ಬಿಜೆಪಿಗೆ ತಕ್ಕ ಪಾಠ ಕಲಿಸಿ: ಚಿದಂಬರಂ

ಬುಧವಾರ, ಮಾರ್ಚ್ 20, 2019
31 °C

ಬಿಜೆಪಿಗೆ ತಕ್ಕ ಪಾಠ ಕಲಿಸಿ: ಚಿದಂಬರಂ

Published:
Updated:
ಬಿಜೆಪಿಗೆ ತಕ್ಕ ಪಾಠ ಕಲಿಸಿ: ಚಿದಂಬರಂ

ಬೆಂಗಳೂರು: ‘ಕರ್ನಾಟಕದ ಮತದಾರರು ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸುತ್ತಾರೆ’ ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಹೇಳಿದರು.

ನಗರದ ಬಿಷಪ್‌ ಕಾಟನ್‌ ಶಾಲೆಯಲ್ಲಿ ಭಾನುವಾರ ‘ಸ್ಪೀಕಿಂಗ್‌ ಟ್ರುಥ್‌ ಟು ಪವರ್‌–ಮೈ ಆಲ್ಟರ್ನೇಟಿವ್‌ ವ್ಯೂ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಎಲ್ಲ ಬಗೆಯ ಸ್ವಾತಂತ್ರ್ಯ ದಮನ ಮಾಡುತ್ತಿದೆ. ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ. ಗುಜರಾತ್‌ ಚುನಾವಣೆಯಲ್ಲಿ ಜನ ಬಿಜೆಪಿಗೆ ಕಠಿಣ ಪ್ರಶ್ನೆಗಳನ್ನು ಮುಂದಿಟ್ಟಿದ್ದರು. ಅದರಿಂದ ಬಿಜೆಪಿ ಶಾಸಕರ ಸಂಖ್ಯೆ ಒಂದು ಕಾಲದಲ್ಲಿ 150 ಇದ್ದದ್ದು 99ಕ್ಕೆ ಇಳಿಯಿತು. ಸಮೀಕ್ಷೆಯೊಂದರ ಪ್ರಕಾರ ಕಾಂಗ್ರೆಸ್‌ 12 ಮತಗಟ್ಟೆಗಳಲ್ಲಿಹೆಚ್ಚು ಮತಗಳನ್ನು ಪಡೆದಿದ್ದರೆ, ಆರು ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತಿತ್ತು. ಆಗ ಅಲ್ಲಿನ ಚಿತ್ರಣವೇ ಬೇರೆ ಆಗುತ್ತಿತ್ತು’ ಎಂದರು.

‘ಬಿಜೆಪಿಗೆ ಕಠಿಣ ಪ್ರಶ್ನೆಗಳನ್ನು ಕೇಳುವ ಸರದಿ ಕರ್ನಾಟಕದ ಜನರದ್ದು. ನಿಮ್ಮ ಸ್ವಾತಂತ್ರ್ಯವನ್ನೂ ಹರಣ ಮಾಡಿದ್ದಾರೆ. ಈ ಬಗ್ಗೆ ಯೋಚಿಸಿ, ದಬ್ಬಾಳಿಕೆಯ ವಿರುದ್ಧ ಧ್ವನಿ ಎತ್ತುವ ಸಮಯ ಬಂದಿದೆ. ಹೆಚ್ಚು ಹೆಚ್ಚು ಪ್ರಶ್ನೆಗಳನ್ನು ಕೇಳಿ. ಈಗ ಕೇಳದೇ ಇದ್ದರೆ ಮುಂದೆ ಇಂತಹದ್ದೊಂದು ಅವಕಾಶ ಸಿಗುವುದಿಲ್ಲ’ ಎಂದು ಹೇಳಿದರು.

‘ದೆಹಲಿಯ ಕಾಲೇಜೊಂದರಲ್ಲಿ ನನ್ನ ಮತ್ತು ಸಿಪಿಎಂ ನಾಯಕ ಸೀತಾರಾಮ್‌ ಯೆಚೂರಿಯವರ ಉಪನ್ಯಾಸ ಏರ್ಪಡಿಸಲಾಗಿತ್ತು. ರಾಜಕೀಯ ಕಾರಣಕ್ಕಾಗಿ ಹಠಾತ್ತನೆ ರದ್ದು ಮಾಡಲಾಯಿತು. ಅಷ್ಟೇ ಅಲ್ಲ, ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗಬೇಕಿದ್ದ ನನ್ನ ಸಂದರ್ಶನ ಪ್ರಸಾರವಾಗದಂತೆ ತಡೆ ಹಿಡಿಯಲಾಯಿತು. ದೇಶದಲ್ಲಿ ಮಾಧ್ಯಮ ಸ್ವಾತಂ‌ತ್ರ್ಯ ಮೊಟಕುಗೊಳಿಸಲಾಗಿದೆ. ಸಂಪಾದಕರನ್ನು ಪತ್ರಿಕೆಗಳಿಂದ ಕಿತ್ತು ಹಾಕಲಾಗುತ್ತಿದೆ. ರಾಷ್ಟ್ರವಿರೋಧಿ ಎಂದು ಹಲವು ಬಾರಿ ನನ್ನನ್ನು ಬಿಂಬಿಸಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವ್ಯವಸ್ಥಿತವಾಗಿ ಹಲವು ಅತ್ಯುನ್ನತ ಸಂಸ್ಥೆಗಳನ್ನು ಹಾಳು ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್‌ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕಿನ ವಿವಿಧ ಹುದ್ದೆಗಳನ್ನು ಭರ್ತಿ ಮಾಡದೇ ಹಲವು ತಿಂಗಳುಗಳಿಂದ ಖಾಲಿ ಬಿಟ್ಟಿದ್ದಾರೆ’ ಎಂದು ಅವರು ದೂರಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry