ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯ್ಕಳಕ ಬಯಲಾಟ

Last Updated 12 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ನೋಡೋಕೆ ಅದು ಥೇಟ್‌ ಬೆಳ್ಳಕ್ಕಿಗಳಂತೆಯೇ ಇದೆ. ಕಡ್ಡಿ ಕಡ್ಡಿ ಕಾಲು ಅಗಲಿಸಿ, ಎತ್ತರದಲ್ಲಿ ಮೂತಿ ತಿರುಗಿಸಿಕೊಂಡು ನಿಂತಿರುತ್ತದೆ. ಕಾಲ ಕೆಳಗಿನ ನೀರು ಸರಸರನೇ ಸರಿದು ಹೋಗುತ್ತಿದ್ದರೂ ಲೆಕ್ಕಿಸದೆ, ಸೆಕೆಂಡಿನ ನೂರನೇ ಒಂದು ಭಾಗದಷ್ಟು ವೇಗದಲ್ಲಿ ನೀರಿನಾಳದಲ್ಲೆಲ್ಲೋ ಕದಲುವ ಬೇಟೆಯನ್ನು ಗಬಕ್ಕನೆ ಕೊಕ್ಕಿಗೆ ಸಿಕ್ಕಿಸಿಕೊಂಡು ಬಿಡುತ್ತದೆ!

ಸುತ್ತಲೂ ನೀರು ಸಿಡಿಸುತ್ತಾ, ಕಟಕ್ಕೆಂದು ಅಷ್ಟು ದೂರದವರೆಗೆ ಕೇಳಿಸುವಂತೆ, ಏಡಿ, ಶಂಖದ ಹುಳುವನ್ನು ಅಡಿಕೆ ಕತ್ತರಿಸುವಂತೆ ಕತ್ತರಿಸುತ್ತಾ ನಿಲ್ಲುವ ಈ ಕೊಕ್ಕರೆಯೇ ಬಾಯ್ಕಳಕ. ಬಾಯಿ ಮುಚ್ಚಿದ್ದರೂ ಮಧ್ಯದಲ್ಲಿ ತೆರೆದೇ ಇರುತ್ತದೆ. ಹಾಗಾಗಿಯೇ ಈ ಕೊಕ್ಕರೆಗೆ ಆ ಹೆಸರು. ಅಡಿಕೆ ಕತ್ತರಿಸುವ ಅಲಗಿನಂತೆ ಅದರ ಬಾಯಿ ಇದೆ. ಅಲ್ಲೇ ಬೇಟೆಯನ್ನು ಕಟಮ್ಮನೆ ಕತ್ತರಿಸಿ ಶಬ್ದ ಹೊರಡಿಸುತ್ತದೆ.

ವೈಯಾರ ಮಾಡುತ್ತ ಹತ್ತಿರದ ಕಂಟಿಯ ಎತ್ತರದ ಭಾಗದಲ್ಲಿ ಆಗಸಕ್ಕೆ ಮುಖ ಮಾಡಿ ನಿಲ್ಲುವ ಬಾಯ್ಕಳಕ, ಇತ್ತೀಚಿನ ದಿನದಲ್ಲಿ ಶೀಘ್ರವಾಗಿ ನಶಿಸುತ್ತಿರುವ ವಲಸೆ ಹಕ್ಕಿಗಳ ಪ್ರಭೇದದಲ್ಲಿ ಸೇರ್ಪಡೆಯಾಗಿದೆ.

ಬೇಟೆಗಾಗಿ ನೀರ ಮೇಲೆ ನಿಶ್ಚಲವಾಗಿ ನಿಲ್ಲುವ, ಆಗಸದಲ್ಲಿ ಉರುಳುರುಳಿ ಬೀಳುವ ಮೋಡಿ ಮತ್ತು ಅದರ ವೇಗ ಕ್ಯಾಮೆರಾಕ್ಕೆ ದಕ್ಕುವಂತಹದ್ದಲ್ಲ. ಸರಕ್ಕನೆ ನೀರಿಗಿಳಿದು ಹುಳು, ಹುಪ್ಪಡಿ ಎತ್ತಿ ತಂದು ಮೈಮೇಲಿನ ನೀರು ಆರುವ ಮೊದಲೇ ‘ಕಟ್.. ಕಟ್‍.. ಕಟಂ...’ ಎನ್ನುವ ಶಬ್ದ ಹೊರಡಿಸುತ್ತದೆ. ಆಗ ಈ ಪಕ್ಷಿಯ ಬಯಲಾಟ ನೋಡಲು ಮರೆಯಲ್ಲೆಲ್ಲೋ ನೆರೆದವರು ಯಾವುದೋ ಏಡಿಯ/ ಶಂಖುವಿನ ಆಯಸ್ಸು ಮುಗಿಯಿತೆಂದೇ ಲೆಕ್ಕ ಹಾಕುತ್ತಾರೆ. ಆಮೆಯ ಕವಚವನ್ನೂ ಕತ್ತರಿಸುವ ಶಕ್ತಿ ಇದಕ್ಕಿದೆಯಂತೆ.

ದೂರದ ಬರ್ಮಾ, ಫಿನ್‌ಲ್ಯಾಂಡ್‌, ಇಂಡೋನೇಷ್ಯಾ, ಥಾಯ್ಲೆಂಡ್, ಪಾಕಿಸ್ತಾನದಿಂದ ನಮ್ಮ ಕರಾವಳಿಗೆ ಬಂದು, ತನ್ನ ಬಸಿರು–ಬಾಣಂತನ ಮುಗಿಸಿಕೊಂಡು ಸದ್ದಿಲ್ಲದೆ ಮೂರ್ನಾಲ್ಕು ಸಾವಿರ ಕಿ.ಮೀ. ಹಾರಿ ಹೋಗುವ ಅಪರೂಪದ ಕೊಕ್ಕರೆ ಜಾತಿಯ ಪಕ್ಷಿ ಇದು. ಮಜಾ ಅಂದರೆ ಜೊತೆಗಿರುವ ನಮ್ಮೂರ ಕೊಕ್ಕರೆಗಳ ಜತೆ ‘ಗುಂಪಿನಲ್ಲಿ ಗೋವಿಂದ’ ಆಗುವ ಇವುಗಳು, ಅವುಗಳ ಅರಿವಿಗೆ ಬಾರದಂತೆ ಗುಂಪಲ್ಲೇ ತಂತಮ್ಮ ಪಾಡಿಗೆ ತಾವಿದ್ದು ಕೆಲಸ ಮುಗಿಸಿಕೊಳ್ಳುತ್ತವೆ. ಈ ಬಾಯ್ಕಳಕಗಳಿಗೆ ಈಗ ಜೀವ ಭಯ ಮತ್ತು ಸಂತ್ರಸ್ತರಾಗುವ ಭೀತಿ.

ತಮ್ಮ ಜೀವ ಸಂತತಿ ಅಪಾಯದ ಸ್ಥಿತಿಯಲ್ಲಿರುವಾಗ ಪ್ರತಿಜೀವಿಯೂ ಮಾಡುವ ಮೊದಲ ಕೆಲಸ ವಾಸ್ತವ್ಯ ಬದಲಿಸುವುದು; ದೂರ ಎಷ್ಟಾದರೂ ಸರಿ. ಬದುಕಿನ ಕಾಳಜಿ ಎಂಥ ಪರಿಸ್ಥಿತಿಯಲ್ಲೂ ಜಾಗೃತವಾಗುತ್ತದೆ. ಹಾಗೆಯೇ ಈ ಬಾನಾಡಿಗಳು ಎರಡು ವರ್ಷಗಳಿಂದ ಕರಾವಳಿ ಕಾವಲಿರುವ ಸಹ್ಯಾದ್ರಿಯ ಈ ಹಸಿರು ಗೂಡಿಗೆ ಬರುತ್ತಿವೆ.

ಅಪ್ಪಟ ಕೊಕ್ಕರೆ, ಆದರೆ ಕೊಕ್ಕರೆಗಿಂತ ವಿಭಿನ್ನ ಚಹರೆಯನ್ನು ಹೊಂದಿರುವ, ಸೂಕ್ಷ್ಮವಾಗಿ ಗಮನಿಸಿದರೆ ಕಾಣಿಸುವ ಗಾಢ ಕಪ್ಪುವರ್ಣಗಳ ಸಂಕೀರ್ಣ ಮಿಶ್ರಣ ಈ ಬಾಯ್ಕಳಕವನ್ನು ಭಿನ್ನವಾಗಿ ನಿಲ್ಲಿಸುತ್ತದೆ. ಸರಿಯಾಗಿ ಪಾಲು ಮಾಡಿದಂತೆ ಇರುವ ಅದರ ಪುಕ್ಕಗಳು, ಗೇಣು ಹಾಕಿ ಎಣಿಸಿದಂತೆ ಅರ್ಧಕ್ಕೆ ಮಡಚಿಕೊಳ್ಳುವ ಕಾಲುಗಳು, ಕೊಕ್ಕಿನಷ್ಟೇ ಮಧ್ಯದಲ್ಲಿ ಉಳಿದುಬಿಡುವ, ಅಂತರದಿಂದ ಬಾಯ್ತೆರೆದೇ ಇರುವ ಇದರ ಭಂಗಿ, ಎಲ್ಲಕ್ಕಿಂತ ಮುಖ್ಯ ದೇಹಕ್ಕಿಂತ ದೊಡ್ಡ ಬಲಶಾಲಿ ರೆಕ್ಕೆಗಳು, ಕುತ್ತಿಗೆಯವರೆಗಿನ ಮೂರು ಸೂಕ್ಷ್ಮ ಪದರದ ತುಪ್ಪಳಗಳು ಇದನ್ನು ಠೀವಿಯಿಂದ ಎದ್ದು ನಿಲ್ಲುವಂತೆ ಮಾಡಿದೆ.

ಎರಡಡಿ ಎತ್ತರದ, ಶಕ್ತಿಶಾಲಿ ರೆಕ್ಕೆಗಳ ಬಾಯ್ಕಳಕ, ‘ಏಷ್ಯನ್ ಓಪನ್ ಬಿಲ್ ಸ್ಟಾರ್ಕ್’ ಎಂದೇ ಗುರುತಿಸಲ್ಪಡುತ್ತಿದೆ. ಸದಾಕಾಲ ಗುಂಪಿನಲ್ಲಿ ಇರುವ ಇದು, ಎತ್ತರದ ಮರದ ಮೇಲುಗಡೆಯಲ್ಲೇ ವಾಸಿಸುತ್ತದೆ. ಅಲ್ಲೇ ಮರದ ತೊಗಟೆ ಮತ್ತು ಎಲೆಯ ಮರೆಯಲ್ಲಿ ಅದೇ ರೀತಿಯ ‘ಕ್ಯಾಮೋಫ್ಲಾಜಿಕ್’ ಗೂಡು ಕಟ್ಟುವ ಕ್ರಿಯೆಯಿಂದಾಗಿ ಹೊರ ಜಗತ್ತಿಗೆ ಸಂತಾನೋತ್ಪತ್ತಿ ಅಷ್ಟಾಗಿ ಕಾಣ ಸಿಗುವುದಿಲ್ಲ.

ಒಮ್ಮೆಗೆ ಎರಡರಿಂದ ನಾಲ್ಕು ಮೊಟ್ಟೆಗಳನ್ನು ಸಾಲುಸಾಲಾಗಿ ಇರಿಸಿ ಗುಂಪುಗೂಡಿ ಮರಿಗಳನ್ನು ಬೆಳೆಸುವ, ಕುಟುಂಬ ಪೋಷಿಸುವ ಈ ಹಕ್ಕಿಗಳಿಗೆ ಉತ್ತರ ಮತ್ತು ದಕ್ಷಿಣ ಭಾರತದ ಅರಿವು ಸ್ಪಷ್ಟವಾಗಿಯೇ ಇದೆ ಎನ್ನಿಸುತ್ತಿದೆ. ಕಾರಣ ಉತ್ತರ ಭಾರತದ ಕಡೆಯಲ್ಲಿದ್ದರೆ ಜುಲೈನಿಂದ ಸೆಪ್ಟೆಂಬರ್‌ವರೆಗೂ, ದಕ್ಷಿಣ ಭಾರತದ ಭಾಗದಲ್ಲಿದ್ದರೆ ಅಕ್ಟೋಬರ್‌ನಿಂದ ಮಾರ್ಚ್‌ವರೆಗೂ ಮರಿ ಹಾಕುವ, ಬೆಳೆಸುವ ಕಾರ್ಯದ ವ್ಯವಸ್ಥಿತ ಯೋಜನೆಯನ್ನು ಹೊಂದಿವೆ. ಅಕಸ್ಮಾತ್‌ ಆ ವರ್ಷ ಬರಗಾಲದ ಛಾಯೆ ಇದ್ದರೆ, ನೀರಿನ ಅಭಾವ ಇದ್ದರೆ, ಕುಟುಂಬ ಯೋಜನೆ ಕೈಗೊಳ್ಳುವ ಹಕ್ಕಿಗಳು, ಮರಿಯನ್ನು ಮಾಡುವ ಗೋಜಿಗೆ ಹೋಗುವುದಿಲ್ಲ. ಅಂತಹ ಅಪರೂಪದ ವಿದ್ಯಮಾನ ಕೇವಲ ಬಾಯ್ಕಳಕಗಳ ಗುಂಪಿನಲ್ಲಿ ಕಂಡು ಬರುತ್ತದೆ.

ಬದಲಾಗುತ್ತಿರುವ ಹವಾಮಾನ ಮತ್ತು ಜಾಗತಿಕ ತಾಪಮಾನದ ವೈಪರೀತ್ಯದಿಂದಾಗಿ ಪ್ರತಿವರ್ಷ ಶೇ 13ರಷ್ಟು ಇದರ ಗತಿಯಲ್ಲಿ ಇಳಿಕೆ ಕಂಡು ಬರುತ್ತಿದ್ದು, ಅದಕ್ಕಾಗಿ ಆಸ್ಥೆ ವಹಿಸುವಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಹಕ್ಕಿತಜ್ಞರು ಕೂಗೆಬ್ಬಿಸುತ್ತಿದ್ದಾರೆ. ವರ್ಷಕ್ಕೆ ಎರಡು ಲಕ್ಷಕ್ಕೂ ಹೆಚ್ಚಿನ ಮರಿಗಳ ಸಶಕ್ತ ಬೆಳವಣಿಗೆ ಮಾತ್ರ ಇವುಗಳ ಪೀಳಿಗೆಯನ್ನು ಉಳಿಸಿಕೊಳ್ಳುವ ಸಾಧ್ಯತೆಯ ದಾರಿ ಎನ್ನುತ್ತಾರೆ ತಜ್ಞರು.

ಈ ಬಾರಿ ಕರಾವಳಿಯ ಒಳ ಭಾಗದಲ್ಲಿ ಗುಂಪು ಗುಂಪಾಗಿ ಕೂತು ಕಾಳಿಯ ದಂಡೆಯಿಂದ ಅರಬ್ಬಿ ಸಮುದ್ರದ ಕುತ್ತಿಗೆಯವರೆಗೆ ಗೌಜಿ ಎಬ್ಬಿಸಿರುವ ಬಾಯ್ಕಳಗಳಿಗೆ ಸೂಕ್ತ ಜಾಗವೆನ್ನಿಸಿದಲ್ಲಿ ಮುಂದಿನ ವರ್ಷದಿಂದ ಸಾವಿರಾರುಗಳ ಲೆಕ್ಕದಲ್ಲಿ ಬಂದಾವು. ಕಾದು ನೋಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT