ಗೌರಿ ಲಂಕೇಶ್ ಹತ್ಯೆ; ಮಂಪರು ಪರೀಕ್ಷೆಗೆ ಅನುಮತಿ

ಮಂಗಳವಾರ, ಮಾರ್ಚ್ 26, 2019
27 °C

ಗೌರಿ ಲಂಕೇಶ್ ಹತ್ಯೆ; ಮಂಪರು ಪರೀಕ್ಷೆಗೆ ಅನುಮತಿ

Published:
Updated:
ಗೌರಿ ಲಂಕೇಶ್ ಹತ್ಯೆ; ಮಂಪರು ಪರೀಕ್ಷೆಗೆ ಅನುಮತಿ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಸಂಬಂಧ ಎಸ್‌ಐಟಿ ಅಧಿಕಾರಿಗಳು ಬಂಧಿಸಿರುವ ಮದ್ದೂರಿನ ಕೆ.ಟಿ.ನವೀನ್‌ಕುಮಾರ್ ಅಲಿಯಾಸ್ ಹೊಟ್ಟೆ ಮಂಜನನ್ನು ಮಂಪರುಪರೀಕ್ಷೆಗೆ ಒಳಪಡಿಸಲು 3ನೇ ಎಸಿಎಂಎಂ ನ್ಯಾಯಾಲಯ ಅನುಮತಿ ನೀಡಿದೆ.

ಹತ್ಯೆಗೆ ಒಳಸಂಚು ರೂಪಿಸಿರುವ ಆರೋಪ ಈತನ ಮೇಲಿದೆ. ಗಂಟೆಗೊಂದು ಹೇಳಿಕೆ ನೀಡುತ್ತಿರುವ ಆತನನ್ನು ಪರೀಕ್ಷೆಗೆ ಒಳಪಡಿಸಿದರೆ ಪ್ರಕರಣ ಸಂಬಂಧ ನಿಖರ ಮಾಹಿತಿ ಸಿಗಲಿದೆ ಎಂದು ಎಸ್‌ಐಟಿ ಅಧಿಕಾರಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆಯನ್ನು ಸೋಮವಾರ ಕೈಗೆತ್ತಿಕೊಂಡ ನ್ಯಾಯಾಧೀಶರು, ಪರೀಕ್ಷೆ ಬಗ್ಗೆ ಆರೋಪಿಯ ಅಭಿಪ್ರಾಯ ಪಡೆದರು.

‘ನಾನು ಯಾವುದೇ ತಪ್ಪು ಮಾಡಿಲ್ಲ. ಯಾವುದೇ ಪರೀಕ್ಷೆಗೂ ಒಪ್ಪಿಗೆ ಇದೆ’ ಎಂದು ನವೀನ್‌ ಹೇಳಿದ. ಬಳಿಕ ನ್ಯಾಯಾಧೀಶರು ಆದೇಶ ಪ್ರಕಟಿಸಿದರು.

ಆರೋಪಿ ಪರ ವಕೀಲ ವೇದಮೂರ್ತಿ, ‘ನನ್ನ ಸಮ್ಮುಖದಲ್ಲೇ ಮಂಪರು ಪರೀಕ್ಷೆ ನಡೆಸಬೇಕೆಂದು ನ್ಯಾಯಾಲಯ ಹೇಳಿದೆ’ ಎಂದರು.

‘ಹೈದರಾಬಾದ್‌ ಅಥವಾ ಅಹಮದಾಬಾದ್‌ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಲು ಎಸ್‌ಐಟಿ ಮುಂದಾಗಿದೆ. ಉನ್ನತ ಅಧಿಕಾರಿಗಳ ಅನುಮತಿ ಸಿಕ್ಕ ನಂತರ, ಪ್ರಯೋಗಾಲಯ ಹಾಗೂ ದಿನಾಂಕವನ್ನು ನಿಗದಿಪಡಿಸುವುದಾಗಿ ಹೇಳಿದ್ದಾರೆ’ ಎಂದರು.

ನ್ಯಾಯಾಂಗ ಬಂಧನಕ್ಕೆ: ನವೀನ್‌ನನ್ನು ಮಾ. 13ರವರೆಗೆ ಎಸ್‌ಐಟಿ ಕಸ್ಟಡಿಗೆ ಪಡೆದಿತ್ತು. ಆದರೆ, ಒಂದು ದಿನ ಮುಂಚಿತವಾಗಿಯೇ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಯನ್ನು ಮಾ. 26ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದರು.

ಫೆ. 16ರಂದು ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ನವೀನ್‌ನನ್ನು ವಶಕ್ಕೆ ಪಡೆದಿದ್ದ ಸಿಸಿಬಿ ಪೊಲೀಸರು, ನಾಡಪಿಸ್ತೂಲ್ ಹಾಗೂ ‘ಪಾಯಿಂಟ್ 32’ ರಿವಾಲ್ವರ್‌ನ ಐದು ಗುಂಡುಗಳನ್ನು ಜಪ್ತಿ ಮಾಡಿದ್ದರು. ಗೌರಿ ಹತ್ಯೆಯಲ್ಲೂ ಕೈವಾಡವಿರಬಹುದು ಎಂಬ ಅನುಮಾನದಡಿ ಎಸ್‌ಐಟಿ ಅಧಿಕಾರಿಗಳು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಹತ್ಯೆಯಲ್ಲಿ ಆತನ ಪಾತ್ರವಿರುವುದು ಕಂಡುಬರುತ್ತಿದ್ದಂತೆ ಬಂಧಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry