ಕ್ರೀಡಾಂಗಣ ಕಾಮಗಾರಿ ಅಂತಿಮ ಹಂತಕ್ಕೆ

7
ಒಂದೇ ಸೂರಿನಡಿ ಹಲವು ಕ್ರೀಡೆಗಳಿಗೆ ಅವಕಾಶ, ಅಂತರರಾಷ್ಟ್ರೀಯ ಗುಣಮಟ್ಟದ ವಾಲಿಬಾಲ್‌ ಅಂಕಣ

ಕ್ರೀಡಾಂಗಣ ಕಾಮಗಾರಿ ಅಂತಿಮ ಹಂತಕ್ಕೆ

Published:
Updated:
ಕ್ರೀಡಾಂಗಣ ಕಾಮಗಾರಿ ಅಂತಿಮ ಹಂತಕ್ಕೆ

ಮಂಡ್ಯ: ನಗರದ ಕ್ರೀಡಾಪ್ರೇಮಿ ಗಳಿಗೊಂದು ಸಿಹಿ ಸುದ್ದಿ ಇದೆ. ಎಂಟು ವರ್ಷಗಳಿಂದ ಕುಂಟುತ್ತಾ ಸಾಗಿದ ವಿವಿಧೋದ್ದೇಶ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದ್ದು, ಇನ್ನು ಒಂದು ತಿಂಗಳಲ್ಲಿ ಕ್ರೀಡಾಪಟುಗಳ ಬಳಕೆಗೆ ಸಿಗಲಿದೆ.

ಹಲವು ಕ್ರೀಡೆಗಳನ್ನು ಒಂದೇ ಸೂರಿನಡಿ ಆಯೋಜನೆ ಮಾಡುವ ಮುನ್ನೋಟದೊಂದಿಗೆ ಕ್ರೀಡಾಂಗಣ ನಿರ್ಮಾಣವಾಗಿದೆ. ಏಕ ಕಾಲದಲ್ಲಿ 1 ಸಾವಿರ ಜನರು ಕುಳಿತು ಕ್ರೀಡೆ ವೀಕ್ಷಣೆ ಮಾಡಬಹುದಾದ ವ್ಯವಸ್ಥೆ ರೂಪಿಸಲಾಗಿದೆ. ಅಂಕಣಗಳನ್ನು ವಿವಿಧ ಕ್ರೀಡೆಗಳಿಗೆ ಬದಲಾಯಿಸಿಕೊಳ್ಳುವ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರಾಥಮಿಕವಾಗಿ ಷಟಲ್‌ ಕಾಕ್‌ ಅಂಕಣವಿದ್ದು ಅದನ್ನೇ ಕಾರ್ಕ್‌ ಬಾಲ್, ಬ್ಯಾಸ್ಕೆಟ್‌ ಬಾಲ್‌, ಟೇಬಲ್‌ ಟೆನಿಸ್‌, ಟೆನಿಸ್‌ ಬ್ಯಾಡ್ಮಿಂಟನ್‌ ಅಂಕಣವಾಗಿ ಬದಲಾಯಿಸಿ ಟೂರ್ನಿ ಆಯೋಜನೆ ಮಾಡುವಂತೆ ನಿರ್ಮಾಣ ಮಾಡಲಾಗಿದೆ.

ಅಂತರರಾಷ್ಟ್ರೀಯ ಗುಣಮಟ್ಟದ ವಾಲಿಬಾಲ್‌ ಅಂಕಣ ರೂಪಿಸಲಾಗಿದ್ದು, ಈ ಭಾಗದ ವಾಲಿಬಾಲ್‌ ಪ್ರೇಮಿಗಳಿಗೆ ಉತ್ತಮ ವೇದಿಕೆ ಆಗಲಿದೆ. ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕ ಜಿಮ್‌ ನಿರ್ಮಿಸಿದ್ದು, ದೇಹದ ಆರೋಗ್ಯ ಕಾಪಾಡಿಕೊಳ್ಳುವವರಿಗೆ ಅನುಕೂಲವಾಗಲಿದೆ. ಟೂರ್ನಿಗಳಿಗೆ ಬರುವ ಕ್ರೀಡಾಪಟುಗಳು ವಾಸ್ತವ್ಯ ಹೂಡಲು ಸೌಲಭ್ಯವುಳ್ಳ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ.

ಸುಸಜ್ಜಿತ ಶೌಚಾಲಯ ರೂಪಿಸಲಾಗಿದೆ. 2009ರಲ್ಲಿ ಒಳಾಂಗಣ ಕ್ರೀಡಾಂಗಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಲಾಗಿತ್ತು. ಅನುದಾನ ಕೊರತೆ ಸೇರಿ ಹಲವು ಕಾರಣಗಳಿಂದ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ₹ 3.3 ಕೋಟಿ ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ. ಕಾಮಗಾರಿಯನ್ನು ನಿರ್ಮಿತಿ ಕೇಂದ್ರ ಕೈಗೆತ್ತಿಕೊಂಡಿತ್ತು.

‘ಕಾಮಗಾರಿ ಶೇ 95 ಪೂರ್ಣಗೊಂಡಿದ್ದು ಅಂತಿಮವಾಗಿ ಮರದ ನೆಲಹಾಸು ಕಾಮಗಾರಿ ನಡೆಯುತ್ತಿದೆ. ವಿದ್ಯುತ್‌ ಅಳವಡಿಕೆ ಸೇರಿ ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿವೆ. ಇನ್ನೊಂದು ತಿಂಗಳಲ್ಲಿ ಕ್ರೀಡಾಂಗಣ ಆಟಗಾರರ ಕೈಗೆ ಸಿಗಲಿದೆ. ಜಿಮ್‌ಗೆ ಉಪಕರಣ ಅಳವಡಿಸುವ ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ. ಕ್ರೀಡಾಪಟುಗಳು ಮಾತ್ರವಲ್ಲದೆ ಆಸಕ್ತರು ಇದನ್ನು ಉಪಯೋಗಿಸಿಕೊಳ್ಳಬಹುದು. ನಿಗದಿತ ಶುಲ್ಕ ಪಾವತಿಸಿ ಜಿಮ್‌ಗೆ ದಾಖಲಾಗಬಹುದು’ ಎಂದು ಕ್ರೀಡಾ ಮತ್ತು ಯುವಜನ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ಬಿ.ವಿ.ನಂದೀಶ್‌ ಹೇಳಿದರು.

ತರಬೇತಿಗೂ ಅವಕಾಶ: ಬಳಕೆಯ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯ ಜಿಲ್ಲಾ ಕ್ರೀಡಾಂಗಣ ಸಮಿತಿ ನಿರ್ಧಾರ ಕೈಗೊಳ್ಳಲಿದೆ. ಖಾಸಗಿ ಕ್ರೀಡಾ ಸಂಸ್ಥೆಗಳು ಒಳಾಂಗಣ ಕ್ರೀಡಾಂಗಣದಲ್ಲಿ ಟೂರ್ನಿ ಆಯೋಜನೆ ಮಾಡಲು ಬಾಡಿಗೆ ದರವನ್ನು ಸಮಿತಿ ನಿರ್ಧರಿಸಲಿದೆ. ಷಟಲ್‌ ಕಾಕ್, ಟೇಬಲ್‌ ಟೆನಿಸ್‌, ವಾಲಿಬಾಲ್‌ ಮುಂತಾದ ಕ್ರೀಡಾ ತರಬೇತಿಯನ್ನು ತಿಂಗಳ ಶುಲ್ಕದ ಆಧಾರದ ಮೇಲೆ ಆಯೋಜನೆ ಮಾಡಲು ನಿರ್ಧರಿಸಲಾಗಿದೆ.

‘ಕ್ರೀಡೆಗಳ ತರಬೇತಿ ನೀಡಲು ಇಲಾಖೆ ವತಿಯಿಂದಲೇ ಕೋಚ್‌ಗಳನ್ನು ನೇಮಕ ಮಾಡಲಾಗುವುದು. ನಿರಂತರವಾಗಿ ಶಿಬಿರ ಆಯೋಜನೆ ಮಾಡಿ ಮಕ್ಕಳು ಹಾಗೂ ಯುವಜನರಲ್ಲಿ ಕ್ರೀಡಾಸಕ್ತಿ ಮೂಡಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದು’ ಎಂದು ನಂದೀಶ್‌ ಹೇಳಿದರು.

ನಗರದಲ್ಲಿ ಜನತಾ ಶಿಕ್ಷಣ ಸಂಸ್ಥೆ ಒಳಾಂಗಣ ಕ್ರೀಡಾಂಗಣ ನಿರ್ಮಿಸಿದೆ. ಇಲ್ಲಿ ರಾಜ್ಯ ಮಟ್ಟದ ಹಲವು ಟೂರ್ನಿಗಳು ಆಯೋಜನೆಗೊಳ್ಳುತ್ತವೆ. ಇದರ ಜೊತೆಗೆ ಅಂತರರಾಷ್ಟ್ರೀಯ ಗುಣಮಟ್ಟದ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಅಂತಿಮ ಹಂತಕ್ಕೆ ಬಂದಿರುವುದು ಕ್ರೀಡಾ ಪ್ರೇಮಿಗಳ ಹರ್ಷಕ್ಕೆ ಕಾರಣವಾಗಿದೆ.

‘ಬಡ ಮಕ್ಕಳು ಇಲ್ಲಿ ಕ್ರೀಡೆಗಳ ತರಬೇತಿ ಪಡೆಯುವ ವಾತಾವರಣ ಸೃಷ್ಟಿಯಾಗಬೇಕು. ಸರ್ಕಾರವೇ ಕ್ರೀಡಾಂಗಣ ನಿರ್ಮಿಸುತ್ತಿರುವುದು ಒಳ್ಳೆಯದು. ಸರ್ಕಾರಿ ಶಾಲೆಯಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಕ್ರೀಡೆಗಳ ತರಬೇತಿ ನೀಡಬೇಕು. ಖಾಸಗಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳಿಗೆ ಕಡಿಮೆ ಶುಲ್ಕ ನಿಗದಿ ಮಾಡಬೇಕು. ವಿದ್ಯಾರ್ಥಿಗಳು ಮಾತ್ರವಲ್ಲದೆ ಗೃಹಿಣಿಯರು, ನೌಕರರು ಹಾಗೂ ಹಿರಿಯ ನಾಗರಿಕರಿಗೂ ಒಳಾಂಗಣ ಕ್ರೀಡಾಂಗಣದಲ್ಲಿ ಅವಕಾಶ ನೀಡಬೇಕು’ ಎಂದು ಯುವ ಕ್ರೀಡಾಪಟು ಜಿ.ಎಸ್‌.ರಮೇಶ್‌ ಹೇಳಿದರು.

ಅಪೂರ್ಣ ಕಾಮಗಾರಿ: ಇಂದು ಉದ್ಘಾಟನೆ

ಒಳಾಂಗಣ ಕ್ರೀಡಾಂಗಣದಲ್ಲಿ ಇನ್ನೂ ಕೆಲ ಸಣ್ಣಪುಟ್ಟ ಕೆಲಸಗಳು ಬಾಕಿ ಉಳಿದಿವೆ. ಕಾಮಗಾರಿ ಪೂರ್ಣಗೊಳ್ಳುವುದಕ್ಕೂ ಮೊದಲೇ ಸೋಮವಾರ ಕ್ರೀಡಾಂಗಣ ಉದ್ಘಾಟನೆ ಮಾಡುತ್ತಿರುವುದು ಕ್ರೀಡಾಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

‘ಚುನಾವಣೆ ಸಂದರ್ಭದಲ್ಲಿ ಲಾಭ ಪಡೆಯಲು ಕಾಂಗ್ರೆಸ್‌ ಸರ್ಕಾರ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ತರಾತುರಿಯಲ್ಲಿ ಉದ್ಘಾಟನೆ ಮಾಡುತ್ತಿದೆ. ಇನ್ನೂ ಒಂದು ತಿಂಗಳ ಕೆಲಸ ಬಾಕಿ ಇದೆ. ಆದರೂ ರಾಜಕೀಯ ಕಾರಣ ಕ್ಕಾಗಿ ಕ್ರೀಡಾಂಗಣಕ್ಕೆ ಚಾಲನೆ ನೀಡಲಾಗುತ್ತಿದೆ’ ಎಂದು ಹೆಸರು ಹೇಳಲಿಚ್ಛಿಸದ ಕ್ರೀಡಾಪಟು ವೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry