‘ಹೈಕೋರ್ಟ್‌ನಲ್ಲೇ ಇತ್ಯರ್ಥವಾಗಲಿ’

7
ಉಕ್ಕಿನ ಮೇಲ್ಸೇತುವೆ ವಿರೋಧಿಸಿದ್ದ ಅರ್ಜಿ ವಜಾ

‘ಹೈಕೋರ್ಟ್‌ನಲ್ಲೇ ಇತ್ಯರ್ಥವಾಗಲಿ’

Published:
Updated:
‘ಹೈಕೋರ್ಟ್‌ನಲ್ಲೇ ಇತ್ಯರ್ಥವಾಗಲಿ’

ನವದೆಹಲಿ: ಬೆಂಗಳೂರಿನ ಶಿವಾನಂದ ವೃತ್ತದಿಂದ ಹರೇಕೃಷ್ಣ ರಸ್ತೆಯವರೆಗಿನ ಉದ್ದೇಶಿತ ಉಕ್ಕಿನ ಮೇಲ್ಸೇತುವೆ (ಸ್ಟೀಲ್‌ ಫ್ಲೈ ಓವರ್‌) ನಿರ್ಮಾಣಕ್ಕೆ ತಡೆ ನೀಡಬೇಕು ಎಂದು ಕೋರಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.

‘ಈ ಹಂತದಲ್ಲಿ ನಾವು ಪ್ರಕರಣದಲ್ಲಿ ಮಧ್ಯ ಪ್ರವೇಶಿಸುವುದಿಲ್ಲ. ಈ ಕುರಿತು ದಾಖಲಾಗಿರುವ ದೂರಿನ ತ್ವರಿತ ವಿಚಾರಣೆ ನಡೆಸಬೇಕು’ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠ ರಾಜ್ಯ ಹೈಕೋರ್ಟ್‌ಗೆ ಸೂಚಿಸಿತು.

ಮೇಲ್ಸೇತುವೆ ಪ್ರಸ್ತಾವವನ್ನು ವಿರೋಧಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌) ವಜಾಗೊಳಿಸಿ ಕಳೆದ ಜನವರಿ 8ರಂದು ರಾಜ್ಯ ಹೈಕೋರ್ಟ್‌ ನೀಡಿದ್ದ ಮಧ್ಯಂತರ ಆದೇಶ ಪ್ರಶ್ನಿಸಿ ಬೆಂಗಳೂರು ನಿವಾಸಿ ಬಿ.ಪಿ.ಮಹೇಶ್ ಮತ್ತಿತರರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಉಕ್ಕಿನ ಮೇಲ್ಸೇತುವೆ ನಿರ್ಮಾಣ ಕುರಿತಂತೆ ಇಂಡಿಯನ್‌ ರೋಡ್‌ ಕಾಂಗ್ರೆಸ್‌ (ಐಆರ್‌ಸಿ) ರೂಪಿಸಿರುವ ಎಲ್ಲ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಅರ್ಜಿದಾರರ ಪರ ವಕೀಲ ಸಜ್ಜನ್‌ ಪೂವಯ್ಯ ನ್ಯಾಯಪೀಠಕ್ಕೆ ತಿಳಿಸಿದರು.

‘ಈ ಕುರಿತು ಸ್ಥಳೀಯ ಸಂಸ್ಥೆಯಾದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ನಿಲುವು ಏನು’ ಎಂಬ ಪೀಠದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹಿರಿಯ ವಕೀಲ ಶ್ಯಾಂ ದಿವಾನ್‌, ‘ಈ ಮೇಲ್ಸೇತುವೆಗೆ ಅಂಟಿಕೊಂಡಂತೆ ಮತ್ತೊಂದು ಮೇಲ್ಸೇತುವೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಯೋಜನೆಗೆ ಮಾರ್ಪಾಡು ತರಲಾಗಿದೆ. ಮೇಲ್ಸೇತುವೆ ನಿರ್ಮಿಸುವುದರಿಂದ ಆ ಭಾಗದಲ್ಲಿರುವ ವಾಹನ ದಟ್ಟಣೆ ನಿಯಂತ್ರಣಕ್ಕೆ ಬರಲಿದೆ’ ಎಂದು ವಿವರಿಸಿದರು.

‘ಈ ಮೊದಲೂ ಇಂತಹದ್ದೇ ಕೆಟ್ಟ ಯೋಜನೆ ರೂಪಿಸಿರುವ ಬಿಬಿಎಂಪಿ, ಮೇಲ್ಸೇತುವೆ ಮೇಲೆ ಸಂಚಾರ ಸಿಗ್ನಲ್‌ ಅಳವಡಿಸಿರುವುದು ಕಂಡು ಬಂದಿದೆ. ಈ ಪ್ರಕರಣದಲ್ಲೂ ನಿಮಯಗಳನ್ನು ಗಾಳಿಗೆ ತೂರಲಾಗಿದೆ’ ಎಂದು ಸಜ್ಜನ್‌ ಪೂವಯ್ಯ ದೂರಿದರು. ಆಗ ಯೋಜನೆ ಕುರಿತು ವಿವರ ಪಡೆಯಲು ನಿರಾಸಕ್ತಿ ತೋರಿದ ಪೀಠ, ‘ನೀವೇ ಒಂದು ರೀತಿ ವಿವರಣೆ ನೀಡುತ್ತೀರಿ, ಬಿಬಿಎಂಪಿ ಪರ ವಕೀಲರು ಇನ್ನೊಂದು ರೀತಿಯ ವಿವರಣೆ ನೀಡುತ್ತಿದ್ದಾರೆ. ಹಾಗಾಗಿ ಹೈಕೋರ್ಟ್‌ನಲ್ಲೇ ಈ ಪ್ರಕರಣ ಇತ್ಯರ್ಥವಾಗಲಿ’ ಎಂದು ಅಭಿಪ್ರಾಯಪಟ್ಟಿತು.

‘ಯೋಜನೆಯಿಂದ ಅಂದಾಜು 30 ಮರಗಳ ಅಸ್ತಿತ್ವಕ್ಕೆ ಧಕ್ಕೆ ಆಗುವ ಸಾಧ್ಯತೆ ಇದೆ. ಅಲ್ಲದೆ, ಯೋಜನೆ ಕೈಗೆತ್ತಿಕೊಳ್ಳುವ ಮುನ್ನ ಪರಿಸರಕ್ಕೆ ಸಂಬಂಧಿಸಿದಂತೆ ಯಾವ ರೀತಿಯ ಪರಿಣಾಮ ಆಗಲಿದೆ ಎಂಬ ಕುರಿತೂ ಅಧ್ಯಯನ ನಡೆಸಲಾಗಿಲ್ಲ. ಮೇಲ್ಸೇತುವೆಗಾಗಿ ಭೂಮಿ ಸ್ವಾಧೀನಪಡಿಸಿಕೊಂಡಲ್ಲಿ, ಪುನರ್ವಸತಿ ಮತ್ತು ಪುನರ್ವಸತಿ ಕಾಯ್ದೆ–2013ರ ಅಡಿಯಲ್ಲಿ ನ್ಯಾಯಯುತ ಪರಿಹಾರದ ಹಕ್ಕಿನ ರಕ್ಷಣೆಯ ಕುರಿತು, ಒಟ್ಟಾರೆ ಸಾಮಾಜಿಕವಾಗಿ ಉಂಟಾಗುವ ಪರಿಣಾಮದ ಕುರಿತು ಅಧ್ಯಯನ ನಡೆಸಿಲ್ಲ’ ಎಂದು ಹೈಕೋರ್ಟ್‌ಗೆ ಸಲ್ಲಿಸಿದ್ದ ಪಿಐಎಲ್‌ನಲ್ಲಿ ಅರ್ಜಿದಾರರು ದೂರಿದ್ದರು.

ಯೋಜನೆಯನ್ನೇ ಮಾರ್ಪಾಡು ಮಾಡುವ ಮೂಲಕ ಬಿಬಿಎಂಪಿಯು ಐಆರ್‌ಸಿ ನಿಯಮಗಳನ್ನು ಪಾಲಿಸಿದ್ದಾಗಿ ಹೇಳಿದೆ ಎಂದು ಅಭಿಪ್ರಾಯಪಟ್ಟಿದ್ದ ಹೈಕೋರ್ಟ್, ಪಿಐಎಲ್‌ ವಜಾಗೊಳಿಸಿತ್ತು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry