ಬಿಜೆಪಿಯಿಂದ ಸಮಾಜ ವಿರೋಧಿ ನಡೆ

7
ಕನಕದಾಸರ ಜಯಂತಿಯಲ್ಲಿ ಶಾಸಕ ಎನ್‌.ಚಲುವರಾಯಸ್ವಾಮಿ ಆಕ್ರೋಶ

ಬಿಜೆಪಿಯಿಂದ ಸಮಾಜ ವಿರೋಧಿ ನಡೆ

Published:
Updated:
ಬಿಜೆಪಿಯಿಂದ ಸಮಾಜ ವಿರೋಧಿ ನಡೆ

ಮಂಡ್ಯ: ‘ಪ್ರಧಾನಿ ನರೇಂದ್ರ ಮೋದಿ ಸೇರಿ ಬಿಜೆಪಿಯ ಹಲವು ಮುಖಂಡರು ಸಮಾಜ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ತಮ್ಮ ಉದ್ದೇಶ ಸಾಧನೆಗಾಗಿ ವಾಮಮಾರ್ಗ ಹಿಡಿಯುತ್ತಿದ್ದಾರೆ’ ಎಂದು ನಾಗಮಂಗಲ ಶಾಸಕ ಎನ್‌.ಚಲುವರಾಯಸ್ವಾಮಿ ಆರೋಪಿಸಿದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೇವಾ ಸಮಾಜ ಹಾಗೂ ಹೊಂಗಿರಣ ಸೇವಾ ಟ್ರಸ್ಟ್ ವತಿಯಿಂದ ನಗರದ ಪಿಇಎಸ್ ಎಂಜಿನಿಯರಿಂಗ್ ಕಾಲೇಜಿನ ಪ್ಲೇಸ್‌ಮೆಂಟ್ ಸಭಾಂಗಣದಲ್ಲಿ ಭಾನುವಾರ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಶ್ರೇಷ್ಠ ಸಂತರ ಜಯಂತಿ ಕಾರ್ಯಕ್ರಮಗಳು ನಿರಂತರವಾಗಿ ಸಮಾಜದಲ್ಲಿ ನಡೆಯುತ್ತಿರಬೇಕು. ಸಮಾಜದ ಉತ್ತಮ ಬೆಳವಣಿಗೆಗೆ ಸಂತರ ವಿಚಾರಧಾರೆಗಳು ನೆರವಾಗಲಿವೆ. ಆದರೆ, ಬಿಜೆಪಿಯಲ್ಲಿ ಮುಖಂಡರು ಸಂವಿಧಾನ ವಿರೋಧಿ ಹೇಳಿಕೆ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ವೈಯಕ್ತಿಕ ಸ್ವಾರ್ಥ ಪಾಪಸ್‌ಕಳ್ಳಿಯಂತೆ ಹರಡುತ್ತಿದೆ. ಹೆಚ್ಚು ನಾಯಕರು ಅಧಿಕಾರ ದಾಹ ಹಾಗೂ ವೈಯಕ್ತಿಕ ಹಿತಾಸಕ್ತಿಯಲ್ಲಿ ಮುಳುಗಿದ್ದಾರೆ. ತಮ್ಮ ಗುರಿ ಸಾಧಿಸಲು ಗೌರವಯುತ ಮಾರ್ಗ ತ್ಯಜಿಸಿ, ಅನ್ಯಾಯದ ಮಾರ್ಗ ಅನುಸರಿಸುತ್ತಿದ್ದಾರೆ. ಅವರ ಮಾತು ಹಾಗೂ ಕೃತಿಗೆ ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.

‘ಸಮಾಜದಲ್ಲಿ ವಿಷ ಬೀಜಬಿತ್ತುವ ಕೆಲಸ ಮಾಡುವುದನ್ನು ಬಿಟ್ಟು ಬಾಂಧವ್ಯ ಬೆಸೆಯುವ ಕಾಯಕ ಮಾಡಬೇಕು. ಸಮಾಜದ ಸುಸ್ಥಿರ ಅಭಿವೃದ್ಧಿಗೆ ಸಂತರ ಜಯಂತಿ ಆಚರಣೆಗಳು ಮುಖ್ಯ ಎಂದರು.

ಜಿಲ್ಲೆಯಲ್ಲಿ ಹಲವು ಶಾಸಕರು ಹಾಗೂ ಮಂತ್ರಿಗಳು ಬಂದು ಹೋಗಿದ್ದಾರೆ. ಜನರ ಮನಸಲ್ಲಿ ಉಳಿಯುವಂತೆ ಕೆಲಸ ಮಾಡಿದವರು ಕೆಲವರು ಮಾತ್ರ. ರಾಜಕೀಯದಲ್ಲಿ ಇರುವವರು ಸಂತರು, ಚಿಂತಕರು ನೀಡಿರುವ ಹೇಳಿಕೆಯ ಸಾರವನ್ನು ಅಳವಡಿಸಿಕೊಂಡು ಸೇವಾ ನಿರತರಾಗಬೇಕು’ ಎಂದು ಹೇಳಿದರು.

ಧರ್ಮ ಯುದ್ಧ: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಡಾ. ರಾಮಮನೋಹರ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಡಾ.ಬಿ.ಎಸ್‌ ಶಿವಣ್ಣ ಮಾತನಾಡಿ, ‘ಮುಂಬರುವ ವಿಧಾನಸಭಾ ಚುನಾವಣೆ ಸಾಮಾಜಿಕ ನ್ಯಾಯ ಹಾಗೂ ಕೋಮುವಾದದನಡುವೆ ನಡೆಯುವ ಧರ್ಮಯುದ್ಧವಾಗಿದೆ. ಬುದ್ಧ, ಬಸವಣ್ಣ, ಕನಕದಾಸರು, ಲೋಹಿಯಾ, ಗಾಂಧೀಜಿ ಮುಂತಾದವರು ನೀಡಿರುವ ತತ್ವಗಳ ಉಳಿವಿಗಾಗಿ ಮತ್ತೊಮ್ಮೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಸ್ತಿತ್ವಕ್ಕೆ ಬರಬೇಕು. ಧರ್ಮದ ಹೆಸರಿನಲ್ಲಿ ಸಮಾಜಗಳನ್ನು ಒಡೆಯುವವರ ನೀತಿಗಳನ್ನು ತಿರಸ್ಕಾರ ಮಾಡಬೇಕು’ ಎಂದು ಹೇಳಿದರು.

‘ಸಮೀಕ್ಷೆಯೊಂದರ ಪ್ರಕಾರ ಎಲೆಕ್ಟ್ರಾನಿಕ್‌ ಮತಯಂತ್ರಗಳನ್ನು ಹ್ಯಾಕ್‌ ಮಾಡುವ ಕೆಲಸಕ್ಕೆ ಬಿಜೆಪಿ ಮುಂದಾಗಿದೆ. ಅಲ್ಲದೆ ಅಹಿಂದ ವರ್ಗಗಳು ಮತರಾರರು ಮತದಾನ ಪ್ರಕ್ರಿಯೆಯಿಂದ ಹಿಂದೆ ಸರಿಸುವ ಹುನ್ನಾರ ಮಾಡಲಾಗುತ್ತಿದೆ. ಅವರ ಮತದಾನ ಚೀಟಿಗಳನ್ನು ಖರೀದಿ ಮಾಡುವ ಪ್ರಕ್ರಿಯೆ ನಡೆದಿದೆ. ಇದಲ್ಲದೇ ನಕಲಿ ಶಾಯಿಯನ್ನು ಮತದಾರರ ಕೈಗೆ ಹಾಕಿ ಅವರು ಮತದಾನ ಮಾಡದಂತೆ ಮಾಡುವ ನೀಚ ಕೆಲಸಗಳನ್ನು ಮಾಡಲಾಗುತ್ತಿದೆ. ಇದರ ಬಗ್ಗೆ ಮತದಾರರು ಎಚ್ಚರಿಕೆ ವಹಿಸಬೇಕು’ ಎಂದು ಹೇಳಿದರು.

‘ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆ ರಾಷ್ಟ್ರೀಯ ದಿಕ್ಸೂಚಿಯಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡುವೆ ನಡೆಯುವ ಯುದ್ಧವಾಗಿದ್ದು ಮೋದಿ ತಂತ್ರಗಳನ್ನು ರಾಜ್ಯದ ಜನರು ಬುಡಮೇಲು ಮಾಡಲಿದ್ದಾರೆ. ಮತದಾರರು ತಮ್ಮ ಪವಿತ್ರ ಮತಗಳನ್ನು ಮಾರಾಟ ಮಾಡಿಕೊಳ್ಳದೆ ಯೋಗ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮೂಲಕ ಸ್ಥಿರ ಸರ್ಕಾರ ರಚನೆಗೆ ಅವಕಾಶ ನೀಡಬೇಕು. ಸಿದ್ದರಾಮಯ್ಯ ಅವರು ಯಾವುದೇ ಕಪ್ಪುಚುಕ್ಕೆ ಇಲ್ಲದೆ ರಾಜ್ಯದಲ್ಲಿ ಸ್ಥಿರ ಸರ್ಕಾರ ನೀಡಿದ್ದಾರೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೆ.ಆರ್. ನಗರ ಶಾಖಾ ಮಠದ ಶಿವಾನಂದಪುರಿ ಸ್ವಾಮೀಜಿ, ಶ್ರೀರಂಗಪಟ್ಟಣ ಶಾಸಕ ರಮೇಶ್‌ ಬಂಡಿಸಿದ್ದೇಗೌಡ, ಮುಖಂಡರಾದ ಗಣಿಗ ರವಿಕುಮಾರ್, ಹುಚ್ಚೇಗೌಡ, ಸುರೇಶ್, ಜೆ.ಬಿ.ಶಿವರಾಜ್, ಶ್ರೀನಿವಾಸ್, ಕೃಷ್ಣೇಗೌಡ, ಪುಟ್ಟಸ್ವಾಮಿ, ಮಹದೇವು, ಮಹೇಶ್, ಕೆ.ನಾಗರಾಜು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry