ಲಾಲ್‌ಬಾಗ್‌ ಇತಿಹಾಸ ಹೇಳಲಿದೆ ‘ಲೆಕ್ಕಶಾಖೆ’

ಗುರುವಾರ , ಮಾರ್ಚ್ 21, 2019
26 °C

ಲಾಲ್‌ಬಾಗ್‌ ಇತಿಹಾಸ ಹೇಳಲಿದೆ ‘ಲೆಕ್ಕಶಾಖೆ’

Published:
Updated:
ಲಾಲ್‌ಬಾಗ್‌ ಇತಿಹಾಸ ಹೇಳಲಿದೆ ‘ಲೆಕ್ಕಶಾಖೆ’

ಬೆಂಗಳೂರು: ಲಾಲ್‌ಬಾಗ್‌ಗೆ ಭೇಟಿ ನೀಡುವ ಪ್ರವಾಸಿಗರಿಗೆ ಉದ್ಯಾನದ ಇತಿಹಾಸ‌ ತಿಳಿಸುವ ಉದ್ದೇಶದಿಂದ ಇಲ್ಲಿ ‘ವಸ್ತು ಸಂಗ್ರಹಾಲಯ’ ನಿರ್ಮಿಸಲು ರಾಜ್ಯ ತೋಟಗಾರಿಕೆ ಇಲಾಖೆ ಮುಂದಾಗಿದೆ.

ಸಸ್ಯೋದ್ಯಾನ ನಿರ್ಮಾಣವಾದ ಬಗೆ, ಇದರ ಅಭಿವೃದ್ಧಿಗೆ ಸಹಕರಿಸಿದ ಮಹನೀಯರ ಮಾಹಿತಿ, ಹಳೆಯ ಛಾಯಾಚಿತ್ರಗಳು, ಗಾಜಿನ ಮನೆ ನಿರ್ಮಾಣದ ಹಿನ್ನೆಲೆ, ಈಗಿನ ಚಿತ್ರಣ... ಮುಂತಾದ ವಿವರ ಕಟ್ಟಿಕೊಡುವ ಪ್ರಯತ್ನ ಇದಾಗಿದೆ.

‘ಯೋಜನೆಯನ್ನು 2018–19ನೇ ಸಾಲಿನಲ್ಲಿ ಕಾರ್ಯಗತ ಮಾಡಲು ಉದ್ದೇಶಿಸಿದ್ದೇವೆ. ಗಾಜಿನ ಮನೆಗೆ ಹತ್ತಿರವಿರುವ ಲೆಕ್ಕಶಾಖೆ ಕಟ್ಟಡವನ್ನು ಇದಕ್ಕೆ ಬಳಸಲು ಚಿಂತಿಸಲಾಗಿದೆ’ ಎಂದು ತೋಟಗಾರಿಕೆ ಇಲಾಖೆಯ ಆಯುಕ್ತ ವೈ.ಎಸ್‌. ಪಾಟೀಲ ತಿಳಿಸಿದರು.

‘ಲೆಕ್ಕಶಾಖೆ ವಿಭಾಗ ಸ್ವತಂತ್ರವಾಗಿದ್ದು, ಅಲ್ಲಿನ ಸಿಬ್ಬಂದಿಗಾಗಿ ಪ್ರತ್ಯೇಕ ಸ್ಥಳ ನಿಯೋಜಿಸಬೇಕಿದೆ. ಒಟ್ಟು 12 ಮಂದಿ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರತ್ಯೇಕವಾಗಿ ಹೊಸ ಕಟ್ಟಡ ನಿರ್ಮಿಸಲು ಇಲ್ಲಿ ಸ್ಥಳವಿಲ್ಲ. ಹಾಗಾಗಿ ಈಗಿರುವ ಕಟ್ಟಡಗಳ ಮೇಲೆ ಹೊಸ ಕಟ್ಟಡ ನಿರ್ಮಿಸುವ ಅಥವಾ ಬಳಸದ ಕಟ್ಟಡದಲ್ಲಿ ಸ್ಥಳಾವಕಾಶ ಒದಗಿಸುವ ಬಗ್ಗೆ ಪರಿಶೀಲಿಸುತ್ತಿದ್ದೇವೆ’ ಎಂದು ವಿವರಿಸಿದರು.

‘ಲೆಕ್ಕಶಾಖೆಯೂ ಪುರಾತನ ಕಟ್ಟಡ. ಕೃಂಬಿಗಲ್‌ ಕಾಲದಲ್ಲಿ ಇದೊಂದು ವಸ್ತು ಸಂಗ್ರಹಾಲಯವಾಗಿತ್ತು ಎಂದು ಕೇಳಿದ್ದೇವೆ. ನಂತರ ಇದು ಅಧಿಕಾರಿಗಳ ವಸತಿಗೃಹವಾಯಿತು. ಸುಮಾರು 50 ವರ್ಷಗಳ ಹಿಂದಿನಿಂದ ಲೆಕ್ಕಶಾಖೆಯಾಗಿ ಬಳಸಲಾಗುತ್ತಿದೆ’ ಎಂದು ಇಲಾಖೆಯ ಜಂಟಿ ನಿರ್ದೇಶಕ ಎಂ. ಜಗದೀಶ್ ಮಾಹಿತಿ ನೀಡಿದರು.

‘ವಸ್ತುಸಂಗ್ರಹಾಲಯದಲ್ಲಿ ಏನೆಲ್ಲ ಇರಬೇಕು ಎಂಬ ಬಗ್ಗೆ ಚರ್ಚಿಸುತ್ತಿದ್ದೇವೆ. ಅದಕ್ಕೆ ಪೂರಕವಾದ ಮಾಹಿತಿಗಳು ನಮ್ಮ ಇವೆ. ಮೈಸೂರು ಉದ್ಯಾನ ಕಲಾಸಂಘದ ಶತಮಾನೋತ್ಸವ ಸಂದರ್ಭದಲ್ಲಿ ವಿವಿಧ ಉದ್ಯಾನಗಳ ಲೇಖನಗಳನ್ನು ಸಂಗ್ರಹಿಸಿ ಪುಸ್ತಕ ಹೊರತಂದಿದ್ದು, ಅದರಲ್ಲಿ ಸಾಕಷ್ಟು ಮಾಹಿತಿ ಇದೆ. ಜೊತೆಗೆ ಗಾಜಿನ ಮನೆಗೆ ನೂರು ವರ್ಷ ಸಂದ ನೆನಪಿಗಾಗಿ ಪ್ರಕಟಿಸಿದ ‘ಜ್ಯುವೆಲ್‌ ಆಫ್‌ ಲಾಲ್‌ಬಾಗ್‌’ ಪುಸ್ತಕದಲ್ಲಿಯೂ ಸಾಕಷ್ಟು ಮಾಹಿತಿಗಳಿವೆ. ಎಲ್ಲವನ್ನು ಕ್ರೋಡೀಕರಿಸಿ ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುತ್ತದೆ’ ಎಂದು ಹೇಳಿದರು. 

‘250–300 ವರ್ಷಗಳ ಹಳೆಯ ಮರಗಳ ತುಂಡುಗಳನ್ನು ಸಂಗ್ರಹಿಸಿಟ್ಟಿದ್ದೇವೆ. ಅಪರೂಪದ ಛಾಯಾಚಿತ್ರಗಳಿವೆ. ಅವುಗಳನ್ನು ಇಲ್ಲಿ ಪ್ರದರ್ಶಿಸುತ್ತೇವೆ. ಇದು ನಮ್ಮ ಪ್ರಾಥಮಿಕ ಹಂತದ ಆಲೋಚನೆಯಷ್ಟೇ. ತಜ್ಞರ ಅಭಿಪ್ರಾಯ ಪಡೆದು ಮುಂದಿನ ರೂಪರೇಷೆ ಸಿದ್ಧಪಡಿಸುತ್ತೇವೆ’ ಎಂದರು.

‘ಸಾಕಷ್ಟು ವಿದೇಶಿ ಪ್ರವಾಸಿಗರು ಲಾಲ್‌ಬಾಗ್‌ಗೆ ಭೇಟಿ ನೀಡುತ್ತಾರೆ. ಅವರಿಗೆ ಇದರ ಕುರಿತು ಸಂಪೂರ್ಣ ಮಾಹಿತಿ ಸಿಗುವುದಿಲ್ಲ. ಜೊತೆಗೆ ನಮ್ಮ ಮುಂದಿನ ಪೀಳಿಗೆಗೂ ಉದ್ಯಾನದ ಮಹತ್ವದ ಬಗ್ಗೆ ತಿಳಿಸಲು ಇದು ನೆರವಾಗುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry