ಬಿಜೆಪಿಗೆ ಅಧಿಕಾರ ಕೊಡಬೇಡಿ: ಸಿದ್ದರಾಮಯ್ಯ

ಶುಕ್ರವಾರ, ಮಾರ್ಚ್ 22, 2019
28 °C
ಕೆಲಸ ಮಾಡಿ ನುಡಿದಂತೆ ನಡೆದ ನಮಗೆ ಮತ ಕೊಡಿ, ಜೆಡಿಎಸ್‌ಗೆ ಬಲವಿಲ್ಲ ಎಂದ ಮುಖ್ಯಮಂತ್ರಿ

ಬಿಜೆಪಿಗೆ ಅಧಿಕಾರ ಕೊಡಬೇಡಿ: ಸಿದ್ದರಾಮಯ್ಯ

Published:
Updated:
ಬಿಜೆಪಿಗೆ ಅಧಿಕಾರ ಕೊಡಬೇಡಿ: ಸಿದ್ದರಾಮಯ್ಯ

ಕೊರಟಗೆರೆ: ಎತ್ತಿನ ಹೊಳೆ ಯೋಜನೆಯಡಿ ಕೊರಟಗೆರೆ ತಾಲ್ಲೂಕಿನ 39 ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಹೀಗಾಗಿ, ಈ ಬಾರಿ ಡಾ.ಪರಮೇಶ್ವರ್ ಅವರನ್ನು ಕ್ಷೇತ್ರದ ಜನರು ಬೆಂಬಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದರು.

ಮುಖ್ಯಮಂತ್ರಿಯಾದ ಬಳಿಕ ಇದೇ ಪ್ರಪ್ರಥಮ ಬಾರಿಗೆ ಕೊರಟಗೆರೆಗೆ ಭಾನುವಾರ ಭೇಟಿ ನೀಡಿದ ಸಿದ್ದರಾಮಯ್ಯ ಅವರು ಜನಾಶೀರ್ವಾದ ಯಾತ್ರೆ ಕಾರ್ಯಕ್ರಮ ಹಾಗೂ ಇಂದಿರಾ ಕ್ಯಾಂಟೀನ್‌ ಉದ್ಘಾಟಿಸಿ ಮಾತನಾಡಿದರು.

’ಈ ಕ್ಷೇತ್ರದ ಶಾಸಕರೇನೂ ನನ್ನನ್ನು ಈ ಯೋಜನೆಗಳ ಜಾರಿಗೆ ಕೇಳಿರಲಿಲ್ಲ. ಡಾ.ಪರಮೇಶ್ವರ್ ಅವರೇ ಈ ಕ್ಷೇತ್ರದ ಜನರ ಹಿತದೃಷ್ಟಿಯಿಂದ ಯೋಜನೆ ಮಂಜೂರಾತಿಗೆ ಕೋರಿದ್ದರು. ನಿಮ್ಮ ಬಗ್ಗೆ ಇಷ್ಟೊಂದು ಕಾಳಜಿಯುಳ್ಳ ಅವರನ್ನು ಗೆಲ್ಲಿಸಿ’ ಎಂದು ಮನವಿ ಮಾಡಿದರು.

ಬಿಜೆಪಿಯವರಿಗೆ ಸುಭದ್ರ ಸರ್ಕಾರ ಕೊಡಲು ಸಾಧ್ಯವಾಗಲಿಲ್ಲ. ಮೂರು ಮಂದಿ ಮುಖ್ಯಮಂತ್ರಿಗಳಾದರು. ಯಡಿಯೂರಪ್ಪ, ಕಟ್ಟಾ ಸುಬ್ರಮಣ್ಯ, ಕೃಷ್ಣಯ್ಯಶೆಟ್ಟಿ, ಹಾಲಪ್ಪ ಹೀಗೆ ಅನೇಕರು ಜೈಲಿಗೆ ಹೋಗಿದ್ದರು. ಈಗ ಪ್ರಧಾನಿ ನರೇಂದ್ರ ಮೋದಿ ಬಂದು ಯಡಿಯೂರಪ್ಪ ಅವರೇ ಮುಂದಿನ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಜೈಲಿಗೆ ಹೋದವರನ್ನೇ ಮುಖ್ಯಮಂತ್ರಿ ಮಾಡುತ್ತಾರಂತೆ. ಇಂತಹವರಿಗೆ ಮತ್ತೆ ಅಧಿಕಾರ ಕೊಡಬಾರದು ಎಂದು ಹೇಳಿದರು.

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಗೆ ಯಾವುದೇ ಕಾರಣಕ್ಕೂ ಜನರು ಮತ ಕೊಡಕೂಡದು. ಕರ್ನಾಟಕದ ಜನರು ಕೆಲಸ ಮಾಡಿದವರಿಗೆ ಮಾತ್ರ ಕೂಲಿ ಕೊಡುತ್ತಾರೆ. ಹೀಗಾಗಿ, ನಾವು ಕೆಲಸ ಮಾಡಿದ್ದೇವೆ. ನುಡಿದಂತೆ ನಡೆದಿದ್ದೇವೆ. ನಮ್ಮ ಪಕ್ಷಕ್ಕೆ ಮತ ಹಾಕಬೇಕು ಎಂದು ಮನವಿ ಮಾಡಿದರು.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ’ಪರಮೇಶ್ವರ್ ಗೆಲ್ಲಿಸಿ ನಿಮ್ಮ ಮನೆಗೆ ಲಕ್ಷ್ಮಿ ಬರ್ತಾಳೆ. ಕಳೆದ ಬಾರಿಯೂ ಲಕ್ಷ್ಮಿ ನಿಮ್ಮ ಮನೆಗೆ ಬರುತ್ತಿದ್ದಳು. ಬಾಗಿಲು ಮುಚ್ಚಿದ್ದರಿಂದ ಬರಲಿಲ್ಲ. ಈ ಬಾರಿ ಮತ್ತೆ ಬರುತ್ತಾಳೆ. ಹಿಂದಿನ ತಪ್ಪು ಮಾಡಬೇಡಿ’ ಎಂದು ಮಾರ್ಮಿಕವಾಗಿ ನುಡಿದರು.

‘ಬೆಂಗಳೂರಿನ ಪುಲಕೇಶಿನಗರ, ಸಿ.ವಿ.ರಾಮನ್ ಕ್ಷೇತ್ರ, ಬೆಂಗಳೂರು ಗ್ರಾಮಾಂತರ ಹೀಗೆ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಎಂದು ಡಾ.ಪರಮೇಶ್ವರ್ ಅವರಿಗೆ ಮನವಿ ಮಾಡಿದ್ದೆವು. ಆದರೆ, ಅವರು ನನ್ನ ಹೆಣ ಹೊರುವವರೂ ಅವರೇ. ಪಲ್ಲಕ್ಕಿ ಹೊರುವವರೂ ಅವರೇ ಎಂದು ಕೊರಟಗೆರೆ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ಸ್ಪರ್ಧಿಸುತ್ತಿದ್ದಾರೆ. ಕ್ಷೇತ್ರದ ಜನರು ಅವರ ನಂಬಿಕೆ ಹುಸಿಗೊಳಿಸಬಾರದು ಎಂದು ಹೇಳಿದರು.

ಸಂಸದ  ಕೆ.ಎಚ್. ಮುನಿಯಪ್ಪ ಮಾತನಾಡಿ,‘ ಕೇಂದ್ರದಲ್ಲಿನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಸಂವಿಧಾನವನ್ನೇ ಬದಲಿಸುವ ಹುನ್ನಾರ ನಡೆಸುತ್ತಿದೆ. ಇನ್ನು ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಹೇಗೆ ಜಾರಿಗೊಳಿಸುತ್ತದೆ' ಎಂದು ಪ್ರಶ್ನಿಸಿದರು.

ಸಂಸದ ಎಸ್.‍ಪಿ.ಮುದ್ದಹನುಮೇ ಗೌಡ ಮಾತನಾಡಿ,‘ಕೊರಟಗೆರೆಯಲ್ಲಿ ಸಿದ್ದರಾಮಯ್ಯ ಮತ್ತು ಡಾ.ಪರಮೇಶ್ವರ್ ಅವರಿಬ್ಬರೂ ನಾಯಕರ ಸಂಗಮ ಕಾರ್ಯಕ್ರಮ ಮಾಡುವ ಆಸೆ ಈಗ ಈಡೇರಿದೆ’ ಎಂದರು. ಸಚಿವ ಟಿ.ಬಿ.ಜಯಚಂದ್ರ, ಶಾಸಕ ಕೆ.ಎನ್.ರಾಜಣ್ಣ ಮಾತನಾಡಿದರು.

ಸಂಸದ ಚಂದ್ರಪ್ಪ, ಕೆಪಿಸಿಸಿ ಉಪಾಧ್ಯಕ್ಷ ರಾಧಾಕೃಷ್ಣ, ಮುಖಂಡರಾದ ವೆಂಕಟರಮಣಪ್ಪ, ಶಫಿ ಅಹಮದ್, ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆಂಚಮಾರಯ್ಯ, ಕೌಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ್ ಹಾಲಪ್ಪ, ಶಾಸಕ ಡಾ. ರಫೀಕ್ ಅಹಮದ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಸಿ ವೇಣುಗೋಪಾಲ್, ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಆರ್. ರಾಜೇಂದ್ರ, ಮುಖಂಡರಾದ ಪಿ.ಎನ್.ಕೃಷ್ಣಮೂರ್ತಿ, ಶಿವಮೂರ್ತಿ, ಸೋಮಣ್ಣ, ಜಿ.ಎಸ್.ರವಿಕುಮಾರ್, ವಿನಯ್, ಅಮರ್, ಲಕ್ಷ್ಮಿ ಇದ್ದರು.

ಮುಖ್ಯಮಂತ್ರಿಗೆ ಕಪ್ಪು ಬಾವುಟ ಪ್ರದರ್ಶನ

ನ್ಯಾಯಮೂರ್ತಿ ಸದಾಶಿವ ಆಯೋಗ ವರದಿ ಜಾರಿಗೆ ಆಗ್ರಹಿಸಿ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಮುಖ್ಯಮಂತ್ರಿಗೆ ಕಪ್ಪು ಬಾವುಟ ಪ್ರದರ್ಶನ ಮಾಡಿದರು.

ಮುಖ್ಯಮಂತ್ರಿ ಬರುತ್ತಿದ್ದಂತೆಯೇ ಘೋಷಣೆ ಕೂಗಿ ಪ್ರತಿಭಟನೆಗೆ ಮುಂದಾದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಬಳಿಕ ಪಾವಗಡ ಠಾಣೆಗೆ ಕರೆದೊಯ್ದರು.

ಡಿ.ಎಸ್.ಎಸ್. ಜಿಲ್ಲಾ ಘಟಕದ ಅಧ್ಯಕ್ಷ ಕೇಬಲ್ ರಘು, ಮಾದಿಗ ದಂಡೋರ ಪ್ರಧಾನ ಯುವ ಸೇನಾ ಜಿಲ್ಲಾ ಘಟಕದ ಅಧ್ಯಕ್ಷ ಜಟ್ಟಿ ಅಗ್ರಹಾರ ನಾಗರಾಜು, ಕಾರ್ಯದರ್ಶಿ ಆಟೋ ಶಿವರಾಜು, ಸೂರೇಕುಂಟೆ ಯೋಗೀಶ್, ಗಾಂಧಿರಾಜ್, ನೇಗಲಾಲ್ ಸಿದ್ದೇಶ್, ಸೀರೇಕುಂಟೆ ಮಂಜುನಾಥ್, ಪಾತಗಾಣಹಳ್ಳಿ ಸಿದ್ದಲಿಂಗಯ್ಯ ಇದ್ದರು.

ಬಂಧಿತರ ಭೇಟಿ ಮಾಡಿದ ಹುಚ್ಚಯ್ಯ

ಪಾವಗಡ:
ಕೊರಟಗೆರೆಯಲ್ಲಿ ನಡೆದ ಮುಖ್ಯಮಂತ್ರಿ ಕಾರ್ಯಕ್ರಮದಲ್ಲಿ ಸದಾಶಿವ ಆಯೋಗ ಜಾರಿ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ 12 ಮಂದಿ ದಲಿತ ಮುಖಂಡರನ್ನು ಬಂಧಿಸಿ  ಪಟ್ಟಣದ ಪೊಲೀಸ್ ಠಾಣೆಗೆ ಕರೆತರಲಾಗಿತ್ತು.

ಪಟ್ಟಣದ ಠಾಣೆಗೆ ಕರೆತಂದ ವಿಚಾರ ತಿಳಿದು ತಾಲ್ಲೂಕಿನ ವಿವಿಧ ದಲಿತ ಸಂಘಟನೆಗಳ ಮುಖಂಡರು ಠಾಣೆ ಬಳಿ ಸೇರಿ ಘಟನೆಯನ್ನು ಖಂಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ವೈ.ಎಚ್. ಹುಚ್ಚಯ್ಯ ಪೊಲೀಸ್ ಠಾಣೆಗೆ ಭೇಟಿ ನೀಡಿ ವಿಚಾರಿಸಿದರು. ’ಪ್ರತಿಭಟನೆಯನ್ನು ಪೊಲೀಸರು  ದೌರ್ಜನ್ಯದಿಂದ ಹತ್ತಿಕ್ಕುವ ಯತ್ನ ಮಾಡಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಎಸ್ಪಿ ಮುಖಂಡ ಮಂಜುನಾಥ್, ಸಿ.ಕೆ.ತಿಪ್ಪೇಸ್ವಾಮಿ, ಟಿ.ಎನ್.ಪೇಟೆ ರಮೇಶ್, ಹನುಮಂತರಾಯ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry