ಅಣ್ಣಿಗೇರಿ ಪುರಸಭೆ: ಅಧ್ಯಕ್ಷ ಭೀಮಪ್ಪ ರಾಜೀನಾಮೆ

ಮಂಗಳವಾರ, ಮಾರ್ಚ್ 26, 2019
33 °C
ಪಟ್ಟಣದಿಂದ ಕಾಣೆಯಾಗಿದ್ದ 16 ಸದಸ್ಯರು; ಅವಿಶ್ವಾಸ ಗೊತ್ತುವಳಿ ಸಭೆ ಇಂದು

ಅಣ್ಣಿಗೇರಿ ಪುರಸಭೆ: ಅಧ್ಯಕ್ಷ ಭೀಮಪ್ಪ ರಾಜೀನಾಮೆ

Published:
Updated:
ಅಣ್ಣಿಗೇರಿ ಪುರಸಭೆ: ಅಧ್ಯಕ್ಷ ಭೀಮಪ್ಪ ರಾಜೀನಾಮೆ

ಅಣ್ಣಿಗೇರಿ: ಅಣ್ಣಿಗೇರಿ ಪುರಸಭೆಯ ಅಧ್ಯಕ್ಷ ಭೀಮಪ್ಪ(ಮುತ್ತು) ದ್ಯಾವನೂರ ವಿರುದ್ಧ ಸೋಮವಾರ (ಮಾ.12) ಅವಿಶ್ವಾಸ ಮಂಡನೆ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಾ.8ರ ರಾತ್ರಿಯಿಂದಲೇ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರು ಪಟ್ಟಣದಿಂದ ಹೊರಹೋಗಿ, ಯಾರಿಗೂ ಸಿಗದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಈ ಮಧ್ಯೆ ‘ಧಾರವಾಡ ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ ಅವರಿಗೆ ಶುಕ್ರವಾರವೇ ರಾಜೀನಾಮೆ ಸಲ್ಲಿಸಿದ್ದೇನೆ’ ಎಂದು ಭೀಮಪ್ಪ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಅಧ್ಯಕ್ಷ ಸ್ಥಾನದಿಂದ ಭೀಮಪ್ಪ ಅವರನ್ನು ಕೆಳಗಿಳಿಸಲು 16 ಸದಸ್ಯರು ಪಟ್ಟು ಹಿಡಿದು ಧರ್ಮಸ್ಥಳ ಮಂಜುನಾಥ ಸ್ವಾಮಿ ಮೊರೆ ಹೋಗಿದ್ದಾರೆ. ಪಟ್ಟಣದಲ್ಲಿ ಕಾಣಸಿಗದ ಈ ಸದಸ್ಯರು ಧರ್ಮಸ್ಥಳದಲ್ಲಿ ಇದ್ದ ಚಿತ್ರಗಳು ಲಭ್ಯವಾಗಿವೆ.

ಅಣ್ಣಿಗೇರಿ ಪುರಸಭೆಯ 2ನೇ ಅವಧಿ ಅಧ್ಯಕ್ಷ ಕಾಂಗ್ರೆಸ್‌ನ ಭೀಮಪ್ಪ ಪಟ್ಟಣದ ಅಭಿವೃದ್ದಿ ಕಾರ್ಯಗಳ ಬಗ್ಗೆ ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂದು ಕಾಂಗ್ರೆಸ್ ಸದಸ್ಯೆ ಸತ್ಯವ್ವ ಮಣ್ಣಪ್ಪನವರ ಒಳಗೊಂಡು 16 ಸದಸ್ಯರು ಫೆ.16ರಂದು ಅವಿಶ್ವಾಸ ಮಂಡನೆಗೆ ಅರ್ಜಿ ಸಲ್ಲಿಸಿದ್ದರು.

ಅವಿಶ್ವಾಸ ಗೊತ್ತುವಳಿ ಸಭೆಯನ್ನು ಪುರಸಭೆ ಉಪಾಧ್ಯಕ್ಷರ ಸಮ್ಮುಖದಲ್ಲಿ ಮುಖ್ಯಾಧಿಕಾರಿ ಬಿ.ಎಫ್.ಜಿಡ್ಡಿ ಮಾ.12ರಂದು ಸಭೆ ಕರೆದಿದ್ದಾರೆ.

ಪುರಸಭೆಯಲ್ಲಿ ಒಟ್ಟು 23 ಸ್ಥಾನಗಳಿದ್ದು, ಜೆಡಿಎಸ್‌ 10, ಕಾಂಗ್ರೆಸ್‌ 8, ಬಿಜೆಪಿ 4 ಹಾಗೂ ಬಿಎಸ್‌ಆರ್‌ ಒಂದು ಸ್ಥಾನ ಹೊಂದಿದೆ.

ಎಲ್ಲ ಪಕ್ಷದವರೂ ಆಡಳಿತ ಮಾಡಬೇಕು ಎನ್ನುವ ಉದ್ದೇಶದಿಂದ ಸ್ಥಳೀಯ ಎಲ್ಲ ಪಕ್ಷದ ಮುಖಂಡರು ಸೇರಿಕೊಂಡು ಪ್ರತಿಯೊಂದು ಪಕ್ಷಕ್ಕೆ ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳನ್ನು ತಲಾ 10 ತಿಂಗಳಿಗೆ ಹಂಚಿಕೊಂಡು ಮಾತಿನ ನಿರ್ಣಯ ಮಾಡಿಕೊಂಡಿದ್ದರು.

ಮೊದಲ ಅವಧಿಯ ಅಧ್ಯಕ್ಷರಾಗಿ ಕಾಂಗ್ರೆಸ್‌ನ ನಾಗರತ್ನಾ ನಾವಳ್ಳಿ, ನಂತರ ಬಿಜೆಪಿಯ ನಾಗರತ್ನಾ ಅಕ್ಕಿ ತಲಾ 10 ತಿಂಗಳು ಹಾಗೂ ಜೆಡಿಎಸ್‌ನ ರೂಪಾ ಕಲ್ಲೂರ 5 ತಿಂಗಳು ಅಧಿಕಾರವನ್ನು ನಿರ್ವಹಿಸಿದ್ದಾರೆ.

‘2ನೇ ಅವಧಿಯಲ್ಲಿ ಕಾಂಗ್ರೆಸ್‌ನ ಭೀಮಪ್ಪ ಮಾತಿನಂತೆ 10 ತಿಂಗಳಾದ ಮೇಲೆ ಅಧಿಕಾರ ಬಿಟ್ಟು ಕೊಟ್ಟಿರಲಿಲ್ಲ. 18 ತಿಂಗಳಾದ್ದರಿಂದ ಸದಸ್ಯರು ಮನನೊಂದಿದ್ದರು. ಹೀಗಾಗಿ ಅವಿಶ್ವಾಸ ಮಂಡನೆಗೆ ಅರ್ಜಿ ಸಲ್ಲಿಸಲಾಗಿತ್ತು’ ಎಂದು ಸದಸ್ಯರೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry