ಮುಖ್ಯಮಂತ್ರಿ, ಸ್ಪೀಕರ್‌ ಹತ್ತಿರದವರಿಗೆ ಮಣೆ!

ಬುಧವಾರ, ಮಾರ್ಚ್ 27, 2019
22 °C
ವಿಧಾನಸಭೆ ಸಚಿವಾಲಯ ನೇಮಕದಲ್ಲಿ ಸ್ವಜನಪಕ್ಷಪಾತ ಆರೋಪ

ಮುಖ್ಯಮಂತ್ರಿ, ಸ್ಪೀಕರ್‌ ಹತ್ತಿರದವರಿಗೆ ಮಣೆ!

Published:
Updated:
ಮುಖ್ಯಮಂತ್ರಿ, ಸ್ಪೀಕರ್‌ ಹತ್ತಿರದವರಿಗೆ ಮಣೆ!

ಬೆಂಗಳೂರು: ವಿಧಾನಸಭೆ ಸಚಿವಾಲಯದ ‘ಬಿ’, ‘ಸಿ’ ಮತ್ತು ‘ಡಿ’ ದರ್ಜೆಯ ಹುದ್ದೆಗಳಿಗೆ ನಡೆದಿರುವ ನೇಮಕಾತಿಯಲ್ಲಿ ಮುಖ್ಯಮಂತ್ರಿ, ಸ್ಪೀಕರ್‌, ಸಚಿವಾಲಯದ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಮತ್ತು ಮುಖ್ಯ ಸಚೇತಕರ ಹತ್ತಿರದವರು ಮತ್ತು ಬಂಧುಗಳೂ ಸೇರಿದ್ದಾರೆ.

ಒಟ್ಟು 90 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. ಆದರೆ, 151 ಮಂದಿಯನ್ನು ನೇಮಕಾತಿ ಮಾಡಲಾಗಿದೆ. ಇದರಲ್ಲಿ ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿವೆ. ಹೊಸದಾಗಿ ಇನ್ನೂ 80 ಹುದ್ದೆಗಳ ನೇಮಕಾತಿಗೆ ಸಿದ್ಧತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.

ಸ್ಪೀಕರ್‌ ಕೆ.ಬಿ.ಕೋಳಿವಾಡ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಸಭಾಧ್ಯಕ್ಷ ಶಿವಶಂಕರ ರೆಡ್ಡಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ಮತ್ತು ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ್‌ ಪಟ್ಟಣ ಅವರ ಕಚೇರಿಯಲ್ಲಿ ಗುತ್ತಿಗೆ ಮೇಲೆ ಕೆಲಸ ಮಾಡುತ್ತಿರುವ ಆಪ್ತ ಸಿಬ್ಬಂದಿಯೂ ಉದ್ಯೋಗ ಗಿಟ್ಟಿಸಿದ ಫಲಾನುಭವಿಗಳಲ್ಲಿ ಸೇರಿದ್ದಾರೆ.

ವಿಧಾನಸಭಾಧ್ಯಕ್ಷ ಕೋಳಿವಾಡ ಅವರ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 7 ಮಂದಿ ಮತ್ತು ಅವರು ಪ್ರತಿನಿಧಿಸುವ ರಾಣೆಬೆನ್ನೂರು ವಿಧಾನಸಭಾ ಕ್ಷೇತ್ರದ 20 ಅಭ್ಯರ್ಥಿಗಳು ನೇಮಕಾತಿ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಮುಖ್ಯಮಂತ್ರಿ ಕಚೇರಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 9 ಮಂದಿ ಹಾಗೂ ವರುಣ ವಿಧಾನಸಭಾ ಕ್ಷೇತ್ರದ 20 ಮಂದಿಯೂ ಈ ಪಟ್ಟಿಯಲ್ಲಿದ್ದಾರೆ.

ವಿಧಾನಸಭೆ ವರದಿಗಾರ (ಕನ್ನಡ) ಹುದ್ದೆಗೆ ನೇಮಕಗೊಂಡಿರುವ ಸುಧಾ ಎನ್‌ ಎಂಬುವರು ಈ ಹಿಂದೆ ಸಚಿವಾಲಯ ಕಾರ್ಯದರ್ಶಿ ಎಸ್‌.ಮೂರ್ತಿ ಕಚೇರಿಯಲ್ಲಿ ಬೆರಳಚ್ಚುಗಾರರಾಗಿದ್ದರು. ವಿಧಾನಸಭೆ ಜಂಟಿ ಕಾರ್ಯದರ್ಶಿ ಮಲ್ಲಪ್ಪ ಬಿ.ಕಾಳೆ ಪುತ್ರಿ ಎಂ.ಕೆ. ಶಿಲ್ಪಾ ಕಂಪ್ಯೂಟರ್‌ ಆಪರೇಟರ್‌, ವಿಧಾನಸಭೆ ಮೇಸ್ತ್ರಿ ಧನರಾಜ್‌ ಪುತ್ರ ಕಿರಣ್‌. ಡಿ ಸ್ವೀಪರ್‌ ಹುದ್ದೆಗೆ ನೇಮಕವಾಗಿದ್ದರೆ ಎಂದು ಮೂಲಗಳು ವಿವರಿಸಿವೆ.

ಮೀಸಲು ಮತ್ತು ನಿಯಮಾವಳಿ ಉಲ್ಲಂಘನೆ: ವಿಧಾನಸಭೆ ಸಚಿವಾಲಯದ ವಿವಿಧ ವೃಂದಗಳ ನೇಮಕಾತಿ ಮತ್ತು ಮುಂಬಡ್ತಿಯಲ್ಲಿ ಹೈದರಾಬಾದ್‌– ಕರ್ನಾಟಕದವರಿಗೆ 371 (ಜೆ) ಅನ್ವಯ ಶೇ 8 ರಷ್ಟು ಮೀಸಲು ಕಡ್ಡಾಯ. ಇದಕ್ಕೆ ಸಂಬಂಧಿಸಿದಂತೆ 2014 ರಲ್ಲಿ ನಾಲ್ಕು ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಆದರೆ, ಈ ನೇಮಕಾತಿಯಲ್ಲಿ ಅದನ್ನು ಪಾಲಿಸಿಲ್ಲ.

2016ರಲ್ಲಿ ವಿಧಾನಪರಿಷತ್‌ನಲ್ಲಿ ಮಾಡಿರುವ ನೇಮಕಾತಿಯಲ್ಲಿ ಹೈದರಾಬಾದ್‌– ಕರ್ನಾಟಕದ ಅಭ್ಯರ್ಥಿಗಳಿಗೆ ಮೀಸಲಾತಿ ನೀಡಲಾಗಿದೆ.

ನೇರ ನೇಮಕಾತಿಗೆ ಅರ್ಜಿ ಸಲ್ಲಿಸುವಾಗ ಅಂಗವಿಕಲ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ ನೀಡಬೇಕು. ಆದರೆ, ಅವರಿಂದಲೂ ಶುಲ್ಕ ಪಡೆಯಲಾಗಿದೆ.ರಾಜ್ಯ ಸಿವಿಲ್‌ ಸೇವಾ ಹುದ್ದೆಗಳ ನೇಮಕಾತಿ ಸಂಬಂಧಿಸಿದಂತೆ ಕರ್ನಾಟಕ ಸಿವಿಲ್‌ ಸೇವೆಗಳು (ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನೇರ ನೇಮಕಾತಿ) ತಿದ್ದುಪಡಿ ನಿಯಮ, 2015 ಉಲ್ಲಂಘಿಸಲಾಗಿದೆ. ಗ್ರೂಪ್‌ ಎ ಮತ್ತು ಬಿ ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಡೆದ ಅಂಕ ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ಮೆರಿಟ್‌ ಪಟ್ಟಿ ತಯಾರಿಸಲಾಗುತ್ತದೆ. ಗ್ರೂಪ್‌ ಸಿ (ವಾಹನ ಚಾಲಕರು) ಮತ್ತು ಗ್ರೂಪ್‌ ಡಿ ಹುದ್ದೆಗಳಿಗೆ ಅಭ್ಯರ್ಥಿಗಳ ಶೈಕ್ಷಣಿಕವಾಗಿ ಪಡೆದ ಅಂಕಗಳೇ ಮಾನದಂಡ. ಅತಿ ಹೆಚ್ಚು ಅಂಕ ಪಡೆದವರ ಪಟ್ಟಿ ಪ್ರಕಟಿಸಿ ನೇಮಕ ಮಾಡಬೇಕು. ಈ ನಿಯಮಗಳನ್ನು ಪಾಲಿಸಿಲ್ಲ ಎಂದೂ ಮೂಲಗಳು ತಿಳಿಸಿವೆ.

ವಿಧಾನಸಭೆ ಕಾರ್ಯದರ್ಶಿಎಸ್‌.ಮೂರ್ತಿಯವರಿಗೆ ನೀಡಿರುವ ಮುಂಬಡ್ತಿಗೂ ಈಗ ನಡೆಯುತ್ತಿರುವ ನೇಮಕಾತಿಗೂ ಸಂಬಂಧ ಇದೆಯೇ?

ಹೌದು, ಖಂಡಿತವಾಗಿ ಸಂಬಂಧವಿದೆ ಎಂದು ಸಚಿವಾಲಯದ ಮೂಲಗಳೇ ಹೇಳುತ್ತಿವೆ.

‘ಬಡ್ತಿ ಮೀಸಲಾತಿ ವಿಷಯ ಇತ್ಯರ್ಥ ಆಗದೆ ಯಾರಿಗೂ ಮುಂಬಡ್ತಿ ನೀಡಬಾರದು ಎಂಬ ಸುಪ್ರೀಂಕೋರ್ಟ್‌ ಆದೇಶವಿದ್ದರೂ ಇದನ್ನು ಲೆಕ್ಕಿಸದೆ ಮೂರ್ತಿಯವರಿಗೆ ಏಕಾಏಕಿ ಬಡ್ತಿ ನೀಡಲಾಗಿದೆ. ಇದಕ್ಕೆ ಕಾರಣ ತರಾತುರಿಯಲ್ಲಿ ನಡೆಯುತ್ತಿರುವ ನೇಮಕಾತಿ!

‘ನೇಮಕಾತಿ ಪ್ರಕ್ರಿಯೆಯನ್ನು ಸಚಿವಾಲಯ ಕಾರ್ಯದರ್ಶಿ ನಡೆಸಬೇಕು. ಪ್ರಭಾರಿ ಹುದ್ದೆಯಲ್ಲಿದ್ದವರು ಇದನ್ನು ಮಾಡಲು ಸಾಧ್ಯವಿಲ್ಲ ಎಂದು ಮೂರ್ತಿ ಸರ್ಕಾರಕ್ಕೆ ಮನವರಿಕೆ ಮಾಡಿದ್ದರಿಂದಾಗಿ ಬಡ್ತಿಗೆ ಒಪ್ಪಿಗೆ ನೀಡಲಾಯಿತು’ ಎಂದು ಮೂಲಗಳು ಹೇಳಿವೆ.

ಸಚಿವಾಲಯದಲ್ಲಿ ನಡೆದಿರುವ ನೇಮಕಾತಿ ಪ್ರಕ್ರಿಯೆ ಕುರಿತ ಪ್ರತಿಕ್ರಿಯೆಗೆ ಮುಖ್ಯಮಂತ್ರಿ ಸಿಗಲಿಲ್ಲ. ಈ ಬಗ್ಗೆ ಮಾತನಾಡಲು ಮೂರ್ತಿ ನಿರಾಕರಿಸಿದರು. ಸಚಿವಾಲಯದ ಜಂಟಿ ಕಾರ್ಯದರ್ಶಿ ಮಲ್ಲಪ್ಪ ಕಾಳೆ ತಮ್ಮ ಪುತ್ರಿ ನೇಮಕವಾಗಿದ್ದಾರೆ ಎಂದು ‘ಪ್ರಜಾವಾಣಿ’ಗೆ ಖಚಿತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry