ಷೇರುಪೇಟೆ: ಮರಳಿದ ಉತ್ಸಾಹ

7
611 ಅಂಶ ಜಿಗಿದ ಸೂಚ್ಯಂಕ; 2 ವರ್ಷದಲ್ಲಿನ ದಿನದ ಗರಿಷ್ಠ

ಷೇರುಪೇಟೆ: ಮರಳಿದ ಉತ್ಸಾಹ

Published:
Updated:
ಷೇರುಪೇಟೆ: ಮರಳಿದ ಉತ್ಸಾಹ

ಮುಂಬೈ : ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು, ಸೋಮವಾರದ ವಹಿವಾಟಿನಲ್ಲಿ 611 ಅಂಶಗಳಷ್ಟು ಏರಿಕೆ ಕಂಡು ಚೇತರಿಕೆ ಹಾದಿಗೆ ಮರಳಿದೆ.

ಇದು ಎರಡು ವರ್ಷಗಳಲ್ಲಿನ ದಿನದ ಗರಿಷ್ಠ ಏರಿಕೆಯಾಗಿದೆ. ಪೇಟೆಯ ವಹಿವಾಟು ಕಳೆದ ವಾರ ಸತತ ಕುಸಿತ ಕಂಡಿತ್ತು. ಜಾಗತಿಕ ಮಾರುಕಟ್ಟೆಯಲ್ಲಿನ ಸಕಾರಾತ್ಮಕ ವಹಿವಾಟಿನಿಂದಾಗಿ ಖರೀದಿ ಉತ್ಸಾಹ ಕಂಡು ಬಂದಿತು. ಇದರ ಫಲವಾಗಿ ವಾರದ ಗರಿಷ್ಠ ಮಟ್ಟವಾದ 33,917 ಅಂಶಗಳಲ್ಲಿ  ವಹಿವಾಟು ಅಂತ್ಯಕಂಡಿತು.

ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದ್ದ ಲೋಹ, ಅನಿಲ ಮತ್ತು ತೈಲ, ಎಫ್‌ಎಂಸಿಜಿ, ಬ್ಯಾಂಕಿಂಗ್ ಷೇರುಗಳ ಮೇಲೆ ಹೂಡಿಕೆ ಮಾಡಲು ವಹಿವಾಟುದಾರರು ಆಸಕ್ತಿ ತೋರಿಸಿದ್ದರಿಂದ  ಖರೀದಿ ಉತ್ಸಾಹ ಕಂಡು ಬಂದಿತು.

ಸಣ್ಣ ಪ್ರಮಾಣದ ಹೂಡಿಕೆದಾರರು ಮತ್ತು ದೇಶಿ ಹೂಡಿಕೆದಾರರು ಷೇರುಗಳ ಖರೀದಿಗೆ ಆಸಕ್ತಿ ತೋರಿಸಿದ್ದರಿಂದ ಆರಂಭದಿಂದಲೇ ಪೇಟೆಯಲ್ಲಿ ಮಾರಾಟ ಚಟುವಟಿಕೆಗಳು ಗರಿಗೆದರಿದವು.

ರಾಷ್ಟ್ರೀಯ ಷೇರುಪೇಟೆ (ನಿಫ್ಟಿ) ಕೂಡ 194 ಅಂಶ ಏರಿಕೆ ಕಂಡು, 10,421 ಅಂಶಗಳಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿತು. ವಹಿವಾಟಿನ ಒಂದು ಹಂತದಲ್ಲಿ 10,433 ಅಂಶಗಳ ಗರಿಷ್ಠ ಮಟ್ಟಕ್ಕೂ ತಲುಪಿತ್ತು.

ಶುಕ್ರವಾರದ ವಹಿವಾಟಿನಲ್ಲಿ ವಿದೇಶಿ ಹೂಡಿಕೆದಾರರು ₹550 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದರು. ದೇಶಿ ಸಾಂಸ್ಥಿಕ ಹೂಡಿಕೆದಾರರು ₹65 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು.

2016 ಮಾರ್ಚ್‌ 1ರಂದು ಷೇರುಪೇಟೆ 777 ಅಂಶಗಳಷ್ಟು ಗರಿಷ್ಠ ಏರಿಕೆ ದಾಖಲಿಸಿತ್ತು.

ಸಂವೇದಿ ಸೂಚ್ಯಂಕದ 30 ಷೇರುಗಳ ಪೈಕಿ 28 ಷೇರುಗಳು ಲಾಭ ಬಾಚಿಕೊಂಡಿವೆ.

ಭಾರ್ತಿ ಏರ್‌ಟೆಲ್‌, ಐಟಿಸಿ, ಎನ್‌ಟಿಪಿಸಿ ಮತ್ತು ಟಾಟಾ ಮೋಟರ್ಸ್‌ ಷೇರುಗಳು ಲಾಭಗಳಿಕೆಯಲ್ಲಿ ಮುಂಚೂಣಿಯಲ್ಲಿ ಇದ್ದವು.

***

₹ 1.78 ಲಕ್ಷ ಕೋಟಿ ಸಂಪತ್ತು ವೃದ್ಧಿ

ದಿನದ ವಹಿವಾಟಿನಲ್ಲಿ ಹೂಡಿಕೆದಾರರ ಸಂಪತ್ತು ₹ 1.78 ಲಕ್ಷ ಕೋಟಿಗಳಿಗೆ ಹೆಚ್ಚಳಗೊಂಡಿದೆ. ಮಾರುಕಟ್ಟೆಯ ಒಟ್ಟಾರೆ ಬಂಡವಾಳ ಮೌಲ್ಯ ₹ 144 ಲಕ್ಷ ಕೋಟಿಗಳಿಗೆ ತಲುಪಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry