ಅಹಿಂದ ಹಣೆಪಟ್ಟಿ: ಸಿ.ಎಂ ಬೇಸರ

7

ಅಹಿಂದ ಹಣೆಪಟ್ಟಿ: ಸಿ.ಎಂ ಬೇಸರ

Published:
Updated:
ಅಹಿಂದ ಹಣೆಪಟ್ಟಿ: ಸಿ.ಎಂ ಬೇಸರ

ಬಾಗಲಕೋಟೆ: ‘ಕೆಲವರು ನನ್ನನ್ನು ಅಹಿಂದ ವರ್ಗಕ್ಕೆ ಮಾತ್ರ ಮುಖ್ಯಮಂತ್ರಿ ಎಂದು ಉದ್ದೇಶಪೂರ್ವಕವಾಗಿ ಬಿಂಬಿಸುತ್ತಿದ್ದಾರೆ. ಇದರಿಂದಾಗಿ ಎಲ್ಲಿ ಅವರೂ ಇಲ್ಲ, ಇವರೂ ಇಲ್ಲ ಎಂಬ ಸ್ಥಿತಿ ಬರುವುದೋ ಎಂಬ ಭಯ ಕಾಡುತ್ತಿದೆ’ ಎಂದು ಸೋಮವಾರ ಇಲ್ಲಿ ಆಯೋಜಿಸಿದ್ದ ನೇಕಾರರ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಳಲು ತೋಡಿಕೊಂಡರು.

‘ಈ ವಿಚಾರದಲ್ಲಿ ನಾನು ತಮಾಷೆ ಮಾಡುತ್ತಿಲ್ಲ. ಎಲ್ಲರಿಂದಲೂ ಬೈಸಿಕೊಳ್ಳುವವನು ನಾನೊಬ್ಬನೇ’ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಸಚಿವೆ ಉಮಾಶ್ರೀ, ‘ನೇಕಾರರ ಸಮುದಾಯ ನಿಮ್ಮೊಂದಿಗೆ ಇದೆ. ನೀವು ಒಬ್ಬಂಟಿಯಲ್ಲ’ ಎಂದು ಹೇಳಿದರು.

‘ನಾನು ಸಾಮಾಜಿಕ ನ್ಯಾಯದ ಮೇಲೆ ನಂಬಿಕೆ ಹೊಂದಿದ್ದೇನೆ. ನನ್ನ ಅವಧಿಯಲ್ಲಿ ಅಹಿಂದ ವರ್ಗ ಮಾತ್ರವಲ್ಲ ಎಲ್ಲಾ ವರ್ಗದ ಬಡವರಿಗೂ ಸವಲತ್ತು ಕಲ್ಪಿಸಿದ್ದೇನೆ’ ಎಂದು ಹೇಳಿದ ಸಿದ್ದರಾಮಯ್ಯ,‘ ಒಂದೇ ವೇದಿಕೆಗೆ ಬನ್ನಿ. ಆರೋಪಗಳ ಬಗ್ಗೆ ಚರ್ಚೆ ಮಾಡೋಣ ಎಂದು ಟೀಕಾಕಾರರಿಗೆ ಹೇಳಿದ್ದೇನೆ. ಆದರೆ ಅವರಿಗೆ ಧಮ್ಮಿಲ್ಲ. ಅವರಂತೆ ಸುಳ್ಳು ಹೇಳಿಕೊಂಡು ರಾಜಕಾರಣ ಮಾಡುವ ಅಗತ್ಯ ನನಗಿಲ್ಲ’ ಎಂದು ಬಿಜೆಪಿ ಮುಖಂಡರಿಗೆ ಟಾಂಗ್‌ ನೀಡಿದರು.

‘ದೇವರದಾಸಿಮಯ್ಯ, ಅಂಬಿಗರ ಚೌಡಯ್ಯ, ರಾಣಿ ಚೆನ್ನಮ್ಮ, ವೇಮನ, ಭಗೀರಥ, ಕೆಂಪೇಗೌಡ, ಸೇವಾಲಾಲ್ ಜಯಂತಿ ಆಚರಣೆಯನ್ನು ನಮ್ಮ ಅವಧಿಯಲ್ಲಿಯೇ ಆರಂಭಿಸಿದ್ದೇವೆ. ಸಿದ್ದರಾಮಯ್ಯ ಹಿಂದೂ ವಿರೋಧಿ ಎಂದು ಹೇಳುವ ಬಿಜೆಪಿಯವರು, ತಾವು ಅಧಿಕಾರದಲ್ಲಿದ್ದಾಗ ಈ ಮಹನೀಯರ ಜಯಂತಿಯನ್ನು ಏಕೆ ಆಚರಿಸಲಿಲ್ಲ? ಅವರೆಲ್ಲಾ ಹಿಂದೂಗಳಲ್ಲವೇ’ ಎಂದು ಪ್ರಶ್ನಿಸಿದ ಅವರು, ‘ನಾನು ಕೂಡ ಹಿಂದೂ’ ಎಂದು ಪುನರುಚ್ಚರಿಸಿದರು.

‘ಬಿಜೆಪಿಯವರು ಅಧಿಕಾರಕ್ಕೆ ಬರುವವರೆಗೂ ತಾವು ಹಿಂದೂಗಳು ಎಂದು ಹೇಳುತ್ತಾರೆ. ಅಧಿಕಾರ ಬಂದ ಮೇಲೆ ‘ನಾವಷ್ಟೇ ಮುಂದೆ, ನೀವೆಲ್ಲಾ ಹಿಂದೆ’ ಎಂದು ಹೇಳುತ್ತಾರೆ. ಹಿಂದುಳಿದವರು ಈ ಸೂಕ್ಷ್ಮ ಅರ್ಥ ಮಾಡಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

ಜವಳಿ ಸಚಿವ ರುದ್ರಪ್ಪ ಲಮಾಣಿ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಶಾಸಕರಾದ ಎಚ್.ವೈ.ಮೇಟಿ, ಜೆ.ಟಿ.ಪಾಟೀಲ, ವಿಜಯಾನಂದ ಕಾಶಪ್ಪನವರ, ವಿಧಾನಪರಿಷತ್ ಸದಸ್ಯರಾದ ಎಸ್.ಆರ್.ಪಾಟೀಲ, ಕೆ.ಸಿ.ಕೊಂಡಯ್ಯ, ಎಂ.ಡಿ.ಲಕ್ಷ್ಮೀನಾರಾಯಣ, ನೇಕಾರರ ಅಭಿವೃದ್ಧಿ ನಿಗಮದ ಅಧ್ಯಕ್ಷ ರವೀಂದ್ರ ಕಲಬುರ್ಗಿ ಇದ್ದರು.

ನೇಕಾರರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ

ನೇಕಾರರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸುವ ಹಾಗೂ ನೇಕಾರಿಕೆಯಲ್ಲಿ ತೊಡಗಿದ ಕೂಲಿ ಕಾರ್ಮಿಕರ ಸಾಲ ಮನ್ನಾ ಮಾಡುವ ಬೇಡಿಕೆಯನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮೇಳನದಲ್ಲಿ ಘೋಷಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry