ಅಪೂರ್ಣ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ

7
ಅಂಬೇಡ್ಕರ್‌ ಭವನ; ಶೇ 20ರಷ್ಟು ಕೆಲಸ ಬಾಕಿ, ತರಾತುರಿಯಲ್ಲಿ ಚಾಲನೆ

ಅಪೂರ್ಣ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ

Published:
Updated:
ಅಪೂರ್ಣ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ

ಮಂಡ್ಯ: ಇಲ್ಲಿನ ಸುಭಾಷ್‌ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಬೇಡ್ಕರ್‌ ಭವನದ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಶೇ 20ರಷ್ಟು ಕೆಲಸ ಬಾಕಿ ಉಳಿದಿದೆ. ಅಪೂರ್ಣ ಕಟ್ಟಡವನ್ನೇ ತರಾತುರಿಯಲ್ಲಿ ಉದ್ಘಾಟಿಸಲು ಮುಂದಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಮಾರ್ಚ್‌ 12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭವನಕ್ಕೆ ಚಾಲನೆ ನೀಡಲಿದ್ದಾರೆ. ಆದರೆ, ಮುಖ್ಯ ಸಭಾಂಗಣದ ಕಾಮಗಾರಿಯೇ ಪೂರ್ಣಗೊಂಡಿಲ್ಲ. ವೇದಿಕೆಗೆ ನೆಲಹಾಸು ಹಾಕಿಲ್ಲ, ವಿದ್ಯುತ್‌ ಸಂಪರ್ಕವೂ ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಜೊತೆಗೆ ಸಭಾಂಗಣಕ್ಕೆ ಕುರ್ಚಿ ಆಳವಡಿಸಿಲ್ಲ. ಹೊರಾಂಗಣದ ಕಾಮಗಾರಿಯನ್ನು ಮುಗಿಸಿ ಜಿಲ್ಲಾ ಉಸ್ತುವಾರಿ ಸಚಿವರು ಉದ್ಘಾಟನೆಗೆ ಮುಂದಾಗಿದ್ದಾರೆ ಎಂದು ಹೋರಾಟಗಾರರು ದೂರುತ್ತಾರೆ.

‘ದಶಕದಿಂದಲೂ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಆದರೆ, ಈಗ ಸರ್ಕಾರ ತರಾತುರಿಯಲ್ಲಿ ಉದ್ಘಾಟನೆಗೆ ಮುಂದಾಗಿದೆ. ಇದರಲ್ಲಿ ಚುನಾವಣೆಯ ಉದ್ದೇಶವಲ್ಲದೆ ಮತ್ತೇನೂ ಇಲ್ಲ. ಮಂಡ್ಯ ಕ್ಷೇತ್ರದ ಶಾಸಕರಿಗೆ ಜವಾಬ್ದಾರಿ ಇಲ್ಲ. ಜವಾಬ್ದಾರಿ ಇದ್ದಿದ್ದರೆ ಅವಧಿ ಮುಗಿಯುವ ಮುನ್ನ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಾಗಿತ್ತು. ಜೊತೆಗೆ ಮಂಡ್ಯದಲ್ಲಿ ವಿರೋಧ ಪಕ್ಷಗಳೂ ಜಾಗೃತವಾಗಿಲ್ಲ. ಹೀಗಾಗಿ ಅಪೂರ್ಣ ಕಾಮಗಾರಿಗಳಿಗೆ ಉದ್ಘಾಟನಾ ಭಾಗ್ಯ ಸಿಕ್ಕಿದೆ’ ಎಂದು ಹೋರಾಟಗಾರ ಎಂ.ಬಿ.ನಾಗಣ್ಣಗೌಡ ಹೇಳಿದರು.

ಪ್ರತಿಭಟನೆ ಇಲ್ಲ: ‘ಅಂಬೇಡ್ಕರ್‌ ಭವನದ ಕಾಮಗಾರಿಗಾಗಿ ನಾವು ಹಲವು ಹೋರಾಟ ಮಾಡಿದ್ದೇವೆ. ಈಗ ಸರ್ಕಾರ ಅಪೂರ್ಣ ಕಾಮಗಾರಿಯನ್ನು ಉದ್ಘಾಟಿಸಲು ಮುಂದಾಗಿದೆ. ಮತ್ತೊಮ್ಮೆ ನಾವು ಹೋರಾಟ ಮಾಡುವುದಿಲ್ಲ. ಹೇಗೋ ಕಾಮಗಾರಿ ಒಂದು ಹಂತಕ್ಕೆ ಬಂದಿದೆ. ಸರ್ಕಾರ ಉದ್ಘಾಟನೆ ಮಾಡಿಕೊಳ್ಳಲಿ. ಆದರೆ ಏ.14ರೊಳಗೆ ಜಿಲ್ಲಾಡಳಿತ ಕಾಮಗಾರಿಯನ್ನು ಸಂಪೂರ್ಣವಾಗಿ ಮುಗಿಸಬೇಕು. ಅಂದಿನ ಅಂಬೇಡ್ಕರ್‌ ಜಯಂತಿಯನ್ನು ಭವನದಲ್ಲೇ ಆಚರಿಸುವಂತೆ ಆಗಬೇಕು’ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಘಟಕದ ಸಂಘಟನಾ ಸಂಚಾಲಕ ಎಂ.ಬಿ.ಶ್ರೀನಿವಾಸ್‌ ಹೇಳಿದರು.

‘ಸಭಾಂಗಣಕ್ಕೆ ಹವಾ ನಿಯಂತ್ರಿತ ವ್ಯವಸ್ಥೆ ಮಾಡುತ್ತಿರುವುವ ಕಾರಣ ಕಾಮಗಾರಿ ಕೊಂಚ ತಡವಾಗಿದೆ. ಎಸಿ ಕೆಲಸ ಪೂರ್ಣಗೊಳಿಸಿ, ಕುರ್ಚಿ ಅಳವಡಿಸಿದರೆ ಕಾಮಗಾರಿ ಮುಗಿಯುತ್ತದೆ’ ಎಂದು ಕಾಮಗಾರಿ ನಿರ್ಮಾಣ ಜವಾಬ್ದಾರಿ ಹೊತ್ತಿರು ನಿರ್ಮಿತಿ ಕೇಂದ್ರದ ಎಂಜಿನಿಯರ್‌ ನರೇಶ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry