ರಾಜ್ಯಸಭಾ ಟಿಕೆಟ್ ತಪ್ಪಿದ್ದರಿಂದ ಅಸಮಾಧಾನವಿಲ್ಲ: ವಿಜಯ ಸಂಕೇಶ್ವರ

7

ರಾಜ್ಯಸಭಾ ಟಿಕೆಟ್ ತಪ್ಪಿದ್ದರಿಂದ ಅಸಮಾಧಾನವಿಲ್ಲ: ವಿಜಯ ಸಂಕೇಶ್ವರ

Published:
Updated:
ರಾಜ್ಯಸಭಾ ಟಿಕೆಟ್ ತಪ್ಪಿದ್ದರಿಂದ ಅಸಮಾಧಾನವಿಲ್ಲ: ವಿಜಯ ಸಂಕೇಶ್ವರ

ಹುಬ್ಬಳ್ಳಿ: ರಾಜ್ಯಸಭಾ ಚುನಾವಣೆಗೆ ಟಿಕೆಟ್ ತಪ್ಪಿದ್ದರಿಂದ ಬೇಸರವಾಗಿಲ್ಲ. ಯಾವುದೇ ರೀತಿಯ ಅಸಮಾಧಾನವೂ ಇಲ್ಲ ಎಂದು ಬಿಜೆಪಿ ಮುಖಂಡ, ಉದ್ಯಮಿ ವಿಜಯ ಸಂಕೇಶ್ವರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜೀವ್‌ ಚಂದ್ರಶೇಖರ್‌ ವಯಸ್ಸಿನಲ್ಲಿ ನನಗಿಂತ ಚಿಕ್ಕವರು. ನನಗಿಂತ ಹೆಚ್ಚು ಓದಿಕೊಂಡಿದ್ದಾರೆ. ಅವರಿಗೆ ಟಿಕೆಟ್ ಕೊಟ್ಟಿರುವುದು ಸೂಕ್ತವಾಗಿದೆ‌. ಇದರಿಂದ ನನಗೆ ಸಂತೋಷವಾಗಿದೆ’ ಎಂದು ಹೇಳಿದರು.

ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಈ ತಿಂಗಳ 23ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ರಾಜೀವ್ ಚಂದ್ರಶೇಖರ್ ಅವರಿಗೆ ಟಿಕೆಟ್ ನೀಡಿದೆ. ಟಿಕೆಟ್ ಆಕಾಂಕ್ಷಿಗಳ ಯಾದಿಯಲ್ಲಿ ರಾಜೀವ್, ಸಂಕೇಶ್ವರ ಹೆಸರು ಕೇಳಿ ಬಂದಿತ್ತು.

ಕನ್ನಡಿಗ ಎಂಬ ವಾದಕ್ಕೆ ಅರ್ಥವಿಲ್ಲ: ರಾಜ್ಯಸಭೆಯಲ್ಲಿ ಕನ್ನಡ, ಕನ್ನಡಿಗ ಎಂಬ ವಾದಕ್ಕೆ ಅರ್ಥವಿಲ್ಲ. ರಾಜೀವ ಚಂದ್ರಶೇಖರ ಮಂಗಳೂರಿನಲ್ಲಿಯೇ ಓದಿದ್ದಾರೆ. ಅವರೂ ಕನ್ನಡಿಗರು. ಅಲ್ಲದೆ ಅವರ ತಂದೆ ಬಿಜೆಪಿ, ಜನಸಂಘವನ್ನು ಕಟ್ಟಿದವರಲ್ಲಿ ಒಬ್ಬರಾಗಿದ್ದರು ಎಂದು ಸಂಕೇಶ್ವರ ಹೇಳಿದರು.

‘ನಾನು ಬಿಜೆಪಿಯನ್ನು ಮದುವೆಯಾಗಿದ್ದೇನೆ. ಪಕ್ಷ ಹೇಳಿದರೆ ವಿಷ ಕುಡಿಯಲೂ ಸಿದ್ಧ. ಟಿಕೆಟ್ ತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದೇನೆ ಎಂಬ ಸುಳ್ಳು ಸುದ್ದಿ ಹರಡುತ್ತಿದೆ. ಈ ಗೊಂದಲ ಪರಿಹಾರಕ್ಕಾಗಿ ಪತ್ರಿಕಾಗೋಷ್ಠಿ ಕರೆದಿದ್ದೇನೆ’ ಎಂದೂ ಅವರು ಹೇಳಿದರು.

ಕನ್ನಡಿಗರಲ್ಲ ಎಂಬ ಕಾರಣ ನೀಡಿ ವೆಂಕಯ್ಯ ನಾಯ್ಡು ಅವರಿಗೆ ಮೂರನೇ ಅವಧಿಗೆ ರಾಜ್ಯಸಭೆ ಟಿಕೆಟ್ ನೀಡಲಿಲ್ಲ. ಅವರು ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿ ನಗರಾಭಿವೃದ್ಧಿ ಸಚಿವರಾದರು. ನಮ್ಮ ರಾಜ್ಯದಿಂದ ಆಯ್ಕೆಯಾಗಿದ್ದರೆ ರಾಜ್ಯಕ್ಕೆ ಇನ್ನೂ ಹೆಚ್ಚಿನ ಪ್ರಯೋಜನ ಸಿಗುತ್ತಿತ್ತು ಎಂದೂ ಸಂಕೇಶ್ವರ ಹೇಳಿದರು.

ಪಕ್ಷ ಅವಕಾಶ ನೀಡಿದರೆ ಸ್ಪರ್ಧೆ: ‘ನಾನು ಯಾವುದಕ್ಕೂ ಅಪೇಕ್ಷೆ ಪಡುವವನಲ್ಲ. ಟಿಕೆಟ್‌ಗಾಗಿ ಅರ್ಜಿಯನ್ನೂ ಹಾಕಿರಲಿಲ್ಲ. ಮುಂದೆ ವಿಧಾನಸಭಾ ಅಥವಾ ಲೋಕಸಭಾ ಚುನಾವಣೆಗೆ ಟಿಕೆಟ್ ಕೊಡುವ ಭರವಸೆಯನ್ನೂ ಪಕ್ಷ ನೀಡಿಲ್ಲ. ಆದರೆ, ಅವಕಾಶ ನೀಡಿದರೆ ಸ್ಪರ್ಧಿಸುತ್ತೇನೆ’ ಎಂದು ಅವರು ಹೇಳಿದರು.

‘ನಾನು ಜಾತಿ ರಾಜಕೀಯ ಮಾಡಿದವನಲ್ಲ. ಲಿಂಗಾಯತ ಸ್ವತಂತ್ರಧರ್ಮದ ಬೇಡಿಕೆ ಸಮಂಜಸವಲ್ಲ. ಲಿಂಗಾಯತ ಮತ್ತು ವೀರಶೈವ ಎರಡೂ ಒಂದೇ. ಲಿಂಗಾಯತರು ಮೀಸಲಾತಿಗಾಗಿ ಭಿಕ್ಷೆ ಬೇಡಬಾರದು. ಈ ಹೋರಾಟ ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾರಿಗೆ ಮೀಸಲಾತಿ ಕಡಿಮೆ ಮಾಡಿ, ಲಿಂಗಾಯತರಿಗೆ ನೀಡುತ್ತಾರೆ ಎಂಬುದನ್ನು ಸ್ಪಷ್ಟಪಡಿಸಬೇಕು’ ಎಂದು ಸಂಕೇಶ್ವರ ಆಗ್ರಹಿಸಿದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry