₹10,208 ಕೋಟಿಗೆ ಹಿಗ್ಗಿದ ಬಿಬಿಎಂಪಿ ಬಜೆಟ್‌

ಮಂಗಳವಾರ, ಮಾರ್ಚ್ 19, 2019
33 °C

₹10,208 ಕೋಟಿಗೆ ಹಿಗ್ಗಿದ ಬಿಬಿಎಂಪಿ ಬಜೆಟ್‌

Published:
Updated:
₹10,208 ಕೋಟಿಗೆ ಹಿಗ್ಗಿದ ಬಿಬಿಎಂಪಿ ಬಜೆಟ್‌

ಬೆಂಗಳೂರು: ಬಿಬಿಎಂಪಿಯ 2018–19ನೇ ಸಾಲಿನ ಬಜೆಟ್‌ ಗಾತ್ರ ₹9,325 ಕೋಟಿಯಿಂದ ₹10,208 ಕೋಟಿಗೆ ಹಿಗ್ಗಿದೆ.

ಪರಿಷ್ಕೃತ ಬಜೆಟ್‌ಗೆ ಸೋಮವಾರ ನಡೆದ ಕೌನ್ಸಿಲ್‌ ಸಭೆಯಲ್ಲಿ ಅನುಮೋದನೆ ಪಡೆಯಲಾಯಿತು. ಹೊಸದಾಗಿ ಕೆಲ ಕಾರ್ಯಕ್ರಮಗಳನ್ನು ಸೇರ್ಪಡೆ ಮಾಡಲಾಗಿದೆ. ಕೆಲ ಯೋಜನೆಗಳ ಅನುದಾನವನ್ನು ಕಡಿತ ಮಾಡಲಾಗಿದೆ.

ದೊಡ್ಡಬಿದರಕಲ್ಲು ಘನತ್ಯಾಜ್ಯ ವಿಲೇವಾರಿ ಘಟಕದ ಸುತ್ತಲಿನ ಪ್ರದೇಶದ ಅಭಿವೃದ್ಧಿ ಕಾಮಗಾರಿಗೆ ₹10 ಕೋಟಿ ಮತ್ತು ಸುಬ್ರಹ್ಮಣ್ಯಪುರ, ಲಿಂಗಧೀರನಹಳ್ಳಿ, ಕನ್ನಹಳ್ಳಿ ಹಾಗೂ ಸೀಗೇಹಳ್ಳಿಯಲ್ಲಿ ಕಸ ಸಂಸ್ಕರಣಾ ಘಟಕಗಳ ಅಭಿವೃದ್ಧಿಗೆ ₹10 ಕೋಟಿ, ಕಸ ಭರ್ತಿ ಮಾಡುವ ಕ್ವಾರಿಗಳ ಅಭಿವೃದ್ಧಿಗೆ ₹15 ಕೋಟಿ ಮೀಸಲಿರಿಸಲಾಗಿದೆ.‌

ಗ್ರಾಮೀಣ ಕ್ರೀಡೆಗಳ ಪ್ರೋತ್ಸಾಹಕ್ಕೆ ₹30 ಕೋಟಿ, ಕಿತ್ತೂರು ರಾಣಿ ಚನ್ನಮ್ಮ ಕ್ರೀಡಾಂಗಣ ಅಭಿವೃದ್ಧಿಗೆ ₹3 ಕೋಟಿ, ಹೊಸ ವಲಯಗಳಲ್ಲಿ ಉದ್ಯಾನಗಳ ಅಭಿವೃದ್ಧಿಗೆ ₹8 ಕೋಟಿ, ರಾಜಾಜಿನಗರ ವಾರ್ಡ್‌ನ ರಾಜ್‌ಕುಮಾರ್‌ ಕಲಾಮಂದಿರದ ದುರಸ್ತಿ ಮತ್ತು ನಿರ್ವಹಣೆಗೆ ₹2 ಕೋಟಿ, ಹೆಮ್ಮಿಗೆಪುರ ವಾರ್ಡ್‌ನ ತಲಘಟ್ಟಪುರ ಸುತ್ತಲಿನ ಪ್ರದೇಶದ ಅಭಿವೃದ್ಧಿಗೆ ₹3 ಕೋಟಿ, ಕ್ಯೂಐಎಚ್‌ಎಸ್‌ ಬೆನ್ಸನ್‌ ಟೌನ್‌ನಲ್ಲಿ ಪ್ರೌಢಶಾಲೆ ನಿರ್ಮಿಸಲು ₹2 ಕೋಟಿ, ಪತ್ರಕರ್ತರು ಮತ್ತು ಮಾಧ್ಯಮದವರಿಗೆ ವೈದ್ಯಕೀಯ ಅನುದಾನಗಳಿಗೆ ₹1 ಕೋಟಿ ಒದಗಿಸಲಾಗಿದೆ.

ಕನಕ ವಿದ್ಯಾ ಸಂಸ್ಥೆಗೆ ₹1 ಕೋಟಿ, ಕರ್ನಾಟಕ ಪರಿಶಿಷ್ಟ ಜಾತಿ, ಪಂಗಡದ ಪದವೀಧರರ ಒಕ್ಕೂಟಕ್ಕೆ ₹1 ಕೋಟಿ, ಎಚ್‌ಎಸ್‌ಐಎಸ್‌ ಗೌಸಿಯಾ ಆಸ್ಪತ್ರೆ, ಬೌರಿಂಗ್‌ ವೈದ್ಯಕೀಯ ಕಾಲೇಜಿಗೆ ₹1 ಕೋಟಿ, ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆಗೆ ₹25 ಲಕ್ಷ, ಬೆಂಗಳೂರು ಪ್ರೆಸ್‌ ಕ್ಲಬ್‌ಗೆ ₹10 ಲಕ್ಷ ಸಹಾಯಧನ ಒದಗಿಸಲಾಗಿದೆ.

ನೀರು ಸರಬರಾಜು ಮಾಡಲು ಹಳೆಯ ವಾರ್ಡ್‌ಗೆ ₹15 ಲಕ್ಷ ಹಾಗೂ ಹೊಸ ವಾರ್ಡ್‌ಗೆ ₹40 ಲಕ್ಷ ಸೇರಿ ಎಲ್ಲ ವಾರ್ಡ್‌ಗಳಿಗೆ ಒಟ್ಟು ₹46.95 ಕೋಟಿ ಮೊತ್ತವನ್ನು ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಈಗ ಹಳೆಯ ವಾರ್ಡ್‌ಗೆ ₹15 ಲಕ್ಷದಿಂದ ₹20 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಒಟ್ಟು ಮೊತ್ತ ₹53.40 ಕೋಟಿಗೆ ಏರಿಕೆಯಾಗಿದೆ.

ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಶೂ ವಿತರಿಸಲು ಘೋಷಿಸಿದ್ದ ₹1.5 ಕೋಟಿ ಮೊತ್ತವನ್ನು ₹2.65 ಕೋಟಿಗೆ ಪರಿಷ್ಕರಿಸಲಾಗಿದೆ. ಶಾಲಾ ಕಾಲೇಜುಗಳಿಗೆ ಭದ್ರತಾ ವ್ಯವಸ್ಥೆ ಮತ್ತು ಹೌಸ್‌ ಕೀಪಿಂಗ್‌ಗೆ ₹5 ಕೋಟಿಯಿಂದ ₹6 ಕೋಟಿಗೆ ಹೆಚ್ಚಿಸಲಾಗಿದೆ.

ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಮನೆಗಳ (ತಲಾ ₹5 ಲಕ್ಷ) ನಿರ್ಮಾಣಕ್ಕೆ ಮೀಸಲಿಟ್ಟಿದ್ದ ₹8 ಕೋಟಿಯನ್ನು ₹12 ಕೋಟಿಗೆ ಹೆಚ್ಚಿಸಲಾಗಿದೆ. ಮೃತದೇಹಗಳನ್ನು ರಕ್ಷಿಸಲು ಫ್ರೀಜರ್‌ಗಳ ಖರೀದಿಗೆ ಘೋಷಿಸಿದ್ದ ₹2 ಕೋಟಿಯನ್ನು ₹3 ಕೋಟಿಗೆ ಏರಿಸಲಾಗಿದೆ. ಮೀಸಲು ನಿಧಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ಒದಗಿಸಿದ್ದ ₹50 ಕೋಟಿಯನ್ನು ₹65 ಕೋಟಿಗೆ ಹೆಚ್ಚಿಸಲಾಗಿದೆ.

ಕನ್ನಹಳ್ಳಿ ಮತ್ತು ಮಾವಳ್ಳಿಪುರದಲ್ಲಿರುವ ಕಸದಿಂದ ವಿದ್ಯುತ್‌ ತಯಾರಿಸುವ ಘಟಕ ಸ್ಥಾಪನೆಗೆ ಘೋಷಿಸಿದ್ದ ₹100 ಕೋಟಿ ಮೊತ್ತವನ್ನು ₹80 ಕೋಟಿಗೆ ಕಡಿತಗೊಳಿಸಲಾಗಿದೆ. ವಾರ್ಡ್‌ವಾರು ಕಾಮಗಾರಿಗಳಿಗೆ (ಹಳೇ ವಾರ್ಡ್‌ಗೆ ₹2 ಕೋಟಿ, ಹೊಸ ವಾರ್ಡ್‌ಗೆ ₹3 ಕೋಟಿ) ಮೀಸಲಿಟ್ಟಿದ್ದ ₹95.15 ಕೋಟಿಯನ್ನು ₹70.15 ಕೋಟಿಗೆ ಇಳಿಸಲಾಗಿದೆ. ಅದೇ ರೀತಿ, ಕಚೇರಿಗಳು ಮತ್ತು ದಾಖಲೆಗಳ ಕೊಠಡಿಗಳ ನವೀಕರಣದ ₹7.50 ಕೋಟಿಯಿಂದ ₹4 ಕೋಟಿಗೆ, ಸಂಪರ್ಕ ಸಾಧನಗಳ ನವೀಕರಣ ಹಾಗೂ ಕಾಲ್‌ ಸೆಂಟರ್‌ ಸ್ಥಾಪನೆ ಮತ್ತು ನಿರ್ವಹಣೆಗಾಗಿ ₹4 ಕೋಟಿಯಿಂದ ₹2 ಕೋಟಿಗೆ, ವೈದ್ಯಕೀಯ ಅನುದಾನದ ₹5 ಕೋಟಿಯಿಂದ ₹4 ಕೋಟಿಗೆ ಕಡಿತಗೊಳಿಸಲಾಗಿದೆ.

ಮುನೇಶ್ವರನಗರ, ಸಗಾಯ್‌ಪುರ, ಎಸ್‌.ಕೆ. ಗಾರ್ಡನ್‌ ವಾರ್ಡ್‌ಗಳ (ತಲಾ ₹5 ಕೋಟಿ) ಅಭಿವೃದ್ಧಿ ಕಾಮಗಾರಿಗಳಿಗೆ ಒದಗಿಸಿದ್ದ ₹19 ಕೋಟಿಯನ್ನು ₹15 ಕೋಟಿಗೆ ಇಳಿಸಲಾಗಿದೆ.

**

ಹೊಸದಾಗಿ ಸೇರ್ಪಡೆಗೊಂಡ ಯೋಜನೆಗಳು

ಯೋಜನೆ, ಮೊತ್ತ (ಕೋಟಿ ₹ ರೂಗಳಲ್ಲಿ)

ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಜಯಂತಿ ಆಚರಣೆ, 1

ನಗರದ 8 ದಿಕ್ಕುಗಳಲ್ಲಿ ಬೆಂಗಳೂರು ಸ್ವಾಗತ ಕಮಾನು ನಿರ್ಮಾಣ, 4

ಬೈಕ್‌ ಆಂಬುಲೆನ್ಸ್‌ ಮತ್ತು ಮೊಬೈಲ್‌ ಆ್ಯಪ್‌ ಅಳವಡಿಕೆ, 2

ಮಲ್ಲಸಂದ್ರದಲ್ಲಿ ಕೆಂಪೇಗೌಡ ಕನ್ನಡ ಕಲಾಭವನ ನಿರ್ಮಾಣ, 5

ವಿಜಯನಗರ ಕ್ಷೇತ್ರದ ಟೆಲಿಕಾಂ ಬಡಾವಣೆಯಲ್ಲಿ ಕನಕ ಭವನ ನಿರ್ಮಾಣ, 3

ಕಾವೇರಿಪುರ ವಾರ್ಡ್‌ನಲ್ಲಿ ವಿವಿಧೋದ್ದೇಶ ಕಟ್ಟಡ ನಿರ್ಮಾಣ, 3

ಬೆನ್ನಿಗಾನಹಳ್ಳಿ, ಹೊಸತಿಪ್ಪಸಂದ್ರ, ಆಜಾದ್‌ ನಗರ ವಾರ್ಡ್‌ಗಳ ಸಮಗ್ರ ಅಭಿವೃದ್ಧಿ ಕಾಮಗಾರಿ, 13

ಎಂ.ಜಿ.ರಸ್ತೆ, ಬ್ರಿಗೇಡ್‌ ರಸ್ತೆ, ಒಪೇರಾ ಜಂಕ್ಷನ್‌, ಬೆಂಗಳೂರು ಟೈಮ್ಸ್‌ ಚೌಕನಲ್ಲಿ ಎಲ್‌ಇಡಿ ದೀಪ ಅಳವಡಿಕೆ, 5

ಒಪೇರಾ ಜಂಕ್ಷನ್‌ನಲ್ಲಿ ಎಲ್‌ಇಡಿ ಪರದೆ, ಕಟ್ಟಡ ನಿರ್ಮಾಣ, 5

ಎಸ್‌ಬಿಎಂ ವೃತ್ತದಲ್ಲಿ ವಿಜಯನಗರ ಹೆಬ್ಬಾಗಿಲು ನಿರ್ಮಾಣ 2

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry