ಬಿಎಫ್‌ಸಿ ಎದುರಾಳಿ ಇಂದು ನಿರ್ಧಾರ

ಸೋಮವಾರ, ಮಾರ್ಚ್ 25, 2019
31 °C
ಐಎಸ್‌ಎಲ್‌: ಗೋವಾ ಎಫ್‌ಸಿಗೆ ಸವಾಲಿನ ಪಂದ್ಯ

ಬಿಎಫ್‌ಸಿ ಎದುರಾಳಿ ಇಂದು ನಿರ್ಧಾರ

Published:
Updated:
ಬಿಎಫ್‌ಸಿ ಎದುರಾಳಿ ಇಂದು ನಿರ್ಧಾರ

ಚೆನ್ನೈ : ಐಎಸ್‌ಎಲ್‌ ಸೆಮಿಫೈನಲ್‌ನ ಮತ್ತೊಂದು ರೋಚಕ ಹಣಾಹಣಿಗೆ ಇಲ್ಲಿನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜುಗೊಂಡಿದೆ.

ಎರಡನೇ ಸೆಮಿಫೈನಲ್‌ನ ಎರಡನೇ ಲೆಗ್ ಪಂದ್ಯದಲ್ಲಿ ಗೆದ್ದು ಫೈನಲ್‌ ಪ್ರವೇಶಕ್ಕಾಗಿ ಚೆನ್ನೈಯಿನ್ ಎಫ್‌ಸಿ ಮತ್ತು ಎಫ್‌ಸಿ ಗೋವಾ ತಂಡಗಳು ಸೆಣಸಲಿವೆ. ಪಂದ್ಯ ಮಂಗಳವಾರ ರಾತ್ರಿ 8 ಗಂಟೆಗೆ ಆರಂಭವಾಗಲಿದೆ.

ಗೋವಾದಲ್ಲಿ ನಡೆದ ಮೊದಲ ಲೆಗ್‌ ಪಂದ್ಯ 1–1ರಿಂದ ಸಮ ಆಗಿತ್ತು. ಆದ್ದರಿಂದ ಅವೇ ಗೋಲ್ ಪದ್ಧತಿಯಡಿ ಚೆನ್ನೈಯಿನ್ ಎಫ್‌ಸಿ ತವರಿನ ಪಂದ್ಯದಲ್ಲಿ ಗೋಲು ರಹಿತ ಡ್ರಾ ಸಾಧಿಸಿದರೂ ಫೈನಲ್‌ಗೆ ಏರುವ ಅವಕಾಶವಿದೆ.

2015ರ ಆವೃತ್ತಿಯ ಫೈನಲ್‌ನಲ್ಲಿ ಈ ಎರಡು ತಂಡಗಳು ಮುಖಾಮುಖಿಯಾದಾಗ ಚೆನ್ನೈ ಗೆದ್ದಿತ್ತು. ನಂತರ ಉಭಯ ತಂಡಗಳು ಅನೇಕ ಬಾರಿ ಮುಖಾಮುಖಿಯಾಗಿವೆ. ಆದರೆ ಸೆಮಿಫೈನಲ್‌ನಂತಹ ಮಹತ್ವದ ಪಂದ್ಯದಲ್ಲಿ ಎದುರಾಗುತ್ತಿರುವುದು ಇದೇ ಮೊದಲು. ಆದ್ದರಿಂದ ಈ ಪಂದ್ಯ ಮಹತ್ವ ಪಡೆದಿದೆ.

2015ರಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳಲು ಗೋವಾ ಶ್ರಮಿಸಲಿದ್ದರೆ ತವರಿನ ಪ್ರೇಕ್ಷಕರ ಬೆಂಬಲದೊಂದಿಗೆ ಗೆದ್ದು ಅಂತಿಮ ಹಣಾಹಣಿಗೆ ಸಜ್ಜಾಗಲು ಚೆನ್ನೈಯಿನ್ ಪ್ರಯತ್ನಿಸಲಿದೆ. 17ರಂದು ಬೆಂಗಳೂರಿ ನಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಬಿಎಫ್‌ಸಿಯನ್ನು ಎದುರಿಸುವ ತಂಡ ಯಾವುದು ಎಂಬುದು ಈ ಪಂದ್ಯದಲ್ಲಿ ನಿರ್ಧಾರವಾಗಲಿದೆ.

‘ಪಂದ್ಯಕ್ಕಾಗಿ ಸೂಕ್ತ ತಂತ್ರ ಹೆಣೆದಿದ್ದೇವೆ. ಲೆಕ್ಕಾಚಾರದೊಂದಿಗೆ ಆಡಿ ಗೆಲ್ಲುವುದು ನಮ್ಮ ಉದ್ದೇಶ. ಎದುರಾಳಿ ತಂಡ ಗೋಲು ಗಳಿಸದಂತೆ ಮಾಡುವುದು ಮೊದಲ ಆದ್ಯತೆ. ಹಾಗೇನಾದರೂ ಅವರು ಯಶಸ್ವಿಯಾದರೆ ನಾವು ತಂತ್ರ ಬದಲಿಸುತ್ತೇವೆ’ ಎಂದು ಚೆನ್ನೈಯಿನ್ ಎಫ್‌ಸಿ ಕೋಚ್ ಜಾನ್ ಗ್ರೆಗರಿ ಹೇಳಿದರು.

‘ಗೋವಾ ತಂಡವನ್ನು ಅನೇಕ ಬಾರಿ ನಮ್ಮ ತಂಡ ಎದುರಿಸಿದೆ. ಹೀಗಾಗಿ ಆ ತಂಡದ ಸಾಮರ್ಥ್ಯ ಮತ್ತು ದೌರ್ಬಲ್ಯಗಳು ಏನೆಂಬುದು ನಮಗೆ ಚೆನ್ನಾಗಿ ತಿಳಿದಿದೆ. ಎಲ್ಲ ಬಗೆಯ ಸವಾಲಿಗೂ ತಂಡ ಸಿದ್ಧವಾಗಿದೆ’ ಎಂದು ಅವರು ಹೇಳಿದರು.

‘ಬಲಿಷ್ಠ ತಂಡದ ವಿರುದ್ಧ ಕಣಕ್ಕಿಳಿಯುತ್ತಿದ್ದೇವೆ ಎಂಬ ಅರಿವು ನಮಗಿದೆ. ಇಲ್ಲಿಯ ವರೆಗೆ ಆಡಿದ ವಿಧಾನವನ್ನೇ ಈ ಪಂದ್ಯದಲ್ಲೂ ಅನುಸರಿಸಲಿದ್ದೇವೆ. ಅದರಲ್ಲಿ ಯಶಸ್ಸು ಸಾಧಿಸುವ ವಿಶ್ವಾಸವಿದೆ’ ಎಂದು ಗೋವಾ ಕೋಚ್ ಸರ್ಜಿಯೊ ಲೊಬೆರಾ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry