ಭಾರತಕ್ಕೆ ಜಯದ ಸಿಹಿ

ಸೋಮವಾರ, ಮಾರ್ಚ್ 25, 2019
26 °C
ನಿದಾಸ್‌ ಕಪ್‌ ಟ್ವೆಂಟಿ–20 ಕ್ರಿಕೆಟ್‌ ಸರಣಿ: ಮಿಂಚಿದ ಮನೀಷ್‌ ಪಾಂಡೆ

ಭಾರತಕ್ಕೆ ಜಯದ ಸಿಹಿ

Published:
Updated:
ಭಾರತಕ್ಕೆ ಜಯದ ಸಿಹಿ

ಕೊಲಂಬೊ : ಮನೀಷ್‌ ಪಾಂಡೆ (ಔಟಾಗದೆ 42; 31ಎ, 3ಬೌಂ, 1ಸಿ) ಮತ್ತು ದಿನೇಶ್‌ ಕಾರ್ತಿಕ್‌ (ಔಟಾಗದೆ 39; 25ಎ, 5ಬೌಂ) ಅವರ ಉತ್ತಮ ಬ್ಯಾಟಿಂಗ್‌ ಬಲದಿಂದ ಭಾರತ ತಂಡ ನಿದಾಸ್‌ ಕಪ್‌ ಟ್ವೆಂಟಿ–20 ಕ್ರಿಕೆಟ್‌ ಸರಣಿಯ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಶ್ರೀಲಂಕಾವನ್ನು ಮಣಿಸಿದೆ. ಇದರೊಂದಿಗೆ ಫೈನಲ್‌ ಹಾದಿ ಸುಗಮ ಮಾಡಿಕೊಂಡಿದೆ.

ಪ್ರೇಮದಾಸ ಕ್ರೀಡಾಂಗಣದಲ್ಲಿ ಸೋಮವಾರ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 19 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 152 ರನ್ ಗಳಿಸಿತು. ಭಾರತ 17.3 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಗುರಿ ಸೇರಿತು.

ರೋಹಿತ್‌ ವೈಫಲ್ಯ: ಗುರಿ ಬೆನ್ನಟ್ಟಿದ ಭಾರತ ತಂಡ ಎರಡನೇ ಓವರ್‌ನಲ್ಲಿ ನಾಯಕ ರೋಹಿತ್‌ ಶರ್ಮಾ ವಿಕೆಟ್‌ ಕಳೆದುಕೊಂಡಿತು.

ಮೊದಲ ಎರಡು ಪಂದ್ಯಗಳಲ್ಲಿ ವೈಫಲ್ಯ ಕಂಡಿದ್ದ ರೋಹಿತ್‌, 7 ಎಸೆತಗಳಲ್ಲಿ ತಲಾ ಒಂದು ಬೌಂಡರಿ ಮತ್ತು ಸಿಕ್ಸರ್‌ ಸಹಿತ 11ರನ್‌ ಗಳಿಸಿ ಧನಂಜಯಗೆ ವಿಕೆಟ್‌ ನೀಡಿದರು.  ನಾಲ್ಕನೇ ಓವರ್‌ನಲ್ಲಿ ಶಿಖರ್‌ ಧವನ್‌ (8; 10ಎ, 1ಬೌಂ) ಅವರನ್ನೂ ಧನಂಜಯ ಪೆವಿಲಿಯನ್‌ಗೆ ಅಟ್ಟಿದರು. ಹೀಗಾಗಿ ಲಂಕಾ ಜಯದ ಕನಸು ಕಂಡಿತ್ತು.

ಆ ನಂತರ ಕೆ.ಎಲ್‌.ರಾಹುಲ್‌ ಮತ್ತು ಸುರೇಶ್‌ ರೈನಾ (27; 15ಎ, 2ಬೌಂ, 2ಸಿ) ಮಿಂಚಿದರು. ಸರಣಿಯಲ್ಲಿ ಮೊದಲ ಬಾರಿಗೆ ಆಡುವ ಅವಕಾಶ ಪಡೆದಿದ್ದ ಕರ್ನಾಟಕದ ರಾಹುಲ್‌ 17 ಎಸೆತಗಳಲ್ಲಿ 1 ಬೌಂಡರಿ ಒಳಗೊಂಡಂತೆ 18ರನ್‌ ಗಳಿಸಿ ‘ಹಿಟ್‌ ವಿಕೆಟ್‌’ ಆದರು.

ಆ ನಂತರ ಕರ್ನಾಟಕದ ಮನೀಷ್‌ ಪಾಂಡೆ ಮತ್ತು ದಿನೇಶ್‌ ಕಾರ್ತಿಕ್‌, ಶ್ರೀಲಂಕಾ ಬೌಲರ್‌ಗಳನ್ನು ಕಾಡಿದರು. ಸ್ಫೋಟಕ ಆಟ ಆಡಿದ ಇವರು ಮುರಿಯದ ಐದನೇ ವಿಕೆಟ್‌ ಜೊತೆಯಾಟದಲ್ಲಿ 68ರನ್‌ ಸೇರಿಸಿ ತಂಡದ ಸಂಭ್ರಮಕ್ಕೆ ಕಾರಣರಾದರು.

ಮಳೆ ಅಡ್ಡಿ: ಆರಂಭ ವಿಳಂಬ: ತುಂತುರು ಮಳೆ ಸುರಿದ ಕಾರಣ ಪಿಚ್‌ ಒದ್ದೆಯಾಗಿತ್ತು. ಹೀಗಾಗಿ ಪಂದ್ಯವನ್ನು ಒಂದೂಕಾಲು ತಾಸು ತಡವಾಗಿ ಆರಂಭಿಸಿ 19 ಓವರ್‌ಗಳಿಗೆ ನಿಗದಿ

ಪಡಿಸಲಾಯಿತು.

ಟಾಸ್‌ ಗೆದ್ದ ಭಾರತ ಫಿಲ್ಡಿಂಗ್ ಆಯ್ದುಕೊಂಡಿತು. ಧನುಷ್ಕಾ ಗುಣ ತಿಲಕ ಮತ್ತು ಕುಶಾಲ್‌ ಮೆಂಡಿಸ್‌ ಆರಂಭದಲ್ಲೇ ಭರ್ಜರಿ ಬ್ಯಾಟಿಂಗ್ ಮಾಡಿದರು. ಜಯದೇವ ಉನದ್ಕತ್ ಮತ್ತು ವಾಷಿಂಗ್ಟನ್ ಸುಂದರ್ ಅವ ರನ್ನು ದಂಡಿಸಿದ ಇವರಿಬ್ಬರು ಎರಡು ಓವರ್‌ಗಳಲ್ಲಿ 25 ರನ್ ಕಲೆ ಹಾಕಿದರು.

ಈ ಸಂದರ್ಭದಲ್ಲಿ ಶರ್ದೂಲ್ ಠಾಕೂರ್ ಎಸೆತದಲ್ಲಿ ಸುರೇಶ್‌ ರೈನಾ ಪಡೆದ ಅತ್ಯಮೋಘ ಕ್ಯಾಚ್‌ಗೆ ಗುಣತಿಲಕ ಔಟ್‌ ಆದರು. ಮತ್ತೆ ಒಂಬತ್ತು ರನ್ ಗಳಿಸುವಷ್ಟರಲ್ಲಿ ವಾಷಿಂಗ್ಟನ್ ಸುಂದರ್‌ಗೆ ಕುಶಾಲ್ ಪೆರೇರ ವಿಕೆಟ್‌ ಒಪ್ಪಿಸಿದರು. ‌

ಆದರೆ ಮೆಂಡಿಸ್ ಮತ್ತು ಕುಶಾಲ್ ಪೆರೇರ ಭಾರತದ ಬೌಲರ್‌ಗಳ ಬೆವರಿಳಿಸಿದರು. 45 ಎಸೆತಗಳಲ್ಲಿ 62 ರನ್ ಸೇರಿಸಿದ ಇವರಿಬ್ಬರು ತಂಡವನ್ನು ಮೂರಂಕಿ ಸನಿಹ ತಲುಪಿಸಿದರು. ಈ ಸಂದರ್ಭಲ್ಲಿ ಉಪುಲ್‌ ತರಂಗ ಅವರನ್ನು ಬೌಲ್ಡ್ ಮಾಡಿ ಯುವ ವೇಗಿ ವಿಜಯಶಂಕರ್‌ ಭಾರತಕ್ಕೆ ಮೇಲುಗೈ ಗಳಿಸಿಕೊಟ್ಟರು. ನಾಯಕ ತಿಸಾರ ಪೆರೇರ ಎರಡು ಸಿಕ್ಸರ್ ಸಿಡಿಸಿ ಭಾರತದ ಪಾಳಯದಲ್ಲಿ ಆತಂಕ ಸೃಷ್ಟಿಸಿದರು. ಠಾಕೂರ್ ಎಸೆತದಲ್ಲಿ ಯಜುವೇಂದ್ರ ಚಾಹಲ್ ಪಡೆದ ಉತ್ತಮ ಕ್ಯಾಚ್‌ಗೆ ಅವರು ಬಲಿಯಾದರು. ಕುಶಾಲ್ ಮೆಂಡಿಸ್ ಅರ್ಧ ಶತಕ (55; 38 ಎ, 3 ಸಿ, 3 ಬೌಂ) ಗಳಿಸಿ ಮಿಂಚಿದರು.

ಸಂಕ್ಷಿಪ‍್ತ ಸ್ಕೋರು:

ಶ್ರೀಲಂಕಾ: 19 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 152 ( ಕುಶಾಲ್ ಮೆಂಡಿಸ್ 55, ಉಪುಲ್ ತರಂಗ 22, ತಿಸಾರ ಪೆರೇರ 15, ದಸುನ್‌ ಶಾನಕ 19; ವಾಷಿಂಗ್ಟನ್‌ ಸುಂದರ್‌ 21ಕ್ಕೆ2, ಜಯದೇವ್ ಉನದ್ಕತ್‌ 33ಕ್ಕೆ1, ಶಾರ್ದೂಲ್‌ ಠಾಕೂರ್‌ 27ಕ್ಕೆ4, ಯಜುವೇಂದ್ರ ಚಾಹಲ್‌ 34ಕ್ಕೆ1).

ಭಾರತ: 17.3 ಓವರ್‌ಗಳಲ್ಲಿ 4 ವಿಕೆಟ್‌ಗೆ 153 (ರೋಹಿತ್‌ ಶರ್ಮಾ 11, ಕೆ.ಎಲ್‌.ರಾಹುಲ್‌ 18, ಸುರೇಶ್‌ ರೈನಾ 27, ಮನೀಷ್‌ ಪಾಂಡೆ ಔಟಾಗದೆ 42, ದಿನೇಶ್‌ ಕಾರ್ತಿಕ್‌ ಔಟಾಗದೆ 39).

ಫಲಿತಾಂಶ: ಭಾರತಕ್ಕೆ 6ವಿಕೆಟ್‌ ಜಯ.

ಪಂದ್ಯ ಶ್ರೇಷ್ಠ: ಶಾರ್ದೂಲ್‌ ಠಾಕೂರ್‌.

***

ಚಾಂದಿಮಲ್‌ಗೆ ಎರಡು ಪಂದ್ಯಗಳ ನಿಷೇಧ

ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್‌ ಮಾಡಿದ ಕಾರಣ ಶ್ರೀಲಂಕಾ ತಂಡದ ನಾಯಕ ದಿನೇಶ್ ಚಾಂದಿಮಲ್‌ಗೆ ಎರಡು ಪಂದ್ಯಗಳ ನಿಷೇಧ ಹೇರಲಾಗಿದೆ. ಹೀಗಾಗಿ ಭಾರತ ವಿರುದ್ಧದ ಪಂದ್ಯದಲ್ಲಿ ತಿಸಾರ ಪೆರೇರ ತಂಡವನ್ನು ಮುನ್ನಡೆಸಿದರು. ಬಾಂಗ್ಲಾ ವಿರುದ್ಧದ ಮುಂದಿನ ಪಂದ್ಯದಲ್ಲೂ ಅವರೇ ನಾಯಕರಾಗಿರುವರು.

ಬಾಂಗ್ಲಾ ವಿರುದ್ಧ ಐದು ವಿಕೆಟ್‌ಗಳಿಂದ ಸೋತಿದ್ದ ಪಂದ್ಯದಲ್ಲಿ ಶ್ರೀಲಂಕಾ ನಿಗದಿತ ಅವಧಿಯಲ್ಲಿ 16 ಓವರ್‌ಗಳನ್ನು ಮಾತ್ರ ಮಾಡಿದ್ದರು. ಹೀಗಾಗಿ ತಂಡದ ಆಟಗಾರರ ಪಂದ್ಯದ ಸಂಭಾವನೆಯ ಶೇ 60ರಷ್ಟು ಮೊತ್ತವನ್ನು ಪಂದ್ಯದ ರೆಫರಿ ಕಡಿತಗೊಳಿಸಿದ್ದರು. ಬಾಂಗ್ಲಾದೇಶ ತಂಡ ನಿಗದಿತ ಅವಧಿಯಲ್ಲಿ 19 ಓವರ್‌ಗಳನ್ನು ಮಾತ್ರ ಮಾಡಿತ್ತು. ಹೀಗಾಗಿ ನಾಯಕ ಮಹಮ್ಮದುಲ್ಲಾ ಅವರ ಪಂದ್ಯಶುಲ್ಕದ ಶೇ 20ರಷ್ಟು ಮತ್ತು ಇತರ ಆಟಗಾರರ ಶೇ 10ರಷ್ಟು ಮೊತ್ತವನ್ನು ತಡೆಹಿಡಿಯಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry