‘ಬಿಬಿಎಂಪಿಗೆ ವಿತ್ತೀಯ ಹೊಣೆಗಾರಿಕೆ ಕಾಯ್ದೆ ಅಗತ್ಯ’

7

‘ಬಿಬಿಎಂಪಿಗೆ ವಿತ್ತೀಯ ಹೊಣೆಗಾರಿಕೆ ಕಾಯ್ದೆ ಅಗತ್ಯ’

Published:
Updated:
‘ಬಿಬಿಎಂಪಿಗೆ ವಿತ್ತೀಯ ಹೊಣೆಗಾರಿಕೆ ಕಾಯ್ದೆ ಅಗತ್ಯ’

ಬೆಂಗಳೂರು: ಬಿಬಿಎಂಪಿಯಲ್ಲಿ ಆರ್ಥಿಕ ಶಿಸ್ತು ಕಾಪಾಡಲು ‘ವಿತ್ತೀಯ ಹೊಣೆಗಾರಿಕೆ ಕಾಯ್ದೆ’ ಜಾರಿಗೊಳಿಸಬೇಕಾದ ಅಗತ್ಯವಿದೆ ಎಂದು ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅಭಿಪ್ರಾಯಪಟ್ಟರು.

ಬಜೆಟ್‌ ಮೇಲಿನ ಚರ್ಚೆಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರು ಹಾಗೂ ಸದಸ್ಯರ ಪ್ರಶ್ನೆಗಳಿಗೆ ಸೋಮವಾರ ಉತ್ತರಿಸಿದರು.

‘ವಾಸ್ತವಿಕ ಬಜೆಟ್‌ ಮಂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು 2002ರಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸಿತ್ತು. ಇದರ ಮಾನದಂಡಗಳ ಪ್ರಕಾರವೇ ಬಜೆಟ್‌ ಮಂಡಿಸಬೇಕು. ವಿತ್ತೀಯ ಕೊರತೆ ಶೇ 3ಕ್ಕಿಂತ ಕಡಿಮೆ ಇರಬೇಕು. ಇಂತಹ ಕಾಯ್ದೆಯನ್ನು ಪಾಲಿಕೆಯಲ್ಲಿ ಜಾರಿಗೊಳಿಸುವ ಪ್ರಯತ್ನಗಳು ಈ ಹಿಂದೆಯೇ ನಡೆದಿದ್ದವು. ಇದರ ಕರಡನ್ನೂ ಸಿದ್ಧಪಡಿಸಲಾಗಿತ್ತು. ಇದಕ್ಕೆ ಮತ್ತೆ ಮರುಜೀವ ನೀಡಿದರೆ ಪಾಲಿಕೆಯಲ್ಲಿ ಆರ್ಥಿಕ ಶಿಸ್ತು ತರಬಹುದು’ ಎಂದು ಸಲಹೆ ನೀಡಿದರು.

ಪಾಲಿಕೆಗೆ ₹3 ಸಾವಿರ ಕೋಟಿ ಆದಾಯ ಇದ್ದರೆ, ₹10 ಸಾವಿರ ಕೋಟಿ ಮೊತ್ತದ ಬಜೆಟ್‌ ಮಂಡಿಸುವುದು ಒಳ್ಳೆಯ ಕ್ರಮವಲ್ಲ. ಇದರಿಂದ ಕಾಮಗಾರಿಗಳ ಬಿಲ್‌ಗಳು ಬಾಕಿ ಹೆಚ್ಚುತ್ತಾ ಹೋಗುತ್ತವೆ. ಈ ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಸಾಕಷ್ಟು ತೊಂದರೆ ಉಂಟಾಗುತ್ತದೆ ಎಂದು ಎಚ್ಚರಿಸಿದರು.

ರಕ್ಷಣೆ, ರೈಲ್ವೆ ಸೇರಿದಂತೆ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಮೇಲೆ ಸೇವಾ ತೆರಿಗೆ ವಿಧಿಸಲು ಪಾಲಿಕೆಗೆ ಅವಕಾಶವಿದೆ. ಈಗಾಗಲೇ ₹12 ಕೋಟಿ ಂಗ್ರಹಿಸಲಾಗಿದೆ. ಈ ವರ್ಷದಿಂದ ಒಂದು ಆಸ್ತಿಯನ್ನೂ ಬಿಡದೆ ಸೇವಾ ತೆರಿಗೆ ಸಂಗ್ರಹಿಸಲಾಗುತ್ತದೆ. ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿಗೊಂಡ ಬಳಿಕ ಜಾಹೀರಾತು ತೆರಿಗೆ ಸಂಗ್ರಹಿಸುವಂತಿಲ್ಲ. ಆದರೆ, ನೆಲಬಾಡಿಗೆ ಅಥವಾ ಹರಾಜು ಮೂಲಕ ವರಮಾನ ನಿರೀಕ್ಷಿಸಬಹುದು ಎಂದರು.

ಮನರಂಜನಾ ತೆರಿಗೆ ವಸೂಲಿಗೆ ನಿರ್ಧಾರ

ಜಿಎಸ್‌ಟಿ ಪ್ರಕಾರ ಮನರಂಜನಾ ತೆರಿಗೆ ವಿಧಿಸಲು ರಾಜ್ಯ ಸರ್ಕಾರಕ್ಕೆ ಅವಕಾಶವಿಲ್ಲ. ಆದರೆ, ಸ್ಥಳೀಯ ಸಂಸ್ಥೆಗಳು ವಿಧಿಸಬಹುದು. ಈ ಕುರಿತು ನಿರ್ಣಯ ಕೈಗೊಂಡು, ಅನುಮೋದನೆಗಾಗಿ ನಗರಾಭಿವೃದ್ಧಿ ಇಲಾಖೆಗೆ ಕಳುಹಿಸಿಕೊಡಬೇಕು. ಬೇರೆ ರಾಜ್ಯಗಳ ಸ್ಥಳೀಯ ಸಂಸ್ಥೆಗಳು ಮನರಂಜನಾ ತೆರಿಗೆಯನ್ನು ಈಗಾಗಲೇ ವಸೂಲಿ ಮಾಡುತ್ತಿವೆ ಎಂದು ಎನ್‌.ಮಂಜುನಾಥ ಪ್ರಸಾದ್‌ ಹೇಳಿದರು.

ಒಎಫ್‌ಸಿಗೆ ಅನುಮತಿ ಶುಲ್ಕ ವಿಧಿಸುವ ಸಂಬಂಧ ವಿವಿಧ ರಾಜ್ಯಗಳಲ್ಲಿರುವ ಅಧಿಸೂಚನೆಗಳನ್ನು ಅಧ್ಯಯನ ನಡೆಸಲಾಗಿದೆ. ಈ ಕುರಿತ ಪ್ರಸ್ತಾವವನ್ನು ಸಿದ್ಧಪಡಿಸಲಾಗುತ್ತಿದ್ದು, ಮುಂದಿನ ಕೌನ್ಸಿಲ್‌ ಸಭೆಯಲ್ಲಿ ಮಂಡಿಸಲಾಗುತ್ತದೆ ಎಂದರು.

ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ

ಅಂಗಡಿ, ವಾಣಿಜ್ಯ ಮಳಿಗೆಗಳ ನಾಮಫಲಕಗಳಲ್ಲಿ ಶೇ 60ರಷ್ಟು ಕನ್ನಡ ಭಾಷೆ ಹಾಗೂ ಶೇ 40ರಷ್ಟು ಅನ್ಯ ಭಾಷೆಯನ್ನು ಬಳಕೆ ಮಾಡುವಂತೆ ವಾಣಿಜ್ಯ ಪರವಾನಗಿಯಲ್ಲೇ ಷರತ್ತು ವಿಧಿಸಲಾಗುತ್ತದೆ. ಕನ್ನಡ ಬಳಕೆ ಕುರಿತು ಮಳಿಗೆಗಳ ಮಾಲೀಕರು ಒಂದು ತಿಂಗಳಲ್ಲಿ ವರದಿ ನೀಡಬೇಕು. ಇಲ್ಲದಿದ್ದರೆ, ಪರವಾನಗಿಯನ್ನು ರದ್ದುಪಡಿಸಲಾಗುತ್ತದೆ. ಇದು ಏಪ್ರಿಲ್‌ 1ರಿಂದ ಜಾರಿಗೊಳ್ಳಲಿದೆ ಎಂದು ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು. ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ, ‘ಜಾಹೀರಾತು ಫಲಕ ಹಾಗೂ ಹೋರ್ಡಿಂಗ್‌ಗಳಲ್ಲಿ ಶೇ 60ರಷ್ಟು ಕನ್ನಡ ಬಳಕೆ ಮಾಡಬೇಕು ಎಂದು ಬೈಲಾ ಹೇಳುತ್ತದೆ. ಆದರೆ, ಅದು ಪಾಲನೆ ಆಗುತ್ತಿಲ್ಲ’ ಎಂದು ದೂರಿದರು.

ಪಾಲಿಕೆಯ ಎಲ್ಲ ಟೆಂಡರ್‌ಗಳು ₹50 ಲಕ್ಷ ಮೀರಿರಬಾರದು. ಆದರೆ, ನಗ ರೋತ್ಥಾನ ಯೋಜನೆಯಡಿ ಕೋಟ್ಯಂತರ ರೂಪಾಯಿಗೆ ಟೆಂಡರ್‌ ಕರೆಯಲಾತ್ತಿದೆ.

ಇದರಿಂದ ದಲಿತರಿಗೆ ಟೆಂಡರ್‌ಗಳು ಕೈತಪ್ಪುತ್ತವೆ ಎಂದರು.

ಮೇಯರ್‌ ಆರ್‌.ಸಂಪತ್‌ರಾಜ್‌, ‘ನಾಮಫಲಕಗಳಲ್ಲಿ ಕನ್ನಡ ಬಳಕೆ ಮಾಡದಿರುವ ಕುರಿತು ಇದೇ 16ರಿಂದ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry