ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆದೇಶ ಕಾಯ್ದಿರಿಸಿದ ಹೈಕೋರ್ಟ್‌

Last Updated 12 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಮಿ ಪುತ್ರ ವಿದ್ವತ್‌ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಮೊಹಮದ್‌ ನಲಪಾಡ್‌ ಹ್ಯಾರಿಸ್‌ ಸಲ್ಲಿಸಿರುವ ಜಾಮೀನು ಅರ್ಜಿ ಮೇಲಿನ ಆದೇಶವನ್ನು ಹೈಕೋರ್ಟ್‌ ಕಾಯ್ದಿರಿಸಿದೆ.

ನ್ಯಾಯಮೂರ್ತಿ ಶ್ರೀನಿವಾಸ್‌ ಹರೀಶ್ ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಸೋಮವಾರ ಈ ಕುರಿತ ಅರ್ಜಿಯ ವಿಚಾರಣೆ ನಡೆಸಿ ಬುಧವಾರ (ಮಾ.14) ಆದೇಶ ಪ್ರಕಟಿಸುವುದಾಗಿ ತಿಳಿಸಿತು.

ವಿಚಾರಣೆ ವೇಳೆ ನಲಪಾಡ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮುಂದುವರಿಸಿ, ‘ವಿದ್ವತ್‌ ಮೇಲೆ ನಕ್ಕಲ್‌ ರಿಂಗ್‌ನಿಂದ ಆರೋಪಿಗಳ ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು. ಇದೊಂದು ಕುಡಿದ ಮತ್ತಿನಲ್ಲಿ ಬಾರ್ ಅಂಡ್‌ ರೆಸ್ಟೊರೆಂಟ್‌ನಲ್ಲಿ ನಡೆದಿರುವ ಸಣ್ಣ ಗಲಾಟೆ’ ಎಂದು ಪ್ರತಿಪಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ‘ನಲಪಾಡ್‌ ವಿದ್ವತ್‌ಗೆ ಹೊಡೆದಿರುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಕಾಣ್ತಿದೆಯಲ್ರೀ. ಆದರೂ ನೀವು ಹೊಡೆದಿಲ್ಲ ಎನ್ನುತ್ತಿದ್ದೀರಿ’ ಎಂದು ನಾಗೇಶ್‌ ಅವರನ್ನು ಪ್ರಶ್ನಿಸಿದರು.

ಇದಕ್ಕೆ ನಾಗೇಶ್, ‘ಸ್ವಾಮಿ ನಾನು ಆ ವಿಡಿಯೊ ನೋಡೇ ಇಲ್ಲ. ದೂರು ಮತ್ತು ಪ್ರತ್ಯಕ್ಷದರ್ಶಿಯ ಅನುಸಾರ ಗಲಾಟೆಯ ವೇಳೆ ಜಗ್‌ ಹಾಗೂ ಬಾಟಲಿಗಳನ್ನು ತೂರಲಾಗಿದೆ.ಅಷ್ಟಕ್ಕೂ ವಿಡಿಯೊವನ್ನು ಪ್ರಾಸಿಕ್ಯೂಷನ್‌ ದಾಖಲೆಯಾಗಿ ನೀಡಿಲ್ಲ’ ಎಂದು ಹೇಳಿದರು.

‘ಪೊಲಿಸರು ಸ್ಥಳ ಮಹಜರು ನಡೆಸಿದ ವೇಳೆ ತಮ್ಮ ಅಮಾನತು ಪಂಚನಾಮೆಯಲ್ಲಿ ಎಲ್ಲವನ್ನೂ ನಮೂದು ಮಾಡಿದ್ದಾರೆ. ಹಲ್ಲೆಗೆ ಬಳಸಿದ ಜಗ್‌ ಮತ್ತು ಬಾಟಲಿ ಚೂರುಗಳನ್ನು ಸಂಗ್ರಹಿಸಿದ್ದಾರೆ. ಆದರೆ, ಇಲ್ಲೆಲ್ಲೂ ನಕ್ಕಲ್‌ ರಿಂಗ್ ಪ್ರಸ್ತಾಪವೇ ಇಲ್ಲ’ ಎಂದು ಹೇಳಿದರು.

‘ವಿದ್ವತ್‌ ಆರೋಗ್ಯ ಸರಿಯಾಗಿಯೇ ಇದೆ. ವೈದ್ಯರು ನೀಡಿರುವ ದಾಖಲೆಗಳನ್ನು ತಿರುಚಿಲ್ಲ. ಪ್ರಾಸಿಕ್ಯೂಷನ್‌ ತನಿಖೆಯ ದಿಕ್ಕು ತಪ್ಪಿಸುತ್ತಿದೆ’ ಎಂದು ಆರೋಪಿಸಿದರು.

‘ನಲಪಾಡ್‌ ತಂದೆ ಪ್ರಭಾವಿ ಎನ್ನುವುದಾದರೆ, ವಿದ್ವತ್‌ ಅವರನ್ನು ಬಿಜೆಪಿ ಮುಖಂಡ ಆರ್. ಅಶೋಕ್, ಉನ್ನತ ಮಟ್ಟದ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದಾರೆ. ಇವರ ಭೇಟಿಯ ನಂತರವೇ ಎಫ್‌ಐಆರ್‌ನಲ್ಲಿ ಭಾರತೀಯ ದಂಡ ಸಂಹಿತೆ ಕಲಂ 307 ಅನ್ನು ಸೇರಿಸಲಾಗಿದೆ’ ಎಂದರು.

‘ವಿದ್ವತ್ ಮತ್ತು ನಲಪಾಡ್ ಇಬ್ಬರೂ ಪ್ರತಿಷ್ಠಿತಿ ಕುಟುಂಬಕ್ಕೆ ಸೇರಿದವರಾದ್ದರಿಂದ ಸಾರ್ವಜನಿಕರ ಗಮನ ಈ ಪ್ರಕರಣದ ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ. ಮಾಧ್ಯಮಗಳು ಇದನ್ನು ಇನ್ನಷ್ಟು ವೈಭವೀಕರಿಸಿವೆ’ ಎಂದು ಆಕ್ಷೇಪಿಸಿದರು.

ಪ್ರಾಸಿಕ್ಯೂಷನ್‌ ಪರ ವಕೀಲ ಎಂ.ಎಸ್.ಶ್ಯಾಮಸುಂದರ್, ‘ವೈದ್ಯಕೀಯ ವರದಿ ನಲಪಾಡ್‌ ತಂದೆಗೆ ಹೇಗೆ ಲಭಿಸಿತು ಎಂಬ ಬಗ್ಗೆ ಅರ್ಜಿದಾರರ ಪರ ವಕೀಲರು ಕೋರ್ಟ್‌ಗೆ ಸರಿಯಾಗಿ ವಿವರಿಸಿಲ್ಲ. ವಿದ್ವತ್‌ ಇನ್ನೂ ಸಂಪೂರ್ಣವಾಗಿ ಗುಣಮುಖರಾಗಿಲ್ಲ. ವೈದ್ಯಕೀಯ ವರದಿಯನ್ನು ಈತನಕ ತನಿಖಾಧಿಕಾರಿಗೆ ನೀಡಿಲ್ಲ. ಈ ಹಂತದಲ್ಲಿ ಆರೋಪಿಗೆ ಜಾಮೀನು ನೀಡಬಾರದು’ ಎಂದು ಪುನರುಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT