ಕಚ್ಚಾಟದಿಂದಲೇ ದೂರವಾಗುವ ಲಿಂಗಾಯತರು

ಗುರುವಾರ , ಮಾರ್ಚ್ 21, 2019
27 °C
ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಮಟ್ಟದ ಸಮಾವೇಶ

ಕಚ್ಚಾಟದಿಂದಲೇ ದೂರವಾಗುವ ಲಿಂಗಾಯತರು

Published:
Updated:
ಕಚ್ಚಾಟದಿಂದಲೇ ದೂರವಾಗುವ ಲಿಂಗಾಯತರು

ತುಮಕೂರು: ‘ಹೈದರಾಬಾದ್ ನಿಜಾಮ ಸಾಯುವಾಗ ತನ್ನ ಮಗನಿಗೆ ಈ ಭಾಗದಲ್ಲಿ ಬ್ರಾಹ್ಮಣರು ಕಡಿಮೆ ಇದ್ದಾರೆ ಎಚ್ಚರದಿಂದ ಇರಬೇಕು. ಲಿಂಗಾಯತರು ಹೆಚ್ಚಿದ್ದಾರೆ ಯೋಚನೆ ಮಾಡಬೇಡ ಎಂದು ಹೇಳಿದ. ಆಗ ಮಗ ಕಾರಣ ಕೇಳಿದ. ಲಿಂಗಾಯತರು ಅವರವರೇ ಕಚ್ಚಾಡಿ ಹೊಡೆದಾಡಿ ಸಾಯುವರು ಎಂದು ನಿಜಾಮ ಉತ್ತರಿಸಿದ. ಅದರಂತೆಯೇ ಇಂದು ಲಿಂಗಾಯತರು ಕಿತ್ತಾಡುತ್ತಿದ್ದಾರೆ’ ಎಂದು ಸಿದ್ಧಗಂಗಾ ಮಠದ ಸಿದ್ದಲಿಂಗ ಸ್ವಾಮೀಜಿ ನುಡಿದರು.

ಸಿದ್ಧಗಂಗಾ ಮಠದಲ್ಲಿ ಭಾನುವಾರ ವೀರಶೈವ ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ 9ನೇ ಸಮಾವೇಶ ಹಾಗೂ ಶಿವಕುಮಾರ ಸ್ವಾಮೀಜಿ ಅವರಿಗೆ 111ನೇ ವರ್ಷದ ಗುರುವಂದನೆ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.

ಮೊದಲು ಲಿಂಗಾಯತರು ಎದೆಯ ಮೇಲೆ ಲಿಂಗವನ್ನು ಧರಿಸುವ ಸಂಸ್ಕಾರವನ್ನು ಬೆಳೆಸಿಕೊಳ್ಳಬೇಕು. ನಮ್ಮ ಸಂಸ್ಕಾರಗಳನ್ನು ಆಚರಿಸಬೇಕಾದುದು ಕರ್ತವ್ಯ ಎಂದರು.

ಸಮಾರಂಭ ಉದ್ಘಾಟಿಸಿದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶಿವಕುಮಾರ ಸ್ವಾಮೀಜಿ ಅವರಿಗೆ ಗುರುವಂದನೆ ಸಲ್ಲಿಸಬೇಕಾದುದು ಸಮಾಜದ ಕರ್ತವ್ಯ ಎಂದರು.

ಸಮಾಜದ ಎಲ್ಲ ಧರ್ಮದ ಮಕ್ಕಳಿಗೆ ಶಿಕ್ಷಣ, ಅನ್ನ ನೀಡುತ್ತಿರುವ ಶಿವಕುಮಾರ ಸ್ವಾಮೀಜಿ ಮಹಾ ಪುರುಷರು. ಶ್ರೀಗಳು ಲಕ್ಷಾಂತರ ಭಕ್ತರನ್ನು ಸನ್ಮಾರ್ಗದಲ್ಲಿ ನಡೆಸುತ್ತಿದ್ದಾರೆ. 110 ವರ್ಷಗಳ ಸಾರ್ಥಕ ಜೀವನ ಪೂರ್ಣಗೊಳಿಸುತ್ತಿದ್ದಾರೆ ಎಂದು ಹೇಳಿದರು.

‘ಸಂಘದ ಕೇಂದ್ರ ಕಚೇರಿ ನಿರ್ಮಾಣಕ್ಕೆ ನಿವೇಶನ ಕೇಳಿದ್ದೀರಿ. ನಿಮ್ಮ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಶಕ್ತಿಯನ್ನು ನನಗೆ ಕೊಡಿ. ನಾನು ನಿಮ್ಮ ಜತೆಯಲ್ಲಿ ಇದ್ದೇನೆ’ ಎಂದರು.

ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಮಾತನಾಡಿ, ’ವೀರಶೈವ ಲಿಂಗಾಯತ ಮಠಗಳು ರಾಜ್ಯದಲ್ಲಿ ಶಿಕ್ಷಣ ಸಂಸ್ಥೆ, ವಸತಿ ನಿಲಯಗಳನ್ನು ಆರಂಭಿಸುವ ಮೂಲಕ ಎಲ್ಲರನ್ನೂ ವಿದ್ಯಾವಂತರನ್ನಾಗಿ ಮಾಡಿವೆ’ ಎಂದರು.

‘ಸಿದ್ಧಗಂಗೆ, ಸುತ್ತೂರು, ಸಿರಿಗೆರೆ, ಮುರುಘರಾಜೇಂದ್ರ ಮಠ ಹೀಗೆ ಎಲ್ಲ ಮಠಗಳು ಸಮಾಜದ ಉದ್ಧಾರಕ್ಕೆ ಶ್ರಮಿಸುತ್ತಿವೆ. ನಮ್ಮ ಸಮಾಜದಲ್ಲಿ ಒಡಕು ಉಂಟಾಗಬಾರದು. ಎಲ್ಲರೂ ಒಗ್ಗಟ್ಟಾಗಿ ಇದ್ದೇವೆ ಎನ್ನುವುದನ್ನು ತೋರಿಸಬೇಕಾಗಿದೆ’ ಎಂದು ಹೇಳಿದರು.

ನಿವೃತ್ತ ಜಿಲ್ಲಾಧಿಕಾರಿ ಸಿ.ಸೋಮಶೇಖರ್ ಮಾತನಾಡಿ, ’ರಾಜ್ಯದಲ್ಲಿ ಸಮುದಾಯದ ಡಿಂಡಿಮವನ್ನು ಬಾರಿಸಬೇಕಾಗಿದೆ. ಶರಣರು ಕೊಟ್ಟ ಸಂವಿಧಾನವನ್ನು ಯಾರಿಂದಲೂ ತಿದ್ದುಪಡಿ ಮಾಡಲು ಸಾಧ್ಯವಿಲ್ಲ. ಸರ್ಕಾರದಲ್ಲಿ ಒಂದೆರೆಡು ಸಮುದಾಯಗಳಿಗೆ ಮಾತ್ರ ಮನ್ನಣೆ ಸಿಗುತ್ತಿದೆ’ ಎಂದು ದೂರಿದರು.

‘ಸರ್ಕಾರಿ ನೌಕರರಿಗೆ ಮಿತಿಗಳಿವೆ. ಆದರೆ ಮುಂದಿನ ಸರ್ಕಾರ ರಚನೆಯಲ್ಲಿ ನೀವು ಪ್ರಮುಖ ಪಾತ್ರ ವಹಿಸಬೇಕು. ಯಡಿಯೂರಪ್ಪ ಅವರ ಕೈ ಬಲಪಡಿಸಬೇಕು’ ಎಂದು ಅವರು ಹೇಳಿದರು.

ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಎ.ಎಂ.ಶಿವಶಂಕರ್ ಮಾತನಾಡಿ, ’ಈ ಹಿಂದಿನ ವಿಧಾನಸಭಾ ಚುನಾವಣೆಗಳಲ್ಲಿ ಸಮುದಾಯದ ಹೆಚ್ಚು ಶಾಸಕರು ಆಯ್ಕೆಯಾಗುತ್ತಿದ್ದರು. ಈಗ ಆ ಸಂಖ್ಯೆ ಕಡಿಮೆ ಆಗಿದೆ. ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಶಾಸಕರನ್ನು ಗೆಲ್ಲಿಸಿಕೊಳ್ಳಲು ಮುಂದಾಗಬೇಕು’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ವಿ.ಸೋಮಣ್ಣ, ಬಿಜೆಪಿ ಮುಖಂಡ ಜಿ.ಎಸ್.ಬಸವರಾಜು, ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಬಿ.ನಿರಂಜನ್ ಮಾತನಾಡಿದರು.

ಪದನೋನ್ನತಿ ಹೊಂದಿದ ಐಎಎಸ್, ಐಪಿಎಸ್ ಅಧಿಕಾರಿಗಳು, ವಾಣಿಜ್ಯ ತೆರಿಗೆ ಇಲಾಖೆಗೆ ಆಯ್ಕೆಯಾದವರನ್ನು ಸನ್ಮಾನಿಸಲಾಯಿತು. ಜಿಲ್ಲಾ ಘಟಕಗಳ ಅಧ್ಯಕ್ಷರನ್ನು ಗೌರವಿಸಲಾಯಿತು. ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ, ವೀರಶೈವ ಮಹಾಸಭೆ ಉಪಾಧ್ಯಕ್ಷ ಬಿ.ಎಸ್.ಸಚ್ಚಿದಾನಂದಮೂರ್ತಿ, ಜಿಲ್ಲಾ ಪಂಚಾಯಿತಿ ಸದಸ್ಯ ಮರಿಸ್ವಾಮಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಜ್ಯೋತಿ ಗಣೇಶ್, ಸರ್ಪಭೂಷಣ ಮಠ ಟ್ರಸ್ಟ್ ಅಧ್ಯಕ್ಷ ಕೆ.ಎನ್.ಜಯಲಿಂಗಪ್ಪ, ನಿವೃತ್ತ ಐಎಫ್‌ಎಸ್ ಅಧಿಕಾರಿ ಸದಾಶಿವಯ್ಯ ವೇದಿಕೆಯಲ್ಲಿ ಇದ್ದರು.

ಸಿದ್ದಲಿಂಗ ಸ್ವಾಮೀಜಿ ಬೇಸರ

ಸಾನ್ನಿಧ್ಯವಹಿಸಿದ್ದ ಸಿದ್ದಲಿಂಗ ಸ್ವಾಮೀಜಿ ಅವರು ಮಾತನಾಡುವ ವೇಳೆಗೆ ಸಭಾಂಗಣ ಖಾಲಿಯಾಗಿತ್ತು. ಇದನ್ನು ಸ್ವಾಮೀಜಿ ತಮ್ಮ ಭಾಷಣದ ಆರಂಭದಲ್ಲಿಯೇ ಪ್ರಸ್ತಾಪಿಸಿದರು. ಅವರು ಮಾತು ಮುಂದುವರಿಸಿರುವಂತೆಯೇ ವೇದಿಕೆಯ ಮುಂಭಾಗ ಜನರು ಅತ್ತಲಿಂದ ಇತ್ತ ಇತ್ತಲಿಂದ ಅತ್ತ ಓಡಾಡುತ್ತಿದ್ದರು. ವೇದಿಕೆಯ ಮೇಲೆ ಜನರು ಸಾಲುಗಟ್ಟಿದ್ದರು. ಯಡಿಯೂರಪ್ಪ ಅವರ ಜತೆ ಸೆಲ್ಫಿ, ಫೋಟೊ ತೆಗೆಸಿಕೊಳ್ಳುತ್ತಿದ್ದರು.

‘ಪದಾಧಿಕಾರಿಗಳು ಅಶಿಸ್ತಿನಿಂದ ವರ್ತಿಸುತ್ತಿದ್ದೀರಿ. ಇಂತಹ ಅಶಿಸ್ತಿನ ಕಾರಣಕ್ಕಾಗಿಯೇ ನಮ್ಮ ಸಮಾಜದಲ್ಲಿ ಒಡಕು ಉಂಟಾಗಿದೆ. ಇನ್ನು ಮುಂದೆ ನೀವು ಕಾರ್ಯಕ್ರಮ ಮಾಡಿದರೆ ನನ್ನ ಕರೆಯಬೇಡಿ’ ಎಂದು ಸ್ವಾಮೀಜಿ ಕಠಿಣವಾಗಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry