ನಿಯಮಬಾಹಿರ ದಂಡ: ಆಕ್ರೋಶ

7
ಸಂಚಾರ ಪೊಲೀಸರ ಕ್ರಮಕ್ಕೆ ‘ಮೆಟ್ರೊ’ ಪ್ರಯಾಣಿಕರ ವಿರೋಧ

ನಿಯಮಬಾಹಿರ ದಂಡ: ಆಕ್ರೋಶ

Published:
Updated:
ನಿಯಮಬಾಹಿರ ದಂಡ: ಆಕ್ರೋಶ

ಬೆಂಗಳೂರು: ರಾಜಾಜಿನಗರ ಮೆಟ್ರೊ ನಿಲ್ದಾಣ ಸುತ್ತಮುತ್ತಲ ವಸತಿ ಪ್ರದೇಶಗಳ ರಸ್ತೆ ಬದಿಯಲ್ಲಿ ನಿಲ್ಲಿಸುವ ವಾಹನಗಳಿಗೆ ಸಂಚಾರ ಪೊಲೀಸರು ನಿಯಮಬಾಹಿರವಾಗಿ ದಂಡ ವಿಧಿಸುತ್ತಿದ್ದಾರೆ ಎಂದು ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಲ್ದಾಣದ ಬಳಿ ವಾಹನಗಳ ನಿಲುಗಡೆಗೆ ಪ್ರತ್ಯೇಕವಾಗಿ ಜಾಗವಿಲ್ಲ. ಸುತ್ತಮುತ್ತಲ ರಸ್ತೆಗಳಲ್ಲಿ ‘ನೋ ಪಾರ್ಕಿಂಗ್‌’ ಸೂಚನಾ ಫಲಕಗಳನ್ನೂ ಹಾಕಿಲ್ಲ. ಹೀಗಾಗಿ, ನಿಲ್ದಾಣಕ್ಕೆ ಬರುವ ಪ್ರಯಾಣಿಕರು ತಮ್ಮ ವಾಹನಗಳನ್ನು ರಸ್ತೆಗಳ ಬದಿಯಲ್ಲೇ ನಿಲ್ಲಿಸುತ್ತಿದ್ದಾರೆ.

‘ಅದನ್ನೇ ನೆಪವಾಗಿಟ್ಟುಕೊಂಡು ಪೊಲೀಸರು ಸವಾರರಿಗೆ ದಂಡ ವಿಧಿಸುತ್ತಿದ್ದಾರೆ. ದಂಡದ ರಶೀದಿಯಲ್ಲಿ ‘ತಪ್ಪು ನಿಲುಗಡೆ’ (ರಾಂಗ್ ಪಾರ್ಕಿಂಗ್‌) ಎಂಬ ಕಾರಣವನ್ನು ನಮೂದಿಸಿದ್ದಾರೆ. ವಾಹನ ನಿಲುಗಡೆಗೆ ನಿರ್ಬಂಧವಲ್ಲದ ಜಾಗದಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದೇವೆ. ಹೀಗಾಗಿ, ದಂಡ ವಿಧಿಸುವುದು ಕಾನೂನು ಬಾಹಿರ’ ಎಂದು ಸವಾರರು ಹೇಳಿದರು.

ಮನೆ ಮುಂದಿನ ರಸ್ತೆಯ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವುದನ್ನು ತಡೆಯಲು ಕೆಲ ನಿವಾಸಿಗಳು ಪಿವಿಸಿ ಶಂಕುವಿನಾಕೃತಿಗಳನ್ನು ಇಟ್ಟಿದ್ದಾರೆ. ಆ ಮೂಲಕ ರಸ್ತೆ ಬದಿಯ ಜಾಗವನ್ನು ತಮ್ಮ ಸ್ವಂತದ್ದಾಗಿಸಿಕೊಂಡಿದ್ದಾರೆ. ಕೂಡಲೇ ಅವುಗಳನ್ನು ತೆರವು ಮಾಡಿಸಬೇಕು ಎಂದು ಒತ್ತಾಯಿಸಿದರು.

‘ರಸ್ತೆಗಳ ಬದಿಯಲ್ಲಿ ವಾಹನ ನಿಲ್ಲಿಸುವುದರಿಂದ ಸ್ಥಳೀಯರಿಗೆ ತೊಂದರೆ ಆಗುತ್ತಿಲ್ಲ. ಮನೆಗಳ ಗೇಟುಗಳ ಎದುರು ಯಾರೂ ವಾಹನ ನಿಲ್ಲಿಸುತ್ತಿಲ್ಲ. ಸಂಚಾರಕ್ಕೂ ಅಡ್ಡಿಯಾಗುತ್ತಿಲ್ಲ. ಹೀಗಿದ್ದರೂ, ಪೊಲೀಸರಿಗೆ ಏನು ಸಮಸ್ಯೆ’ ಎಂದು ಮೆಟ್ರೊ ಪ್ರಯಾಣಿಕ ಸುಖೇಶ್‌ ನಾಯಕ್‌ ಪ್ರಶ್ನಿಸಿದರು.

‘ನಮಗೂ ನಿತ್ಯ ಕಿರಿಕಿರಿ’: ‘ರಸ್ತೆಗಳ ಬದಿಯಲ್ಲಿ ವಾಹನ ನಿಲ್ಲಿಸುವವರ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ನಿತ್ಯವೂ ಕಿರಿಕಿರಿ ಉಂಟಾಗುತ್ತಿದೆ. ಮನೆಗಳ ಮುಂದಿನ ರಸ್ತೆಯಲ್ಲಿ ಪ್ರಯಾಣಿಕರು ವಾಹನಗಳನ್ನು ನಿಲ್ಲಿಸುವುದರಿಂದ ನಮ್ಮ ವಾಹನಗಳ ನಿಲುಗಡೆಗೂ ಜಾಗವಿಲ್ಲದಂತಾಗಿದೆ. ಮನೆಯಿಂದ ವಾಹನಗಳನ್ನು ಹೊರತೆಗೆಯಲೂ ಕಷ್ಟವಾಗುತ್ತಿದೆ’ ಎಂದು ಸ್ಥಳೀಯ ನಿವಾಸಿ ನಾಗರಾಜ್ ಹೇಳಿದರು.

ಮೆಟ್ರೊ ನಿಲ್ದಾಣದ ಕೆಳಗೆ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಿದ್ದರೆ ಈ ಸಮಸ್ಯೆ ಉಂಟಾಗುತ್ತಿರಲಿಲ್ಲ. ನಿಲ್ದಾಣದಿಂದ 100–200 ಮೀಟರ್ ದೂರದಲ್ಲಿ ಮನೆ ಇರುವವರು ಕೂಡ ವಾಹನಗಳಲ್ಲಿಯೇ ಬರುತ್ತಿದ್ದಾರೆ. ಅವರು ನಡೆದುಕೊಂಡು ಬಂದರೆ ಸಮಸ್ಯೆ ಕೊಂಚ ನಿವಾರಣೆಯಾಗಬಹುದು ಎಂದರು.

‘ನಿವಾಸಿಗಳ ಮನವಿ ಮೇರೆಗೆ ಕ್ರಮ’

‘ವಾಹನ ನಿಲುಗಡೆಯಿಂದ ಸಂಚಾರಕ್ಕೆ ಅಡ್ಡಿ ಹಾಗೂ ಶಬ್ದ ಮಾಲಿನ್ಯ ಉಂಟಾಗುತ್ತಿದೆ. ಹೀಗಾಗಿ, ವಾಹನಗಳ ನಿಲುಗಡೆಗೆ ಕಡಿವಾಣ ಹಾಕಿ’ ಎಂದು ಸ್ಥಳೀಯರು ಮನವಿ ಮಾಡಿದ್ದರು. ಅದರನ್ವಯ ವಾಹನ ಸವಾರರ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು ಎಂದು ರಾಜಾಜಿನಗರ ಸಂಚಾರ ಠಾಣೆಯ ಇನ್‌ಸ್ಪೆಕ್ಟರ್‌

ನರೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಭಾಗದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ಹೀಗಾಗಿ, ವಾಹನಗಳನ್ನು ಟೋಯಿಂಗ್ ಮಾಡಿ ಬೇರೆಡೆಗೆ ಸ್ಥಳಾಂತರ ಮಾಡಲೂ ಸಾಧ್ಯವಿಲ್ಲ. ಹಾಗಂತ‌

ನಿವಾಸಿಗಳ ಮನವಿಗೆ ಸ್ಪಂದಿಸದೆ ಇರಲೂ ಆಗುವುದಿಲ್ಲ. ಹೀಗಾಗಿ, ದಂಡ ವಿಧಿಸಿದ ರಶೀದಿಗಳನ್ನು ವಾಹನಗಳ ಮೇಲೆ ಇಟ್ಟಿದ್ದೆವು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry