ಲೈಂಗಿಕ ಅಲ್ಪಸಂಖ್ಯಾತರಿಗೆ ಸರ್ಕಾರಿ ನೌಕರಿ

ಭಾನುವಾರ, ಮಾರ್ಚ್ 24, 2019
34 °C
ಹೈಕೋರ್ಟ್‌ ಮಧ್ಯಂತರ ಆದೇಶ

ಲೈಂಗಿಕ ಅಲ್ಪಸಂಖ್ಯಾತರಿಗೆ ಸರ್ಕಾರಿ ನೌಕರಿ

Published:
Updated:
ಲೈಂಗಿಕ ಅಲ್ಪಸಂಖ್ಯಾತರಿಗೆ ಸರ್ಕಾರಿ ನೌಕರಿ

ಬೆಂಗಳೂರು: ಲೈಂಗಿಕ ಅಲ್ಪಸಂಖ್ಯಾತರೊಬ್ಬರಿಗೆ ತಕ್ಷಣವೇ ಉದ್ಯೋಗ ನೀಡುವಂತೆ ವಿಧಾನ ಪರಿಷತ್‌ ಸಚಿವಾಲಯದ ಕಾರ್ಯದರ್ಶಿಗೆ ಹೈಕೋರ್ಟ್‌ ಸೋಮವಾರ ಮಹತ್ವದ ನಿರ್ದೇಶನ ನೀಡಿದೆ.

ಈ ಕುರಿತಂತೆ ನಗರದ ಹೊಸ ಬೈಯ್ಯಪ್ಪನಹಳ್ಳಿಯ ಮೊನಿಷಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಲ್‌.ನಾರಾಯಣ ಸ್ವಾಮಿ ಅವರಿದ್ದ ಏಕಸದಸ್ಯ ನ್ಯಾಯಪೀಠವು ಮನವಿಯನ್ನು ಪುರಸ್ಕರಿಸಿದೆ.

‘ಪ್ರಕರಣದ ಪ್ರತಿವಾದಿಯಾದ ವಿಧಾನ ಪರಿಷತ್‌ ಕಾರ್ಯದರ್ಶಿ ಕೂಡಲೇ ಮೊನಿಷಾಗೆ ‘ಡಿ’ ಗ್ರೂಪ್‌ ನೌಕರಿ ನೀಡಬೇಕು. ಕೆಲಸ ನೀಡಿದ ಆದೇಶದ ಪ್ರತಿಯನ್ನು ಇದೇ 21ರಂದು ಕೋರ್ಟ್‌ಗೆ ಹಾಜರುಪಡಿಸಬೇಕು. ಈ ಮಧ್ಯಂತರ ಆದೇಶವು ಅರ್ಜಿಯ ಅಂತಿಮ ಆದೇಶಕ್ಕೆ ಒಳ‍‍ಪಟ್ಟಿರತಕ್ಕದ್ದು’ ಎಂದು ಸರ್ಕಾರಿ ವಕೀಲ ಎಸ್‌.ವಿ.ಗಿರಿಕುಮಾರ್ ಅವರಿಗೆ ನ್ಯಾಯಪೀಠ ತಾಕೀತು ಮಾಡಿದೆ.

‘ಅರ್ಜಿದಾರರು ಲೈಂಗಿಕವಾಗಿ ಅಲ್ಪಸಂಖ್ಯಾತರು ಹೌದೊ ಅಲ್ಲವೊ, ಅವರಿಗೆ ಹುದ್ದೆ ನೀಡಲು ಅವಕಾಶಗಳಿವೆಯೇ ಇಲ್ಲವೇ ಹೇಗೆ ಎಂಬುದನ್ನೆಲ್ಲಾ ಮುಂದಿನ ವಿಚಾರಣೆ ವೇಳೆ ವಿವರವಾಗಿ ಆಲಿಸೋಣ. ಆದರೆ, ಈಗ ಕೂಡಲೇ ನೌಕರಿ ನೀಡಿ’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಮೊನಿಷಾಗೆ ಈಗ 33 ವರ್ಷ. ಈಕೆ 10 ವರ್ಷದ ಹಿಂದೆ ಲಿಂಗ ಪರಿವರ್ತನೆ ಮಾಡಿಸಿಕೊಂಡಿದ್ದಾಳೆ. 2015ರಲ್ಲಿ ವಿಧಾನ ಪರಿಷತ್‌ ಸಚಿವಾಲಯದಲ್ಲಿ ಕಸ ಗುಡಿಸುವ ‘ಡಿ‘ ಗ್ರೂಪ್‌ನ ಎಂಟು ಹುದ್ದೆಗೆ ಅರ್ಜಿ ಕರೆಯಲಾಗಿತ್ತು. ಇದಕ್ಕೆ ಮೊನಿಷಾ ಕೂಡಾ ಅರ್ಜಿ ಹಾಕಿದ್ದರು. ಆದರೆ, ಅಂತಿಮವಾಗಿ ಇವರನ್ನು ಯೋಗ್ಯತೆ, ಅರ್ಹತೆ ಮತ್ತು ಪರೀಕ್ಷೆಗೆ ಪರಿಗಣಿಸದೆ ತಿರಸ್ಕರಿಸಲಾಗಿತ್ತು.

ಈ ಕ್ರಮ ಪ್ರಶ್ನಿಸಿ ಮೊನಿಷಾ ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಕದ ತಟ್ಟಿದ್ದರು. ಆದರೆ, ಕೆಎಟಿ ಕಾಯ್ದೆ ಕಲಂ 2 (ಡಿ) ಅನುಸಾರ ಈ ಅರ್ಜಿ ವಿಚಾರಣೆಗೆ ಅರ್ಹವಲ್ಲ ಎಂದು ತಿರಸ್ಕರಿಸಿತ್ತು.

ಕೆಎಟಿ ಆದೇಶವನ್ನು ಮೊನಿಷಾ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ‘ಲಿಂಗ ಪರಿವರ್ತಿತರನ್ನು ಒಬಿಸಿ (ಇತರೆ ಹಿಂದುಳಿದ ವರ್ಗ) ಅಡಿಯಲ್ಲಿ ಮೀಸಲು ನೀಡಿ ಪರಿಗಣಿಸಬೇಕು ಎಂದು ಸುಪ್ರಿಂ ಕೋರ್ಟ್‌ 2014ರಲ್ಲೇ ಆದೇಶಿಸಿದೆ. ಈ ಕುರಿತಂತೆ ಎಲ್ಲಾ ರಾಜ್ಯಗಳೂ ಮಾರ್ಗದರ್ಶಿ ಸೂತ್ರಗಳನ್ನು ರಚಿಸುವಂತೆ ನಿರ್ದೇಶಿಸಲಾಗಿದೆ. ಆದರೂ, ವಿಧಾನ ಪರಿಷತ್‌ ಸಚಿವಾಲಯ ನನ್ನ ಅರ್ಜಿಯನ್ನು ತಿರಸ್ಕರಿಸಿದೆ’ ಎಂದು ಮೊನಿಷಾ ಅರ್ಜಿಯಲ್ಲಿ ಆರೋಪಿಸಿದ್ದರು.

‘ಇನ್ನೂ ಮಾರ್ಗಸೂಚಿ ರಚನೆಯಾಗಿಲ್ಲ’

‘ಹಿಜಡಾಗಳು ಅಥವಾ ನಪುಂಸಕರನ್ನು ಲೈಂಗಿಕ ಅಲ್ಪಸಂಖ್ಯಾತರೆಂದು ಪರಿಗಣಿಸುವಂತೆ ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದ್ದರೂ ರಾಜ್ಯ ಸರ್ಕಾರ ಈ ತನಕ ಮಾರ್ಗಸೂಚಿ ರಚನೆ ಮಾಡಿಲ್ಲ’ ಎಂಬುದು ಮೊನಿಷಾ ಪರ ವಕೀಲೆ ಎಚ್‌.ಆರ್.ಅನಿತಾ ಅವರ ಆಕ್ಷೇಪ.

‘ಲೈಂಗಿಕ ಅಲ್ಪಸಂಖ್ಯಾತರನ್ನು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ವರ್ಗದವರು ಎಂದೇ ಪರಿಗಣಿಸಬೇಕು ಮತ್ತು ಇವರಿಗೆ ಸರ್ಕಾರಿ ನೌಕರಿಯಲ್ಲಿ ಪ್ರವೇಶ ಒದಗಿಸಬೇಕು ಎಂದು ಹೇಳಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ’ ಎಂದು ವಕೀಲೆ ಎಚ್‌.ಆರ್.ಅನಿತಾ ತಿಳಿಸಿದ್ದಾರೆ.

**

ನಿರ್ಲಕ್ಷಿತ ವರ್ಗಗಳ ಬಗ್ಗೆ ಕೋರ್ಟ್‌ ಗಮನಹರಿಸಬೇಕು. ಇದಕ್ಕೆ ವಕೀಲರು ಸಹಕರಿಸಬೇಕು.

- ಎಲ್‌.ನಾರಾಯಣಯ ಸ್ವಾಮಿ, ನ್ಯಾಯಮೂರ್ತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry