ಕೋಳಿಗಳ ರಾಜ ಗಿರಿರಾಜ

ಮಂಗಳವಾರ, ಮಾರ್ಚ್ 26, 2019
22 °C

ಕೋಳಿಗಳ ರಾಜ ಗಿರಿರಾಜ

Published:
Updated:
ಕೋಳಿಗಳ ರಾಜ ಗಿರಿರಾಜ

‘ನಮ್ಮ ಊರಿನ ಹೊಸ ಕೋಳಿಯನ್ನು ಪರಿಚಯ ಮಾಡಾಕ ಧಾರವಾಡಕ್ಕ ಹೋಗ್ಯಾರೀ...’

ಧಾರವಾಡ ಜಿಲ್ಲೆಯ ಮಿಶ್ರಿಕೋಟಿ ಗ್ರಾಮದ ಅಬ್ದುಲ್‌ ಬಾನಿ ಅವರ ಭೇಟಿಗೆ ಹೋದಾಗ ಅವರ ಮನೆಯವರು ಕೊಟ್ಟ ಉತ್ತರ ಇದಾಗಿತ್ತು. ಈ ಊರಿನಲ್ಲಿ ಕೆಲ ರೈತರು, ನಿರಂತರ ಆದಾಯದ ಮೂಲ ಕಂಡುಕೊಳ್ಳಲು ತಮ್ಮ ಹೊಲಗಳಲ್ಲಿ ಕೋಳಿ ಫಾರಂ ನಿರ್ಮಿಸಿದ್ದಾರೆ. ಬಾಯ್ಲರ್ ಕೋಳಿಗಳನ್ನು ಬೆಳೆಸಿ ಮಾರಾಟ ಮಾಡುತ್ತಿದ್ದಾರೆ. ಬಾಯ್ಲರ್‌ ಕೋಳಿಗಳ ಕಲರವವೇ ಹೆಚ್ಚಾಗಿರುವ ಈ ಗ್ರಾಮದಲ್ಲಿ ಅಬ್ದುಲ್‌ ಅವರು ಗಿರಿರಾಜ ತಳಿಯ ಕೋಳಿಯ ಕೊಕ್ಕಕ್ಕೊ ನಿನಾದ ಕೇಳುವಂತೆ ಮಾಡಿದ್ದಾರೆ.

ಮೊದಲು ಮನೆಯಲ್ಲೇ ಗಿರಿರಾಜ ಕೋಳಿಗಳನ್ನು ಸಾಕಾಣಿಕೆ ಮಾಡಿದ ಅಬ್ದುಲ್‌, ವರ್ಷದ ಹಿಂದೆ ಧಾರವಾಡದ ಪಶುಪಾಲನಾ ಹಾಗೂ ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ನಡೆಸಿದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಕೋಳಿ ಸಾಕಾಣಿಕೆ ತರಬೇತಿಯನ್ನು ಪಡೆದಿದ್ದಾರೆ.

ಮೊಟ್ಟಮೊದಲು 20 ಗಿರಿರಾಜ ಕೋಳಿ ಮರಿಗಳನ್ನು ತಂದು, ಸಾಕತೊಡಗಿದ ಅವರು, ಕೆಲವೇ ವಾರಗಳಲ್ಲಿ ಅವುಗಳ ಸಂಖ್ಯೆಯನ್ನು ಐವತ್ತಕ್ಕೆ ಹೆಚ್ಚಿಸಿಕೊಂಡರು. ಮರಿಗಳು ಬೆಳೆದು ದೊಡ್ಡವಾದಾಗ ಸುತ್ತಲಿನ ಹಳ್ಳಿಗಳಿಗೂ ಮಾರಾಟ ಮಾಡಿದರು. ಸುಮಾರು 14 ಕೆ.ಜಿ ತೂಕದ ಈ ತಳಿಯ ಕೋಳಿಯನ್ನು ನೋಡಿ ಗ್ರಾಮದ ಜನರೂ ನಿಬ್ಬೆರಗಾಗಿದ್ದರು.

ಅಬ್ದುಲ್‌ ಅವರು ದೊಡ್ಡ ಪ್ರಮಾಣದಲ್ಲಿ ಗಿರಿರಾಜ ಕೋಳಿಮರಿಗಳನ್ನು ಸಾಕಲು ನಿರ್ಧರಿಸಿದ್ದು, ಈಗ ಫಾರಂ ನಿರ್ಮಿಸುತ್ತಿದ್ದಾರೆ. ಮೊಟ್ಟೆ, ಮಾಂಸ ಎರಡಕ್ಕೂ ಗಿರಿರಾಜ ಕೋಳಿಯನ್ನು ಜನ ಇಷ್ಟಪಡುತ್ತಿದ್ದಾರೆ. ನಾಟಿಕೋಳಿಯ ಹಾಗೆಯೇ ಇದರ ರುಚಿ ಇರುತ್ತದೆ. ಸಾಮಾನ್ಯವಾಗಿ ಈ ಕೋಳಿಗಳು ಸಹ ನಾಟಿ ಕೋಳಿಗಳ ಹಾಗೆ ಸಿಕ್ಕಿದ್ದನ್ನು ತಿಂದು ಬೆಳೆಯುತ್ತವೆ. ಮನೆಯ ಹೊರಗಡೆ ಆಹಾರ ತಿನ್ನಲು ಬಿಡಬಹುದಾಗಿದೆ. ಇದೇ ಆಹಾರವನ್ನು ನೀಡಬೇಕೆಂಬ ನಿಯಮವಿಲ್ಲ.

ಹೊರಗೆ ಆಹಾರ ತಿನ್ನಲು ಬಿಟ್ಟರೆ ಇವುಗಳನ್ನು ಕಾವಲು ಕಾಯಲು ಒಬ್ಬ ವ್ಯಕ್ತಿ ಬೇಕಾಗುತ್ತದೆ. ಇಲ್ಲವಾದರೆ ನಾಯಿ, ಮುಂಗುಸಿ ಇವುಗಳನ್ನು ಹಿಡಿದು ತಿನ್ನುತ್ತವೆ. ಮರಿ ತೆಗೆದುಕೊಂಡು ಬಂದು ಐದು ತಿಂಗಳ ನಂತರ ಈ ಕೋಳಿಗಳು ಮೊಟ್ಟೆ ಇಡಲು ಪ್ರಾರಂಭಿಸುತ್ತವೆ. ಸುಮಾರು ನೂರರಿಂದ ನೂರೈವತ್ತು ಮೊಟ್ಟೆಗಳ ಇಡುವ ಈ ಕೋಳಿಗಳು 10 ಕೆ.ಜಿಯಿಂದ 15 ಕೆ.ಜಿಯವರೆಗೆ ತೂಗುತ್ತವೆ. 7 ಕೆ.ಜಿ ತೂಕ ಹೊಂದಿದ ಹುಂಜವನ್ನು 800 ರೂಪಾಯಿವರೆಗೆ ಮಾರಾಟ ಮಾಡಲಾಗಿದೆ.

(ಅಬ್ದುಲ್)

ಹೈದರಾಬಾದ್‌ನಿಂದ ತರಿಸಿದ ರಾಜಶ್ರೀ ತಳಿಯ ಕೋಳಿಗಳು ಇವರಲ್ಲಿವೆ. ತಮ್ಮ ಹೊಲದಲ್ಲಿ ಬೆಳೆದ ಜೋಳ, ಗೋವಿನ ಜೋಳ, ಭತ್ತವನ್ನು ಇವುಗಳಿಗೆ ಆಹಾರವಾಗಿ ನೀಡುತ್ತಿದ್ದಾರೆ.

‘ನಮ್ಮ ಮನೆಯಲ್ಲಿ ಮುಂಚಿನಿಂದಲೂ ನಾಟಿ ಕೋಳಿ ಸಾಕಾಣಿಕೆ ಮಾಡುತ್ತಿದ್ದೆವು. ಅವುಗಳ ಬಗ್ಗೆ ನಮಗೆ ಮಾಹಿತಿ ಮೊದಲೇ ಇತ್ತು. ಗಿರಿರಾಜ ಕೋಳಿಯ ಸಾಕಾಣಿಕೆ ಮಾಡುವುದು ತುಂಬಾ ಸುಲಭ ಅನಿಸಿತು.

ಈ ಕೋಳಿಗಳನ್ನು ಬೆಳೆಸುವುದು, ಲಾಭ ಜಾಸ್ತಿ. ಮನೆಯ ಹತ್ತಿರ ಸ್ವಲ್ಪ ಜಾಗವಿದ್ದರೂ ಸಾಕಾಣಿಕೆ ಮಾಡಬಹುದು’ ಎನ್ನುತ್ತಾರೆ ಅಬ್ದುಲ್‌.

ನಾಟಿ ಕೋಳಿ ಮತ್ತು ಗಿರಿರಾಜ ತಳಿ ನಡುವಿನ ವ್ಯತ್ಯಾಸ­ವೆಂದರೆ ಗಿರಿರಾಜ ಬೇಗ ಮಾಂಸ ಕಟ್ಟುತ್ತದೆ. ಹೀಗಾಗಿ ಈ ಕೋಳಿಯನ್ನು ಚಿಕನ್‌ ಬೋಂಡಾ ಎಂದು ಕರೆಯುತ್ತಾರೆ. ಆದ್ದರಿಂದ ಇದರ ಸಾಕಣೆಗೆ ಹೆಚ್ಚು ಒಲವು ವ್ಯಕ್ತವಾಗುತ್ತಿದೆ. 40 ವಾರಗಳಲ್ಲಿ ಹೆಣ್ಣು ಕೋಳಿ 3ರಿಂದ 3.5 ಕೆ.ಜಿ ಹಾಗೂ ಗಂಡು ಕೋಳಿ (ಹುಂಜ) 4ರಿಂದ 5 ಕೆ.ಜಿ. ತೂಕವಿರುತ್ತದೆ. ಈ ಕೋಳಿ ಇಡುವ ಮೊಟ್ಟೆ ಸರಾಸರಿ 55 ಗ್ರಾಂ ತೂಗುತ್ತದೆ. ಒಂದು ಮೊಟ್ಟೆಯ ದರ ₹ 10 ಇದೆ.

ಸುಮಾರು ಹತ್ತು ವರ್ಷಗಳ ಹಿಂದೆ ಕರ್ನಾಟಕ ಪಶುಸಂಗೋಪನೆ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಈ ಗಿರಿರಾಜ ತಳಿಯನ್ನು ಅಭಿವೃದ್ಧಿಪಡಿಸಿದೆ.

‘ಈ ಕೋಳಿಗಳು ಹುಳು–ಹುಪ್ಪಟೆಗಳನ್ನು ತಿನ್ನುವುದರಿಂದ ನಮ್ಮ ಸುತ್ತಲಿನ ಪರಿಸರ ಕೂಡ ಶುಚಿಯಾಗಿದೆ’ ಎನ್ನುತ್ತಾರೆ ಗ್ರಾಮೀಣ ಭಾಗದ ಈ ಕುಕ್ಕುಟೋದ್ಯಮಿ. ಹಕ್ಕಿ ಜ್ವರದಂತಹ ಯಾವ ರೋಗಗಳಿಗೂ ಇವುಗಳು ಸುಲಭವಾಗಿ ತುತ್ತಾಗುವುದಿಲ್ಲ ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 12

  Happy
 • 2

  Amused
 • 1

  Sad
 • 3

  Frustrated
 • 1

  Angry