ಶಾಸಕ- ಯುವಕರ ಮಾತಿನ ಚಕಮಕಿ

7
ಸಂಡೂರು: ಶೌಚಾಲಯ ನಿರ್ಮಿಸದೇ ನೂತನ ಬಸ್‌ ನಿಲ್ದಾಣ ಉದ್ಘಾಟನೆಗೆ ಆಕ್ರೋಶ

ಶಾಸಕ- ಯುವಕರ ಮಾತಿನ ಚಕಮಕಿ

Published:
Updated:
ಶಾಸಕ- ಯುವಕರ ಮಾತಿನ ಚಕಮಕಿ

ಸಂಡೂರು: ‘ಶೌಚಾಲಯ ನಿರ್ಮಿಸದೇ ನೂತನ ಬಸ್‌ ನಿಲ್ದಾಣವನ್ನು ಉದ್ಘಾಟಿಸಬಾರದು’ ಎಂಬ ಆಕ್ಷೇಪಣೆಯು ತಾಲ್ಲೂಕಿನ ಯಶವಂತನಗರ ಗ್ರಾಮದಲ್ಲಿ ಸೋಮವಾರ ಶಾಸಕರು ಮತ್ತು ಸಾರ್ವಜನಿಕರ ನಡುವೆ ವಾಗ್ವಾದ ಸೃಷ್ಟಿಸಿ, ತಳ್ಳಾಟಕ್ಕೂ ಕಾರಣವಾಯಿತು.

ನಿಲ್ದಾಣ ಉದ್ಘಾಟನೆಗೆ ಶಾಸಕ ಈ. ತುಕಾರಾಂ ಮುಂದಾಗುತ್ತಿದ್ದಂತೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮದ ಯುವಕ ಡಿ. ಹುಸೇನ್‌ಪೀರಾ, ‘ಸಾರ್ವಜನಿಕ ಶೌಚಾಲಯ ನಿರ್ಮಿಸಿ ನಿಲ್ದಾಣವನ್ನು ಉದ್ಘಾಟಿಸಬೇಕು’ ಎಂದು ಆಗ್ರಹಿಸಿದರು.

’ನಿಲ್ದಾಣ ಉದ್ಘಾಟಿಸಿದ ಬಳಿಕ ಆ ಬಗ್ಗೆ ಮಾತನಾಡುವೆ’ ಎಂಬ ಶಾಸಕರ ಮಾತನ್ನು ಒಪ್ಪದ ಹುಸೇನ್‌ಪೀರಾ ಮತ್ತು ಅವರೊಂದಿಗೆ ಇದ್ದವರು ಶಾಸಕರ ವಿರುದ್ಧ ಧಿಕ್ಕಾರ ಕೂಗಿದರು.

‘ನಿಲ್ದಾಣದಲ್ಲಿ ಸಾರ್ವಜನಿಕರ ಶೌಚಾಲಯ ನಿರ್ಮಾಣದ ಅಗತ್ಯವಿದೆ. ಈ ಕುರಿತು ಹಲವು ಬಾರಿ ಮನವಿ ಪತ್ರವನ್ನು ಕೊಟ್ಟಿದ್ದೇವೆ. ಶೌಚಾಲಯ ನಿರ್ಮಿಸಿದ ಬಳಿಕ ನಿಲ್ದಾಣವನ್ನು ಉದ್ಘಾಟಿಸಬೇಕು’ ಎಂದು ಹುಸೇನ್‌ಪೀರಾ ಮತ್ತು ಎನ್. ನಾಗರಾಜ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಶಾಸಕರ ಬೆಂಬಲಿಗರು ಹಾಗೂ ಯುವಕರ ನಡುವೆ ಮಾತಿನ ಚಕಮಕಿ, ಪರಸ್ಪರ ತಳ್ಳಾಟ ನಡೆಯಿತು.. ಸ್ಥಳೀಯ ಮುಖಂಡರ ಮಧ್ಯಪ್ರವೇಶದಿಂದ ಮಾತಿನ ಚಕಮಕಿ ತಣ್ಣಗಾಯಿತು.

ನಂತರ ಗ್ರಾಮದ ಸಿದ್ದರಾಮೇಶ್ವರ ವಿರಕ್ತಮಠದ ಗಂಗಾಧರ ದೇವರು ನಿಲ್ದಾಣವನ್ನು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕೆರೆಗಳ ಆಧುನಿಕರಣ ಯೋಜನೆ ಅಡಿಯಲ್ಲಿ ₨ 1.50 ಕೋಟಿ ವೆಚ್ಚದಲ್ಲಿ ಗ್ರಾಮದ ರಾಘಾಪುರ ಕೆರೆಯ ಅಭಿವೃದ್ಧಿ ಹಾಗೂ ಗ್ರಾಮದಲ್ಲಿ ₨ 15 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕರು ಭೂಮಿ ಪೂಜೆ ಮಾಡಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಡಿ. ಫರ್ಜಾನಾ, ಉಪಾಧ್ಯಕ್ಷೆ ಗಂಗಾಬಾಯಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮ್ಯಾ, ಉಪಾಧ್ಯಕ್ಷ ಚಂದ್ರಶೇಖರ್, ಮುಖಂಡ ಚಿತ್ರಿಕಿ ಸತೀಶ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry