ಪಾಲಿಕೆ ಸದಸ್ಯನ ಪತ್ನಿ ಬಂಧನ, ಬಿಡುಗಡೆ

7

ಪಾಲಿಕೆ ಸದಸ್ಯನ ಪತ್ನಿ ಬಂಧನ, ಬಿಡುಗಡೆ

Published:
Updated:

ಬೆಂಗಳೂರು: ಬಾಲಕಿ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಮಾರಪ್ಪನ ಪಾಳ್ಯ ವಾರ್ಡ್‌ನ ಪಾಲಿಕೆ ಸದಸ್ಯ ಎಂ.ಮಹಾದೇವ ಪತ್ನಿ ಸುಧಾ ಅವರನ್ನು ಬಂಧಿಸಿದ್ದ ಪೊಲೀಸರು, ಜಾಮೀನು ಮೇಲೆ ಬಿಡುಗಡೆ ಮಾಡಿದ್ದಾರೆ.

ನಂದಿನಿ ಲೇಔಟ್‌ನಲ್ಲಿ ವಾಸವಿರುವ ಮಹಾದೇವ ಅವರ ಮನೆಯಲ್ಲಿ ಬಾಲಕಿಯ ಚಿಕ್ಕಮ್ಮ ಕೆಲಸ ಮಾಡುತ್ತಿದ್ದರು. ಬಾಲಕಿಯನ್ನೂ ತಮ್ಮ ಜತೆಗಿಟ್ಟುಕೊಂಡಿದ್ದರು. ಆಕೆ ಮೇಲೆ ಸುಧಾ ಹಲ್ಲೆ ಮಾಡಿರುವುದಾಗಿ ಪೋಷಕರು ದೂರು ನೀಡಿದ್ದರು ಎಂದು ಪೊಲೀಸರು ತಿಳಿಸಿದರು.

‘ಶುಕ್ರವಾರ ಸಂಜೆ ಮನೆಯ ಟೇಬಲ್ ಮೇಲೆ ₹8,000 ಹಣವಿಟ್ಟು ಸುಧಾ ಆಸ್ಪತ್ರೆಗೆ ಹೋಗಿದ್ದರು. ಅದೇ ವೇಳೆ ಮಗಳು ಹಾಗೂ ಬಾಲಕಿ ಒಟ್ಟಿಗೆ ಆಟವಾಡುತ್ತಿದ್ದರು. ಸುಧಾ ರಾತ್ರಿ ವಾಪಸ್‌ ಬಂದಾಗ, ₹5,000 ನಾಪತ್ತೆಯಾಗಿತ್ತು. ಅದೇ ಕಾರಣಕ್ಕೆ ಬಾಲಕಿ ಮೇಲೆ ಹಲ್ಲೆ ಮಾಡಿದ್ದರು’ ಎಂದು ಹೇಳಿದರು.

‘ಘಟನೆ ಕುರಿತು ಪಕ್ಕದ ಮನೆಯವರಿಗೆ ಹೇಳಿದ್ದ ಬಾಲಕಿ, ಅವರ ಸಹಾಯದಿಂದ ಆಸ್ಪತ್ರೆಗೆ ಹೋಗಿದ್ದಳು. ನಂತರ ಪೋಷಕರಿಗೆ ವಿಷಯ ತಿಳಿಸಿದ್ದಳು. ಪ್ರಕರಣ ಸಂಬಂಧ ಸೋಮವಾರ ಮಧ್ಯಾಹ್ನ ಸುಧಾರನ್ನು ಬಂಧಿಸಿ, ಠಾಣೆ ಜಾಮೀನು ಮೇಲೆ ಸಂಜೆಯೇ ಬಿಡುಗಡೆ ಮಾಡಿದೆವು’ ಎಂದರು.

ಹೊಡೆದದ್ದು ನಾನಲ್ಲ, ಚಿಕ್ಕಮ್ಮ: ‘ಹಣ ನಾಪತ್ತೆ ಬಗ್ಗೆ ಬಾಲಕಿ ಏನನ್ನೂ ಹೇಳಿರಲಿಲ್ಲ. ಆ ಬಗ್ಗೆ ಅವರ ಚಿಕ್ಕಮ್ಮನಿಗೆ ಹೇಳಿದ್ದೆ. ಅವರೇ ಆಕೆಗೆ ಹೊಡೆದಿದ್ದರು’ ಎಂದು ಸುಧಾ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.

‘ಚಿಕ್ಕಮ್ಮ ಅವರೇ ಮನೆಗೆಲಸ ಮಾಡುತ್ತಿದ್ದರು. ಬಾಲಕಿಯಿಂದ ಯಾವುದೇ ಕೆಲಸ ಮಾಡಿಸಿಕೊಳ್ಳುತ್ತಿರಲಿಲ್ಲ. ಆಕೆಯನ್ನು ಮನೆ ಮಗಳಂತೆ ನೋಡಿಕೊಂಡಿದ್ದೆವು. ಈಗ ಏಕೆ ದೂರು ಕೊಟ್ಟರು ಎಂಬುದು ಗೊತ್ತಿಲ್ಲ’ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry