ಕಗಿಸೊ ರಬಾಡ ದಾಳಿಗೆ ಕಂಗೆಟ್ಟ ಆಸ್ಟ್ರೇಲಿಯಾ

7
ಕ್ರಿಕೆಟ್‌: ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಗೆ ಜಯ

ಕಗಿಸೊ ರಬಾಡ ದಾಳಿಗೆ ಕಂಗೆಟ್ಟ ಆಸ್ಟ್ರೇಲಿಯಾ

Published:
Updated:
ಕಗಿಸೊ ರಬಾಡ ದಾಳಿಗೆ ಕಂಗೆಟ್ಟ ಆಸ್ಟ್ರೇಲಿಯಾ

ಪೋರ್ಟ್‌ ಎಲಿಜಬೆತ್‌ : ಕಗಿಸೊ ರಬಾಡ (54ಕ್ಕೆ6) ಶರವೇಗದ ದಾಳಿಗೆ ಸೋಮವಾರ ಸೇಂಟ್‌ ಜಾರ್ಜ್‌ ಪಾರ್ಕ್‌ ಅಂಗಳದಲ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ಗಳು ಬೆದರಿದರು.

ರಬಾಡ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಎರಡನೇ ಟೆಸ್ಟ್‌ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಗೆದ್ದಿತು. ಇದರೊಂದಿಗೆ 4 ಪಂದ್ಯಗಳ ಸರಣಿಯಲ್ಲಿ 1–1ರಲ್ಲಿ ಸಮಬಲ ಸಾಧಿಸಿತು.

5 ವಿಕೆಟ್‌ಗೆ 180ರನ್‌ಗಳಿಂದ ಸೋಮವಾರ ಆಟ ಮುಂದುವರಿಸಿದ ಕಾಂಗರೂಗಳ ನಾಡಿನ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 79 ಓವರ್‌ಗಳಲ್ಲಿ 239ರನ್‌ಗಳಿಗೆ ಆಲೌಟ್‌ ಆಯಿತು.

101ರನ್‌ಗಳ ಗೆಲುವಿನ ಗುರಿಯನ್ನು ಹರಿಣಗಳ ನಾಡಿನ ತಂಡ 22.5 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಆಘಾತ ನೀಡಿದ ರಬಾಡ: ನಾಲ್ಕನೇ ದಿನದಾಟ ಆರಂಭಿಸಿದ ಆಸ್ಟ್ರೇಲಿಯಾ ತಂಡ ಭಾನುವಾರದ ಮೊತ್ತಕ್ಕೆ 6ರನ್‌ ಸೇರಿಸುವಷ್ಟರಲ್ಲಿ ಮಿಷೆಲ್‌ ಮಾರ್ಷ್‌ (45; 125ಎ, 4ಬೌಂ, 1ಸಿ) ವಿಕೆಟ್‌ ಕಳೆದುಕೊಂಡಿತು. ದಿನದ ಮೊದಲ ಓವರ್‌ನ ಕೊನೆಯ ಎಸೆತದಲ್ಲಿ ರಬಾಡ, ಮಾರ್ಷ್‌ ಅವರನ್ನು ಬೌಲ್ಡ್‌ ಮಾಡಿದರು.

ಪ್ಯಾಟ್‌ ಕಮಿನ್ಸ್‌ (5) ಮತ್ತು ಮಿಷೆಲ್‌ ಸ್ಟಾರ್ಕ್‌ (1) ಅವರಿಗೂ ರಬಾಡ ಪೆವಿಲಿಯನ್‌ ಹಾದಿ ತೋರಿಸಿ ದಕ್ಷಿಣ ಆಫ್ರಿಕಾಕ್ಕೆ ಮೇಲುಗೈ ತಂದುಕೊಟ್ಟರು.

ಸುಲಭ ಗುರಿ ಬೆನ್ನಟ್ಟಿದ ಫಾಫ್‌ ಡು ಪ್ಲೆಸಿ ಬಳಗ ಆರನೇ ಓವರ್‌ನಲ್ಲಿ ಮೊದಲ ವಿಕೆಟ್‌ ಕಳೆದುಕೊಂಡಿತು. ಏಡನ್‌ ಮಾರ್ಕರಮ್‌ 28 ಎಸೆತಗಳಲ್ಲಿ 3 ಬೌಂಡರಿ ಸಹಿತ 21ರನ್‌ ಗಳಿಸಿ ಜೋಶ್‌ ಹ್ಯಾಜಲ್‌ವುಡ್‌ಗೆ ವಿಕೆಟ್‌ ನೀಡಿದರು. ಇದರ ಬೆನ್ನಲ್ಲೇ ಡೀನ್‌ ಎಲ್ಗರ್‌ (5) ಪೆವಿಲಿಯನ್‌ ಸೇರಿಕೊಂಡರು.

ಈ ಹಂತದಲ್ಲಿ ಒಂದಾದ ಹಾಶೀಮ್‌ ಆಮ್ಲಾ (27; 42ಎ, 3ಬೌಂ) ಮತ್ತು ಎಬಿ ಡಿವಿಲಿಯರ್ಸ್‌ (28; 26ಎ, 4ಬೌಂ, 1ಸಿ) ಮೂರನೇ ವಿಕೆಟ್‌ ಜೊತೆಯಾಟದಲ್ಲಿ 49ರನ್‌ ಸೇರಿಸಿ ತಂಡದ ಜಯದ ಹಾದಿ ಸುಗಮ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ಆಸ್ಟ್ರೇಲಿಯಾ: ಮೊದಲ ಇನಿಂಗ್ಸ್‌: 71.3 ಓವರ್‌ಗಳಲ್ಲಿ 243 ಮತ್ತು 79 ಓವರ್‌ಗಳಲ್ಲಿ 239 (ಮಿಷೆಲ್‌ ಮಾರ್ಷ್‌ 45, ಟಿಮ್‌ ಪೇನ್‌ ಔಟಾಗದೆ 28, ಜೋಶ್‌ ಹ್ಯಾಜಲ್‌ವುಡ್‌ 17; ಕಗಿಸೊ ರಬಾಡ 54ಕ್ಕೆ6, ಕೇಶವ ಮಹರಾಜ್‌ 90ಕ್ಕೆ2, ಲುಂಗಿ ಗಿಡಿ 24ಕ್ಕೆ2).

ದಕ್ಷಿಣ ಆಫ್ರಿಕಾ: ಪ್ರಥಮ ಇನಿಂಗ್ಸ್‌: 118.4 ಓವರ್‌ಗಳಲ್ಲಿ 382 ಮತ್ತು 22.5 ಓವರ್‌ಗಳಲ್ಲಿ 4 ವಿಕೆಟ್‌ಗೆ 102 (ಏಡನ್‌ ಮಾರ್ಕರಮ್‌ 21, ಹಾಶೀಮ್‌ ಆಮ್ಲಾ 27, ಎಬಿ ಡಿವಿಲಿಯರ್ಸ್‌ 28, ತೆವುನಿಶ್‌ ಡಿ ಬ್ರ್ಯೂನ್‌ ಔಟಾಗದೆ 15; ಜೋಶ್ ಹ್ಯಾಜಲ್‌ವುಡ್‌ 26ಕ್ಕೆ1, ನೇಥನ್‌ ಲಿಯೊನ್‌ 44ಕ್ಕೆ2, ಪ್ಯಾಟ್‌ ಕಮಿನ್ಸ್‌ 13ಕ್ಕೆ1). ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 6 ವಿಕೆಟ್‌ ಗೆಲುವು. 4 ಪಂದ್ಯಗಳ ಸರಣಿ 1–1ರಲ್ಲಿ ಸಮಬಲ.

ಪಂದ್ಯಶ್ರೇಷ್ಠ: ಕಗಿಸೊ ರಬಾಡ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry