ಹೊಸ ಅರುಣೋದಯದತ್ತ ಜಿಂಬಾಬ್ವೆ

7
ವಿದೇಶಿ ಹೂಡಿಕೆ, ಅಂತರರಾಷ್ಟ್ರೀಯ ಪಾಲುದಾರಿಕೆ ಮೂಲಕ ಅವಕಾಶ ಸೃಷ್ಟಿಗೆ ತುಡಿತ

ಹೊಸ ಅರುಣೋದಯದತ್ತ ಜಿಂಬಾಬ್ವೆ

Published:
Updated:
ಹೊಸ ಅರುಣೋದಯದತ್ತ ಜಿಂಬಾಬ್ವೆ

ಜಿಂಬಾಬ್ವೆಯ ಜನರು ಯುವ ಜನರ ನೇತೃತ್ವದಲ್ಲಿ ಶಾಂತಿಯುತವಾಗಿ ಮತ್ತು ಸಂಭ್ರಮದಿಂದ ನವೆಂಬರ್‌ನಲ್ಲಿ ಬೀದಿಗಿಳಿದರು. ತಮ್ಮ ಧ್ವನಿ ಕೇಳಿಸಿಕೊಳ್ಳುವಂತಾಗಬೇಕು ಎಂಬುದು ಅವರ ಉದ್ದೇಶವಾಗಿತ್ತು. ಸ್ವಾತಂತ್ರ್ಯ, ಅಭಿವೃದ್ಧಿ ಮತ್ತು ಕೆಲಸಗಳು ಹೊಸ ರೀತಿಯಲ್ಲಿ ನಡೆಯಬೇಕು ಎಂದು ಅವರು ಕರೆ ಕೊಟ್ಟರು. ಸೇನೆಯ ಬೆಂಬಲ ಇದ್ದರೂ ಜನರೇ ಕೈಗೊಂಡ ಶಾಂತಿಯುತ ಕ್ರಾಂತಿ ಇದು.

ಅಧ್ಯಕ್ಷ ರಾಬರ್ಟ್ ಮುಗಾಬೆ ಅವರು ರಾಜೀನಾಮೆ ನೀಡಿದ್ದು ಮತ್ತು 37 ವರ್ಷಗಳ ಬಳಿಕ ಅಧಿಕಾರ ಹಸ್ತಾಂತರಗೊಂಡಿದ್ದು ನಮ್ಮ ಇತಿಹಾಸದಲ್ಲಿ ಮಹತ್ವದ ತಿರುವು. ಕಳೆದ ನವೆಂಬರ್ 24ರಂದು ಜಿಂಬಾಬ್ವೆಯ ಹೊಸ ಅಧ್ಯಕ್ಷನಾಗಿ ನಾನು ಅಧಿಕಾರ ವಹಿಸಿಕೊಂಡೆ. ನಂತರದ ಮೂರು ತಿಂಗಳಲ್ಲಿ ಜನರ ಮನದಲ್ಲೇನಿದೆ ಎಂಬುದನ್ನು ನಾನು ಕೇಳಿಸಿಕೊಂಡಿದ್ದೇನೆ. ಅವರ ದೃಷ್ಟಿಕೋನವೇ ನನ್ನದೂ ಆಗಿದೆ ಮತ್ತು ಅದನ್ನು ಸಾಕಾರಗೊಳಿಸಲು ನಾನು ಬದ್ಧನಾಗಿದ್ದೇನೆ.

‘ಹೊಸ ಜಿಂಬಾಬ್ವೆ’ ಕಟ್ಟುವುದಕ್ಕಾಗಿ ನಾನು ಕೆಲಸ ಮಾಡುತ್ತಿದ್ದೇನೆ: ಮುಕ್ತ ಮತ್ತು ಅಭಿವೃದ್ಧಿಶೀಲ ಅರ್ಥ ವ್ಯವಸ್ಥೆ, ದೇಶದ ಯುವ ಜನರಿಗೆ ಉದ್ಯೋಗ, ಹೂಡಿಕೆದಾರರಿಗೆ ಅವಕಾಶಗಳು, ಪ್ರಜಾಸತ್ತಾತ್ಮಕ ಆಡಳಿತ ವ್ಯವಸ‍್ಥೆ ಮತ್ತು ಎಲ್ಲರಿಗೂ ಸಮಾನ ಹಕ್ಕುಗಳಿರುವ ನಾಡು ಕಟ್ಟುವುದು ನನ್ನ ಉದ್ದೇಶ. ಬಹಳ ಕ್ಲಿಷ್ಟಕರವಾದ ಪರಿಸ್ಥಿತಿಯಿಂದ ನಾವು ಆರಂಭಿಸುತ್ತಿದ್ದೇವೆ. ಇಂದು ನಮ್ಮ ಅರ್ಥ ವ್ಯವಸ‍್ಥೆ ಸಂಕಷ್ಟದಲ್ಲಿದೆ. ನಮ್ಮ ಯುವ ಜನರಿಗೆ ಅವಕಾಶಗಳಿಲ್ಲ; ಬಹಳಷ್ಟು ಜನರಿಗೆ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುವುದಕ್ಕೇ ಸಾಧ್ಯವಾಗುತ್ತಿಲ್ಲ; ನಮ್ಮ ಮೂಲಸೌಕರ್ಯ ನಿರ್ಮಾಣ ಕಾರ್ಯ ಯಾವುದೋ ಕಾಲದಲ್ಲಿ ನಿಂತು ಹೋಗಿದೆ.

ಹೂಡಿಕೆಗೆ ಪ್ರಾಶಸ್ತ್ಯ ಇರುವ ಆರ್ಥಿಕ ಪುನಶ್ಚೇತನ ಆಧರಿತವಾದ ಪುನರುಜ್ಜೀವನ ನಮ್ಮ ಕಾರ್ಯತಂತ್ರವಾಗಿದೆ. ಉದ್ಯೋಗ ಸೃಷ್ಟಿಯೇ ಇದರ ಮುನ್ನೆಲೆಯಲ್ಲಿರುತ್ತದೆ. ಜಿಂಬಾಬ್ವೆಯಲ್ಲಿ 310 ಕೋಟಿ ಡಾಲರ್ (ಸುಮಾರು ₹20 ಸಾವಿರ ಕೋಟಿ) ಹೂಡಿಕೆ ಮಾಡಲು ಜಗತ್ತಿನ ವಿವಿಧ ಭಾಗಗಳ ಹೂಡಿಕೆದಾರರು ಕಳೆದ ಮೂರು ತಿಂಗಳ ಅವಧಿಯಲ್ಲಿ ಒಪ್ಪಿಗೆ ಸೂಚಿಸಿದ್ದಾರೆ. ಇದು ಉದ್ಯೋಗ ಸೃಷ್ಟಿಸುವುದರ ಜೊತೆಗೆ ಹೊಸ ಹೊಸ ಅವಕಾಶಗಳನ್ನೂ ತೆರೆದಿಡಲಿದೆ.

ನಮ್ಮ ಜನರ ಕೌಶಲಗಳು, ಅವಕಾಶಗಳು ಮತ್ತು ಉದ್ಯೋಗವನ್ನು ಹೆಚ್ಚಿಸುವ ನಿಜವಾದ ಅಭಿವೃದ್ಧಿಯೆಡೆಗಿನ ಪಯಣವನ್ನು ನಾವು ಆರಂಭಿಸಿದ್ದೇವೆ. ಉದಾರೀಕರಣ ಮತ್ತು ಅದರ ಮೂಲಕ ದೊಡ್ಡ ಮಟ್ಟದಲ್ಲಿ ಮಾರುಕಟ್ಟೆ ಶಕ್ತಿಗಳಿಗೆ ಅವಕಾಶ ಕೊಡುವುದಕ್ಕಾಗಿ ದಿಟ್ಟ ನಿರ್ಧಾರಗಳನ್ನು ನಾವು ಕೈಗೊಳ್ಳಲಿದ್ದೇವೆ. ಉದ್ಯಮಗಳಿಗೆ ಅವಕಾಶ ಇರುವ, ಅವುಗಳನ್ನು ಪ್ರೋತ್ಸಾಹಿಸುವ ಮತ್ತು ರಕ್ಷಿಸುವ ಅರ್ಥ ವ್ಯವಸ್ಥೆಯನ್ನು ನಾವು ಕಟ್ಟಲಿದ್ದೇವೆ. ಜಾಗತಿಕ ಅರ್ಥ ವ್ಯವಸ್ಥೆಯಾಗುವ ಈ ಪ್ರಯತ್ನದಲ್ಲಿ ನಾವು ಯಶಸ್ವಿಯಾಗಬೇಕಾದರೆ, ನಮ್ಮ ಉದ್ಯಮಿಗಳಿಗೆ ಶಕ್ತಿ ತುಂಬಬೇಕು ಮತ್ತು ಪ್ರತಿ ಹಂತದಲ್ಲಿಯೂ ಸಂಶೋಧನೆಯನ್ನು ಪೋಷಿಸಬೇಕು.

ಭೂತಕಾಲವನ್ನು ಹಿಂದಕ್ಕೆ ಬಿಟ್ಟು ಹೊಸ ಅರುಣೋದಯವನ್ನು ನಾವು ಅಪ್ಪಿಕೊಂಡಿದ್ದೇವೆ. ಈ ಹೊಸ ಪಯಣದಲ್ಲಿ ನಮ್ಮ ಜತೆಗೆ ಹೆಜ್ಜೆ ಹಾಕುವಂತೆ ಅಂತರರಾಷ್ಟ್ರೀಯ ಸಮುದಾಯವನ್ನು ಕೇಳಿಕೊಳ್ಳುತ್ತಿದ್ದೇವೆ. ರಾಷ್ಟ್ರೀಯ ಶಾಂತಿ ಮತ್ತು ಸಮನ್ವಯ ಸಮಿತಿಯ ಕಾಯ್ದೆಗೆ ನಾನು ಇತ್ತೀಚೆಗೆ ಸಹಿ ಮಾಡಿದ್ದೇನೆ. ಒಂದು ಒಗ್ಗಟ್ಟಿನ ದೇಶವಾಗಲು, ರಾಷ್ಟ್ರಗಳ ಸಮುದಾಯದ ಭಾಗವಾಗಲು ಈ ಕಾನೂನು ನಮಗೆ ನೆರವಾಗಲಿದೆ. ನಮ್ಮ ಭೂತಕಾಲದಲ್ಲಿ ಯಾವುದೇ ಭಿನ್ನಾಭಿಪ್ರಾಯಗಳು, ತಪ್ಪುಗ್ರಹಿಕೆಗಳು ಇದ್ದರೂ ಅವನ್ನೆಲ್ಲ ಮರೆತು ಹೊಸ ಬೆಳಗಿಗೆ ನಾವು ತೆರೆದುಕೊಳ್ಳಬೇಕಿದೆ.

ಜಿಂಬಾಬ್ವೆ ಬದಲಾಗುತ್ತಿದೆ; ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹೊಸ ದಿಕ್ಕಿನತ್ತ ಹೊರಳಿಕೊಳ್ಳುತ್ತಿದೆ. ಹಾಗಾಗಿ, ನಿರ್ಬಂಧಗಳ ಮೂಲಕ ಹಿಂದೆ ನಮ್ಮನ್ನು ದಂಡಿಸಿದವರು ಅವರ ನಿರ್ಧಾರಗಳನ್ನು ಮರುಪರಿಶೀಲಿಸುವಂತೆ ನಾವು ಕೋರುತ್ತಿದ್ದೇವೆ. ಅಪಾರ ಸಾಮರ್ಥ್ಯವನ್ನು ಹೊಂದಿರುವ ನೆಲ ಜಿಂಬಾಬ್ವೆ. ಆದರೆ, ಕುತ್ತಿಗೆಯಲ್ಲಿ ನಿರ್ಬಂಧಗಳ ಭಾರವನ್ನು ಹೊತ್ತುಕೊಂಡು ನಮ್ಮ ಸಾಮರ್ಥ್ಯವನ್ನು ಸಾಕಾರಗೊಳಿಸುವುದು ಕಷ್ಟಸಾಧ್ಯ.

ಕಳವಳಗಳನ್ನು ಹೋಗಲಾಡಿಸಲು, ನಮ್ಮ ಉದ್ದೇಶದ ಬಗ್ಗೆ ಅನುಮಾನಗಳನ್ನು ಹೊಂದಿರುವವರಿಗೆ ಭರವಸೆ ನೀಡಲು ಬೇಕಾದ ಹಲವು ಮಹತ್ವದ ಕ್ರಮಗಳನ್ನು ನನ್ನ ಸರ್ಕಾರ ಕೈಗೊಂಡಿದೆ. ಮಹತ್ವಾಕಾಂಕ್ಷಿಯಾದ, ಹೊಣೆಗಾರಿಕೆಯಿಂದ ಕೂಡಿದ ಸುಸ್ಥಿರವಾದ ಬಜೆಟನ್ನು ಮಂಡಿಸಿದ್ದೇವೆ. ಕೊರತೆಗಳನ್ನು ಕಡಿಮೆ ಮಾಡಲು ಈ ಬಜೆಟ್‍ನಲ್ಲಿ ಶ್ರಮಿಸಿದ್ದೇವೆ ಮತ್ತು ನಮ್ಮ ಸಾಲವನ್ನು ಮರುಪಾವತಿ ಮಾಡುವ ಬದ್ಧತೆ ಪ್ರಕಟಿಸಿದ್ದೇವೆ.

ಸ್ವದೇಶೀಕರಣ ಮತ್ತು ಆರ್ಥಿಕ ಸಶಕ್ತತೆ ಕಾಯ್ದೆಯಿಂದಾಗಿ ವಿದೇಶಿಯರು ಜಿಂಬಾಬ್ವೆಯಲ್ಲಿ ವ್ಯಾಪಾರದ ಮಾಲೀಕತ್ವ ಪಡೆಯಲು ಅವಕಾಶ ಇರಲಿಲ್ಲ. ಇದು ನಮಗೆ ಬಹಳ ಬೇಕಾಗಿದ್ದ ಹೂಡಿಕೆಗೆ ದೊಡ್ಡ ತೊಡಕಾಗಿತ್ತು. ಈಗ ಈ ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ. ಬಹುತೇಕ ಎಲ್ಲ ಕ್ಷೇತ್ರಗಳಲ್ಲಿನ ಅಡ್ಡಿಗಳನ್ನು ಹೋಗಲಾಡಿಸಿ ಜಿಂಬಾಬ್ವೆಯು ಉದ್ಯಮಕ್ಕೆ ಪ್ರಶಸ್ತವಾದ ಸ್ಥಳವಾಗಿದೆ ಎಂಬ ಸ್ಪಷ್ಟ ಸಂದೇಶವನ್ನು ಅಂತರರಾಷ್ಟ್ರೀಯ ಸಮುದಾಯಕ್ಕೆ ನೀಡಿದ್ದೇವೆ.

ಹೊಸ ಜಿಂಬಾಬ್ವೆಯಲ್ಲಿ ಯಾವುದೇ ವಿದೇಶಿ ಹೂಡಿಕೆ ಸುರಕ್ಷಿತ ಮತ್ತು ಭದ್ರ ಎಂಬ ಭರವಸೆಯನ್ನು ಎಲ್ಲರಿಗೂ ನೀಡಲು ನಾನು ಬಯಸುತ್ತೇನೆ. ಪಾರದರ್ಶಕತೆ ಮತ್ತು ಕಾನೂನು ಸುವ್ಯವಸ್ಥೆಯೇ ಈ ಎಲ್ಲದರ ಕೇಂದ್ರದಲ್ಲಿದೆ. ನಮ್ಮ ದೇಶವನ್ನು ವ್ಯಾಪಿಸಿಕೊಂಡಿದ್ದ ಭ್ರಷ್ಟಾಚಾರವನ್ನು

ಸೋಲಿಸುವ ಪ್ರಯತ್ನವನ್ನು ನಾವು ಆರಂಭಿಸಿದ್ದೇವೆ. ಸಂಪುಟದ ಸದಸ್ಯರು ತಮ್ಮ ಆಸ್ತಿ ಘೋಷಿಸಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ; ಭ್ರಷ್ಟಾಚಾರ ತಡೆ ನ್ಯಾಯಾಲಯಗಳನ್ನು ಆರಂಭಿಸಲಾಗಿದೆ. ಜಿಂಬಾಬ್ವೆಯ ಬಹಳಷ್ಟು ಜನರು ತಮ್ಮ ಹಣವನ್ನು ದೇಶದ ಹೊರಗೆ ಸಾಗಿಸಿದ್ದರು. ಮೂರು ತಿಂಗಳ ಒಳಗೆ ಈ ಹಣವನ್ನು ವಾಪಸ್‍ ತಂದರೆ ಅಂಥವರ ವಿರುದ್ಧ ತನಿಖೆ ಇಲ್ಲ ಮತ್ತು ಅವರಿಗೆ ಕ್ಷಮೆ ನೀಡಲಾಗುವುದು ಎಂದು ಘೋಷಿಸಲಾಗಿದೆ. ಹಾಗಾಗಿ ನೂರಾರು ಕೋಟಿ ಡಾಲರ್ ದೇಶಕ್ಕೆ ವಾಪಸ್‍ ಬಂದಿದೆ.

ಜಿಂಬಾಬ್ವೆಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ ಎಂದು ಜಗತ್ತನ್ನು ನಂಬಿಸಲು ಪ್ರಯತ್ನಿಸುವ ಧ್ವನಿಗಳು ದೇಶದ ಒಳಗೆ ಮತ್ತು ಹೊರಗೆ ಇವೆ. ಆದರೆ ಇವು ಆಧಾರ ರಹಿತ ಮತ್ತು ದುರುದ್ದೇಶ ಹೊಂದಿರುವ ಹೇಳಿಕೆಗಳು ಎಂದು ನಾನು ದೃಢವಾಗಿ ಹೇಳುತ್ತೇನೆ. ಪಾರದರ್ಶಕತೆ, ಮುಕ್ತ ವ್ಯವಸ್ಥೆ ಮತ್ತು ಕಾನೂನುಬದ್ಧ ಆಡಳಿತದ ಹೊಸ ಶಕೆಯನ್ನು ಆರಂಭಿಸಲು ನಾನು ಬದ್ಧನಾಗಿದ್ದೇನೆ.

ಮಾನವ ಹಕ್ಕುಗಳ ಉಲ್ಲಂಘನೆಯ ಕಳವಳಗಳನ್ನು ತಕ್ಷಣವೇ ಪರಿಹರಿಸಲಾಗುವುದು. ಅದಕ್ಕಾಗಿ ನಾಗರಿಕ ಸಮಾಜದ ಜತೆಗೆ ನಿರಂತರ ಮಾತುಕತೆ ನಡೆಯುತ್ತಿದೆ; ವಿರೋಧ ಪಕ್ಷಗಳು, ಪ್ರಮುಖ ಸರ್ಕಾರೇತರ ಸಂಘಟನೆಗಳು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳ ಜತೆಗೆ ಸಂವಾದಕ್ಕೆ ಅವಕಾಶಗಳನ್ನು ಸೃಷ್ಟಿಸಲಾಗಿದೆ.

ಹೊಸ ಜಿಂಬಾಬ್ವೆಯಲ್ಲಿ ಎಲ್ಲ ಪೌರರಿಗೆ ವಾಕ್‍ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂಘಟನೆ ಕಟ್ಟುವ ಸ್ವಾತಂತ್ರ್ಯ ಇರುವಂತೆ ನೋಡಿಕೊಳ್ಳಲು ನಾನು ಬದ್ಧನಾಗಿದ್ದೇನೆ. ಈ ಎಲ್ಲದರ ಹೃದಯ ಭಾಗದಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆ ಇರುತ್ತದೆ. ಸಾರ್ವತ್ರಿಕ ಚುನಾವಣೆಯು ನಿಗದಿಯಾದಂತೆ 2018ರಲ್ಲಿಯೇ ನಡೆಯಲಿದೆ. ಹೊಸ ಜಿಂಬಾಬ್ವೆಯ ಪ್ರಜಾಪ್ರಭುತ್ವ ಯಾವ ರೀತಿ ರೂಪುಗೊಳ್ಳುತ್ತಿದೆ ಎಂಬುದನ್ನು ಕಂಡುಕೊಳ್ಳುವ ಆಸಕ್ತಿ ಇರುವ ನಿಷ್ಪಕ್ಷಪಾತ ವೀಕ್ಷಕರಿಗೆ ಸ್ವಾಗತವಿದೆ. ಇಂಥವರನ್ನು ನಾನು ಮತ್ತೊಮ್ಮೆ ಆಹ್ವಾನಿಸುತ್ತಿದ್ದೇನೆ.

ಜಿಂಬಾಬ್ವೆ ಬಹಳ ತ್ವರಿತವಾಗಿ ಬದಲಾಗುತ್ತಿದೆ. ಹಾಗಾಗಿಯೇ, ‘ಸತ್ಯವು ಬದಲಾದಾಗ ನಿಮ್ಮ ಮನಸ್ಸನ್ನೂ ಬದಲಾಯಿಸಿಕೊಳ್ಳಿ’ ಎಂಬ ನಾಣ್ನುಡಿಗೆ ಕಿವಿಕೊಡಿ ಎಂದು ಅಂತರರಾಷ್ಟ್ರೀಯ ಸಮುದಾಯವನ್ನು ಕೋರುತ್ತೇನೆ.

ನಾವು ಭೂತಕಾಲದ ಬಂದಿಗಳಾಗಿ ಉಳಿಯಲು ಸಾಧ್ಯವಿಲ್ಲ; ಭವಿಷ್ಯದತ್ತ ಸಾಗಲೇಬೇಕು ಮತ್ತು ಅಂತರರಾಷ್ಟ್ರೀಯ ಪಾಲುದಾರರ ಕೈಹಿಡಿದು ನಾವು ಯಾನ ಕೈಗೊಳ್ಳಬೇಕು. ಅಂತರರಾಷ್ಟ್ರೀಯ ಸಮುದಾಯದಲ್ಲಿ ತನ್ನ ಸ್ಥಾನವನ್ನು ಹೊಸ ಜಿಂಬಾಬ್ವೆ ದೃಢಪಡಿಸಿಕೊಂಡಿದೆ ಮತ್ತು ಅದರ ಜತೆಗೆ ಬರುವ ಎಲ್ಲ ಹೊಣೆಗಾರಿಕೆಯನ್ನು ಸ್ಪಷ್ಟವಾಗಿ ಅರಿತುಕೊಂಡಿದೆ.

ನಿರ್ಬಂಧಗಳಿಗೆ ಇನ್ನೂ ಜೋತು ಬೀಳುವವರು ಹಳೆಯ ಕಾಲದ ಜಿಂಬಾಬ್ವೆಯಲ್ಲಿಯೇ ಉಳಿದಿದ್ದಾರೆ ಎಂದು ಅರ್ಥ- ಆ ಜಿಂಬಾಬ್ವೆ ಬಡತನದಿಂದ ಕಂಗೆಟ್ಟಿತ್ತು ಮತ್ತು ಅಂತರರಾಷ್ಟ್ರೀಯವಾಗಿ ಪ್ರತ್ಯೇಕಗೊಂಡು ಮೂಲೆ ಗುಂಪಾಗಿತ್ತು. ಆದರೆ ಈಗ ನಾವು ಹೊಸ ಜಿಂಬಾಬ್ವೆಯನ್ನು ಕಟ್ಟುತ್ತಿದ್ದೇವೆ. ಇದು ಭರವಸೆ ಮತ್ತು ಅವಕಾಶಗಳ ಹೊಸ ನಾಡು; ಜಗತ್ತಿನ ಜತೆಗಿನ ಒಡನಾಟದಲ್ಲಿ ಸಮೃದ್ಧಿಗಾಗಿ ತುಡಿಯುತ್ತಿರುವ ಹೊಸ ದೇಶ.

ನಮ್ಮ ದೇಶದ ಪರಿವರ್ತನೆಗೆ ನೆರವಾಗಿ ಮತ್ತು ನಮ್ಮ ಪಾಲುದಾರರಾಗಿ ಎಂದು ಅಂತರರಾಷ್ಟ್ರೀಯ ಸಮುದಾಯವನ್ನು ನಾವು ಆಹ್ವಾನಿಸುತ್ತಿದ್ದೇವೆ. ಎಲ್ಲರೂ ಜತೆಯಾಗಿ, ಜಿಂಬಾಬ್ವೆಯ ಅಪಾರ ಸಾಮರ್ಥ್ಯವನ್ನು ಹೊರತರೋಣ; ಹೊಸ, ಸಮೃದ್ಧ ಮತ್ತು ಪ್ರಜಾಸತ್ತಾತ್ಮಕ ಜಿಂಬಾಬ್ವೆಯನ್ನು ಎಲ್ಲರಿಗಾಗಿ ಕಟ್ಟೋಣ.ಎಮರ್ಸನ್‍ ನನ್‍ಗಾಗ್ವ

-ದಿ ನ್ಯೂಯಾರ್ಕ್‌ ಟೈಮ್ಸ್‌

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry