ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಸೂಲಾಗದ ಸಾಲ ಹೆಚ್ಚಳ: ಠೇವಣಿದಾರರಿಗೂ ನಷ್ಟ’

ಕೆನರಾ ಬ್ಯಾಂಕಿನ ಟಿ.ನರಸಿಪುರ ಶಾಖೆ ವ್ಯವಸ್ಥಾಪಕ ಶಂಕರ್ ಎಸ್.ರಾವ್
Last Updated 12 ಮಾರ್ಚ್ 2018, 20:25 IST
ಅಕ್ಷರ ಗಾತ್ರ

ಬೆಂಗಳೂರು: ‘ಎನ್‌ಪಿಎ (ವಸೂಲಾಗದ ಸಾಲ) ಪ್ರಮಾಣ ಹೆಚ್ಚುತ್ತಿರುವುದರಿಂದ ಬ್ಯಾಂಕ್‌ಗಳು ನಷ್ಟ ಹೊಂದುತ್ತಿವೆ. ಇದರ ಹೊರೆ ಠೇವಣಿದಾರರ ಮೇಲೆ ಬೀಳುತ್ತಿದೆ’ ಎಂದು ಕೆನರಾ ಬ್ಯಾಂಕಿನ ಟಿ.ನರಸಿಪುರ ಶಾಖೆಯ ವ್ಯವಸ್ಥಾಪಕ ಶಂಕರ್ ಎಸ್.ರಾವ್ ತಿಳಿಸಿದರು.

ಬೆಂಗಳೂರು ಸಾಮಾಜಿಕ ವಿಜ್ಞಾನ ವೇದಿಕೆ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎನ್‌ಪಿಎ ಪ್ರಮಾಣ ತಗ್ಗಿಸುವುದು ಬ್ಯಾಂಕುಗಳಿಗೂ ದೊಡ್ಡ ಸವಾಲು ಆಗಿದೆ. ವರ್ಷದಿಂದ ವರ್ಷಕ್ಕೆ ಇದು ಏರಿಕೆಯಾಗುತ್ತಲೇ ಇದೆ. ಇದರಿಂದ ಠೇವಣಿದಾರರ ಹಣಕ್ಕೆ ನೀಡುವ ಬಡ್ಡಿಯಲ್ಲಿ ಕಡಿತ ಮಾಡಲಾಗುತ್ತಿದೆ. ದೇಶದ ವಿವಿಧ ಬ್ಯಾಂಕ್‌ಗಳಲ್ಲಿ ಸದ್ಯಕ್ಕೆ ₹8 ಲಕ್ಷ ಕೋಟಿಗೂ ಹೆಚ್ಚು ಎನ್‌ಪಿಎ ಇದೆ ಎಂದರು.

ಚೀನಾದಲ್ಲಿ ಸುಮಾರು 15 ವರ್ಷಗಳ ಹಿಂದೆ ಬ್ಯಾಂಕ್‌ಗಳ ಎನ್‌ಪಿಎ ಪ್ರಮಾಣ ಶೇ 29.9ರಷ್ಟಿತ್ತು. ಬ್ಯಾಂಕ್‌ಗಳು ತಮ್ಮ ವ್ಯವಹಾರದಲ್ಲಿ ಶಿಸ್ತು ಮತ್ತು ಕಠಿಣ ನಿಯಮ ರೂಢಿಸಿಕೊಂಡು ಹತ್ತೇ ವರ್ಷಗಳಲ್ಲಿ ಅದನ್ನು ಶೇ 11ಕ್ಕೆ ತಗ್ಗಿಸಿದವು. ಬ್ಯಾಂಕುಗಳು ಶಿಸ್ತು ಅಳವಡಿಸಿಕೊಳ್ಳುವ ಜತೆಗೆ, ಸಾಲ ಪಡೆದವರು ಕೂಡ ಉದ್ದೇಶಿತ ಸುಸ್ತಿದಾರರಾಗದೆ, ಪ್ರಾಮಾಣಿಕವಾಗಿ ಸಾಲ ಮರುಪಾವತಿಸುವ ಬದ್ಧತೆ ಹೊಂದಿರಬೇಕು ಎಂದರು.

116 ವರ್ಷಗಳ ಇತಿಹಾಸದಲ್ಲಿ ಎಂದೂ ನಷ್ಟ ಕಾಣದಿದ್ದ ಕೆನರಾ ಬ್ಯಾಂಕ್ ಕೂಡ ಎನ್‌ಪಿಎ ಪ್ರಮಾಣ ಹೆಚ್ಚಿದ ಕಾರಣಕ್ಕೆ 2017ರ ಹಣಕಾಸು ವರ್ಷದಲ್ಲಿ ನಷ್ಟ ಅನುಭವಿಸಿದೆ. ಒಂದು ವರ್ಷದಲ್ಲಿ ₹37,000 ಕೋಟಿಯಿಂದ ₹39,000 ಕೋಟಿಗೆ ವಸೂಲಾಗದ ಸಾಲದ ಮೊತ್ತ ಏರಿಕೆಯಾಗಿದೆ. ಕಾರ್ಪೊರೇಟ್ ಉದ್ಯಮದಲ್ಲಷ್ಟೇ ಅಲ್ಲ, ವೇತನದ ಮೇಲೆ ಪಡೆದ ಸಾಲಗಳು, ಬೆಳೆ ನಷ್ಟದ ಕಾರಣಕ್ಕೆ ಕೃಷಿ ಸಾಲಗಳು ಸರಿಯಾಗಿ ಮರು ಪಾವತಿಯಾಗುತ್ತಿಲ್ಲ ಎಂದರು.

ಇಂದಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಬ್ಯಾಂಕುಗಳು ಅಸ್ತಿತ್ವ ಉಳಿಸಿಕೊಳ್ಳಬೇಕಾದರೆ ಸಹವರ್ತಿ ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಕೂಡ ಅನಿವಾರ್ಯ ಎಂದು ಪ್ರತಿಪಾದಿಸಿದರು.

ಡಿ.ದೇವರಾಜ ಅರಸು ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಎನ್‌.ವಿ.ನರಸಿಂಹಯ್ಯ ಮಾತನಾಡಿ, ‘ರೈತರ ಕೃಷಿ ಸಾಲ ಮನ್ನಾ ಮಾಡಲು ಸಾಧ್ಯವೇ ಇಲ್ಲ ಎನ್ನುವ ಕೇಂದ್ರ ಸರ್ಕಾರ ಕಾರ್ಪೊರೇಟ್‌ ಉದ್ಯಮಿಗಳ ಲಕ್ಷ ಕೋಟಿಗೂ ಹೆಚ್ಚು ಸಾಲ ಮನ್ನಾ ಮಾಡಿ, ಇಬ್ಬಂದಿತನ ತೋರಿದೆ’ ಎಂದರು.

‘ಪ್ರಧಾನಿ ಮೋದಿಗೆ ಹತ್ತಿರದ ವ್ಯಕ್ತಿ ಎಂಬ ಕಾರಣಕ್ಕೆ ಉದ್ಯಮಿ ಗೌತಮ್‌ ಅದಾನಿಗೆ ಸುಮಾರು ₹78,000 ಕೋಟಿ ಸಾಲವನ್ನು ಬ್ಯಾಂಕ್‌ಗಳು ನೀಡಿವೆ. ಇಷ್ಟು ಹಣ ದೇಶದ ರೈತರಿಗೆ ನೀಡಿದ್ದರೆ, ಆಹಾರ ಉತ್ಪಾದಿಸಬಹುದಿತ್ತೆಂದು ಬ್ಯಾಂಕುಗಳು ಮತ್ತು ಸರ್ಕಾರವೂ ಯೋಚಿಸಬೇಕು’ ಎಂದರು.

ಬ್ಯಾಂಕ್‌ ಎನ್‌ಪಿಎ ಮೊತ್ತ (ಕೋಟಿ)

ಎಸ್‌ಬಿಐ ₹1,88,068 – ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ₹57,731

ಬ್ಯಾಂಕ್‌ ಆಫ್‌ ಇಂಡಿಯಾ ₹51,019 – ಐಡಿಬಿಐ ₹50,173

ಬ್ಯಾಂಕ್‌ ಆಫ್‌ ಬರೋಡ ₹46,173

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT