ಉತ್ತರ ಪ್ರದೇಶ: ವೇತನ ಕೇಳಿದ ಮಹಿಳಾ ನೌಕರರನ್ನು ಕೊಠಡಿಯಲ್ಲಿ ಕೂಡಿಹಾಕಿ ಹಲ್ಲೆ

7

ಉತ್ತರ ಪ್ರದೇಶ: ವೇತನ ಕೇಳಿದ ಮಹಿಳಾ ನೌಕರರನ್ನು ಕೊಠಡಿಯಲ್ಲಿ ಕೂಡಿಹಾಕಿ ಹಲ್ಲೆ

Published:
Updated:
ಉತ್ತರ ಪ್ರದೇಶ: ವೇತನ ಕೇಳಿದ ಮಹಿಳಾ ನೌಕರರನ್ನು ಕೊಠಡಿಯಲ್ಲಿ ಕೂಡಿಹಾಕಿ ಹಲ್ಲೆ

ಲಖನೌ: ವೇತನ ಕೇಳಿದ್ದಕ್ಕೆ ನಮ್ಮನ್ನು ಕೊಠಡಿಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಲಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಚೇರಿಯ ಸಹಾಯವಾಣಿ ಕೇಂದ್ರದ ಮಹಿಳಾ ನೌಕರರು ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ 1076 ಸಹಾಯವಾಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಕಳೆದ ನಾಲ್ಕು ತಿಂಗಳುಗಳಿಂದ ವೇತನ ನೀಡಲಾಗಿಲ್ಲ. ವೇತನ ಕೇಳಿದಾಗ ವಿಭೂತಿ ಖಂಡ್‌ನ ಸೈಬರ್ ಟವರ್ ಕಚೇರಿಯಲ್ಲಿ ಕೂಡಿಹಾಕಿ, ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ನೌಕರರು ಆರೋಪಿಸಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಬಾಕಿ ಇರುವ ವೇತನ ನೀಡುವಂತೆ ಆಗ್ರಹಿಸಿ ಕಳೆದ ಕೆಲವು ದಿನಗಳಿಂದ ಲಖನೌನ ಗೋಮತಿ ನಗರ ಪ್ರದೇಶದ ವಿಭೂತಿ ಖಂಡ್‌ನಲ್ಲಿರುವ ಕಚೇರಿಯಲ್ಲಿ ಮಹಿಳಾ ನೌಕರರು ಪ್ರತಿಭಟನೆ ನಡೆಸುತ್ತಿದ್ದಾರೆ. ಶುಕ್ರವಾರ ಪ್ರತಿಭಟನೆಯ ಸಂದರ್ಭ ಕೆಲವು ಮಹಿಳೆಯರು ಅಸ್ವಸ್ಥರಾಗಿದ್ದು, ಸಮೀಪದ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

‘ಕಚೇರಿಗೆ ತೆರಳಿದಾಗ ಕಾರ್ಡ್ ಪಂಚ್ ಮಾಡಲೂ ಅವಕಾಶ ನೀಡಲಿಲ್ಲ. ಹಾಜರಿ ಪುಸ್ತಕದಲ್ಲಿ ಸಹಿ ಮಾಡುವಂತೆ ತಿಳಿಸಿದರು. ಆದರೆ, ನಾವದನ್ನು ವಿರೋಧಿಸಿದೆವು’ ಎಂದು ಒಬ್ಬರು ಮಹಿಳೆ ತಿಳಿಸಿದ್ದಾರೆ.

‘ಮಾತುಕತೆಗೆಂದು ಕರೆದೊಯ್ದು ಕೂಡಿಹಾಕಿದರು’: ‘ನಮ್ಮ ವೇತನ ನೀಡಿ. ನಾವು ಇಲ್ಲಿಂದ ತೆರಳುತ್ತೇವೆ ಎಂದು ಹೇಳಿದೆವು. ಆದರೆ, ಆ ಬಗ್ಗೆ ಮಾತುಕತೆ ನಡೆಸಲೆಂದು ನಮ್ಮನ್ನು ಕೊಠಡಿಯೊಂದಕ್ಕೆ ಕರೆದೊಯ್ದ ಅಧಿಕಾರಿಗಳು ಕೊಠಡಿಯಲ್ಲಿ ನಮ್ಮನ್ನು ಕೂಡಿಹಾಕಿದರು’ ಎಂದು ಅಕಾಂಕ್ಷಾ ಸಿಂಗ್ ಎಂಬ ಮಹಿಳೆ ಆರೋಪಿಸಿದ್ದಾರೆ.

ಸುಮಾರು 100 ಮಹಿಳಾ ನೌಕರರನ್ನು ಕೊಠಡಿಯಲ್ಲಿ ಕೂಡಿಹಾಕಲಾಗಿದೆ. ಆ ಪೈಕಿ ಕೆಲವು ಮಹಿಳೆಯರು ಯಾವುದೋ ಪದಾರ್ಥ ಸೇವಿಸಿದ್ದಾರೆ ಎಂದು ಶುಕ್ರವಾರ ಬೆಳಿಗ್ಗೆ 7.30ರ ಸುಮಾರಿಗೆ ಮಹಿಳೆಯೊಬ್ಬರಿಂದ ದೂರವಾಣಿ ಕರೆ ಬಂದಿತ್ತು ಎಂದು ಪೊಲೀಸರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಅವರು ಏನು ಸೇವಿಸಿದ್ದಾರೆ ಎಂಬ ಬಗ್ಗೆ ಉಲ್ಲೇಖಿಸಿಲ್ಲ.

‘ದೂರವಾಣಿ ಕರೆ ಬಂದ ತಕ್ಷಣ ನಾವು ಸ್ಥಳಕ್ಕೆ ಧಾವಿಸಿದೆವು. ಕೆಲವು ಮಹಿಳೆಯರು ವಾಂತಿ ಮಾಡುತ್ತಿದ್ದರು. ತಕ್ಷಣವೇ ಅವರನ್ನು ಸಮೀಪದ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಏನು ನಡೆದಿದೆ ಎಂಬ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸುತ್ತಿದ್ದೇವೆ’ ಎಂದು ವಿಭೂತಿ ಖಂಡ್‌ನ ಪೊಲೀಸ್ ಅಧಿಕಾರಿ ಸತ್ಯೇಂದ್ರ ಕುಮಾರ್ ರಾಯ್ ಹೇಳಿರುವುದನ್ನು ಉಲ್ಲೇಖಿಸಿ ನ್ಯೂಸ್18 ವೆಬ್‌ಸೈಟ್ ವರದಿ ಮಾಡಿದೆ.

ವೇತನ ನೀಡಲಾಗಿದೆ ಎಂದ ಯೋಜನಾ ಮುಖ್ಯಸ್ಥ: ಎಲ್ಲ ನೌಕರರ ಬ್ಯಾಂಕ್ ಖಾತೆಗಳಿಗೆ ಫೆಬ್ರುವರಿ 8ರಂದೇ ವೇತನ ನೀಡಲಾಗಿದೆ ಎಂದು ಸಹಾಯವಾಣಿಯ ಯೋಜನಾ ಮುಖ್ಯಸ್ಥ ಧ್ರುವ ಮಿಶ್ರಾ ಹೇಳಿದ್ದಾರೆ.

‘ನಮ್ಮಲ್ಲಿ ಒಟ್ಟು 1,200 ನೌಕರರಿದ್ದು, ಮೂರು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಪೈಕಿ ಕೆಲವರಿಗೆ ಮಾತ್ರ ಬ್ಯಾಂಕ್‌ನ ಕಾರಣದಿಂದಾಗಿ ಸಮಸ್ಯೆ ಎದುರಾಗಿದೆ’ ಎಂದೂ ಮಿಶ್ರಾ ಹೇಳಿದ್ದಾರೆ.

ರಾಜ್ಯದ ಜನರ ದೂರುಗಳನ್ನು ಆಲಿಸಿ ತಕ್ಷಣ ಪರಿಹರಿಸುವ ನಿಟ್ಟಿನಲ್ಲಿ ಸ್ವಯಂಸೇವಾ ಸಂಸ್ಥೆಯೊಂದರ ಸಹಯೋಗದಲ್ಲಿ ಡಿಸೆಂಬರ್‌ನಲ್ಲಿ ಸಹಾಯವಾಣಿ ಆರಂಭಿಸಲಾಗಿತ್ತು ಎನ್ನಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry