7

ಫಿಟ್‌ನೆಸ್‌ ಪ್ರಿಯೆ ಈ ಸುಂದರಿ

Published:
Updated:
ಫಿಟ್‌ನೆಸ್‌ ಪ್ರಿಯೆ ಈ ಸುಂದರಿ

2000ರಲ್ಲಿ ನಟನಾ ಕ್ಷೇತ್ರವನ್ನು ಪ್ರವೇಶಿಸಿದವರು ನಟಿ ಪ್ರಾಚಿ ದೇಸಾಯಿ. ‘ಕಸಂ ಸೇ’ ಧಾರಾವಾಹಿ ಮೂಲಕ ಅವರ ನಟನಾ ಪಯಣ ಆರಂಭವಾಯಿತು. ಇದರಲ್ಲಿ ಮುಖ್ಯಪಾತ್ರದಲ್ಲಿ ನಟಿಸಿದ್ದ ಅವರು, ಪ್ರಬುದ್ಧ ನಟನೆಯ ಮೂಲಕ ತಮ್ಮನ್ನು ತಾವು ಸಾಬೀತುಪಡಿಸಿಕೊಂಡರು.

ಬಳಿಕ ಹಿರಿತೆರೆ ಪ್ರವೇಶಿಸಿದ ಇವರು, ‘ರಾಕ್‌ ಆನ್‌’ ಸಿನಿಮಾದಲ್ಲಿ ನಟಿಸಿದರು. ಮೊದಲ ಸಿನಿಮಾದ ಅಭಿನಯಕ್ಕಾಗಿ ವರ್ಷದ ಅತ್ಯುತ್ತಮ ಆರಂಭಿಕ ನಟಿ (Best Female Debut) ಎಂಬ ಪ್ರಶಸ್ತಿ ಪಡೆದುಕೊಂಡರು. ‘ಒನ್ಸ್‌ ಅಪೋನ್‌ ಎ ಟೈಮ್‌ ಇನ್‌ ಮುಂಬೈ’ ಚಿತ್ರ ಇವರಿಗೆ ಹೆಸರು ತಂದುಕೊಟ್ಟಿತು.

ಸಹಜ ಸುಂದರಿ ಪ್ರಾಚಿ ದೇಸಾಯಿ ಫಿಟ್‌ನೆಸ್‌ ಪ್ರಿಯೆ. ಪೌಷ್ಟಿಕಾಂಶ ಆಹಾರವೇ ಫಿಟ್‌ ಹಾಗೂ ಆರೋಗ್ಯಕರ ದೇಹಸಿರಿಗೆ ಕಾರಣ ಎನ್ನುತ್ತಾರೆ. ಇವರು ಎಷ್ಟೇ ಬ್ಯುಸಿಯಾಗಿದ್ದರೂ ಡಯೆಟ್‌ ಮರೆಯುವುದಿಲ್ಲ. ಹಸಿವಾಗುತ್ತದೆ ಎಂದು ಸಿಕ್ಕಿದ್ದನ್ನೆಲ್ಲಾ ತಿನ್ನುವುದಿಲ್ಲ. ಆರೋಗ್ಯಕರ ಆಹಾರ ಸೇವನೆಗೆ ಮಹತ್ವ ನೀಡುತ್ತಾರೆ. ಜಿಮ್‌ಗೆ ಹೋಗುವುದನ್ನು ತಪ್ಪಿಸುವುದಿಲ್ಲ. ಚಿತ್ರೀಕರಣದ ಮಧ್ಯೆ ಬಿಡುವು ಸಿಕ್ಕಾಗ ಜಿಮ್‌ಗೆ ಹೋಗಿ ವ್ಯಾಯಾಮ ಮಾಡುತ್ತಾರೆ. ‌

ಜಿಮ್‌ನಲ್ಲಿ ಇವರು ಕಾರ್ಡಿಯೊ, ಸೈಕ್ಲಿಂಗ್‌ ಮಾಡುತ್ತಾರೆ. ಒಂದು ವೇಳೆ ಜಿಮ್‌ಗೆ ಹೋಗಲು ಸಾಧ್ಯವಾಗದಿದ್ದಲ್ಲಿ ಓಡುತ್ತಾರೆ. ಯೋಗಾಭ್ಯಾಸ, ನೃತ್ಯ ಮಾಡುವುದು ಇವರಿಗೆ ಇಷ್ಟ. ಇವೆರಡೂ ದೇಹದ ಕೊಬ್ಬು ಕಡಿಮೆ ಮಾಡುತ್ತದೆ ಎಂಬ ಸಲಹೆಯನ್ನು ಇವರು ನೀಡುತ್ತಾರೆ.

ಇನ್ನು ತಿನ್ನುವ ವಿಷಯಲ್ಲಿಯೂ ಇವರು ಕಟ್ಟುನಿಟ್ಟು. ದಿನದಲ್ಲಿ ಮೂರು ಬಾರಿ ಸೇವಿಸಬೇಕಾದ ಆಹಾರವನ್ನು ವಿಭಾಗ ಮಾಡಿಕೊಂಡು 6–7 ಬಾರಿ ತಿನ್ನುತ್ತಾರೆ.  ಸಲಾಡ್‌, ಸೂಪ್‌, ಗ್ರಿಲ್ಡ್‌ ಚಿಕನ್‌, ಹಣ್ಣುಗಳನ್ನು ಸೇವಿಸುತ್ತಾರೆ. ‘ಇಷ್ಟೆಲ್ಲ ಕಸರತ್ತು ಮಾಡುವುದರಿಂದ ದೇಹಕ್ಕೆ ಅಗತ್ಯವಾದ ಪ್ರೊಟೀನ್‌, ಕಾರ್ಬೊಹೈಡ್ರೇಟ್‌, ಆ್ಯಂಟಿಆ್ಯಕ್ಸಿಡೆಂಟ್‌ ಸಿಗುತ್ತದೆ. ಇದರಿಂದ ನಾನು ಫಿಟ್‌ ಹಾಗೂ ಆರೋಗ್ಯವಾಗಿದ್ದೇನೆ’ ಎನ್ನುತ್ತಾರೆ ಇವರು.

ಚರ್ಮದ ಕಾಳಜಿಗೂ ಭಾರಿ ಆಸ್ಥೆ ವಹಿಸುತ್ತಾರೆ. ಪ್ರತಿದಿನ 3–4 ಲೀಟರ್‌ ನೀರು ಕುಡಿಯುತ್ತಾರೆ. ಬೆಳಿಗ್ಗೆ ಖಾಲಿ ಹೊಟ್ಟೆಗೆ ಎಳನೀರು ಕುಡಿಯುವುದು ಇವರ ಅಭ್ಯಾಸ. ಕೊಬ್ಬಿನ ಅಂಶಗಳು ಹೆಚ್ಚಿಲ್ಲದ ಆಹಾರ ಯಾವಾಗಲೂ ಇವರ ಆಯ್ಕೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry