‘ಧಾರ್ಮಿಕ ಅಲ್ಪಸಂಖ್ಯಾತರ ಮಾನ್ಯತೆ ಕೊಡಿ’

7
ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಲಿಂಗಾಯತ ಮಠಾಧೀಶರ ಮನವಿ

‘ಧಾರ್ಮಿಕ ಅಲ್ಪಸಂಖ್ಯಾತರ ಮಾನ್ಯತೆ ಕೊಡಿ’

Published:
Updated:
‘ಧಾರ್ಮಿಕ ಅಲ್ಪಸಂಖ್ಯಾತರ ಮಾನ್ಯತೆ ಕೊಡಿ’

ಕೂಡಲಸಂಗಮ (ಬಾಗಲಕೋಟೆ): ‘ನ್ಯಾಯಮೂರ್ತಿ ನಾಗಮೋಹನದಾಸ್‌ ನೇತೃತ್ವದ ತಜ್ಞರ ಸಮಿತಿ ನೀಡಿದ ವರದಿಯನ್ನು ಕೂಡಲೇ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಇದರ ಜೊತೆಗೆ ಲಿಂಗಾಯತರಿಗೆ ಮೊದಲು ಧಾರ್ಮಿಕ ಅಲ್ಪಸಂಖ್ಯಾತರ ಮಾನ್ಯತೆ ನೀಡಬೇಕು’ ಎಂದು ವಿವಿಧ ಮಠಾಧೀಶರ ನಿಯೋಗವು ಸೋಮವಾರ ಇಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು.

ಕೂಡಲಸಂಗಮದಲ್ಲಿ ₹340 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಬಸವೇಶ್ವರ ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ನಡೆದ ಸಮಾರಂಭದಲ್ಲಿ, ಗದುಗಿನ ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ನೇತೃತ್ವದ ಮಠಾಧೀಶರ ನಿಯೋಗ ಮನವಿ ಸಲ್ಲಿಸಿತು.

‘ಅಲ್ಪಸಂಖ್ಯಾತರ ಆಯೋಗದ ಕಾಯ್ದೆ 1994ರ ಕಲಂ 2 (ಡಿ) ಅಡಿ, 2007ರಲ್ಲಿ ಜೈನ, ಬೌದ್ಧ ಮತ್ತು ಸಿಖ್‌ ಧರ್ಮಗಳಿಗೆ ರಾಜ್ಯದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮಾನ್ಯತೆ ನೀಡಲಾಗಿದೆ. ಅದೇ ಕಾಯ್ದೆಯಡಿ ಲಿಂಗಾಯತರಿಗೆ ಧಾರ್ಮಿಕ  ಅಲ್ಪಸಂಖ್ಯಾತರ ಸ್ಥಾನಮಾನ ನೀಡಲು ಅವಕಾಶ ಇದೆ’ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಭಾಷಣದ ವೇಳೆ ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಈ ಬಗ್ಗೆ ಮಾರ್ಚ್ 14ರಂದು ನಡೆಯಲಿರುವ ಸಂಪುಟಸಭೆಯಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು. ಈಗ ಹೆಚ್ಚು ಮಾತನಾಡುವುದಿಲ್ಲ’ ಎಂದು ಅವರು ಹೇಳಿದ್ದಾರೆ.

ಬಿಜೆಪಿ ಮುಖಂಡರ ಮನವೊಲಿಕೆ: ಮುರುಘಾ ಶರಣರು

ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗಾಗಿ ನಡೆಯುತ್ತಿರುವ ಹೋರಾಟ ಒಂದು ಹಂತ ತಲುಪಿದ ನಂತರ ಬಿಜೆಪಿ ಮುಖಂಡರ ಮನವೊಲಿಸಲಾಗುವುದು ಎಂದು ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಶರಣರು ಹೇಳಿದರು.

ಕೂಡಲಸಂಗಮದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲಿಂಗಾಯತ ಸ್ವತಂತ್ರ ಧರ್ಮದ ವಿಚಾರವು ಕಾಂಗ್ರೆಸ್–ಬಿಜೆಪಿ ನಡುವಿನ ಹೋರಾಟ ಎಂದು ಕೆಲವರು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಇದು ರಾಜಕಿಯೇತರ ಹೋರಾಟ. ಇದಕ್ಕೆ ಎಲ್ಲಾ ಪಕ್ಷಗಳ ಸಹಕಾರವೂ ಬೇಕು. ಮುಂದಿನ ದಿನಗಳಲ್ಲಿ ಬಿಜೆಪಿಯವರ ಪಾತ್ರ ಮಹತ್ವದ್ದಾಗಿದೆ ಎಂದರು.

ಮಠಾಧೀಶರೊಂದಿಗೆ ಎಂ.ಬಿ.ಪಾಟೀಲ ಗೋಪ್ಯ ಸಭೆ

ಸಮಾರಂಭಕ್ಕೂ ಮುನ್ನ, ಲಿಂಗಾಯತ ಸ್ವತಂತ್ರ ಧರ್ಮ ಹೋರಾಟದಲ್ಲಿ ಗುರುತಿಸಿಕೊಂಡಿರುವ ಮಠಾಧೀಶರೊಂದಿಗೆ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಕೂಡಲಸಂಗಮ ಪಂಚಮಸಾಲಿ ಪೀಠದ ಮಠದಲ್ಲಿ ಗೋಪ್ಯ ಸಭೆ ನಡೆಸಿದರು.

ಆರ್‌ಎಸ್‌ಎಸ್ ಹೇಳಿಕೆ ಪ್ರಸ್ತಾಪ: ‘ಲಿಂಗಾಯತ ಸ್ವತಂತ್ರಧರ್ಮಕ್ಕೆ ಸಹಮತವಿಲ್ಲ ಎಂದು ಆರ್‌ಎಸ್‌ಎಸ್‌ನ ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ನೀಡಿರುವ ಹೇಳಿಕೆ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಅವರ ಹೇಳಿಕೆಯಿಂದ ಒಳ್ಳೆಯದೇ ಆಗಿದೆ. ಸಂಘದ ಬೆಳವಣಿಗೆಗೆ ಲಿಂಗಾಯತರು ಕೂಡ ಕೊಡುಗೆ ಕೊಟ್ಟಿದ್ದಾರೆ. ಆದರೆ ಇಂದು ಅವರು ನಮ್ಮ ಆಶಯದ ವಿರುದ್ಧ ನಿಂತಿದ್ದಾರೆ ಎಂಬುದು ಸಮುದಾಯಕ್ಕೆ ಮನವರಿಕೆಯಾಗಲಿದೆ’ ಎಂದು ಸಭೆಯಲ್ಲಿ ಹೇಳಲಾಯಿತು ಎಂದು ಮೂಲಗಳು ತಿಳಿಸಿವೆ.

‘ಲಿಂಗಾಯತರಿಗೆ ಅಲ್ಪಸಂಖ್ಯಾತರ ಮಾನ್ಯತೆ ಸಿಕ್ಕರೆ ಮೀಸಲಾತಿ ಸೇರಿದಂತೆ ಸವಲತ್ತುಗಳ ಹಂಚಿಕೆ ವಿಚಾರದ ಬಗ್ಗೆ,  ಸಚಿವರಾದ ತನ್ವೀರ್ ಸೇಠ್ ಹಾಗೂ ಕೆ.ಜೆ.ಜಾರ್ಜ್ ಅವರು ಸಂಪುಟ ಸಭೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ನಿಮ್ಮ ಸವಲತ್ತುಗಳನ್ನು ಸಾಸಿವೆ ಕಾಳಿನಷ್ಟೂ ನಾವು ಕಬಳಿಸುವುದಿಲ್ಲ ಎಂದು ಮನವೊಲಿಸಲಾಗುವುದು. ಇಬ್ಬರೂ ಸಚಿವರನ್ನು ಎಸ್.ಎಂ.ಜಾಮದಾರ ಶೀಘ್ರ ಭೇಟಿ ಮಾಡಲಿದ್ದಾರೆ’ ಎಂದು ಸಚಿವ ಪಾಟೀಲ ಸಭೆಗೆ ತಿಳಿಸಿದರು ಎಂದು ಗೊತ್ತಾಗಿದೆ.

ಸಭೆಯಲ್ಲಿ ಗದುಗಿನ ತೋಂಟದಾರ್ಯ ಶ್ರೀಗಳು, ಮಾತೆ ಮಹಾದೇವಿ, ಭಾಲ್ಕಿಯ ಬಸವಲಿಂಗ ಪಟ್ಟದೇವರು, ನಾಗನೂರ ರುದ್ರಾಕ್ಷಿಮಠದ ಡಾ.ಸಿದ್ಧರಾಮ ಸ್ವಾಮೀಜಿ, ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಇದ್ದರು.

**

ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ತನ್ನ ಬೆಂಬಲವಿಲ್ಲ ಎಂದು ಆರ್‌ಎಸ್ಎಸ್ ಹೇಳಿದೆ. ಆದರೆ, ಕಟ್ಟಾ ಹಿಂದೂವಾದಿಗಳಿಂದ ಬೆಂಬಲ ನಿರೀಕ್ಷಿಸುವಷ್ಟು ನಾವು ಮೂರ್ಖರಲ್ಲ.–––    –ಮಾತೆ ಮಹಾದೇವಿ, ಕೂಡಲಸಂಗಮ ಬಸವ ಧರ್ಮ ಪೀಠದ ಪೀಠಾಧ್ಯಕ್ಷೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry