತಿಗಳಿದ್ದು, ಅದರಲ್ಲಿ 19 ಜೆಡಿಎಸ್‌, 1 ಪಕ್ಷೇತರ ಹಾಗೂ 11 ಕಾಂಗ್ರೆಸ್‌ ಸದಸ್ಯರ ಹಿಡಿತದಲ್ಲಿವೆ. ಎಂಟು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಎರಡರಲ್ಲಿ ಕಾಂಗ್ರೆಸ್‌, ಆರರರಲ್ಲಿ ಜೆಡಿಎಸ್‌ ಸದಸ್ಯರು ಇದ್ದಾರೆ. 28 ಗ್ರಾಮ ಪಂಚಾಯಿತಿಗಳಿವೆ. ಅಲ್ಲದೆ, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕೆಲ ವಾರ್ಡ್‌ಗಳೂ ಕ್ಷೇತ್ರಕ್ಕೆ ಸೇರಿವೆ.

ಸಿದ್ದಲಿಂಗಪುರ ಪಂಚಾಯಿತಿ ವ್ಯಾಪ್ತಿಯ ಸಿದ್ದಲಿಂಗಪುರ, ಕೆ.ಆರ್‌.ಮಿಲ್‌, ಬೆಲವತ್ತ, ಕಮ್ಮನಕೆರೆಹುಂಡಿ, ಹಳೇ ಕೆಸರೆ ಗ್ರಾಮಗಳ ಸದಸ್ಯರು ಬೆಂಗಳೂರಿನಲ್ಲಿ ಈಚೆಗೆ ಸಿದ್ದರಾಮಯ್ಯ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಿದ್ದಾರೆ. ಅದಕ್ಕೆ ಪ್ರತಿಯಾಗಿ ರಮಾಬಾಯಿನಗರ ಮತ್ತು ಕುಪ್ಪಲೂರು ಗ್ರಾಮಗಳ ಮಹಿಳಾ ಮುಖಂಡರು, ಯುವ ಮುಖಂಡರನ್ನು ಖುದ್ದಾಗಿ ಜಿ.ಟಿ.ದೇವೇಗೌಡರೇ ಜೆಡಿಎಸ್‌ ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಪಕ್ಷಾಂತರ ಪರ್ವ ಹಲವು ದಿನಗಳಿಂದ ಮುಂದುವರಿದಿದೆ.

ಕ್ಷೇತ್ರದ ಜಯಪುರ ಹೋಬಳಿಯಲ್ಲಿ ಎಚ್‌.ಡಿ.ಕುಮಾರಸ್ವಾಮಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೂರೇ ದಿನಗಳ ಅಂತರದಲ್ಲಿ ಕಾಂಗ್ರೆಸ್‌ ಸಮಾವೇಶ ನಡೆಯಿತು.

ಒಕ್ಕಲಿಗ ಮತಗಳು ಫಲಿತಾಂಶ ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇರುವುದರಿಂದ ಈ ಸಮುದಾಯದ ಮುಖಂಡರ ಮೇಲೆ ಸಿದ್ದರಾಮಯ್ಯ ಕಣ್ಣಿಟ್ಟಂತಿದೆ. ಜೆಡಿಎಸ್‌ನಲ್ಲಿದ್ದ ಮಾವಿನಹಳ್ಳಿ ಸಿದ್ದೇಗೌಡ, ಬೋಗಾದಿ ಕೃಷ್ಣಮಾದೇಗೌಡ ಅವರನ್ನು ಕಾಂಗ್ರೆಸ್‌ಗೆ ಸೆಳೆದಿರುವುದು ಇದೇ ಉದ್ದೇಶ ಎನ್ನಲಾಗಿದೆ. ಆ ಸಮಾವೇಶದಲ್ಲಿ ಮಾತನಾಡಲು ಒಕ್ಕಲಿಗ ಮುಖಂಡರಿಗೆ ಆದ್ಯತೆ ನೀಡಲಾಗಿತ್ತು. ಕಾರ್ಯಕ್ರಮದ ಮಧ್ಯದಲ್ಲಿ ವೇದಿಕೆಯಿಂದ ಕೆಳಗಿಳಿದು ಬಂದು ಒಕ್ಕಲಿಗ ಮುಖಂಡರ ಜೊತೆ ಕುಶಲೋಪರಿ ನಡೆಸಿದ್ದರು.

2013ರಲ್ಲಿ ಕಾಂಗ್ರೆಸ್‌ನಿಂದ ಈ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದ ಒಕ್ಕಲಿಗ ಸಮುದಾಯದ ಸತ್ಯನಾರಾಯಣ ಅವರಿಗೆ ಪಕ್ಷದ ಕಾರ್ಯಕ್ರಮಗಳಲ್ಲಿ ಆದ್ಯತೆ ನೀಡಲಾ ಗುತ್ತಿದೆ. ಪ್ರಮುಖವಾಗಿ ಸಿದ್ದರಾಮಯ್ಯ ಪಾಲ್ಗೊಳ್ಳುವ ಕಾರ್ಯಕ್ರಮಗಳಲ್ಲಿ ಅವರಿಗೂ ಆಹ್ವಾನ ಇದ್ದೇ ಇರುತ್ತದೆ.

‘ಸಿದ್ದರಾಮಯ್ಯ ಎಷ್ಟೇ ಕಸರತ್ತು ನಡೆಸಿದರೂ ಕ್ಷೇತ್ರದ ಜನರ ಒಲವು ಜೆಡಿಎಸ್‌ ಮೇಲೆಯೇ. ಮಾವಿನಹಳ್ಳಿ ಸಿದ್ದೇಗೌಡರು, ಬೋಗಾದಿ ಕೃಷ್ಣಮಾದೇಗೌಡ ಏಕೆ ಕಾಂಗ್ರೆಸ್‌ ಸೇರಿದರು ಎಂಬುದನ್ನು ಅವರೇ ಹೇಳಬೇಕು. ವಯಸ್ಸಾದವರ ಬಗ್ಗೆ ನಾನು ಮಾತನಾಡುವುದಿಲ್ಲ. ಒಕ್ಕಲಿಗರು ಒಗ್ಗಟ್ಟಾಗಿದ್ದು ಶೇ 5 ಮತಗಳೂ ಸಿದ್ದರಾಮಯ್ಯ ಅವರಿಗೆ ಹೋಗುವುದಿಲ್ಲ’ ಎಂದು ಶಾಸಕ ಜಿ.ಟಿ.ದೇವೇಗೌಡ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪಕ್ಷಾಂತರ ಪರ್ವದ ಜೊತೆಗೆ ಪರಸ್ಪರ ಕೆಸರೆರಚಾಟವೂ ಮುಂದುವರಿದಿದೆ. ಪೊಲೀಸ್‌ ಠಾಣೆಗಳಲ್ಲಿ ದೂರು ದಾಖಲಾಗುವವರೆಗೆ ಸಾಗಿದೆ. ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ವಿಚಾರದಲ್ಲಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯುತ್ತಿದೆ. ಈಚೆಗೆ ಜಿಲ್ಲಾಧಿಕಾರಿ ಕಚೇರಿ ಮುಂದೆ ದೇವೇಗೌಡರ ಸಾರಥ್ಯದಲ್ಲಿ ಪ್ರತಿಭಟನೆ ಕೂಡ ನಡೆದಿತ್ತು.

‘ಇನ್ನೂ 3–4 ಗ್ರಾ.ಪಂ ಸದಸ್ಯರು ಸದ್ಯದಲ್ಲೇ ಕಾಂಗ್ರೆಸ್‌ ಸೇರಲಿದ್ದಾರೆ. ಅವರೆಲ್ಲ ಸ್ವಯಂ ಇಚ್ಛೆಯಿಂದ ಪಕ್ಷಕ್ಕೆ ಬರುತ್ತಿದ್ದಾರೆ’ ಎಂದು ಮಾರ್ಬಳ್ಳಿ ತಾ.ಪಂ ಸದಸ್ಯ ಮಾರ್ಬಳ್ಳಿ ಕುಮಾರ್‌ ಹೇಳುತ್ತಾರೆ.

*
ಸಿದ್ದರಾಮಯ್ಯ ಕ್ಷೇತ್ರ ಬಿಟ್ಟು 10 ವರ್ಷಗಳಾಗಿವೆ. ಈಗ ಇಲ್ಲಿಗೆ ಬಂದು ಸಮಾವೇಶ ನಡೆಸಿದರೆ ಏನು ಪ್ರಯೋಜನ? ಯುವ ಸಮುದಾಯ ಜೆಡಿಎಸ್‌ ಪರವಾಗಿದೆ.
–ಬೀರಿಹುಂಡಿ ಬಸವಣ್ಣ‌, ಜಿ.ಪಂ ಸದಸ್ಯ, ಬೀರಿಹುಂಡಿ

*
ಗ್ರಾ. ಪಂ ಸದಸ್ಯರು ನಿರಂತರವಾಗಿ ಜೆಡಿಎಸ್‌ಗೆ ಬರುತ್ತಿದ್ದಾರೆ. ಪಕ್ಷದ ಮೇಲಿನ ಒಲವು ಕಾರಣ. ಬೆರಳೆಣಿಕೆಯಷ್ಟು ಜನ ಕಾಂಗ್ರೆಸ್‌ ಸೇರಿದ್ದಾರೆ ಅಷ್ಟೆ.
–ಜಿ.ಟಿ.ದೇವೇಗೌಡ‌ ಶಾಸಕ, ಚಾಮುಂಡೇಶ್ವರಿ ಕ್ಷೇತ್ರ

*
ಚುನಾವಣೆ ಸಮೀಪಿಸುತ್ತಿರುವಂತೆ ಕಾಂಗ್ರೆಸ್‌ ಸೇರಲು ಗ್ರಾ.ಪಂ ಸದಸ್ಯರು, ವಿವಿಧ ಪಕ್ಷಗಳ ಕಾರ್ಯಕರ್ತರು ಉತ್ಸುಕರಾಗಿದ್ದಾರೆ.
–ಮಾರ್ಬಳ್ಳಿ ಕುಮಾರ್‌, ತಾ.ಪಂ ಸದಸ್ಯ, ಮಾರ್ಬಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT